'ಜುರಾಸಿಕ್ ಪಾರ್ಕ್'ನ ನಟ ಸ್ಯಾಮ್ ನೀಲ್ ಹಠಾತ್ ನಿಧನ : ಕ್ಯಾನ್ಸರ್ ವಿರುದ್ದ ಗೆದ್ದಿದ್ದ ನಟನ ಸಾವಿಗೆ ಕಾರಣವೇನು ?
ಡೈನೋಸರ್, ದೈತ್ಯ ಸರೀಸೃಪಗಳು ಅಥವಾ ಮುದ್ದಾಗಿ ಪೆಡಂಭೂತ ಎಂದು ಏನಾದರೂ ಕರೆಯಿರಿ, ತೆರೆ ಮೇಲೆ ಅವುಗಳನ್ನು ನೋಡುವುದೇ ಆನಂದ. ಈ ದೈತ್ಯ ಜೀವಿಗಳ ಕಥೆಯನ್ನು ಆಬಾಲವೃದ್ಧರಿಗೂ ತಲುಪಿಸಿದ ಕೀರ್ತಿ ಸ್ಟೀವನ್ ಸ್ಪೀಲ್ಬರ್ಗ್ ಗೆ ಸಲ್ಲುತ್ತದೆ. ಮೊದಲ ಎರಡು ಜುರಾಸಿಕ್ ಪಾರ್ಕ್ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿ ಇತಿಹಾಸ ಸೃಷ್ಟಿಸಿದ ಹಾಲಿವುಡ್ ನ ಶ್ರೇಷ್ಠ ಚಿತ್ರಕರ್ಮಿ.
ಇಂಥಾ ಸ್ಟೀವನ್ ಸ್ಪೀಲ್ಬರ್ಗ್ ನಿರ್ದೇಶನದ ''ಜುರಾಸಿಕ್ ಪಾರ್ಕ್''ನಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದ ಸ್ಯಾಮ್ ನೀಲ್ ಅವರನ್ನು ಬಹುಶಃ 90ರ ದಶಕದ ಚಿತ್ರಪ್ರೇಮಿಗಳು ಯಾವತ್ತು ಮರೆಯಲು ಸಾಧ್ಯ ಇಲ್ಲ. ಯಾಕೆಂದರೆ.. ಸ್ಯಾಮ್ ನೀಲ್ ಅವರ ಪಾತ್ರ ಈ ಚಿತ್ರದಲ್ಲಿ ದೈತ್ಯಾಕ್ಯಾರದ ಪ್ರಾಣಿಯನ್ನು ನೋಡಿ ಓಡಿ ಹೋಗುವುದ್ದಾಗಿರಲಿಲ್ಲ. ಬದಲಿಗೆ ಆರಡಿ ಎತ್ತರದ ಕೋಳಿಯಂತೆ ಕಾಣುವ ಆ ಜೀವಿ, ಹೇಗೆ ಗುಂಪಾಗಿ ಬಂದು ಸುತ್ತುವರಿದು ಬೇಟೆಯಾಡುತ್ತದೆ ಎಂದು ವಿವರಿಸುವ ಪಾತ್ರ ಆಗಿತ್ತು. ಇಡೀ ಜುರಾಸಿಕ್ ಪಾರ್ಕ್‌ನ ಆತ್ಮದಂತೆ ಇವರ ಪಾತ್ರ ಹೆಣೆಯಲಾಗಿತ್ತು.

ತಲೆಯ ಮೇಲೆ ಟೋಪಿ ಹಾಕಿಕೊಂಡು, ಕಣ್ಣಿನ ಕನ್ನಡಕ ತೆಗೆದು ಆ ದೈತ್ಯ ಪ್ರಾಣಿಗಳನ್ನ ಇವರು ಆಶ್ಚರ್ಯದಿಂದ ನೋಡಿದಾಗ ಇಡೀ ಜಗತ್ತೇ ಇವರ ಕಣ್ಣಿನ ಮೂಲಕ ಆ ವಿಸ್ಮಯನ ಕಣ್ತುಂಬಿಕೊಂಡಿತ್ತು. ಆದ್ರೆ ಇಂದು ಆ ಕಣ್ಣುಗಳು ಶಾಶ್ವತವಾಗಿ ಮುಚ್ಚಿಕೊಂಡಿವೆ. ಜಗತ್ತಿನಾದ್ಯಂತ ಕೋಟ್ಯಂತರ ಸಿನಿಮಾ ಪ್ರೇಮಿಗಳನ್ನ ತನ್ನ ನಟನೆಯಿಂದ ರಂಜಿಸಿದ್ದ ಸ್ಯಾಮ್ ನೀಲ್ ತಮ್ಮ 78ನೇ ವಸಂತದಲ್ಲಿ ವಿಧಿವಶರಾಗಿದ್ದಾರೆ.
