twitter
    For Quick Alerts
    ALLOW NOTIFICATIONS  
    For Daily Alerts

    ಒಂದು ಕಾಲದಲ್ಲಿ ಹಾಲಿವುಡ್ ಆಳಿದವನ ಬದುಕು ಇಂದು ದಯನೀಯ ಸ್ಥಿತಿಯಲ್ಲಿ!

    |

    ಶತಮಾನದ ಹಿಂದೆ ಹಾಲಿವುಡ್‌ನಲ್ಲಿ ಮೊದಲ ಸಿನಿಮಾ ಸ್ಟುಡಿಯೋಗಳು ಆರಂಭವಾದಾಗ ಕೆಲವು ಪ್ರಬಲ ಹಾಗೂ ದರ್ಪದ ಸಿನಿಮಾ ನಿರ್ಮಾಪಕರಿದ್ದರು. ಅದೇ ಗುಣ ಆಧುನಿಕ ಸಿನಿಮಾ ಜಗತ್ತಿನಲ್ಲಿ ಹಾರ್ವಿ ವೀನ್‌ಸ್ಟೀನ್ ಅವರಲ್ಲಿಯೂ ಇತ್ತು. ಮಿರಾಮ್ಯಾಕ್ಸ್ ಮತ್ತು ವೀನ್‌ಸ್ಟೀನ್ ಕಂಪೆನಿಗಳೆಂಬ ನಿರ್ಮಾಣ ಹಾಗೂ ವಿತರಣೆಯ ಕಂಪೆನಿಗಳ ಸಹ ಸಂಸ್ಥಾಪಕರಾಗಿದ್ದ ಅವರು, ಅನೇಕ ಸಿನಿಮಾಗಳನ್ನು ಸ್ವತಂತ್ರವಾಗಿ ನಿರ್ಮಿಸಿದ್ದರು.

    Recommended Video

    ಕೊರೊನ ವಿರುದ್ಧ ಹೋರಾಡೋಕೆ ಹುಚ್ಚ ವೆಂಕಟ್ ಹುಡುಕಿದ ದಾರಿ ಇದು | Huccha venkat stay home stay safe

    'ಸೆಕ್ಸ್, ಲೈಸ್ ಆಂಡ್ ವಿಡಿಯೋಟೇಪ್', 'ದಿ ಕ್ರೈಯಿಂಗ್ ಗೇಮ್', 'ಪಲ್ಪ್ ಫಿಕ್ಷನ್', 'ದಿ ಇಂಗ್ಲಿಷ್ ಪೇಷೆಂಟ್', 'ಶೇಕ್‌ಸ್ಪಿಯರ್ ಇನ್ ಲವ್' ಮತ್ತು 'ದಿ ಕಿಂಗ್ಸ್ ಕಿಂಗ್ಸ್ ಸ್ಪೀಚ್' ಚಿತ್ರಗಳನ್ನು ನಿರ್ಮಿಸಿದವರು ವೀನ್‌ಸ್ಟೀನ್. ಹಾಲಿವುಡ್ ಆಚೆಗೆ ಅವರು ಬರಾಕ್ ಒಬಾಮ, ಹಿಲರಿ ಕ್ಲಿಂಟನ್ ಸೇರಿದಂತೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳ ಪರ ದೇಣಿಗೆ ಸಂಗ್ರಹಿಸುವಲ್ಲಿಯೂ ಪ್ರಭಾವ ಬೀರಿದ್ದರು. ಅಂತಹ ವ್ಯಕ್ತಿಯ ಬದುಕು ಇಂದು ಹೀನಾಯವಾಗಿದೆ. ಮಾಡಿದ ಪಾಪದ ಕರ್ಮ ಅವರನ್ನು ತಟ್ಟುತ್ತಿದೆ ಎಂದು ಹೇಳಲಾಗುತ್ತಿದೆ.

