Oscars 2023: ಆಸ್ಕರ್ ಟ್ರೋಫಿ ತಯಾರಿಸಲು ತಗಲುವ ವೆಚ್ಚ ಎಷ್ಟು? ಮಾರಾಟ ಮಾಡಿದರೆ ಎಷ್ಟು ಹಣ ಸಿಗುತ್ತೆ?
2022ನೇ ಸಾಲಿನ ಅಂದರೆ 95ನೇ ಆಸ್ಕರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ತೆಲುಗಿನ 'RRR' ಚಿತ್ರದ 'ನಾಟು ನಾಟು' ಸಾಂಗ್ ನಾಮನಿರ್ದೇಶನಗೊಂಡಿದೆ. ಹಾಗಾಗಿ ಸಹಜವಾಗಿಯೇ ಈ ಬಾರಿ ಭಾರತದ ಸಿನಿರಸಿಕರು ಕೂಡ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕಾಗಿ ಎದುರು ನೋಡುತ್ತಿದ್ದಾರೆ. ವೇದಿಕೆಯಲ್ಲಿ 'ನಾಟು ನಾಟು' ಹಾಡಿನ ಲೈವ್ ಪರ್ಫಾರ್ಮೆನ್ಸ್ ಕೂಡ ಇರಲಿದೆ.
'RRR' ಟೀಂ ಆಸ್ಕರ್ ಪ್ರಶಸ್ತಿ ಎತ್ತಿ ಹಿಡಿಯಲು ಒಂದು ಒಂದು ಹೆಜ್ಜೆ ಬಾಕಿಯಿದೆ. ಇನ್ನು ಆಸ್ಕರ್ ಪ್ರಶಸ್ತಿ ಬಗ್ಗೆ ಕೆಲವರಿಗೆ ಕುತೂಹಲ ಇದೆ. ಈ ಟ್ರೋಫಿಯಲ್ಲಿ ಯಾವುದರಿಂದ ತಯಾರಿಸುತ್ತಾರೆ? ಎಷ್ಟು ವೆಚ್ಚ ತಗುಲುತ್ತದೆ? ಅದರ ಬೆಲೆ ಎಷ್ಟು? ಎನ್ನುವ ಪ್ರಶ್ನೆಗಳು ಕಾಡುತ್ತಿರುತ್ತದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಈಗ ಭಾರೀ ಚರ್ಚೆ ಆಗುತ್ತಿದೆ. ಆಸ್ಕರ್ ಪ್ರಶಸ್ತಿ ನೋಡಲು ಚಿನ್ನದ ಬಣ್ಣದಲ್ಲಿರುತ್ತದೆ. ಆದರೆ ಅದು ಸಂಪೂರ್ಣವಾಗಿ ಚಿನ್ನದಲ್ಲ. ಈ ಹಿಂದೆ ಕಂಚಿನಲ್ಲಿ ತಯಾರಿಸಿ ನಂತರ ಚಿನ್ನದ ಹೊದಿಕೆ ಅಳವಡಿಸಲಾಗುತ್ತಿತ್ತು.

ಈಗ ಆಸ್ಕರ್ ಪ್ರಶಸ್ತಿಯನ್ನು ಲೋಹದಿಂದ ತಯಾರಿಸಿ ಚಿನ್ನದ ಹೊದಿಕೆ ಹಾಕಲಾಗುತ್ತದೆ. ಆಸ್ಕರ್ ಪ್ರಶಸ್ತಿ ಟ್ರೋಫಿ 13.5 ಇಂಚು ಎತ್ತರ ಹಾಗೂ 3.5 ಕೆಜಿಗೂ ಅಧಿಕ ತೂಕ ಇರುತ್ತದೆ. ಒಂದು ಆಸ್ಕರ್ ಪ್ರಶಸ್ತಿ ಟ್ರೋಫಿ ಸಿದ್ಧಪಡಿಸಲು 400 ಡಾಲರ್‌ವರೆಗೂ ವೆಚ್ಚ ತಗಲುತ್ತದೆ. ಅಂದರೆ ಭಾರತದ ರೂಪಾಯಿಯಲ್ಲಿ 30 ಸಾವಿರ ರೂಪಾಯಿಗೂ ಅಧಿಕ. ಬಹಳ ಪ್ರತಿಷ್ಠಾತ್ಮಕವಾದ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಅದನ್ನು ಮಾರಾಟ ಮಾಡಿದರೆ ಕೋಟ್ಯಾಂತರ ರೂ. ಸಿಗುತ್ತೆ ಎಂದು ಕೆಲವರು ಅಂದುಕೊಂಡಿರಬಹುದು. ಆದರೆ ಅಸಲಿ ಸಂಗತಿ ಬೇರೇನೆ ಇದೆ.
ಆಸ್ಕರ್ ಪ್ರಶಸ್ತಿ ಮಾರಾಟ ಮಾಡಿದರೆ ಅವರಂತಹ ಹುಚ್ಚರು ಮತ್ತೊಬ್ಬರು ಇರಲು ಸಾಧ್ಯವಿಲ್ಲ. ಯಾಕಂದರೆ ಈ ಟ್ರೋಫಿಯನ್ನು ಯಾರಿಗಾದರೂ ಮಾರಿದರೆ ಸಿಗೋದು ಒಂದೇ ಒಂದು ಡಾಲರ್ ಮಾತ್ರ. ಅಯ್ಯೋ ರಾಮ ಇದ್ಯಾವ ನ್ಯಾಯ? 400 ಡಾಲರ್ ರೂ. ವೆಚ್ಚದ ಟ್ರೋಫಿಗೆ ಸಿಗೋದು ಕೇವಲ 1 ಡಾಲರ್ ಮಾತ್ರನಾ? ಅದು ಕೂಡ ಸಿನಿಲೋಕದ ಸರ್ವಶ್ರೇಷ್ಠ ಆಸ್ಕರ್ ಪ್ರಶಸ್ತಿಗೆ? ಅಂತ ನಿಮಗೆ ಅನಿಸಬಹುದು. ಆದರೆ ಅದಕ್ಕೂ ಒಂದು ಕಾರಣ ಇದೆ. ಅದು ಅಕಾಡೆಮಿಯ ವಿಚಿತ್ರ ನಿಯಮ.

