Oscars 2023: ನಿರ್ದೇಶಿಸಿದ ಎರಡನೇ ಚಿತ್ರಕ್ಕೆ 7 ಆಸ್ಕರ್ ಪ್ರಶಸ್ತಿ; ಡೇನಿಯಲ್ಸ್ ದರ್ಬಾರ್!
ಇಂದು ( ಮಾರ್ಚ್ 13 ) ಲಾಸ್ ಏಂಜಲೀಸ್‌ನಲ್ಲಿ ನಡೆದ ಪ್ರತಿಷ್ಠಿತ ಆಸ್ಕರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ವಿಜೇತರು ಯಾರೆಂಬುದು ತಿಳಿದುಬಂದಿದೆ. ಎರಡು ವಿಭಾಗಗಳಲ್ಲಿ ಆಸ್ಕರ್ ಭಾರತದ ಪಾಲಾಗಿದೆ. ಬೆಸ್ಟ್ ಡಾಕ್ಯು ಶಾರ್ಟ್ ಫಿಲ್ಮ್ ಕೆಟಗರಿ ಅಡಿಯಲ್ಲಿ 'ದ ಎಲಿಫೆಂಟ್ ವಿಸ್ಪರರ್ಸ್' ಪ್ರಶಸ್ತಿಯನ್ನು ಗೆದ್ದರೆ, ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿ ಅಡಿಯಲ್ಲಿ ತೆಲುಗಿನ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಇನ್ನು ಉಳಿದ ಕೆಟಗರಿಗಳ ಅಡಿಯಲ್ಲಿ ವಿವಿಧ ಚಿತ್ರಗಳು ಹಾಗೂ ಕಲಾವಿದರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಅಮೆರಿಕನ್ ಚಿತ್ರ 'ಎವೆರಿಥಿಂಗ್ ಎವೆರಿವೇರ್ ಆಲ್ ಎಟ್ ಒನ್ಸ್' ಬರೋಬ್ಬರಿ ಏಳು ಕೆಟಗರಿಗಳ ಅಡಿಯಲ್ಲಿ ಪ್ರಶಸ್ತಿಗಳನ್ನು ಬಾಚಿ ಸಿಂಹಪಾಲನ್ನು ಹೊಂದಿದೆ. ಹೌದು, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ನಟಿ, ಅತ್ಯುತ್ತಮ ಚಿತ್ರ, ಅತ್ಯುತ್ತಮ ಪೋಷಕ ನಟ ಹಾಗೂ ಅತ್ಯುತ್ತಮ ಸಂಕಲನ ಕೆಟಗರಿಗಳ ಅಡಿಯಲ್ಲಿ 'ಎವೆರಿಥಿಂಗ್ ಎವೆರಿವೇರ್ ಆಲ್ ಎಟ್ ಒನ್ಸ್' ಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಇಷ್ಟರ ಮಟ್ಟಿಗೆ ಸಾಧನೆ ಮಾಡಿರುವ ಈ ಚಿತ್ರವನ್ನು ಡೇನಿಯಲ್ ಕ್ವಾನ್ ಹಾಗೂ ಡೇನಿಯಲ್ ಸೈನರ್ಟ್ ನಿರ್ದೇಶಿಸಿದ್ದಾರೆ. ಡೇನಿಯಲ್ಸ್ ಎಂದೇ ಖ್ಯಾತಿಯನ್ನು ಪಡೆದಿರುವ ಈ ಜೋಡಿ ನಿರ್ದೇಶಿಸಿರುವ ಎರಡನೇ ಚಿತ್ರ ಇದಾಗಿದ್ದು, ಎರಡನೇ ಚಿತ್ರಕ್ಕೆ ಇಷ್ಟೊಂದು ಬೃಹತ್ ಸಾಧನೆ ಮಾಡಿರುವುದನ್ನು ಕಂಡ ನೆಟ್ಟಿಗರು ಹಾಗೂ ಸಿನಿ ರಸಿಕರು ಬೆರಗಾಗಿದ್ದಾರೆ. ಈ ಪರಿ ಸದ್ದು ಮಾಡುತ್ತಿರುವ ಈ ನಿರ್ದೇಶಕರ ಜೋಡಿ ಯಾರು ಎಂದು ಗೂಗಲ್‌ನಲ್ಲಿ ಹುಡುಕಲು ಆರಂಭಿಸಿದ್ದಾರೆ.
ಡೇನಿಯಲ್ ಕ್ವಾನ್ ಯುನೈಟೆಟ್ ಸ್ಟೇಟ್ಸ್‌ನ ಮಸ್ಸಾಚಸೆಟ್ಸ್‌ನವರಾದರೆ, ಡೇನಿಯಲ್ ಸೈನರ್ಟ್ ಅಲಬಾಮಾದ ಬರ್ಮಿಂಗ್‍ಹ್ಯಾಮ್‌ನವರು. ಈ ಇಬ್ಬರೂ ಬೋಸ್ಟನ್‌ನ ಎಮರ್‌ಸನ್ ಕಾಲೇಜಿನಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್ ಓದುವಾಗ ಪರಸ್ಪರ ಪರಿಚಯವಾಗಿದ್ದಾರೆ. ಹೀಗೆ ಜತೆಯಾದ ಈ ಜೋಡಿ ಆರಂಭದ ದಿನಗಳಲ್ಲಿ ಮ್ಯೂಸಿಕ್ ವಿಡಿಯೊಗಳನ್ನು ಮಾಡಿ ಜನಪ್ರಿಯತೆ ಪಡೆದುಕೊಂಡಿತ್ತು. 2016ರಲ್ಲಿ ತಮ್ಮ ನಿರ್ದೇಶನವನ್ನು ಸಿನಿಮಾಗೂ ಸಹ ವಿಸ್ತರಿಸಿದ ಈ ಜೋಡಿ 'ಸ್ವಿಸ್ ಆರ್ಮಿ ಮ್ಯಾನ್' ಎಂಬ ಚಿತ್ರವನ್ನು ನಿರ್ದೇಶಿಸಿತ್ತು.