ಸ್ಯಾಮ್ ನೀಲ್ ನಿಧನ, ಹಾಲಿವುಡ್ ಕಣ್ಣೀರು
ಇಂದು (ಜುಲೈ13 ) ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸ್ಯಾಮ್ ನೀಲ್ ನಿಧನರಾಗಿದ್ದಾರೆ. ಕುಟುಂಬಸ್ಥರು ಇನ್‌ಸ್ಟಾಗ್ರಾಮ್ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದು ಸ್ಯಾಮ್ ನೀಲ್ ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಬೇಕಿದೆ.
ಕ್ಯಾನ್ಸರ್ ವಿರುದ್ಧ ಹೋರಾಟ
ಸ್ಯಾಮ್ ನೀಲ್ ಮೂರು-ನಾಲ್ಕು ವರ್ಷದ ಹಿಂದೆ ಕ್ಯಾನ್ಸರ್ ದಿಂದ ಬಳಲುತ್ತಿದ್ದರು. ತಮಗೆ ಸ್ಟೇಜ್-3 ಆಂಜಿಯೊ ಇಮ್ಯುನೋಬ್ಲಾಸ್ಟಿಕ್ ಟಿ-ಸೆಲ್ ಲಿಂಫೋಮಾ ಎಂಬ ಅಪರೂಪದ ರಕ್ತದ ಕ್ಯಾನ್ಸರ್ ಇರುವುದನ್ನ ಸ್ಯಾಮ್ ನೀಲ್ ಬಹಿರಂಗಪಡಿಸಿದ್ದರು.
2022ರಿಂದ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಮ್ ನೀಲ್, ಹಾಗೇ ನೋಡಿದರೆ ಈ ಹೋರಾಟದಲ್ಲಿ ಗೆದ್ದಿದ್ದರು. ಕ್ಯಾನ್ಸರ್ ಮುಕ್ತರಾಗಿದ್ದರು. ಆದರೆ ಈಗ ಹಠಾತ್ ಆಗಿ ಎದ್ದು ನಡೆದಿದ್ದಾರೆ. ಈ ಹಿನ್ನೆಲೆ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿದ್ದ ನಟನಿಗೆ ಇದ್ದಕ್ಕಿದ್ದಂತೆ ಸಾವು ಎದುರಾಗಿದ್ದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಹೀಗಾಗಿ ಸ್ಯಾಮ್ ನೀಲ್ ಅವರನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬ ಕೊನೆಗಾಲದಲ್ಲಿ ಅವರು ಕ್ಯಾನ್ಸರ್ ದಿಂದ ಮುಕ್ತರಾಗಿದ್ದರು ಎನ್ನುವುದಷ್ಟೇ ನಮಗೆ ಸಮಾಧಾನದ ವಿಷಯ ಎಂದು ಹೇಳಿದೆ. ಚಿಕಿತ್ಸೆ ನೀಡಿದ ಸೆಂಟ್ ವಿನ್ಸೆಂಟ್ ಪ್ರೈವೇಟ್ ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ಹೇಳಿದೆ. ಖಾಸಗಿತನ ಗೌರವಿಸುವಂತೆ ಮನವಿಯನ್ನು ಕೂಡ ಮಾಡಿದೆ.
'ನೈಜೆಲ್' ಹೆಸರಿನಿಂದ 'ಸ್ಯಾಮ್' ಆದ ಕಥೆ!
ಸ್ಯಾಮ್ ನೀಲ್ ಅವರ ಮೂಲ ಹೆಸರು ನೈಜೆಲ್ ಜಾನ್ ಡರ್ಮೋಟ್ ನೀಲ್ 1947ರಲ್ಲಿ ಉತ್ತರ ಐರ್ಲೆಂಡ್‌ನ ಒಮಾಗ್‌ನಲ್ಲಿ ಜನ್ಮ ಪಡೆದಿದ್ದ ಸ್ಯಾಮ್ ಅವರ ತಾಯಿ ಇಂಗ್ಲೆಂಡ್‌ನವರಾಗಿದ್ದರೆ, ತಂದೆ ನ್ಯೂಜಿಲೆಂಡ್ ನ ಸೈನ್ಯದಲ್ಲಿದ್ದರು.