    ರೇಪ್ ಪ್ರಕರಣದಲ್ಲಿ ಜೈಲಿನಲ್ಲಿರುವ ಹಾಲಿವುಡ್ ನಿರ್ಮಾಪಕನಿಗೆ ಕೊರೊನಾ ವೈರಸ್ರೇಪ್ ಪ್ರಕರಣದಲ್ಲಿ ಜೈಲಿನಲ್ಲಿರುವ ಹಾಲಿವುಡ್ ನಿರ್ಮಾಪಕನಿಗೆ ಕೊರೊನಾ ವೈರಸ್

    ಸಾಮ್ರಾಜ್ಯ ಕಟ್ಟಿ ಮೆರೆದವರು

    ಸಾಮ್ರಾಜ್ಯ ಕಟ್ಟಿ ಮೆರೆದವರು

    ಹಾಲಿವುಡ್‌ನಲ್ಲಿ ಅಂತಹ ಭಾರಿ ಸಾಮ್ರಾಜ್ಯ ಕಟ್ಟಿ ಮೆರೆದವರು ಹಾರ್ವಿ ವೀನ್‌ಸ್ಟೀನ್. ಜಗತ್ತೇ ತಮ್ಮದೆಂದು ಭಾವಿಸಿಕೊಂಡವರು. 1952ರ ಮಾರ್ಚ್ 19ರಂದು ನ್ಯೂಯಾರ್ಕ್‌ನಲ್ಲಿ ಜನಿಸಿದರು. 70ರ ದಶಕದಲ್ಲಿ ಸಹೋದರ ಜತೆಗೂಡಿ ರಾಕ್ ಕನ್ಸರ್ಟ್‌ಗಳ ನಿರ್ಮಾಣ ಆರಂಭಿಸಿದರು. ನೈಟ್ ಕ್ಲಬ್‌ಗಳನ್ನು ಖರೀದಿ ಮಾಡಿದರು. ಬಳಿಕ ಸಿನಿಮಾ ಕ್ಷೇತ್ರ ಪ್ರವೇಶಿಸಿ, ಮಿರಾಮ್ಯಾಕ್ಸ್ ಎಂಬ ವಿತರಣಾ ಸಂಸ್ಥೆ ಆರಂಭಿಸಿದರು. ಅಲ್ಲಿ ಯಶಸ್ಸು ಕಂಡ ಬಳಿಕ ನಿರ್ಮಾಣಕ್ಕೆ ಕೈಹಾಕಿದರು. ಅಲ್ಲಿಂದ ವೀನ್‌ಸ್ಟೀನ್ ಬದುಕು ಮತ್ತೊಂದು ತಿರುವು ಪಡೆದುಕೊಂಡಿತು.

    ಮಿರಾಮ್ಯಾಕ್ಸ್‌ನ ಮಾಲೀಕತ್ವವನ್ನು ಪಡೆದುಕೊಳ್ಳಲು ಡಿಸ್ನಿ, 80 ಮಿಲಿಯನ್ ಡಾಲರ್ ಆಫರ್ ನೀಡಿತು. ಅದಕ್ಕೆ ಒಪ್ಪಿಕೊಂಡ ವೀನ್‌ಸ್ಟೀನ್ ಸಹೋದರರು ಅದರ ಮುಖ್ಯಸ್ಥರಾಗಿಯೇ ಉಳಿದುಕೊಂಡು ಒಪ್ಪಂದ ಮಾಡಿಕೊಂಡರು. 2005ರಲ್ಲಿ ಮಿರಾಮ್ಯಾಕ್ಸ್ ತೊರೆದು ಅವರು ದಿ ವೀನ್‌ಸ್ಟೀನ್ ಕಂಪೆನಿ ಆರಂಭಿಸಿದರು. ನೂರಕ್ಕೂ ಅಧಿಕ ಸಿನಿಮಾ, ಧಾರಾವಾಹಿ ಸರಣಿ ಮುಂತಾದವುಗಳಿಗೆ ನಿರ್ಮಾಪಕ, ಸಹ ನಿರ್ಮಾಪಕರಾದರು.

