ಅಕಾಡೆಮಿಯಿಂದ ಮತ್ತೆ ಚರಣ್- ತಾರಕ್‌ಗೆ ಬುಲಾವ್: ಆಸ್ಕರ್ ಜ್ಯೂರಿಯಾಗಿ ಕಾಲರ್ ಎಗರಿಸಿದ ರಾಮ್-ಭೀಮ್
'RRR' ಚಿತ್ರದ 'ನಾಟು ನಾಟು' ಗೀತೆಗೆ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು ಗೊತ್ತೇಯಿದೆ. ಇದೀಗ ಅಕಾಡೆಮಿಯಿಂದ ತಂಡದ ಸದಸ್ಯರಿಗೆ ಮತ್ತೊಂದು ಗೌರವ ಲಭಿಸಿದೆ. ತಂಡದ ನಾಲ್ವರಿಗೆ ಆಸ್ಕರ್ ಜ್ಯೂರಿ ಸದಸ್ಯರಾಗುವ ಅವಕಾಶ ಸಿಕ್ಕಿದೆ. ಅಕಾಡಿಮೆ ಈ ಬಾರಿ ಹೊಸದಾಗಿ ಸೇರ್ಪಡೆಯಾದ ಸದಸ್ಯರ ಪಟ್ಟಿ ರಿಲೀಸ್ ಮಾಡಿದ್ದು ರಾಮ್-ಭೀಮ್ ಧೂಳೆಬ್ಬಿಸಿದ್ದಾರೆ.
ಈ ವರ್ಷ ಲಾಸ್ ಏಂಜಲ್‌ನಲ್ಲಿ ಬಹಳ ಅದ್ಧೂರಿಯಾಗಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. 95ನೇ ಅಕಾಡೆಮಿ ಅವಾರ್ಡ್ಸ್ ವೇದಿಕೆಯಲ್ಲಿ 'RRR' ಸಿನಿಮಾ ಆರ್ಭಟ ಜೋರಾಗಿತ್ತು. ಚಿತ್ರದ 'ನಾಟು ನಾಟು' ಸಾಂಗ್ ಸ್ಪೆಷಲ್ ಡ್ಯಾನ್ಸ್ ಪರ್ಫಾರ್ಮನ್ಸ್ ಇತ್ತು. ಇನ್ನು ರಾಜಮೌಳಿ, ರಾಮ್‌ಚರಣ್ ದಂಪತಿ ಸಮೇತ ಅವಾರ್ಡ್ ಸೆರೆಮನಿಯಲ್ಲಿ ಭಾಗಿ ಆಗಿದ್ದರು. ಎನ್‌ಟಿಆರ್ ಸೇರಿದಂತೆ ಚಿತ್ರತಂಡದ ಸದಸ್ಯರು ಪಾಲ್ಗೊಂಡು ಖುಷಿಪಟ್ಟರು. ಎಂ. ಎಂ ಕೀರವಾಣಿ ಹಾಗೂ ಚಂದ್ರಬೋಸ್ ವೇದಿಕೆ ಏರಿ ಪ್ರಶಸ್ತಿ ಪಡೆದರು.

