'ಜೈ ಭೀಮ್' ಪಡೆಯುತ್ತದೆಯೇ ಆಸ್ಕರ್ ಎಂಟ್ರಿ: ನಾಮಿನೇಷನ್ ಹಂತದ ನಿರೀಕ್ಷೆ
ಆಸ್ಕರ್ 2022 ಭಾರತೀಯರ ಮಟ್ಟಿಗೆ ತುಸು ನಿರೀಕ್ಷೆ ಹುಟ್ಟಿಸಿದೆ. ಈ ಬಾರಿಯ ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ಕಳಿಸಲ್ಪಟ್ಟಿದ್ದ ತಮಿಳು ಸಿನಿಮಾ 'ಕೂಳಂಗಳ್' ಸಿನಿಮಾ ಸ್ಪರ್ಧೆಯಿಂದ ಹೊರಬಿದ್ದಿದೆ. ಆದರೆ ಭಾರತದ ಮೂರು ಸಿನಿಮಾಗಳು ಮುಂದಿನ ಹಂತಕ್ಕೆ ಆಯ್ಕೆ ಆಗಿವೆ.
ಇಂದು ಆಸ್ಕರ್ 2022ಕ್ಕೆ ನಾಮಿನೇಷನ್ ಪ್ರಕ್ರಿಯೆ ನಡೆಯಲಿದ್ದು, ಭಾರತದ ಎರಡು ಫೀಚರ್ ಸಿನಿಮಾ ಹಾಗೂ ಒಂದು ಸಾಕ್ಷ್ಯ ಚಿತ್ರ ಸ್ಪರ್ಧೆಯಲ್ಲಿದ್ದು ಒಂದಾದರೂ ಸಿನಿಮಾ ನಾಮಿನೇಷನ್ ಹಂತ ತಲುಪುವ ನಿರೀಕ್ಷೆ ಇದೆ.
ಇಂದು ಸಂಜೆ 6:30 (ಭಾರತೀಯ ಕಾಲಮಾನ)ಕ್ಕೆ ಆಸ್ಕರ್ 2022ರ ನಾಮಿನೇಷನ್ ಸಿನಿಮಾಗಳನ್ನು ಘೋಷಿಸಲಾಗುತ್ತದೆ. ನಟರಾದ ಟ್ರೇಸ್ ಎಲ್ಲಿಸ್ ರೋಸ್ ಮತ್ತು ಲೆಸ್ಲಿ ಜೋರ್ಡನ್ ಅವರುಗಳು ಸಿನಿಮಾಗಳ ಪಟ್ಟಿಯನ್ನು ಘೋಷಿಸಲಿದ್ದಾರೆ.

ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಅರ್ಹತೆ ಪಡೆದಿದ್ದ 270 ಸಿನಿಮಾಗಳ ಪಟ್ಟಿಯನ್ನು ಆಸ್ಕರ್ಸ್ ಆಯೋಜಕರು ಜನವರಿ 20 ರಂದು ಘೋಷಿಸಿದ್ದರು. ಆ ಪಟ್ಟಿಯಲ್ಲಿ ಭಾರತದ ಮೂರು ಸಿನಿಮಾಗಳು ಸ್ಥಾನ ಪಡೆದಿದ್ದವು.
ಅರ್ಹತೆ ಪಡೆದ ಸಿನಿಮಾಗಳನ್ನು ವೀಕ್ಷಿಸಿದ ಒಂದು ವಿಶೇಷ ತಂಡ ನಾಮಿನೇಷನ್ ಹಂತಕ್ಕೆ ಏರಬೇಕಾದ ಸಿನಿಮಾಕ್ಕೆ ಮತದಾನ ಮಾಡಿದ್ದು ಅದರ ಫಲಿತಾಂಶದ ಆಧಾರದ ಮೇಲೆ ಇಂದಿನ ನಾಮಿನೇಟ್ ಆದ ಸಿನಿಮಾಗಳನ್ನು ಘೋಷಿಸಲಾಗುತ್ತದೆ.
28 ವಿವಿಧ ವಿಭಾಗಗಳಿಗೆ ನಾಮಿನೇಷನ್ ಪಡೆದ ಸಿನಿಮಾಗಳನ್ನು ಘೋಷಿಸಲಾಗುತ್ತಿದ್ದು, ಪ್ರತಿ ವಿಭಾಗಕ್ಕೂ ನಾಲ್ಕು ಅಥವಾ ಐದು ಸಿನಿಮಾಗಳು, ನಟರು ನಾಮಿನೇಟ್ ಆಗಲಿದ್ದಾರೆ. ನಾಮಿನೇಟ್ ಆದ ಸಿನಿಮಾಗಳನ್ನು ವೀಕ್ಷಿಸುವ ತಂಡ ಮತ್ತೆ ಮತದಾನ ಮಾಡಿ ಅತ್ಯುತ್ತಮ ಒಂದು ಸಿನಿಮಾವನ್ನು ಎಲ್ಲ ವಿಭಾಗದಲ್ಲಿಯೂ ಆಯ್ಕೆ ಮಾಡಿ ಆಸ್ಕರ್ ನೀಡಲಿದೆ. ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಮಾರ್ಚ್ 27 ರಂದು ನಡೆಯಲಿದೆ.


Click it and Unblock the Notifications