    ಮಹಾನ್ ಪ್ರಭಾವಿ

    ಮಹಾನ್ ಪ್ರಭಾವಿ

    ವೀನ್‌ಸ್ಟೀನ್ ಸಿನಿಮಾಗಳೆಂದರೆ ಎಲ್ಲರೂ ಬೆರಗುಗಣ್ಣಿನಿಂದ ನೋಡುವಂತೆ ಇದ್ದವು. ಭರವಸೆಯ ಕಥೆಗಳು, ನಿರ್ದೇಶಕರು ಮತ್ತು ನಟರನ್ನು ವೀನ್‌ಸ್ಟೀನ್ ಸೆಳೆದುಕೊಳ್ಳುತ್ತಿದ್ದರು. ಇದರಲ್ಲಿ ಅವರ ಉದ್ಯಮ ವಹಿವಾಟಿನ ಶೈಲಿ ಹಾಗೂ ಬೆದರಿಕೆ ಎರಡರ ಮೂಲಕವೂ ಅವರು ತಮ್ಮ ಸಿನಿಮಾ ರಂಗದ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಸೆಲೆಬ್ರಿಟಿಯಾಗಿ ಬೆಳೆದ ಅವರಿಗೆ ಅಮೆರಿಕ ರಾಜಕೀಯದಲ್ಲಿ ಭಾರಿ ಪ್ರಭಾವವಿತ್ತು. ರಾಜಕಾರಣಿಗಳು, ಆಡಳಿತ, ಅಧಿಕಾರ ಎಲ್ಲವೂ ಅವರ ಸುತ್ತಲೂ ಓಡಾಡುತ್ತಿದ್ದವು.

    'ಮೀ ಟೂ' ಪ್ರಕರಣದ ಆರೋಪಿ, ಹಾಲಿವುಡ್ ನಿರ್ಮಾಪಕ ವೀನ್‌ಸ್ಟೀನ್‌ಗೆ 23 ವರ್ಷ ಜೈಲು'ಮೀ ಟೂ' ಪ್ರಕರಣದ ಆರೋಪಿ, ಹಾಲಿವುಡ್ ನಿರ್ಮಾಪಕ ವೀನ್‌ಸ್ಟೀನ್‌ಗೆ 23 ವರ್ಷ ಜೈಲು

    ಅತ್ಯಾಚಾರ, ಕಿರುಕುಳ ಆರೋಪಗಳು

    ಅತ್ಯಾಚಾರ, ಕಿರುಕುಳ ಆರೋಪಗಳು

    ಅವರ ಸಿನಿಮಾಗಳು ಮುನ್ನೂರಕ್ಕೂ ಅಧಿಕ ಆಸ್ಕರ್ ಮತ್ತು ವಾರ್ಷಿಕ ಪ್ರಶಸ್ತಿ ಸಮಾರಂಭಗಳಲ್ಲಿ ನಾಮನಿರ್ದೇಶನಗಳನ್ನು ಪಡೆದುಕೊಂಡಿದ್ದವು. ಹಾಲಿವುಡ್‌ನ ಪ್ರಭಾವಿ ನಿರ್ಮಾಪಕನಾಗಿ ವೀನ್‌ಸ್ಟೀನ್ ಹೆಸರು ಜನಮನ್ನಣೆ ಗಳಿಸಿತ್ತು. ಆದರೆ ಈಗ 67 ವರ್ಷದವರಾಗಿರುವ ಅವರು 20 ವರ್ಷಕ್ಕೂ ಹೆಚ್ಚಿನ ಅನೇಕ ಬಾರಿ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದ ಆರೋಪಗಳು ಎದುರಿಸಿದ್ದರು.

    ಹಾಲಿವುಡ್ ಹಾಗೂ ಅದರಾಚೆಗೆ ಅವರ ನಡವಳಿಕೆ ಎಲ್ಲರಿಗೂ ಗೊತ್ತಿರುವ ಆದರೆ ಗೋಪ್ಯವಾಗಿಯೇ ಇದ್ದ ಸಂಗತಿಯಾಗಿತ್ತು. ಪತ್ರಿಕೆಗಳೂ ಇದರ ಬಗ್ಗೆ ಬರೆಯಲು ಮುಂದಾಗಿದ್ದರೂ, ಅವುಗಳಿಗೆ ಸೂಕ್ತ ಪುರಾವೆಗಳು ಸಿಗದ ಕಾರಣ ವೀನ್‌ಸ್ಟೀನ್ ಅವರ ಕುಚೇಷ್ಟೆಗಳು ಪ್ರಕಟವಾಗಿರಲಿಲ್ಲ. ಇನ್ನು ಕೆಲವು ಸಂತ್ರಸ್ತರು ತಮ್ಮ ನೋವು ಹೇಳಿಕೊಳ್ಳಲು ಸಿದ್ಧರಿದ್ದರೂ ತಮ್ಮ ಹೆಸರು ಬಹಿರಂಗಪಡಿಸದಂತೆ ಮನವಿ ಮಾಡುತ್ತಿದ್ದರು.

