Oppenheimer vs Barbie: ಮೊದಲ ವಾರ ಕರ್ನಾಟಕದಲ್ಲಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಯಾವುದು?
ಕಳೆದ ಶುಕ್ರವಾರ ( ಜುಲೈ 21 ) ಹಾಲಿವುಡ್‌ನ ದೊಡ್ಡ ಚಿತ್ರಗಳಾದ ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳು ಬಿಡುಗಡೆಗೊಂಡವು. ಇನ್ನು ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ಹೈಪ್ ಹುಟ್ಟುಹಾಕಿದ್ದ ಈ ಎರಡು ಸಿನಿಮಾಗಳು ಸದ್ಯ ಒಂದು ವಾರದ ಓಟವನ್ನು ಪೂರೈಸಿದ್ದು, ವಿಶ್ವದಾದ್ಯಂತ ಎರಡೂ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡಿವೆ. ಇನ್ನು ಈ ಎರಡೂ ಬಹು ನಿರೀಕ್ಷಿತ ಚಿತ್ರಗಳ ಪೈಕಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಬಾರ್ಬಿ ಹೆಚ್ಚು ಗಳಿಕೆ ಮಾಡಿದ್ದರೆ, ಬಾರ್ಬಿಗಿಂತ ಹಿಂದೆ ಉಳಿದಿರುವ ಆಪನ್‌ಹೈಮರ್ ಸಹ ಒಳ್ಳೆಯ ಗಳಿಕೆಯನ್ನೇ ಮಾಡಿದೆ.
ಆದರೆ ಭಾರತ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹೌದು, ಭಾರತದಲ್ಲಿ ನಿರ್ದೇಶಕ ಕ್ರಿಸ್ಟಫರ್ ನೋಲನ್ ಅಭಿಮಾನಿ ಬಳಗ ಅತಿದೊಡ್ಡ ಮಟ್ಟದಲ್ಲಿ ಇದ್ದು, ನೋಲನ್ ನಿರ್ದೇಶನದ ಈ ಬಯೋಗ್ರಫಿ ಸಿನಿಮಾವನ್ನು ನೋಡಲು ಮುಗಿಬಿದ್ದಿದ್ದಾರೆ. ಹೀಗಾಗಿಯೇ ವಿಶ್ವದ ಗಳಿಕೆಯಲ್ಲಿ ಆಪನ್‌ಹೈಮರ್ ಅನ್ನು ಹಿಂದಿಕ್ಕಿ ಅಬ್ಬರಿಸುತ್ತಿರುವ ಬಾರ್ಬಿ ಭಾರತದಲ್ಲಿ ಕ್ರಿಸ್ಟಫರ್ ನೋಲನ್ ಚಿತ್ರವನ್ನು ಹಿಂದಿಕ್ಕುವಲ್ಲಿ ವಿಫಲಗೊಂಡಿದೆ.

ಇನ್ನು ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿಯೂ ಸಹ ಬಾರ್ಬಿಗಿಂತ ಆಪನ್‌ಹೈಮರ್‌ನ ಅಬ್ಬರ ಜೋರಾಗಿದೆ. ಸದ್ಯ ಈ ಎರಡೂ ಚಿತ್ರಗಳು ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ ಮೊದಲ ವಾರ ಗಳಿಕೆ ಮಾಡಿದ ಕಲೆಕ್ಷನ್ ವಿವರ ಹೊರಬಿದ್ದಿದ್ದು, ಬಾರ್ಬಿ ಮೊದಲ ವಾರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 5.35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದರೆ, ಆಪನ್‌ಹೈಮರ್ ಚಿತ್ರ ಮೊದಲ ವಾರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 16.1 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.
ಈ ಮೂಲಕ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಆಪನ್‌ಹೈಮರ್ ಎದುರು ಬಾರ್ಬಿ ಚಿತ್ರ ಮಂಕಾಗಿದೆ. ಹೀಗೆ ಆಪನ್‌ಹೈಮರ್ ಅಬ್ಬರ ಜೋರಾಗಿದ್ದು, ಈ ಎರಡೂ ಚಿತ್ರಗಳು ಬಿಡುಗಡೆಗೊಂಡ ದಿನವೇ ಕನ್ನಡದ ಹೊಸಬರ ಚಿತ್ರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಬಿಡುಗಡೆಯಾಗಿದ್ದು, ಈ ಚಿತ್ರ ಬಾರ್ಬಿ ಹಾಗೂ ಆಪನ್‌ಹೈಮರ್ ಎರಡೂ ಚಿತ್ರಗಳಿಗೂ ಸಹ ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ ಟಕ್ಕರ್ ನೀಡುತ್ತಿದೆ.
ಹೀಗೆ ಮೊದಲ ವಾರ ಇಷ್ಟು ಪ್ರಮಾಣದ ಗಳಿಕೆ ಮಾಡಿರುವ ಈ ಚಿತ್ರಗಳ ಗಳಿಕೆ ಈ ವಾರ ಹೊಸ ಚಿತ್ರಗಳು ತೆರೆ ಕಂಡ ಕಾರಣ ತುಸು ತಗ್ಗಬಹುದು ಎನ್ನಬಹುದು. ಹೌದು, ಇಂದು ( ಜುಲೈ 28 ) ತೆಲುಗಿನ ಪವನ್ ಕಲ್ಯಾಣ್ ನಟನೆಯ ಬ್ರೋ ಹಾಗೂ ಇನ್ನೂ ಹಲವಾರು ಸಿನಿಮಾಗಳು ತೆರೆಗೆ ಬಂದಿರುವ ಕಾರಣ ಈ ಚಿತ್ರಗಳು ರಾಜ್ಯದಲ್ಲಿ ಅನೇಕ ಶೋಗಳನ್ನು ಕಳೆದುಕೊಂಡಿದ್ದು, ಸಾಮಾನ್ಯವಾಗಿ ಗಳಿಕೆಯಲ್ಲಿಯೂ ಸಹ ಹಿನ್ನಡೆ ಅನುಭವಿಸಲಿವೆ.


Click it and Unblock the Notifications