ಈ ಚಿತ್ರವೂ ಸಹ ದೊಡ್ಡ ಮಟ್ಟದಲ್ಲಿ ಪಾಸಿಟಿವ್ ವಿಮರ್ಶೆಗಳನ್ನು ಪಡೆದುಕೊಂಡಿತ್ತು. ಸನ್‌ಡ್ಯಾನ್ಸ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಈ ಚಿತ್ರ ಪ್ರಶಸ್ತಿಯನ್ನೂ ಸಹ ಗೆದ್ದಿತ್ತು. ಹೀಗೆ ಮೊದಲ ಸಿನಿಮಾದಲ್ಲಿಯೇ ದೊಡ್ಡ ಪ್ರಶಸ್ತಿಯನ್ನು ಗೆದ್ದಿದ್ದ ಡೇನಿಯಲ್ಸ್ ಜೋಡಿ ಇದೀಗ ಎರಡನೇ ಸಿನಿಮಾ 'ಎವೆರಿಥಿಂಗ್ ಎವೆರಿವೇರ್ ಆಲ್ ಎಟ್ ಒನ್ಸ್' ಮೂಲಕ ಏಳು ಆಸ್ಕರ್ ಪ್ರಶಸ್ತಿಯನ್ನು ಕಬಳಿಸಿಕೊಂಡಿದೆ. ಈ ಚಿತ್ರ ಹಾಗೂ 2016ರಲ್ಲಿ ಬಿಡುಗಡೆಯಾಗಿದ್ದ ಸ್ವಿಸ್ ಆರ್ಮಿ ಮ್ಯಾನ್ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಚಿತ್ರಗಳನ್ನು ನಿರ್ದೇಶಿಸದ ಈ ಜೋಡಿ ಹಲವು ಟಿವಿ ಕಾರ್ಯಕ್ರಮಗಳನ್ನು ಒಟ್ಟಿಗೆ ಹಾಗೂ ಪ್ರತ್ಯೇಕವಾಗಿ ನಿರ್ದೇಶಿಸಿದೆ.

ಇನ್ನು ಡೇನಿಯಲ್ ಸೈನರ್ಟ್ ಮಾತ್ರ 2019ರಲ್ಲಿ ತಾವೇ ಪ್ರತ್ಯೇಕವಾಗಿ ಸಿನಿಮಾ ನಿರ್ದೇಶನವನ್ನು ಮಾಡಿದ್ದರು. 'ದ ಡೆತ್ ಆಫ್ ಎ ಡಿಕ್ ಲಾಂಗ್' ಎಂಬ ಚಿತ್ರ ಸಾಧಾರಣ ಯಶಸ್ಸು ಸಾಧಿಸಿತ್ತು. ಈ ಜೋಡಿ ಸಿನಿಮಾ ನಿರ್ದೇಶನಕ್ಕೆ ಇಳಿಯುವ ಮುನ್ನ ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿದೆ. ಮೊದಲ ಚಿತ್ರ ಹಾಗೂ ಎರಡನೇ ಚಿತ್ರಗಳ ನಡುವಿನ ಸಮಯದಲ್ಲಿ ಈ ಜೋಡಿ ಹಲವು ಟಿವಿ ಕಾರ್ಯಕ್ರಮಗಳನ್ನು ನಿರ್ದೇಶಿಸಿದ್ದು, ಸಂಸ್ಥೆಯೊಂದರ ಜತೆ ಹಲವು ಸೀರಿಯಲ್‌ಗಳ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.
ಇನ್ನು ಕಳೆದ ವರ್ಷ ಈ ಜೋಡಿ ಮುಂದಿನ ಐದು ವರ್ಷಗಳ ಕಾಲ ಸಿನಿಮಾಗಳನ್ನು ನಿರ್ದೇಶಿಸಲು ಯೂನಿವರ್ಸಲ್ ಪಿಕ್ಚರ್ಸ್ ಜತೆ ಒಪ್ಪಂದವನ್ನು ಸಹ ಮಾಡಿಕೊಂಡಿದೆ. ಒಟ್ಟಿನಲ್ಲಿ ಮೊದಲ ಚಿತ್ರ ನಿರ್ದೇಶನ ಮಾಡಿ ಸದ್ದು ಮಾಡಿದರೂ ಹೆಚ್ಚೇನೂ ಫೇಮಸ್ ಆಗದಿದ್ದ ಈ ಜೋಡಿ ಇದೀಗ ಎರಡನೇ ಸಿನಿಮಾ ಮೂಲಕವೇ ವಿಶ್ವದಾದ್ಯಂತ ಹೆಸರು ಮಾಡಿದ್ದಾರೆ. ಡೇನಿಯಲ್ ಕ್ವಾನ್ ಕಿರ್ಸ್ಟನ್ ಲಿಪೋರ್ ಎಂಬ ಎಂಬ ಆನಿಮೇಟರ್ ಜತೆ ವಿವಾಹವಾಗಿದ್ದಾರೆ. ಇಬ್ಬರೂ ಡೇನಿಯಲ್‌ಗಳಿಗೂ ಸಹ 35 ವರ್ಷ ವಯಸ್ಸಾಗಿದೆ.


Click it and Unblock the Notifications