    ಬಹಿರಂಗಪಡಿಸದ ನಟಿಯರು

    ಬಹಿರಂಗಪಡಿಸದ ನಟಿಯರು

    ವೀನ್‌ಸ್ಟೀನ್ ಹಾಗೂ ಅವರ ಸಹಚರರು ತಮ್ಮ ವಿರುದ್ಧ ಹೇಳಿಕೆ ನೀಡಲು ಮುಂದೆ ಬರುವವರನ್ನು ಹತ್ತಿಕ್ಕಲು, ಅವರಿಂದ ಸಿನಿಮಾ ವೇಳೆ ಮಾಡಿಸಿಕೊಂಡಿದ್ದ ಹಾಗೂ ಬಹಿರಂಗಪಡಿಸದ ಒಪ್ಪಂದಗಳು, ಅವರ ಭತ್ಯೆಗಳ ತಡೆಹಿಡಿಯುವಿಕೆ, ಕಾನೂನು ಕ್ರಮ ಹಾಗೂ ಇನ್ನಿತರೆ ಬಗೆಯ ಕ್ರಮಗಳ ಬೆದರಿಕೆ ಒಡ್ಡುತ್ತಿದ್ದರು.

    ವೀನ್‌ಸ್ಟೀನ್ ತನ್ನ ಜತೆ ಬಲವಂತದ ಮೌಖಿಕ ಸೆಕ್ಸ್ ನಡೆಸಿದ್ದಾಗಿ ಆರೋಪಿಸಿದ್ದ ಇಟಲಿಯ ಸಿನಿಮಾ ನಟಿ ಏಷ್ಯಾ ಅರ್ಜೆಂಟೊ, ಆತ ತನ್ನನ್ನು ಛಿದ್ರ ಮಾಡಬಹುದು ಎಂಬ ಭಯದಿಂದ ಅದರ ಬಗ್ಗೆ ಹೇಳಿಕೆ ನೀಡಿರಲಿಲ್ಲ ಎಂದಿದ್ದರು. ವೀನ್‌ಸ್ಟೀನ್ ಈ ಹಿಂದೆ ಅನೇಕ ಜನರನ್ನು ಛಿದ್ರಗೊಳಿಸಿದ್ದಾರೆ ಎಂಬುದು ನನಗೆ ಗೊತ್ತು. ಹೀಗಾಗಿಯೇ ನನ್ನ 20 ವರ್ಷದ ಹಳೆಯ ಕಥೆಯನ್ನು ಈಗ ಹೇಳಿದ್ದೇನೆ. ಇನ್ನು ಕೆಲವರದ್ದು ಅದಕ್ಕೂ ಹಳೆಯದು ಎಂದು ಹೇಳಿದ್ದರು.

    ವೀನ್‌ಸ್ಟೀನ್ ಪತನ ಆರಂಭ

    ವೀನ್‌ಸ್ಟೀನ್ ಪತನ ಆರಂಭ

    2017ರ ಅಕ್ಟೋಬರ್ 5ರಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ವರದಿಯಲ್ಲಿ ವೀನ್‌ಸ್ಟೀನ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳನ್ನು ತೆರೆದಿಡಲಾಗಿತ್ತು. ಈ ಲೇಖನದಿಂದಾಗಿ ವೀನ್‌ಸ್ಟೀನ್ ಕಂಪೆನಿಯ ನಾಲ್ವರು ಪುರುಷ ಸಿಬ್ಬಂದಿ ರಾಜೀನಾಮೆ ನೀಡುವಂತಾಯಿತು. ಅದುವರೆಗೆ ಯಾವ ಆರೋಪಗಳನ್ನೂ ಲೆಕ್ಕಿಸದೆ ತನ್ನ ಪ್ರಭಾವ ಹಾಗೂ ಹಣದ ಮದದಿಂದಲೇ ಆಳ್ವಿಕೆ ನಡೆಸುತ್ತಿದ್ದ ವೀನ್‌ಸ್ಟೀನ್ ಅಧಃಪತನ ಆರಂಭವಾಯಿತು.

