Oppenheimer 1st Week Collection: ಕೇರಳಕ್ಕಿಂತ ಕರ್ನಾಟಕದ ಕಲೆಕ್ಷನ್ ದುಪ್ಪಟ್ಟು!
ಜುಲೈ 21ರ ಶುಕ್ರವಾರದಂದು ಬಿಡುಗಡೆಗೊಂಡ ಚಿತ್ರಗಳ ಪೈಕಿ ಅತಿಹೆಚ್ಚು ನಿರೀಕ್ಷೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದ ಚಿತ್ರವೆಂದರೆ ಅದು ಹಾಲಿವುಡ್‌ನ ಆಪನ್‌ಹೈಮರ್ ಸಿನಿಮಾ. ಬಿಡುಗಡೆಗೂ ಮುನ್ನ ತನ್ನ ಕಾನ್ಸೆಪ್ಟ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರವನ್ನು ಕ್ರಿಸ್ಟಫರ್ ನೋಲನ್ ಹೇಗೆ ನಿರ್ದೇಶನ ಮಾಡಿರಲಿದ್ದಾರೆ ಎಂಬ ಕುತೂಹಲ ವಿಶ್ವ ಸಿನಿ ರಸಿಕರಲ್ಲಿ ದೊಡ್ಡ ಮಟ್ಟದಲ್ಲಿ ಮೂಡಿತ್ತು.
ಹೀಗೆ ಬೃಹತ್ ನಿರೀಕ್ಷೆಯೊಂದಿಗೆ ಚಿತ್ರಮಂದಿರಗಳ ಅಂಗಳಕ್ಕೆ ಬಂದ ಆಪನ್‌ಹೈಮರ್ ಚಿತ್ರ ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಂಡಿತಾದರೂ ಅದೇ ದಿನ ಬಿಡುಗಡೆಯಾಗಿದ್ದ ಬಾರ್ಬಿ ಚಿತ್ರವನ್ನು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಹಿಂದಿಕ್ಕಲು ಆಗಲಿಲ್ಲ. ಆದರೆ ಭಾರತ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹೌದು, ಭಾರತದಲ್ಲಿ ನಿರ್ದೇಶಕ ಕ್ರಿಸ್ಟಫರ್ ನೋಲನ್ ಅಭಿಮಾನಿ ಬಳಗ ಅತಿದೊಡ್ಡ ಮಟ್ಟದಲ್ಲಿ ಇದ್ದು, ನೋಲನ್ ನಿರ್ದೇಶನದ ಈ ಬಯೋಗ್ರಫಿ ಸಿನಿಮಾವನ್ನು ನೋಡಲು ಮುಗಿಬಿದ್ದಿದ್ದಾರೆ. ಹೀಗಾಗಿಯೇ ವಿಶ್ವದ ಗಳಿಕೆಯಲ್ಲಿ ಆಪನ್‌ಹೈಮರ್ ಅನ್ನು ಹಿಂದಿಕ್ಕಿ ಅಬ್ಬರಿಸುತ್ತಿರುವ ಬಾರ್ಬಿ ಭಾರತದಲ್ಲಿ ಕ್ರಿಸ್ಟಫರ್ ನೋಲನ್ ಚಿತ್ರವನ್ನು ಹಿಂದಿಕ್ಕುವಲ್ಲಿ ವಿಫಲಗೊಂಡಿದೆ.

ಹೌದು, ಬಾರ್ಬಿ ಚಿತ್ರಕ್ಕೆ ಭಾರತ ಬಾಕ್ಸ್ ಆಫೀಸ್‌ನಲ್ಲಿ ಆಪನ್‌ಹೈಮರ್ ಚಿತ್ರವನ್ನು ಹಿಂದಿಕ್ಕಲು ಆಗದೇ ಹಿನ್ನಡೆ ಅನುಭವಿಸಿದೆ. ಇನ್ನು ನಿನ್ನೆಗೆ ( ಜುಲೈ 28 ) ಒಂದು ವಾರದ ಪ್ರದರ್ಶನವನ್ನು ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳೆರಡೂ ಪೂರೈಸಿದ್ದು, ಮೊದಲ ವಾರದ ಕಲೆಕ್ಷನ್ ವಿವರ ಹೊರಬಿದ್ದಿದೆ. ಭಾರತದಲ್ಲಿ ಈ ಎರಡೂ ಚಿತ್ರಗಳು ಮೊದಲ ವಾರ ಮಾಡಿರುವ ರಾಜ್ಯವಾರು ಕಲೆಕ್ಷನ್ ವಿವರ ಲಭಿಸಿದ್ದು, ಕೇರಳಕ್ಕಿಂತ ಕರ್ನಾಟಕದಲ್ಲಿ ಹೆಚ್ಚಿನ ಕಲೆಕ್ಷನ್ ಅನ್ನು ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳು ಮಾಡಿವೆ.
ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಬಾರ್ಬಿ 5.35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದರೆ, ಆಪನ್‌ಹೈಮರ್ ಚಿತ್ರ ಮೊದಲ ವಾರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 16.1 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಅತ್ತ ಕೇರಳದಲ್ಲಿ ಆಪನ್‌ಹೈಮರ್ ಚಿತ್ರ ಮೊದಲ ವಾರದಲ್ಲಿ 6.35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಅತ್ತ ಬಾರ್ಬಿ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಮೊದಲ ವಾರ 2 ಕೋಟಿ ಗಳಿಕೆಯನ್ನು ಮಾಡಿದೆ.
ಈ ಮೂಲಕ ಆಪನ್‌ಹೈಮರ್ ಕರ್ನಾಟಕ ಹಾಗೂ ಕೇರಳ ಎರಡೂ ಬಾಕ್ಸ್ ಆಫೀಸ್‌ಗಳಲ್ಲಿಯೂ ಬಾರ್ಬಿ ಚಿತ್ರವನ್ನು ಹಿಂದಿಕ್ಕಿದ್ದು, ಪಾರುಪತ್ಯ ಮೆರೆದಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ಆಪನ್‌ಹೈಮರ್ ಯಾವ ಪ್ರಾದೇಶಿಕ ಸಿನಿಮಾಗಳಿಗೂ ಕಡಿಮೆ ಇಲ್ಲ ಎಂಬಂತೆ ಕಲೆಕ್ಷನ್ ಮಾಡಿದೆ.


Click it and Unblock the Notifications











