ಮೆಟ್ ಗಾಲಾ ಈವೆಂಟ್‌ನಲ್ಲಿ ಹೊಸ ದಾಖಲೆ ಬರೆದ ಶಾರುಖ್ ಖಾನ್
ಜಗತ್ತಿನ ಅತಿದೊಡ್ಡ ಫ್ಯಾಷನ್ ಈವೆಂಟ್‌ಗಳಲ್ಲಿ ಒಂದಾದ ಮೆಟ್ ಗಾಲಾ ಈ ಬಾರಿ ಕಳೆ ಕಟ್ಟಿದೆ. ನ್ಯೂಯಾರ್ಕ್ ಮೆಟ್ರೋಪಾಲಿಟನ್ ಮ್ಯೂಜಿಯಂ ಆಫ್ ಆರ್ಟ್‌ನಲ್ಲಿ ಈ ವರ್ಷವೂ ಮೆಟ್ ಗಾಲಾ ರೆಡ್ ಕಾರ್ಪೆಟ್ ವೇದಿಕೆ ಸಿದ್ಧವಾಗಿದೆ. ಈಗಾಗಲೇ ಹಾಲಿವುಡ್, ಬಾಲಿವುಡ್ ತಾರೆಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ.
ಈ ಹಿಂದೆ ಆಲಿಯಾ ಭಟ್, ಪ್ರಿಯಾಂಕ ಚೋಪ್ರಾ ಸೇರಿದಂತೆ ಕೆಲ ಬಾಲಿವುಡ್ ತಾರೆಯರು ಮೆಟ್ ಗಾಲಾ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡು ಹುಬ್ಬೇರಿಸಿದ್ದಾರೆ. ಇದೇ ಮೊದಲ ಬಾರಿಗೆ ಶಾರೂಖ್ ಖಾನ್ ಗಮನ ಸೆಳೆದಿದ್ದಾರೆ. ಮೆಟ್ ಗಾಲಾ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಮೊದಲ ಬಾಲಿವುಡ್ ನಟ ಎಂಬ ಹೆಗ್ಗಳಿಕೆಗೆ ಕಿಂಗ್ ಖಾನ್ ಪಾತ್ರರಾಗಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ ಬಾಲಿವುಡ್ ಬಾದ್‌ಶಾ ಮಿಂಚಿದ್ದಾರೆ.

ಶಾರುಖ್ ಖಾನ್ ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಸಬ್ಯಸಾಚಿ ಡಿಸೈನ್ ಮಾಡಿರುವ ಕಾಸ್ಟ್ಯೂಮ್ ತೊಟ್ಟು ಕಾಣಿಸಿಕೊಂಡಿದ್ದಾರೆ. ಗುಂಡಿ ಬಿಚ್ಚಿದ ಬ್ಲ್ಯಾಕ್ ಕಲರ್ ಶರ್ಟ್, ಬ್ಲ್ಯಾಕ್ ಕಲರ್ ಪ್ಯಾಂಟ್ ಧರಿಸಿದ್ದು ಮೇಲೆ ಟ್ರೆಂಚ್ ಕೋಟ್ ಹಾಕಿಕೊಂಡಿದ್ದಾರೆ. ಕುತ್ತಿಗೆಯಲ್ಲಿ ಒಂದಷ್ಟು ಚೈನ್‌ಗಳನ್ನು ಕಿಂಗ್ ಖಾನ್ ಧರಿಸಿದ್ದು "K" ಮತ್ತು "SRK" ಎಂದು ಡಿಸೈನ್ ಮಾಡಿರುವ ಪೆಂಡೆಂಟ್‌ಗಳು ಮತ್ತು ಉಂಗುರಗಳನ್ನು ಹಾಕಿಕೊಂಡಿರುವುದು ನೋಡಬಹುದು. ಮಂತ್ರದಂಡದ ರೀತಿ ಕೈಯಲ್ಲಿ ಒಂದು ಕೋಲು ಹಿಡಿದು, ಬ್ಲ್ಯಾಕ್ ಕಲರ್ ಸನ್‌ಗ್ಲಾಸ್ ತೊಟ್ಟು ಶಾರುಖ್ ಗಮನ ಸೆಳೆದಿದ್ದಾರೆ.
