ಪಮೇಲಾ ಆಂಡರ್ಸನ್-ಜಾನ್ ಪೀಟರ್ಸ್ ಮದುವೆ: ಇಬ್ಬರಿಗೂ ಇದು ಐದನೇ ವಿವಾಹ.!
ಪ್ರೀತಿಗೆ ಕಣ್ಣಿಲ್ಲ, ಪ್ರೇಮಕ್ಕೆ ವಯಸ್ಸಿನ ಗಡಿಯೂ ಇಲ್ಲ ಎಂಬುದು ಕೆನಡಾ-ಅಮೇರಿಕನ್ ನಟಿ ಪಮೇಲಾ ಆಂಡರ್ಸನ್ ಮತ್ತು ಜಾನ್ ಪೀಟರ್ಸ್ ವಿಷಯದಲ್ಲಿ ನಿಜವಾಗಿದೆ.
'ಬೇವಾಚ್: ವೈಟ್ ಥಂಡರ್ ಅಟ್ ಗ್ಲೇಷಿಯರ್ ಬೇ', 'ಬಾರ್ಬ್ ವೈರ್', 'ಸ್ನಾಪ್ ಡ್ರಾಗನ್', 'ಹಾಲಿವುಡ್ ಅಂಡ್ ವೈನ್' ಮುಂತಾದ ಚಿತ್ರಗಳ ಮೂಲಕ ಜನಪ್ರಿಯತೆ ಪಡೆದ ನಟಿ, ರಿಯಾಲಿಟಿ ಸ್ಟಾರ್ ಪಮೇಲಾ ಆಂಡರ್ಸನ್ ಗೀಗ 52 ವರ್ಷ ವಯಸ್ಸು.
ಇನ್ನೂ ಒಂದ್ಕಾಲದಲ್ಲಿ ಹೇರ್ ಡ್ರೆಸ್ಸರ್ ಆಗಿದ್ದ ಅಮೇರಿಕಾದ ಚಿತ್ರದ ನಿರ್ಮಾಪಕ ಜಾನ್ ಪೀಟರ್ಸ್ ಗೆ 74 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲಿ ಇಬ್ಬರೂ ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ. ಅಚ್ಚರಿ ಅಂದ್ರೆ, ಇಬ್ಬರಿಗೂ ಇದು ಐದನೇ ವಿವಾಹ. ನಾಲ್ಕು ಮದುವೆ ಮುರಿದು ಬಿದ್ದರೂ, ಪ್ರೀತಿ ಮೇಲೆ ನಂಬಿಕೆ ಕಳೆದುಕೊಳ್ಳದ ಇವರಿಬ್ಬರು ನಿನ್ನೆ ಕ್ಯಾಲಿಫೋರ್ನಿಯಾದ ಮಲಿಬುದಲ್ಲಿ ಉಂಗುರ ಬದಲಿಸಿಕೊಂಡು ವೈವಾಹಿಕ ಬದುಕು ಆರಂಭಿಸಿದ್ದಾರೆ.

ಮೂರು ದಶಕಗಳ ಹಿಂದಿನ ಲವ್ ಸ್ಟೋರಿ
ನಟಿ ಪಮೇಲಾ ಆಂಡರ್ಸನ್ ಮತ್ತು ನಿರ್ಮಾಪಕ ಜಾನ್ ಪೀಟರ್ಸ್ ಈಗ ಮದುವೆ ಆಗಿರಬಹುದು. ಆದ್ರೆ, ಇವರಿಬ್ಬರ ನಡುವಿನ ಪ್ರೀತಿ 35 ವರ್ಷಗಳ ಹಿಂದೆಯೇ ಚಿಗುರೊಡೆದಿತ್ತು. 80 ರ ದಶಕದಲ್ಲಿ ಪಮೇಲಾ ಆಂಡರ್ಸನ್ ನ ಮೊದಲ ಬಾರಿಗೆ ಜಾನ್ ಪೀಟರ್ಸ್ ಭೇಟಿ ಆಗಿದ್ದರು. ಭೇಟಿ ಆದ ಕೆಲವೇ ದಿನಗಳಲ್ಲಿ ಆಕೆಗೆ ಲವ್ ಪ್ರಪೋಸ್ ಕೂಡ ಮಾಡಿದ್ದರು. ಬಳಿಕ ಅದೇನಾಯ್ತೋ, ಏನೋ.. ಇಬ್ಬರು ಬೇರೆ ಬೇರೆ ಆದರು.

