Oscars 2024: ಹಾಲಿವುಡ್‌ನಲ್ಲಿ 'RRR' ಕ್ರೇಜ್; ಮತ್ತೆ ಆಸ್ಕರ್ ವೇದಿಕೆಯಲ್ಲಿ ಮಾರ್ದನಿಸಿದ 'ನಾಟು ನಾಟು'
ಆಸ್ಕರ್ ವೇದಿಕೆಯಲ್ಲಿ ಕಳೆದ ವರ್ಷ 'RRR' ಸಿನಿಮಾ ದಾಖಲೆ ಬರೆದಿತ್ತು. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ 'ನಾಟು ನಾಟು' ಹಾಡಿಗೆ ಪ್ರಶಸ್ತಿ ಒಲಿದಿತ್ತು. ಅಷ್ಟೇ ಅಲ್ಲ ವೇದಿಕೆಯಲ್ಲಿ ಹಾಡಿನ ವಿಶೇಷ ಪ್ರದರ್ಶನ ಕೂಡ ಇತ್ತು. ಅದು ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿತ್ತು. ಈ ಬಾರಿ ಕೂಡ ಆಸ್ಕರ್ ವೇದಿಕೆಯಲ್ಲಿ 'ನಾಟು ನಾಟು' ಗೀತೆ ಸದ್ದು ಮಾಡಿದೆ.
ಅಂತರಾಷ್ಟ್ರೀಯ ಮಟ್ಟದ ಸಿನಿಮಾ ಪ್ರಶಸ್ತಿ ಆಸ್ಕರ್. ಚಿತ್ರರಂಗದ ನೊಬೆಲ್ ಎಂದೇ ಇದನ್ನು ಪರಿಗಣಿಸಲಾಗುತ್ತದೆ. ಅದೇ ಕಾರಣಕ್ಕೆ ಎಲ್ಲಾ ಕಲಾವಿದರು, ತಂತ್ರಜ್ಞರು ಆಸ್ಕರ್ ಪ್ರಶಸ್ತಿ ಪಡೆಯುವ ಹಂಬಲ ಹೊಂದಿರುತ್ತಾರೆ. ಆದರೆ ಭಾರತೀಯರ ಮಟ್ಟಿಗೆ ಈ ಪ್ರಶಸ್ತಿ ಇನ್ನು ಮರೀಚಿಕೆಯಾಗಿಯೇ ಇದೆ. 95 ವರ್ಷಗಳ ಅಕಾಡೆಮಿ ಪ್ರಶಸ್ತಿಗಳ ಇತಿಹಾಸದಲ್ಲಿ ನಮ್ಮ ದೇಶಕ್ಕೆ ಆಸ್ಕರ್ ಪ್ರಶಸ್ತಿಯನ್ನು ತಂದ ಮೊದಲ ಭಾರತೀಯ ಸಿನಿಮಾ 'RRR' ಆಗಿತ್ತು.

ಆಸ್ಕರ್ 2024ರಲ್ಲಿ, 'ಬಾರ್ಬಿ' ಚಿತ್ರದ 'ವಾಟ್ ವಾಸ್ ಐ ಮೇಡ್ ಫಾರ್' ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಬಿಲ್ಲಿ ಎಲಿಶ್, ಫಿನ್ನಿಯಾಸ್ ಓ'ಕಾನ್ನೆಲ್ ಸ್ವೀಕರಿಸಿದರು. ವಿಜೇತರ ಹೆಸರನ್ನು ಘೋಷಿಸಲು ಇಬ್ಬರು ವೇದಿಕೆಗೆ ಬರುತ್ತಿದ್ದಂತೆ ಹಿನ್ನೆಲೆಯಲ್ಲಿ 'ನಾಟು ನಾಟು' ಹಾಡಿನ ಝಲಕ್ ಪ್ರಸಾರವಾಯಿತು. ಅದರಲ್ಲಿ ಜ್ಯೂ. ಎನ್‌ಟಿಆರ್ ಮತ್ತು ರಾಮ್ ಚರಣ್ ಹುಕ್ ಸ್ಟೆಪ್ ಕಂಡು ಬಂತು. ಇದನ್ನು ಕಾರ್ಯಕ್ರಮ ವೀಕ್ಷಿಸುತ್ತಿದ್ದ ಭಾರತೀಯರು ಖುಷಿಯಾದರು.
