ಮತ್ತೆ ಆಸ್ಕರ್ ಅವಾರ್ಡ್ಸ್‌ನಲ್ಲಿ 'RRR' ಹವಾ; ರಾಮ್‌ಚರಣ್ ಸ್ಟಂಟ್ಸ್‌ಗೆ ವಿಶೇಷ ಗೌರವ
ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಆಸ್ಕರ್ ಪ್ರಶಸ್ತಿ ಗೆದ್ದಿದ್ದು ಗೊತ್ತೇಯಿದೆ. ಚಿತ್ರದ 'ನಾಟು ನಾಟು' ಗೀತೆಗೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿತ್ತು. ಈ ಮೂಲಕ ಆಸ್ಕರ್ ವೇದಿಕೆಯಲ್ಲಿ ತೆಲುಗು ಸಿನಿಮಾ ಹೊಸ ಇತಿಹಾಸ ನಿರ್ಮಿಸಿತ್ತು.
ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'RRR' ಸಿನಿಮಾ 2022ರಲ್ಲಿ ತೆರೆಗೆ ಬಂದಿತ್ತು. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಚರಣ್, ಕೋಮುರಂ ಭೀಮ್ ಆಗಿ ತಾರಕ್ ಅಬ್ಬರಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳಲ್ಲಿ ಕಾಣಿಸಿಕೊಂಡು ಗೆದ್ದಿದ್ದರು. ನಿಜ ಜೀವನದ ಎರಡು ಪಾತ್ರಗಳನ್ನು ತೆಗೆದುಕೊಂಡು ಒಂದು ಕಾಲ್ಪನಿಕ ಕಥೆ ಮಾಡಿ ಜಕ್ಕಣ್ಣ ಸಕ್ಸಸ್ ಕಂಡಿದ್ದರು. ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ನೋಡಿ ಮೆಚ್ಚಿದ್ದರು. ಚಿತ್ರದ ಹಾಡಿಗೆ 95ನೇ ಅಕಾಡೆಮಿ ಅವಾರ್ಡ್ಸ್ ವೇದಿಕೆಯಲ್ಲಿ ಆಸ್ಕರ್ ಗರಿ ಲಭಿಸಿತ್ತು.

ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಹಾಗೂ ಸಾಹಿತ್ಯ ಬರೆದಿದ್ದ ಚಂದ್ರಬೋಸ್ ಆಸ್ಕರ್ ವೇದಿಕೆಯಲ್ಲಿ ಪ್ರಶಸ್ತಿ ಪಡೆದಿದ್ದರು. ರಾಜಮೌಳಿ, ರಾಮಚರಣ್, ತಾರಕ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿ ಸಂಭ್ರಮಿಸಿದ್ದರು. ಇದೀಗ ಮತ್ತೆ ಅಕಾಡೆಮಿ ಅವಾರ್ಡ್ಸ್‌ನಲ್ಲಿ 'RRR' ಸಿನಿಮಾ ಸದ್ದು ಮಾಡ್ತಿದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ - ಸ್ಟಂಟ್ ಡಿಸೈನ್ ವಿಭಾಗದಲ್ಲಿ ಇನ್ನು ಮುಂದೆ ಆಸ್ಕರ್ ಪ್ರಶಸ್ತಿ ಪರಿಚಯಿಸುವುದಾಗಿ ಘೋಷಿಸಿದೆ.
2028ರಲ್ಲಿ ಆಸ್ಕರ್ ಅವಾರ್ಡ್ಸ್ 100 ವರ್ಷ ಪೂರೈಸಲಿದೆ. ಈ ವಿಶೇಷ ಸಂದರ್ಭದಲ್ಲೇ ಸ್ಟಂಟ್ ಡಿಸೈನ್ ವಿಭಾಗದಲ್ಲಿ ಪ್ರಶಸ್ತಿ ನೀಡಲು ಅಕಾಡೆಮಿ ಮುಂದಾಗಿದೆ. ಅಂದರೆ 2027ರಲ್ಲಿ ಬಿಡುಗಡೆ ಆಗುವ ಸಿನಿಮಾಗಳಲ್ಲಿ ಅತ್ಯುತ್ತಮ ಸ್ಟಂಟ್ ಡಿಸೈನ್‌ಗಾಗಿ ನಾಮಿನೇಷನ್ ಮಾಡಿ ಒಬ್ಬರಿಗೆ ಪ್ರಶಸ್ತಿ ನೀಡಲಾಗುತ್ತದೆ. ಸದ್ಯ ಈ ಬಗ್ಗೆ ಅಧಿಕೃತವಾಗಿ ಅಕಾಡೆಮಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದೆ.