1954ರಲ್ಲಿ ಇವರ ಕುಟುಂಬ ನ್ಯೂಜಿಲೆಂಡ್‌ಗೆ ವಲಸೆ ಹೋಯ್ತು. ಆಗ ಸ್ಯಾಮ್‌ಗೆ ಹನ್ನೆರಡು ವರ್ಷ. ಶಾಲೆಯಲ್ಲಿ 'ನೈಜೆಲ್' ಹೆಸರಿನ ಹುಡುಗರು ತುಂಬಾ ಜನ ಇದ್ದ ಹಿನ್ನೆಲೆ ತಮ್ಮ ಹೆಸರನ್ನು ಆಗ ಸ್ಯಾಮ್ ಎಂದು ಇವರು ಬದಲಿಸಿಕೊಂಡಿದ್ದರು.
ಕ್ರೈಸ್ಟ್‌ಚರ್ಚ್‌ನಲ್ಲಿ ಶಾಲಾ-ಕಾಲೇಜು ಮುಗಿಸಿದ ಸ್ಯಾಮ್, ಕಾನೂನು ಪದವಿ ಪಡೆಯುವ ಪ್ರಯತ್ನ ಮಾಡಿದರು. ಆದರೆ ಫೇಲಾದರು. ಈ ಹಿನ್ನೆಡೆಯಿಂದ ಧೃತಿಗೆಡದ ಸ್ಯಾಮ್‌ಗೆ ಆ ನಂತರ ಬಣ್ಣದ ಲೋಕ ಸೆಳೆಯಲು ಶುರು ಮಾಡಿತು. ಕಾಲೇಜು ನಾಟಕಗಳಲ್ಲಿ ನಟಿಸಲು ಶುರು ಮಾಡಿದ ಅವರು, ನಂತರ ವೆಲ್ಲಿಂಗ್ಟನ್‌ನ ಥಿಯೇಟರ್ ಗ್ರೂಪ್ ಸೇರಿದರು. ಅಲ್ಲಿ ಅವರಿಗೆ ವಾರಕ್ಕೆ ಸಿಗುತ್ತಿದ್ದ ಸಂಬಳ ಬರೀ $35 ಡಾಲರ್ ಮಾತ್ರ. ಊಟ ಸಿಕ್ಕರೆ ಬೋನಸ್.
ಸಿನಿಮಾರಂಗದಲ್ಲಿ ಬ್ರೇಕ್
ಆರಂಭದಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಸ್ಯಾಮ್ ನೀಲ್, 1977ರಲ್ಲಿ ''ಸ್ಲೀಪಿಂಗ್ ಡಾಗ್ಸ್'' ಎಂಬ ಚಿತ್ರ ಮಾಡಿದರು. ಸ್ಯಾಮ್ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ ಈ ಚಿತ್ರ ಇವರಿಗೆ ಅಪಾರವಾದ ಜನಪ್ರಿಯತೆ ತಂದು ಕೊಡ್ತು. ಅಮೆರಿಕದಲ್ಲಿ ರಿಲೀಸ್ ಆದ ನ್ಯೂಜಿಲೆಂಡ್‌ನ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಯ್ತು.
ಆ ನಂತರ ''ಮೈ ಬ್ರಿಲಿಯಂಟ್ ಕರಿಯರ್'' (1979), ''ಒಮೆನ್ III'' (1981), ''ಪೊಸೆಷನ್'' (1981) ''ಇವಿಲ್ ಏಂಜಲ್ಸ್'' ಹೀಗೆ ಒಂದಾದ ಮೇಲೊಂದು ಸಿನಿಮಾ ಮಾಡಿದ ಸ್ಯಾಮ್ ನೀಲ್ 1993ರಲ್ಲಿ ತಮ್ಮೆರಡು ಸಿನಿಮಾಗಳ ಮೂಲಕ ಜಗದ್ವಿಖ್ಯಾತ ಆದರು. ಆ ಪೈಕಿ ಒಂದು ''ದಿ ಪಿಯಾನೋ'' ಆದರೆ ಇನ್ನೊಂದು ಸ್ಟೀವನ್ ಸ್ಪಿಲ್ಬರ್ಗ್ ನಿರ್ದೇಶನದ ''ಜುರಾಸಿಕ್ ಪಾರ್ಕ್''.