ಭಾರತದ ಸಿನಿಮಾಗಳಿಗೆ ಆಸ್ಕರ್ ಪ್ರಶಸ್ತಿ ಸಿಗುವುದೇ ಕಷ್ಟ ಎನ್ನುವ ಕಾಲ ಇತ್ತು. ಆದರೆ ಈ ಬಾರಿ ರಾಜಮೌಳಿ ಸಿನಿಮಾ ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿತ್ತು. ಬರೀ ಪ್ರಶಸ್ತಿ ಗೆದ್ದಿದ್ದು ಮಾತ್ರವಲ್ಲ ಆಸ್ಕರ್ ಜ್ಯೂರಿ ಮೆಂಬರ್ಸ್ ಆಗುವ ಅವಕಾಶವನ್ನು ಈ ಸಿನಿಮಾ ತಂದುಕೊಟ್ಟಿದೆ. ಈ ಬಗ್ಗೆ ಇದೀಗ ಅಕಾಡೆಮಿ ಪಟ್ಟಿ ರಿಲೀಸ್ ಮಾಡಿ ಟಾಲಿವುಡ್‌ಗೆ ಸಿಹಿಸುದ್ದಿ ಕೊಟ್ಟಿದೆ.
ಆಸ್ಕರ್ ವಿಜೇತರ ಆಯ್ಕೆಯ ಅವಕಾಶ
ರಾಮ್‌ಚರಣ್, ಜ್ಯೂ.ಎನ್‌ಟಿಆರ್, ಮಣಿರತ್ನಂ, ಕರಣ್ ಜೋಹರ್, ಚೈತನ್ಯಾ ತಮಹಾನ್, ಷಾನೆಕ್ ಸೇನ್, ಎಂ. ಎಂ ಕೀರವಾಣಿ, ಚಂದ್ರಬೋಸ್, ಸಿದ್ದಾರ್ಥ್ ಕಪೂರ್, ಸಾಬು ಸಿರಿಲ್, ಸೆಂಥಿಲ್ ಸೇರಿದಂತೆ ಹಲವರು ಆಸ್ಕರ್ ಜ್ಯೂರಿ ಮೆಂಬರ್ಸ್ ಪಟ್ಟಿಯಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಮುಂದಿನ ಆಸ್ಕರ್ ಪ್ರಶಸ್ತಿ ವಿಜೇತರ ಆಯ್ಕೆಯಲ್ಲಿ ಇವರಿಗೆಲ್ಲಾ ಮತ ಚಲಾಯಿಸುವ ಹಕ್ಕು ಸಿಗಲಿದೆ. ಅಕಾಡೆಮಿ ಸದಸ್ಯರಿಗೆ ಮಾತ್ರ ಈ ಅವಕಾಶ ಇರುತ್ತದೆ. ಮುಂದಿನ ವರ್ಷ ಮಾರ್ಚ್ 10ಕ್ಕೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪಟ್ಟಿಯಲ್ಲಿ ರಾಜಮೌಳಿ ಹೆಸರಿಲ್ಲ
2023ರ ಅಕಾಡೆಮಿ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸ್ನಲ್ಲಿ ಸೇರಲು 398 ಜನರಿಗೆ ಮಾತ್ರ ಅವಕಾಶ ಸಿಗುತ್ತದೆ. ಈ ಪಟ್ಟಿಯಲ್ಲಿ ಒಂದು ಡಜನ್ ಭಾರತೀಯ ಚಿತ್ರರಂಗದವರಿರುವುದು ವಿಶೇಷ. ಇದರಲ್ಲಿ 'RRR' ತಂಡದ ರಾಮ್‌ಚರಣ್, ಎನ್‌ಟಿಆರ್, ಕೀರವಾಣಿ ಮಾತ್ರ ಇದ್ದಾರೆ. ಇವರ ಸದಸ್ಯತ್ವ ಲೈಫ್ ಟೈಮ್ ಇರುತ್ತದೆ. ಆದರೆ ಈ ಪಟ್ಟಿಯಲ್ಲಿ ರಾಜಮೌಳಿ ಹೆಸರು ಇಲ್ಲದಿರುವುದು ಅಚ್ಚರಿ ಮೂಡಿಸಿದೆ.
40ರಷ್ಟು ಮಹಿಳೆಯರಿಗೆ ಅವಕಾಶ
ಅಕಾಡೆಮಿ ಸದಸ್ಯರ ಬಗ್ಗೆ ಸಿಇಓ ಬಿಲ್ ಕಾಮ್ರೆರ್, ಪ್ರೆಸಿಡೆಂಟ್ ಜಾನೆಟ್ ಯಂಗ್ ಮಾತನಾಡಿ "ಕಲಾವಿದರು, ತಂತ್ರಜ್ಞರಿಗೆ ನಮ್ಮ(ಆಸ್ಕರ್) ಸದಸ್ಯತ್ವಕ್ಕೆ ಸ್ವಾಗತಿಸಲು ಅಕಾಡೆಮಿ ಹೆಮ್ಮೆಪಡುತ್ತಿದೆ. ಅವರೆಲ್ಲಾ ಸಿನಿಮಾ ವಿಭಾಗದಲ್ಲಿ ಅಸಾಧಾರಣ ಪ್ರತಿಭೆಯಿಂದ ಪ್ರಪಂಚವನ್ನು ಮೆಚ್ಚಿಸಿದ್ದಾರೆ. ಇವರೆಲ್ಲಾ ಪ್ರಪಂಚದಾದ್ಯಂತ ಇರುವ ಸಿನಿಪ್ರೇಮಿಗಳ ಮೇಲೆ ಉತ್ತಮ ಪ್ರಭಾವ ಬೀರುತ್ತಾರೆ" ಎಂದಿದ್ದಾರೆ. ಸದ್ಯ ಅಕಾಡೆಮಿಯಲ್ಲಿ 10,000ಕ್ಕೂ ಅಧಿಕ ಸದಸ್ಯರಿದ್ದು, ಹೊಸ ಪಟ್ಟಿಯಲ್ಲಿ 40ರಷ್ಟು ಮಹಿಳೆಯರಿಗೆ ಅವಕಾಶ ಸಿಕ್ಕಿದೆ.

ಧೂಳೆಬ್ಬಿಸಿದ್ದ 'RRR' ಸಿನಿಮಾ
ಕಳೆದ ಮಾರ್ಷ್ 25ರಂದು 'RRR' ಸಿನಿಮಾ ತೆರೆಗಪ್ಪಳಿಸಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರ ಆಯ್ಕೆ ಮಾಡಿಕೊಂಡು ಒಂದು ಕಾಲ್ಪನಿಕ ಕಥೆ ಮಾಡಿ ರಾಜಮೌಳಿ ಸಕ್ಸಸ್ ಕಂಡಿದ್ದರು. ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಅಂತರಾಷ್ಟ್ರೀಯ ಸಿನಿಮಾ ವೇದಿಕೆಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.


Click it and Unblock the Notifications