    1990ರಿಂದ 2015ರವರೆಗೆ ವೀನ್‌ಸ್ಟೀನ್ 90ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಆದರೆ ಈಗಲೂ ಬಹಿರಂಗವಾಗಿರುವುದು ಕೆಲವೇ ಪ್ರಕರಣಗಳು.

    ಮಹಿಳೆಯರಿಂದ ಆರೋಪ

    ಮಹಿಳೆಯರಿಂದ ಆರೋಪ

    ವೀನ್‌ಸ್ಟೀನ್ ತಮಗೆ ಮಸಾಜ್ ಮಾಡುವಂತೆ ಮತ್ತು ತಮ್ಮನ್ನು ನಗ್ನವಾಗಿ ನೋಡುವಂತೆ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲ, ಲೈಂಗಿಕವಾಗಿ ಸಹಕರಿಸಿದರೆ ಅವರ ವೃತ್ತಿ ಬದುಕಿನಲ್ಲಿ ಮುಂದೆ ಬರಲು ಸಹಾಯ ಮಾಡುವುದಾಗಿ ಭರವಸೆ ನೀಡುತ್ತಿದ್ದರು. ತಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳನ್ನು ಸುಮಾರು ಮೂರು ದಶಕಗಳ ಕಾಲ ಅವರು ಕೆಟ್ಟದಾಗಿ ನಡೆಸಿಕೊಂಡಿದ್ದರು. ಇದು ಪತ್ರಿಕೆಯಲ್ಲಿ ಪ್ರಕಟವಾದ ಬಳಿಕ ವೀನ್‌ಸ್ಟೀನ್ ಕ್ಷಮೆ ಕೋರಿದರು. ತಾವು ಅನೇಕರಿಗೆ ತುಂಬಾ ನೋವುಂಟು ಮಾಡಿರುವುದಾಗಿ ಹೇಳಿಕೊಂಡರು.

    ವೀನ್‌ಸ್ಟೀನ್ ಕಂಪೆನಿಯಿಂದ ರಜೆ ಪಡೆದುಕೊಂಡು ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುವುದಾಗಿ ಅವರು ಪ್ರಕಟಿಸಿದರು. ಅದರ ಬೆನ್ನಲ್ಲೇ ಅವರನ್ನು ಅವರದೇ ಕಂಪೆನಿಯ ಮಂಡಳಿಯಿಂದ ವಜಾಗೊಳಿಸಲಾಯಿತು.

    ಪ್ರಮುಖ ನಟಿಯರ ಆರೋಪ

    ಪ್ರಮುಖ ನಟಿಯರ ಆರೋಪ

    ತಾವು 18 ವರ್ಷದವರಿದ್ದಾಗ ವೀನ್‌ಸ್ಟೀನ್ ಆಡಿಷನ್ ನಡೆಸುವಾಗ ತಮ್ಮ ಜತೆ ಅಸಭ್ಯವಾಗಿ ನಡೆದುಕೊಂಡಿದ್ದನ್ನು ಬ್ರಿಟಿಷ್ ನಟಿ ರೊಮಲಾ ಗೆರೈ ಪತ್ರಿಕೆಯೊಂದಕ್ಕೆ ತಿಳಿಸಿದ್ದರು. ಅದರ ಬೆನ್ನಲ್ಲೇ ನ್ಯೂ ಯಾರ್ಕ್‌ ಟೈಮ್ಸ್‌ನಲ್ಲಿ ಮತ್ತೆ 13 ಮಹಿಳೆಯರು ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಆರೋಪ ಮಾಡಿದರು. ಇದೆಲ್ಲವೂ ಹತ್ತು-ಇಪ್ಪತ್ತು ವರ್ಷಗಳ ಹಿಂದೆ ನಡೆದ ಘಟನೆಗಳು.

    ವೀನ್‌ಸ್ಟೀನ್ ಅವರ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಮಿರಾ ಸೊರ್ವಿನೊ, ಲೈಂಗಿಕ ಸಂಬಂಧಕ್ಕೆ ಸಹಕರಿಸುವಂತೆ ವೀನ್‌ಸ್ಟೀನ್ ಪ್ರಯತ್ನಿಸಿದ್ದು ಮತ್ತು ದೌರ್ಜನ್ಯ ಎಸಗಿದ್ದನ್ನು ತಿಳಿಸಿದ್ದರು. ಹಾಲಿವುಡ್‌ನ ಮುಂಚೂಣಿ ನಟಿಯರಾದ ಗ್ವಿನೆತ್ ಪಾಲ್ಟ್ರೊ ಮತ್ತು ಆಂಜೆಲಿನಾ ಜೋಲಿ ಕೂಡ ತಮ್ಮ ಕರಾಳ ಅನುಭವ ಬಹಿರಂಗಪಡಿಸಿದ್ದರು.