ಸದ್ಯ ಅಕಾಡೆಮಿ ಹಂಚಿಕೊಂಡಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ. ಕಾರಣ ಅದರಲ್ಲಿ 'RRR' ಚಿತ್ರದಲ್ಲಿ ರಾಮ್‌ಚರಣ್ ಸ್ಟಂಟ್ ಮಾಡಿದ್ದ ಚಿತ್ರವನ್ನು ನೋಡಬಹುದು. ಚಿತ್ರದ ಇಂಟರ್‌ವಲ್ ಬ್ಲಾಕ್‌ನಲ್ಲಿ ಕ್ರೂರ ಮೃಗಗಳ ನಡುವೆ ರಾಮ್- ಭೀಮ್ ಫೈಟ್ ಮಾಡುತ್ತಾರೆ. ಒಂದು ಫ್ರೇಮ್‌ನಲ್ಲಿ ರಾಮ್‌ಚರಣ್ ಮೇಲೆ ದಾಳಿ ಮಾಡುವ ಬರುವ ಹುಲಿಯನ್ನು ಬಲವಾದ ಆಯುಧದಿಂದ ಹೊಡೆದೊಡಿಸುತ್ತಾರೆ. ಅದೇ ಚಿತ್ರವನ್ನು ಅಕಾಡೆಮಿ ಹಂಚಿಕೊಂಡಿದೆ. ಅಷ್ಟರಮಟ್ಟಿಗೆ 'RRR' ಸ್ಟಂಟ್ ಅಕಾಡೆಮಿ ಮೇಲೆ ಪರಿಣಾಮ ಬೀರಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
'RRR' ಚಿತ್ರದ ಆಕ್ಷನ್ ಸನ್ನಿವೇಶಗಳು ಒಂದಕ್ಕಿಂತ ಒಂದು ಮಜವಾಗಿತ್ತು. ಅದರಲ್ಲೂ ಇಂಟರ್‌ವರ್ ಫೈಟ್ ಹೈಲೆಟ್ ಆಗಿತ್ತು. ರಾಮ್‌ಚರಣ್ ಆರ್ಭಟ ಪ್ರೇಕ್ಷಕರನ್ನು ರಂಜಿಸಿತ್ತು. ಸದ್ಯ ಅಕಾಡೆಮಿ ತಮ್ಮ ನೆಚ್ಚಿನ ನಟ ಫೋಟೊ ಹಂಚಿಕೊಂಡಿರುವುದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಜ್ಯೂ. ಎನ್‌ಟಿಆರ್‌ಗಿಂತ ಚರಣ್ ಗ್ರೇಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'RRR' ಚಿತ್ರದ ಪೋಸ್ಟರ್ ಜೊತೆಗೆ ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್ ಹಾಗೂ ಮಿಷನ್: ಇಂಪಾಸಿಬಲ್ ಪೋಸ್ಟರ್ ಸೇರಿಸಿ ಚಿತ್ರವನ್ನು ಅಕಾಡೆಮಿ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಅತ್ಯುತ್ತಮ ಸ್ಟಂಟ್ ಡಿಸೈನ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ನೀಡಲು ಮುಂದಾಗಿರುವ ಬಗ್ಗೆ ರಾಜಮೌಳಿ ಸಂತಸ ವ್ಯಕ್ತಪಡಿಸಿದ್ದಾರೆ. "ಕೊನೆಗೂ!! 100 ವರ್ಷಗಳ ಕಾಯುವಿಕೆಯ ನಂತರ!!! 2027ರಲ್ಲಿ ಬಿಡುಗಡೆಯಾಗಲಿರುವ ಚಲನಚಿತ್ರಗಳಿಗೆ ಹೊಸ ಆಸ್ಕರ್ ಸ್ಟಂಟ್ ವಿನ್ಯಾಸ ವಿಭಾಗಕ್ಕಾಗಿ ಪ್ರಶಸ್ತಿ. ಈ ಐತಿಹಾಸಿಕ ಮನ್ನಣೆಯನ್ನು ಸಾಧ್ಯವಾಗಿಸಿದ್ದಕ್ಕಾಗಿ ಡೇವಿಡ್ ಲೀಚ್, ಕ್ರಿಸ್ ಒ'ಹರಾ ಮತ್ತು ಸ್ಟಂಟ್ ಶಕ್ತಿಯನ್ನು ಗೌರವಿಸಿದ್ದಕ್ಕಾಗಿ ಅಕಾಡೆಮಿ ಸಿಇಒ ಬಿಲ್ ಕ್ರಾಮರ್ ಮತ್ತು ಅಧ್ಯಕ್ಷೆ ಜಾನೆಟ್ ಯಾಂಗ್ ಅವರಿಗೆ ಅಪಾರ ಧನ್ಯವಾದ. ಘೋಷಣೆಯಲ್ಲಿ 'RRR' ಚಿತ್ರದ ಆಕ್ಷನ್ ದೃಶ್ಯವು ಹೊಳೆಯುತ್ತಿರುವುದನ್ನು ನೋಡಿ ರೋಮಾಂಚನವಾಯಿತು ಎಂದು ಟ್ವೀಟ್ ಮಾಡಿದ್ದಾರೆ.
'RRR' ಚಿತ್ರದ ಸ್ಟಂಟ್ ಡಿಸೈನ್‌ಗೆ ಆಗಲಿ, ರಾಮ್‌ಚರಣ್ ಆಗಲಿ ಆಸ್ಕರ್ ಪ್ರಶಸ್ತಿ ಸಿಗುತ್ತಿಲ್ಲ. ಇನ್ನೆರಡು ವರ್ಷಗಳ ಬಳಿಕ ಸ್ಟಂಟ್ ಡಿಸೈನ್‌ಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಸದ್ಯ ಮಹೇಶ್ ಬಾಬು ಜೊತೆ ಜಕ್ಕಣ್ಣ ಅಡ್ವೆಂಚರಸ್ ಸಿನಿಮಾ ಮಾಡುತ್ತಿದ್ದಾರೆ. 2027ರಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಸ್ಟಂಟ್ ಡಿಸೈನ್ ವಿಭಾಗದಲ್ಲಿ ಮೌಳಿ ಆಸ್ಕರ್ ಮೇಲೆ ಕಣ್ಣಿಟ್ಟಿರುವ ಸಾಧ್ಯತೆಯಿದೆ.


Click it and Unblock the Notifications