ನಾಲ್ಕು ಬಾರಿ ಮದುವೆ ಮಾಡಿಕೊಂಡಿದ್ದ ಪಮೇಲಾ
1995 ರಲ್ಲಿ ತಾಯಿಗೆ ತಿಳಿಸದೆ ಟಾಮಿ ಲೀ ಎಂಬುವರನ್ನ ಪಮೇಲಾ ಆಂಡರ್ಸನ್ ಮದುವೆ ಮಾಡಿಕೊಂಡರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 1998 ರಲ್ಲಿ ಟಾಮಿ ಲೀ ರಿಂದ ವಿಚ್ಛೇದನ ಪಡೆದ ಪಮೇಲಾ ಆಂಡರ್ಸನ್, 2006 ರಲ್ಲಿ ಕಿಡ್ ರಾಕ್ ಕೈ ಹಿಡಿದರು. 2007 ರಲ್ಲಿ ಕಿಡ್ ರಾಕ್ ಗೆ ಡಿವೋರ್ಸ್ ಕೊಟ್ಟು ರಿಕ್ ಸಾಲೋಮನ್ ರನ್ನ ಪಮೇಲಾ ವಿವಾಹ ಮಾಡಿಕೊಂಡರು. ಭಿನ್ನಾಭಿಪ್ರಾಯದಿಂದ 2008 ರಲ್ಲಿ ರಿಕ್ ಸಾಲೋಮನ್ ರಿಂದ ಬೇರ್ಪಟ್ಟ ಪಮೇಲಾ ಪುನಃ 2014 ರಲ್ಲಿ ರಿಕ್ ಸಾಲೋಮನ್ ರೊಂದಿಗೆ ದಾಂಪತ್ಯ ಜೀವನ ಆರಂಭಿಸಿದರು. 2015ಕ್ಕೆ ಈ ಮದುವೆಯೂ ಮುರಿದು ಬಿತ್ತು. ಇದೀಗ 2020 ರಲ್ಲಿ ಜಾನ್ ಪೀಟರ್ಸ್ ರನ್ನ ಪಮೇಲಾ ಪತಿಯಾಗಿ ಸ್ವೀಕರಿಸಿದ್ದಾರೆ.

ಜಾನ್ ಪೀಟರ್ಸ್ ನಾಲ್ಕು ಮದುವೆ ಕಥೆ
ಜಾನ್ ಪೀಟರ್ಸ್ ರವರ ನಾಲ್ಕೂ ಮದುವೆಗಳು ವಿಚ್ಛೇದನದಿಂದಲೇ ಅಂತ್ಯಗೊಂಡಿದೆ. ಮೂರು ಮಕ್ಕಳ ತಂದೆಯಾಗಿರುವ ಜಾನ್ ಪೀಟರ್ಸ್, ಬಾರ್ಬ್ರಾ ಸ್ಟ್ರೇಸ್ಯಾಂಡ್, ಲೆಸ್ಲೇ ಆನ್ ವಾರೆನ್ ಮತ್ತು ಕ್ರಿಸ್ಟೀನ್ ಎಂಬುವರನ್ನು ಈ ಹಿಂದೆ ವರಿಸಿದ್ದರು. ಇದೀಗ 74ನೇ ವಯಸ್ಸಿನಲ್ಲಿ ಪಮೇಲಾ ಆಂಡರ್ಸನ್ ಗೆ ಜಾನ್ ಪೀಟರ್ಸ್ ಪತಿಯಾಗಿದ್ದಾರೆ.

ಯಾರೀ ಜಾನ್ ಪೀಟರ್ಸ್.?
ದಶಕಗಳ ಹಿಂದೆ ಹೇರ್ ಡ್ರೆಸ್ಸರ್ ಆಗಿದ್ದ ಜಾನ್ ಪೀಟರ್ಸ್, ಬಳಿಕ ಚಿತ್ರ ನಿರ್ಮಾಣಕ್ಕೆ ಕೈಹಾಕಿದರು. 'ಎ ಸ್ಟಾರ್ ಈಸ್ ಬಾರ್ನ್', 'ಐಸ್ ಆಫ್ ಲಾರಾ ಮಾರ್ಸ್' ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ ಜಾನ್ ಪೀಟರ್ಸ್.

ಹಿಂದಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಪಮೇಲಾ ಆಂಡರ್ಸನ್.!
ಹಲವು ಸಿನಿಮಾಗಳು ಮತ್ತು ಟಿವಿ ಸೀರೀಸ್ ನಿಂದ ಗುರುತಿಸಿಕೊಂಡಿರುವ ಪಮೇಲಾ ಆಂಡರ್ಸನ್ ಹಿಂದಿಯ ಬಿಗ್ ಬಾಸ್-4ರಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. 'ಬಿಗ್ ಬಾಸ್' ಮನೆಯೊಳಗೆ ಸೀರೆಯುಟ್ಟು, ಭಾರತೀಯ ಅಡುಗೆ ಮಾಡಿ, ಹಿಂದಿ ಗೀತೆಗಳಿಗೆ ಪಮೇಲಾ ಹೆಜ್ಜೆ ಹಾಕಿದ್ದರು. ನಾಲ್ಕು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಪಮೇಲಾ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿ ಆಗಿದ್ದರು.


Click it and Unblock the Notifications