    ಕೊನೆಗೆ ವೀನ್‌ಸ್ಟೀನ್ ಪತ್ನಿ ಜಾರ್ಜಿಯಾ ಚಾಪ್‌ಮನ್, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಗಂಡನನ್ನು ತೊರೆಯುತ್ತಿರುವುದಾಗಿ ಘೋಷಿಸಿದರು. ಹೀಗೆ 1980ರ ದಶಕದಿಂದ 2004ರವರೆಗೆ ಹಲವು ಆರೋಪಗಳು ದಾಖಲಾದವು. ಒಂದರ ನಂತರ ಮತ್ತೊಂದರಂತೆ ವೀನ್‌ಸ್ಟೀನ್‌ರಿಂದ ಕಿರುಕುಳ ಅನುಭವಿಸಿದ ನಟಿಯರು, ಇತರೆ ಉದ್ಯೋಗಿಗಳು ಅನುಭವಿಸಿದ ಮಾನಸಿಕ ಮತ್ತು ದೈಹಿಕ ನೋವು ಬಹಿರಂಗವಾದವು.

    ವೀನ್‌ಸ್ಟೀನ್ ವಿರುದ್ಧ ಪ್ರಕರಣ

    ವೀನ್‌ಸ್ಟೀನ್ ವಿರುದ್ಧ ಪ್ರಕರಣ

    ಮೊದಲ ವರದಿ ಪ್ರಕಟವಾದ ಹತ್ತೇ ದಿನದಲ್ಲಿ ಮೂವತ್ತಕ್ಕೂ ಹೆಚ್ಚು ಮಹಿಳೆಯರು ವೀನ್‌ಸ್ಟೀನ್‌ರಿಂದ ಅತ್ಯಾಚಾರಕ್ಕೆ ಒಳಗಾದ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂಗತಿಯನ್ನು ಬಹಿರಂಗಪಡಿಸಿದರು. ಇಷ್ಟೆಲ್ಲ ಆದ ಬಳಿಕ ವೀನ್‌ಸ್ಟೀನ್ ಕಂಪೆನಿಯ ಮಂಡಳಿ ಹುದ್ದೆಗೆ ರಾಜೀನಾಮೆ ನೀಡಿದರು. ಆದರೆ ಈಗಲೂ ಕಂಪೆನಿಯ ಶೇ 22ರಷ್ಟು ಶೇರುಗಳು ಅವರ ಹೆಸರಿನಲ್ಲಿಯೇ ಇವೆ.

    ಅವರ ಜತೆಗೆ ಕೆಲಸ ಮಾಡಿದ ಕೆಲವು ಪುರುಷರು ಅವರ ಪರ ವಾದ ಮಂಡಿಸಲು ಹೋಗಿ ಛೀಮಾರಿಗೆ ಒಳಗಾದರು. ಇನ್ನು ಕೆಲವು ನಟರು ಕೂಡ ವೀನ್‌ಸ್ಟೀನ್ ವಿರುದ್ಧ ಧ್ವನಿ ಎತ್ತಿದರು. ವೀನ್‌ಸ್ಟೀನ್ ಕೃತ್ಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ಇವುಗಳ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ನಟಿಯರಿಂದ ಮಾಹಿತಿ ಸಂಗ್ರಹಿಸಿ ನಾಲ್ಕು ತಿಂಗಳ ಬಳಿಕ ವೀನ್‌ಸ್ಟೀನ್ ವಿರುದ್ಧ ಪ್ರಕರಣ ದಾಖಲಿಸಿದರು.