ಜೇಮ್ಸ್ ಬಾಂಡ್ ಆಗಬೇಕಿದ್ದ ಸ್ಯಾಮ್
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರೋಜರ್ ಮೂರ್ ನಂತರ ಜೇಮ್ಸ್ ಬಾಂಡ್ ರೂಪದಲ್ಲಿ ಬೆಳ್ಳಿತೆರೆಯಲ್ಲಿ ಸ್ಯಾಮ್ ನೀಲ್ ಧಗಧಗಿಸಬೇಕಿತ್ತು. ಇದಕ್ಕಾಗಿ ಸ್ಕ್ರೀನ್ ಟೆಸ್ಟ್ ಕೂಡ ನಡೆದಿತ್ತು. ಆದರೆ ಕೊನೆ ಗಳಿಗೆಯಲ್ಲಿ 1986ರಲ್ಲಿ ಈ ಅವಕಾಶ ತಿಮೋತಿ ಡಾಲ್ಟನ್ ಪಾಲಾಯ್ತು.
ಪ್ರಾಣಿಗಳಿಗೆ ನಟ-ನಟಿಯರ ಹೆಸರಿಟ್ಟಿದ್ದ ಸ್ಟಾರ್
ಸಿನಿಮಾ ಹೊರತು ಪಡಿಸಿದರೆ ಸ್ಯಾಮ್ ನೀಲ್ ಅವರಿಗೆ ಕೃಷಿಯಲ್ಲಿ ಭಾರಿ ಆಸಕ್ತಿ ಇತ್ತು. ಇದಲ್ಲದೆ ವೈನ್ ತಯಾರಿಸುವುದು ಇವರ ಆಸಕ್ತಿಯ ಭಾಗವಾಗಿತ್ತು. ನ್ಯೂಜಿಲೆಂಡ್‌ನಲ್ಲಿ ''ಟೂ ಪ್ಯಾಡಾಕ್ಸ್'' ಎಂಬ ಸ್ವಂತ ದ್ರಾಕ್ಷಿತೋಟ ಹೊಂದಿದ್ದ ಸ್ಯಾಮ್, ಇದು ತುಂಬಾ ಹಣ ಮತ್ತು ಸಮಯ ತಿನ್ನುವ ಬಿಸಿನೆಸ್. ಆದರೂ ಇದರಲ್ಲಿ ಸಿಗುವ ಮಜಾವೇ ಬೇರೆನೇ ಎಂದು ಹೇಳುತ್ತಿದ್ದರು.
ಇನ್ನು ವಿಶೇಷವೆಂದರೆ, ತಮ್ಮ ಈ ತೋಟದಲ್ಲಿದ್ದ ಪ್ರಾಣಿಗಳಿಗೆ ಸ್ಯಾಮ್ ನೀಲ್, ತಮ್ಮ ಸಹ-ಕಲಾವಿದರ ಹೆಸರನ್ನೇ ಇಟ್ಟಿದ್ದರು. ಉದಾಹರಣೆಗೆ ಕೋಳಿಗೆ ''ಲಾರಾ ಡೆರ್ನ್'' ಎಂದು ನಾಮಕರಣ ಮಾಡಿದ್ದ ಸ್ಯಾಮ್ ಬಾತುಕೋಳಿಗೆ 'ಕೈ'ಲಿ ಮಿನೋಗ್'' ಮತ್ತು ಹಸುವಿಗೆ ''ಹೆಲೆನಾ ಬೊನ್ಹಾಮ್ ಕಾರ್ಟರ್'' ಎಂದು ಹೆಸರಿಟ್ಟು ಕರೆಯುತ್ತಿದ್ದರು.
ಹೀಗೆ ಚಿತ್ರರಂಗದಲ್ಲಿ ಮಿಂಚಿದ, ತಮ್ಮ ಅಭಿನಯದಿಂದ ಹಲವರ ಹೃದಯ ಗೆದ್ದ ಸ್ಯಾಮ್ ನೀಲ್ ನಾಲ್ಕು ಜನ ಮಕ್ಕಳು ಮತ್ತು ಎಂಟು ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ. ಸ್ಯಾಮ್ ನೀಲ್ ಅವರ ನಿಧನಕ್ಕೆ ಹಾಲಿವುಡ್ ಕಂಬನಿ ಮಿಡಿದಿದೆ.


Click it and Unblock the Notifications