1950ರಲ್ಲಿ ಅಮೆರಿಕಾದ ಸಿನಿಮಾ ನಿರ್ದೇಶಕರೊಬ್ಬರು ತಾವು ಗಳಿಸಿದ ಆಸ್ಕರ್ ಪ್ರಶಸ್ತಿಯನ್ನು ಹರಾಜು ಹಾಕಿದ್ದರು. ಹರಾಜಿನಲ್ಲಿ ಬರೋಬ್ಬರಿ 6.5 ಕೋಟಿ ರೂ. ಕೂಗಿದ್ದರು. ಇದರಿಂದ ಎತ್ತೆಚ್ಚುಕೊಂಡ ಅಕಾಡೆಮಿ ಒಂದು ಹೊಸ ನಿಯಮ ಜಾರಿಗೆ ತಂದಿತ್ತು. ಅಕಾಡೆಮಿ ಅವಾರ್ಡ್‌ನ್ನು ಮಾರುವ, ಕೊಳ್ಳುವ ಹಕ್ಕು ಅಕಾಡೆಮಿ ಸಂಸ್ಥೆಗೆ ಮಾತ್ರ ಇರುವಂತೆ ನಿಬಂಧನೆಯನ್ನು ವಿಧಿಸಲಾಯಿತು. ಅದು ಕೂಡ ಆಸ್ಕರ್ ಅವಾರ್ಡ್ ಬೆಲೆ 1 ಮಿಲಿಯನ್ ದಾಟದಂತೆ ವಿಕ್ರಯಿಸುವಂತೆ ನಿಬಂಧನೆ ತರಲಾಯಿತು. ಹಾಗಾಗಿ ಆಸ್ಕರ್ ಪ್ರಶಸ್ತಿ ಅನ್ನೋದು ತಮ್ಮೊಟ್ಟಿಗೆ ಇಟ್ಟುಕೊಳ್ಳುವಂತಹ ಅದ್ಭುತ ಅನುಭೂತಿ ಎನ್ನಬಹುದು.
ಈ ಬಾರಿ 'RRR' ಚಿತ್ರತಂಡ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗುತ್ತಿದೆ. ಈಗಾಗಲೇ ರಾಜಮೌಳಿ, ಜ್ಯೂ. ಎನ್‌ಟಿಆರ್ ಹಾಗೂ ರಾಮ್‌ಚರಣ್ ಅಮೆರಿಕಾದಲ್ಲಿ ಬೀಡುಬಿಟ್ಟಿದ್ದಾರೆ. ಆಸ್ಕರ್ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು 'ನಾಟು ನಾಟು' ಹಾಡು ಹಾಡಿದ್ದ ರಾಹುಲ್ ಸಿಪ್ಲಿಗಿಂಜ್ ಹಾಗೂ ಕಾಲಭೈರವ ವೇದಿಕೆಯಲ್ಲಿ ಹಾಡನ್ನು ಹಾಡಿ ರಂಜಿಸಲಿದ್ದಾರೆ. ಅವಕಾಶ ಸಿಕ್ಕರೆ ಚರಣ್, ತಾರಕ್ ಹೆಜ್ಜೆ ಹಾಕಲಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ನಿರೂಪಕಿಯಾಗಿ ಭಾಗಿ ಆಗಲಿದ್ದಾರೆ.


Click it and Unblock the Notifications