    ಮೀ ಟೂ ಅಭಿಯಾನ, ಶಿಕ್ಷೆ

    ಮೀ ಟೂ ಅಭಿಯಾನ, ಶಿಕ್ಷೆ

    ಬಂಧನಕ್ಕೆ ಒಳಗಾದ ವೀನ್‌ಸ್ಟೀನ್ 2018ರ ಮೇ ತಿಂಗಳಲ್ಲಿ ಜಾಮೀನು ಪಡೆದುಕೊಂಡಿದ್ದರು. ಆರಂಭದಲ್ಲಿ ವೀನ್‌ಸ್ಟೀನ್ ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳಲಿಲ್ಲ. ಜೂನ್‌ನಲ್ಲಿ ಅವರ ಮೇಲೆ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಯಿತು. 'ಮೀ ಟೂ' ಅಭಿಯಾನ ಆರಂಭವಾದಾಗ ಮತ್ತಷ್ಟು ನಟಿಯರು ಮುಂದೆ ಬಂದು ವೀನ್‌ಸ್ಟೀನ್ ವಿರುದ್ಧ ಹೇಳಿಕೆ ನೀಡತೊಡಗಿದರು.

    ಸತತ ಎರಡೂವರೆ ವರ್ಷಗಳ ಆರೋಪ, ಪೊಲೀಸರ ತನಿಖೆ, ನ್ಯಾಯಾಲಯದ ವಿಚಾರಣೆ ಬಳಿಕ ವೀನ್‌ಸ್ಟೀನ್ ಅವರನ್ನು ತಪ್ಪಿತಸ್ಥ ಎಂದು ಫೆಬ್ರವರಿಯಲ್ಲಿ ನ್ಯಾಯಾಧೀಶರು ತೀರ್ಪು ನೀಡಿದರು. ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಒಟ್ಟು ಮೂರು ಪ್ರಕರಣಗಳಲ್ಲಿ ಅವರಿಗೆ 23 ವರ್ಷ ಶಿಕ್ಷೆ ವಿಧಿಸಿದರು.

    ವೀನ್‌ಸ್ಟೀನ್‌ಗೆ ಕೊರೊನಾ ವೈರಸ್

    ವೀನ್‌ಸ್ಟೀನ್‌ಗೆ ಕೊರೊನಾ ವೈರಸ್

    ವೀನ್‌ಸ್ಟೀನ್ ವಿರುದ್ಧ ಮೂರು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ. ಇನ್ನೂ ಹತ್ತಾರು ಆರೋಪಗಳು ಅವರ ಮೇಲಿದೆ. ಅವುಗಳ ವಿಚಾರಣೆ ಇನ್ನೂ ನಡೆಯಬೇಕಿದೆ. ಅದರ ನಡುವೆಯೇ ಜೈಲಿನಲ್ಲಿದ್ದ ವೀನ್‌ಸ್ಟೀನ್‌ಗೆ ಕೊರೊನಾ ವೈರಸ್ ತಗುಲಿರುವುದು ಖಚಿತವಾಗಿದೆ.

    68 ವರ್ಷದ ವೀನ್‌ಸ್ಟೀನ್ ಅವರಿಗೆ ಇದನ್ನು ತಡೆದುಕೊಳ್ಳುವ ಶಕ್ತಿ ಇದೆಯೇ ಎನ್ನುವುದು ಗೊತ್ತಿಲ್ಲ. ಆದರೆ ಹಾಲಿವುಡ್‌ಅನ್ನು ಆಳಿದ, ತನ್ನ ದರ್ಪ, ಪ್ರಭಾವದಿಂದ ಮೆರೆದ, ಇತಿಹಾಸದಲ್ಲಿಯೇ ಯಾರೂ ಎದುರಿಸಬಾರದಷ್ಟು ಕೆಟ್ಟ ಆರೋಪಗಳನ್ನು ಎದುರಿಸಿದ ವೀನ್‌ಸ್ಟೀನ್ ಸಾಮ್ರಾಜ್ಯ ಪತನಗೊಂಡಿದೆ. ಈ ಪತನ ಅವರು ನಿರ್ಮಿಸಿದ ಅಮೋಘ ಸಿನಿಮಾಗಳ ಹೆಸರಿನ ಮೇಲೆಯೂ ಕೆಸರೆರಚಿದೆ ಎನ್ನುವುದು ಖೇದಕರ.

    English summary
    Oscar-winning Hollywood producer Harvey Weinstein has convicted to 23 years prison is tested coronavirus positive. Here is a brief view of his life's downfall.
    Wednesday, March 25, 2020, 19:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X