ಶಾರುಖ್ ಖಾನ್ ಮೆಟ್ ಗಾಲಾ ಲುಕ್ ಫೋಟೊಗಳನ್ನು ಅವರ ಮ್ಯಾನೇಜರ್ ಪೂಜಾ ದದ್ಲಾನಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮೆಟ್‌ಗಾಲಾ ಬ್ಲ್ಯೂ ಕಾರ್ಪೆಟ್ ಮೇಲೆ ಶಾರುಖ್ ಹೆಜ್ಜೆ ಹಾಕಿ ಅಭಿಮಾನಿಗಳ ಕಡೆ ಕೈ ಬೀಸಿದ್ದಾರೆ. ಇನ್ನು ತಮ್ಮ ಐಕಾನಿಕ್ ಪೋಸ್ ಕೊಟ್ಟಿದ್ದಾರೆ. ಕಿಂಗ್ ಖಾನ್ ನೋಡಿ ಅಭಿಮಾನಿಗಳು ಜೈಕಾರ ಹಾಕಿದ್ದು ಅವರು ಗಾಳಿಯಲ್ಲಿ ಸಿಹಿಮುತ್ತು ತೇಲಿ ಬಿಟ್ಟಿದ್ದಾರೆ. ಈ ಬಾರಿ ಬಾಲಿವುಡ್ ತಾರೆಯರು ಮೆಟ್ ಗಾಲ್ ವೇದಿಕೆಯಲ್ಲಿ ಕಮಾಲ್ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಬಿಳಿ ಬಣ್ಣದ ಪೋಲ್ಕಾ ಡಾಟ್ ಬಾಲ್ಮೇನ್ ಸೂಟ್ ಧರಿಸಿ ಮಿಂಚಿದ್ದಾರೆ. ಪತಿ ನಿಕ್ ಜೋನ್ಸ್ ಕೂಡ ಆಕೆಗೆ ಸಾಥ್ ಕೊಟ್ಟಿದ್ದಾರೆ. ಇನ್ನು ನಟಿ ಕಿಯಾರಾ ಅದ್ವಾನಿ ಗರ್ಭಿಣಿ ಆಗಿದ್ದಾರೆ. ಮೆಟ್ ಗಾಲಾ ಬ್ಲ್ಯೂ ಕಾರ್ಪೆಟ್‌ನಲ್ಲಿ ಬೇಬಿ ಬಂಪ್ ಜೊತೆ ಆಕೆ ಪೋಸ್ ಕೊಟ್ಟಿದ್ದಾರೆ. ಇನ್ನುಳಿದಂತೆ ಮನೀಶ್ ಮಲ್ಹೋತ್ರಾ, ದಿಲ್ಜಿತ್ ದೋಸಾಂಜ್ ಸೇರಿ ಕೆಲ ಬಾಲಿವುಡ್ ತಾರೆಯರು ಈವೆಂಟ್‌ನಲ್ಲಿ ಭಾಗಿ ಆಗಿದ್ದಾರೆ.
ಮಕ್ಕಳಿಗಾಗಿ ಶಾರುಖ್ ಖಾನ್ ಮೆಟ್ ಗಾಲಾ ಈವೆಂಟ್‌ನಲ್ಲಿ ಭಾಗಿ ಆಗಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಡಿಸೈನರ್ ಸಬ್ಯಸಾಚಿ ತಮ್ಮನ್ನು ಭಾಗಿ ಆಗುವಂತೆ ಮನವಿ ಮಾಡಿದರು ಎಂದು ಕಿಂಗ್ ಖಾನ್ ತಿಳಿಸಿದ್ದಾರೆ. ಡಿಸೈನರ್ ಸಬ್ಯಸಾಚಿ ಮಾತನಾಡಿ "ಶಾರುಖ್ ಖಾನ್ ಬಹುಶಃ ವಿಶ್ವದ ಅತ್ಯಂತ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ನಾವು ಹೊರಗೆ ಬಂದಾಗ ಹೋಟೆಲ್ ಹೊರಗೆ ಕಾಲ್ತುಳಿತ ಸಂಭವಿಸುವ ಸಾಧ್ಯತೆ ಹೆಚ್ಚಿತ್ತು. ರೆಡ್ ಕಾರ್ಪೆಟ್ ಮೇಲೆ ಇಂತಹ ವ್ಯಕ್ತಿ ಸಿಕ್ಕಾಗ, ಬ್ಲ್ಯಾಕ್ ಡ್ಯಾಂಡಿಯಲ್ಲಿ ಅವರನ್ನು ತೋರಿಸುವುದು ವಿಶೇಷ. ನಾವು ಶಾರುಖ್ ಖಾನ್ ಅವರನ್ನು ಶಾರುಖ್ ಖಾನ್ ಆಗಿ ತೋರಿಸಲು ಬಯಸಿದ್ದೆವು" ಎಂದಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ 'ಜವಾನ್', 'ಪಠಾಣ್' ಹಾಗೂ 'ಡಂಕಿ' ಸಿನಿಮಾಗಳ ಬಳಿಕ ಶಾರುಖ್ ಸೈಲೆಂಟ್ ಆಗಿದ್ದಾರೆ. 'ಕಿಂಗ್' ಎಂಬ ಸಿನಿಮಾ ಘೋಷಣೆ ಆಗಿದೆ. ಅದರಲ್ಲಿ ಮಗಳು ಸುಹಾನಾ ಜೊತೆಗೆ ಕಿಂಗ್ ಖಾನ್ ತೆರೆ ಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications











