Oscars 2025 ; ಭಾರತಕ್ಕೆ ಆಸ್ಕರ್ ತರಲಿಲ್ಲ ಅನುಜಾ, ಪ್ರಿಯಾಂಕ ಚೋಪ್ರಾ ಕನಸು ಭಗ್ನ..!
ಹೇರ್ ಸ್ಟೈಲ್ ನಿಂದ ಹಾಕುವ ಡ್ರೆಸ್ ವರೆಗೆ ಟ್ರೋಲ್ ಆಗ್ತಾನೇ ಬಂದ ಪ್ರಿಯಾಂಕ ಚೋಪ್ರಾ, ಬಾಲಿವುಡ್ ಮತ್ತು ಭಾರತ ಎರಡನ್ನೂ ತೊರೆದು ವರ್ಷಗಳೇ ಆಗಿವೆ. ಇದಕ್ಕೆ ಇವರ ಗಂಡ ನಿಕ್ ಜೋನಾಸ್ ಒಂದು ಕಾರಣವಾದರೆ, ಹಾಲಿವುಡ್‌ನಲ್ಲಿ ಮಿಂಚುವ ಹುಚ್ಚು ಮತ್ತೊಂದು ಕಾರಣ.
ಇಂಥಾ ಪ್ರಿಯಾಂಕ ಚೋಪ್ರಾ ಈಗ ಕೇವಲ ನಾಯಕಿ ಮಾತ್ರವಲ್ಲ ನಿರ್ಮಾಪಕಿ ಕೂಡ ಹೌದು. ಕಳೆದೊಂದು ದಶಕದಲ್ಲಿ ಪ್ರಿಯಾಂಕ ನಿರ್ಮಾಣದಲ್ಲಿ ಭೋಜಪುರಿ, ಹಿಂದಿ, ನೇಪಾಲಿ, ಆಸಾಮಿ, ಮರಾಠಿ ಭಾಷೆಗಳಲ್ಲಿ ಒಂದು ಡಜನ್ ಮೇಲೆ ಚಿತ್ರಗಳು ಬಂದಿವೆ.ಆ ಪೈಕಿ ಅನುಜಾ ಕೂಡ ಒಂದು.

ದೆಹಲಿಯ ಬಟ್ಟೆ ಮಿಲ್‌ನಲ್ಲಿ ತನ್ನ ಸಹೋದರಿ ಜೊತೆ ಕೆಲಸ ಮಾಡುವ 09 ವರ್ಷದ ಹುಡುಗಿಯ ಕಥೆಯನ್ನು ಹೊಂದಿರುವ ಈ ಚಿತ್ರ ಈ ವರ್ಷ ಆಸ್ಕರ್ ಅಂಗಳವನ್ನು ತಲುಪಿತ್ತು. ಬೆಸ್ಟ್ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಈ ಕಿರುಚಿತ್ರ 2025ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತ್ತು. ಭಾರತವನ್ನು ಪ್ರತಿನಿಧಿಸಿತ್ತು.
ಹೀಗಾಗಿ ಅನೇಕರು ಅನುಜಾ ಮೇಲೆ ಭರವಸೆಯನ್ನಿಟ್ಟು ಕುಳಿತಿದ್ದರು. ಅನುಜಾಗೆ ಆಸ್ಕರ್ ಒಲಿಯಬಹುದು ಎಂದು ಅಂದುಕೊಂಡಿದ್ದರು. ಇನ್ನು ನ್ಯೂಯಾರ್ಕ್ ಶಾರ್ಟ್ಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2024 ಮತ್ತು ಮಾಂಟ್ ಕ್ಲೇರ್ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಇದರಿಂದ ಅನುಜಾ ಆಸ್ಕರ್ ತರುತ್ತಾಳೆ ಎಂಬ ನಂಬಿಕೆ ಇನ್ನು ಹೆಚ್ಚಾಗಿತ್ತು. ಆದರೆ, ನಂಬಿಕೆ ಇನ್ನೊಮ್ಮೆ ಹುಸಿಯಾಗಿದೆ. ಆಸ್ಕರ್ ಪಡೆಯುವ ಕನಸು ಮತ್ತೊಮ್ಮೆ ಭಗ್ನವಾಗಿದೆ. ಅನುಜಾ ಚಿತ್ರವನ್ನು ಹಿಂದಿಕ್ಕಿ ಐ ಆಮ್ ನಾಟ್ ಎ ರೋಬೋಟ್ ಚಿತ್ರ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಅಂದ್ಹಾಗೇ ಈ ಕಿರುಚಿತ್ರಕ್ಕೆ ಚಿತ್ರಕ್ಕೆ ಆಡಮ್ ಜೆ. ಗ್ರೇವ್ಸ್ ನಿರ್ದೇಶನ ಇದೆ. ಇನ್ನು ಎರಡು ವರ್ಷದ ಹಿಂದೆ ಆಸ್ಕರ್ ಗೆದ್ದ ದಿ ಎಲಿಫೆಂಟ್ ವಿಸ್ಪರ್ಸ್‌ನ ನಿರ್ಮಾಪಕಿ ಗುನೀತ್ ಮೊಂಗಾ, ಪ್ರಿಯಾಂಕ ಚೋಪ್ರಾ ಜೊತೆ ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇನ್ನುಕಳೆದ ವರ್ಷ ಕೂಡ ಸಾಕ್ಷ್ಯ ಚಿತ್ರ ವಿಭಾಗದಲ್ಲಿ, ಭಾರತದ ದೆಹಲಿ ಮೂಲದ ಕೆನಡಾ ನಿವಾಸಿ ನಿಶಾ ಪಹುಜಾ ನಿರ್ದೇಶನದ ಟು ಕಿಲ್ ಎ ಟೈಗರ್ ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ನಲ್ಲಿ ರತ್ನಗಂಬಳಿಯನ್ನ ಹಾಕಲಾಗಿತ್ತು. ದೌರ್ಜನ್ಯಕ್ಕೊಳಗಾದ ಮಗಳಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ತಂದೆಯ ಪಯಣದ ಕಥೆಯನ್ನೊಂದಿರುವ ಟು ಕಿಲ್ ಎ ಟೈಗರ್ ಗೆಲ್ಲುವ ವಿಶ್ವಾಸವೂ ಇತ್ತು. ಆದರೆ 20 ಡೇಸ್ ಇನ್ ಮರಿಯುಪೋಲ್ ಅತ್ಯುತ್ತಮ ಸಾಕ್ಷ್ಯಚಿತ್ರವಾಗಿ ಹೊರ ಹೊಮ್ಮಿತು. ಟು ಕಿಲ್ ಎ ಟೈಗರ್ ನ ಸೆಡ್ಡು ಹೊಡೆದು ಆಸ್ಕರ್ ಮುಡಿಗೇರಿಸಿಕೊಂಡಿತ್ತು. ವಿಶೇಷ ಅಂದರೆ ಈ ಡಾಕ್ಯೂಮೆಂಟರಿಯ ಹಿಂದೆ ಕೂಡ ಪ್ರಿಯಾಂಕ ಚೋಪ್ರಾ ಇದ್ದರು.ಹೀಗಾಗಿ ಸತತ ಎರಡನೇ ಬಾರಿಗೆ ಪ್ರಿಯಾಂಕ ಚೋಪ್ರಾಗೆ ಆಸ್ಕರ್ ಅಂಗಳದಲ್ಲಿ ನಿರಾಸೆಯಾಗಿದೆ.
ಒಟ್ಟಿನಲ್ಲಿ ಆಸ್ಕರ್ ಅಂಗಳ ತಲುಪಿದ ಭಾರತದ ಚಿತ್ರಗಳ ಸಂಖ್ಯೆ ಕಡಿಮೆ. ಮದರ್ ಇಂಡಿಯಾ, ಸಲಾಂ ಬಾಂಬೆ, ಹಾಗೂ ಲಗಾನ್ ಸಿನಿಮಾಗಳು ಮಾತ್ರ ಆಸ್ಕರ್ ನ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿ ಈ ಹಿಂದೆ ಗಮನ ಸೆಳೆದಿದ್ದವು. ಭರವಸೆಯನ್ನ ಮೂಡಿಸಿದ್ದವು. ಆ ನಂತರ ಆರ್.ಆರ್.ಆರ್ ಹೊರತು ಪಡಿಸಿದರೆ ಭಾರತದ ಬೇರೆ ಯಾವ ಸಿನಿಮಾ ಕೂಡ ಅಂತಿಮ ಐದರ ಘಟ್ಟವನ್ನ ತಲುಪಲು ಸಾಧ್ಯವಾಗಿಲ್ಲ.ಇನ್ನು ಕಿರುಚಿತ್ರ ವಿಭಾಗದಲ್ಲಿ ಕೂಡ ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರ ಆಸ್ಕರ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿತ್ತು. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಡಾಕ್ಯುಮೆಂಟರಿ ಎಂಬ ಖ್ಯಾತಿಗೂ 'ದಿ ಎಲಿಫೆಂಟ್ ವಿಸ್ಪರರ್ಸ್' ಪಾತ್ರವಾಗಿತ್ತು.ಇದಾದ ನಂತರ ಈ ವಿಭಾಗದಲ್ಲಿ ಕೂಡ ಆಸ್ಕರ್ ಮರಿಚೀಕೆಯಾಗಿದೆ.


Click it and Unblock the Notifications