ಅಂದಹಾಗೆ ಆಸ್ಕರ್ ವಿಜೇತರನ್ನು ಘೋಷಿಸುವ ಮುನ್ನ, ನಾಮಿನೇಟ್ ಆದವರ ಲಿಸ್ಟ್ ಘೋಷಣೆ ಆಗುತ್ತದೆ. ಜೊತೆಗೆ ಕಳೆದ ವರ್ಷ ಯಾರಿಗೆ ಪ್ರಶಸ್ತಿ ಸಿಕ್ಕಿತ್ತು ಎನ್ನುವುದರ ಝಲಕ್ ಕೂಡ ತೋರಿಸುತ್ತಾರೆ. ವರ್ಷದ ಹಿಂದೆ 'ನಾಟು ನಾಟು' ಗೀತೆಗೆ ಪ್ರಶಸ್ತಿ ಸಿಕ್ಕಿದ್ದರಿಂದ ಅದರ ಸಣ್ಣ ತುಣುಕು ಬಂದಿದೆ. ಈ ಬಾರಿ ಭಾರತದ ಯಾವುದೇ ಸಿನಿಮಾ, ಡಾಕ್ಯುಮೆಂಟರಿಗೆ ಆಸ್ಕರ್ ಪ್ರಶಸ್ತಿ ಸಿಗಲಿಲ್ಲ. ನಾಮಿನೇಟ್ ಕೂಡ ಆಗಿರಲಿಲ್ಲ. ಆದರೂ ಭಾರತದ ಸಿನಿಮಾ ಹಾಡಿನ ಝಲಕ್ ವೇದಿಕೆಯಲ್ಲಿ ಕಂಡಿದ್ದು ವಿಶೇಷ. ಅಷ್ಟೇ ಅಲ್ಲ ಬೆಸ್ಟ್ ಸ್ಟಂಟ್ಸ್ ಟ್ರಿಬ್ಯೂಟ್ ವೀಡಿಯೋದಲ್ಲಿ ಕೂಡ 'RRR' ಚಿತ್ರದ ಆಕ್ಷನ್ ಸೀನ್ ಝಲಕ್ ಬಂದು ಹೋಗಿತ್ತು.
2022ರಲ್ಲಿ ತೆರೆಕಂಡಿದ್ದ 'RRR' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ವಿಜಯೇಂದ್ರ ಪ್ರಸಾದ್ ಬರೆದಿದ್ದ ಕಥೆಯನ್ನು ಜಕ್ಕಣ್ಣ ತೆರೆಗೆ ತಂದಿದ್ದರು. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನು ಬಳಸಿಕೊಂಡು ಒಂದು ಕಾಲ್ಪನಿಕ ಕಥೆ ಹೇಳಿ ತಂಡ ಗೆದ್ದಿತ್ತು. ಎಂ. ಎಂ ಕೀರವಾಣಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಚಿತ್ರದ 'ನಾಟು ನಾಟು' ಸೂಪರ್ ಹಿಟ್ ಆಗಿತ್ತು. ಚರಣ್, ತಾರಕ್ ಪೈಪೋಟಿಗೆ ಬಿದ್ದು ಹೆಜ್ಜೆ ಹಾಕಿದ್ದರು.
'ನಾಟು ನಾಟು' ಗೀತೆಗೆ ಆಸ್ಕರ್ ಮಾತ್ರವಲ್ಲ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್, ಗೋಲ್ಡನ್ ಗ್ಲೋಬ್ ಅವಾರ್ಡ್, ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್, ಹಾಸ್ಟನ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿತ್ತು. ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದರು. ಕೀರವಾಣಿ ಜೊತೆಗೆ ಚಂದ್ರಬೋಸ್ ವೇದಿಕೆ ಏರಿ ಆಸ್ಕರ್ ಪ್ರಶಸ್ತಿ ಪಡೆದು ಮಾತನಾಡಿದ್ದರು. ಇನ್ನು ಹಾಡಿಗೆ ಪ್ರೇಮ್ ರಕ್ಷಿತ್ ಕೊರಿಯೋಗ್ರಫಿ ಮಾಡಿದ್ದರು.
ರಾಜಮೌಳಿ, ಕೀರವಾಣಿ, ರಾಮ್‌ಚರಣ್ ದಂಪತಿ ಸಮೇತರಾಗಿ ಕಳೆದ ಬಾರಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದರು. ಇನ್ನು ಜ್ಯೂ. ಎನ್‌ಟಿಆರ್ ಸೇರಿದಂತೆ ತಂಡದ ಹಲವರು ಡಾಲ್ಬಿ ಥಿಯೇಟರ್‌ನಲ್ಲಿ ಕಾರ್ಯಕ್ರಮ ವೀಕ್ಷಿಸಿದ್ದರು. ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಎಲ್ಲರೂ ಹುಚ್ಚೆದ್ದು ಸಂಭ್ರಮಿಸಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗಿತ್ತು.


Click it and Unblock the Notifications











