Hollywood: ನಟಿಯ ಜೊತೆ ಮಲಗಿದ್ದೆನೆಂದು ಹೇಳಲು 50 ಲಕ್ಷ ಆಫರ್: ಟ್ಯಾಬ್ಲಾಯ್ಡ್ ಕರಾಳ ಮುಖ
ಸಿನಿಮಾ ನಟ-ನಟಿಯರ ಸುತ್ತ ವಿವಾದಗಳು ಸುತ್ತಿಕೊಳ್ಳುವುದು ಸಾಮಾನ್ಯ. ವಿವಾದಗಳಿಂದಲೇ ಜನಪ್ರಿಯರಾದ ನಟ-ನಟಿಯರೂ ಇದ್ದಾರೆ. 'ಗುಡ್ ಆರ್ ಬ್ಯಾಡ್, ಪಬ್ಲಿಸಿಟಿ ಈಸ್ ಪಬ್ಲಿಸಿಟಿ' ಎಂಬ ಮಾತು ಚಿತ್ರರಂಗದಲ್ಲಿ ಹರಿದಾಡುತ್ತಿರುತ್ತದೆ.
ನಟ-ನಟಿಯರ ಹಿಂದೆ ದಿನದ 24 ತಾಸೂ ಕ್ಯಾಮೆರಾ ಹಿಡಿದ ಮಾಧ್ಯಮದವರು, ಪಾಪರಾಟ್ಜಿಗಳು ಬಿದ್ದಿರುತ್ತಾರೆ. ನಟ-ನಟಿಯರ ಬಗ್ಗೆ ಎಕ್ಸ್‌ಕ್ಲೂಸಿವ್ ಆದ ಸೆನ್ಸೇಶನಲ್ ಆದ, ವಿವಾದ ಎಬ್ಬಿಸುವ ಸುದ್ದಿಗಳನ್ನು ಕೊಡಲು ನಾ ಮುಂದು-ತಾ ಮುಂದು ಸ್ಪರ್ಧೆಗಿಳಿದಿರುತ್ತಾರೆ. ನಟ-ನಟಿಯರ ಬಗೆಗಿನ ಮಸಾಲೆ ಸುದ್ದಿಗಳು ಈಗ ಬಹಳ ಬೇಡಿಕೆ, ಅದಕ್ಕಾಗಿ ಯಾವ ಹಂತಕ್ಕೆ ಹೋಗಲೂ ಕೆಲವು ಸುದ್ದಿ ಸಂಸ್ಥೆಗಳು ತಯಾರಾಗಿರುತ್ತವೆ.
ಹೀಗಿರುವಾಗ ಕೆಲವು ಸುದ್ದಿ ಸಂಸ್ಥೆಗಳಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಟ-ನಟಿಯರಿಗೆ ಹಣ ನೀಡಿ ಮತ್ತೊಬ್ಬ ನಟ-ನಟಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವಂತೆ ಮಾಡುತ್ತವೆ. ಇಂಥಹಾ ಒಂದು ಪ್ರಯತ್ನ ಇದೀಗ ಬಯಲಾಗಿದೆ. ಆ ಮೂಲಕ ಕೆಲವು ಮಾಧ್ಯಮಗಳ ನಿಜ ಬಣ್ಣ ಬಯಲು ಮಾಡಿದೆ.

ಬ್ರಿಟನ್‌ನ ಕೆಲವು ಹೆಸರಾಂತ ಟ್ಯಾಬ್‌ಲಾಯ್ಡ್ ಪತ್ರಿಕೆಗಳು ನಟಿಯೊಬ್ಬಳ ಬಗ್ಗೆ ಸುಳ್ಳು ಹೇಳಿಕೆ ನೀಡುವಂತೆ ತಮಗೆ ಹಣದ ಆಮಿಷ ಒಡ್ಡಿದ್ದವು ಎಂದು ನಟ ಸಿಮನ್ ರೆಕ್ಸ್ ಬಹಿರಂಗಪಡಿಸಿದ್ದಾರೆ.
''ಬ್ರಿಟನ್ ರಾಜಕುಮಾರ ಪ್ರಿನ್ಸ್ ಹ್ಯಾರಿಯ ಪತ್ನಿ ಮೆಗನ್ ಮಾರ್ಕೆಲ್ ಜೊತೆ ನಾನು ಮಂಚ ಹಂಚಿಕೊಂಡಿದ್ದೆ ಎಂದು ಹೇಳಲು ನನಗೆ 50 ಲಕ್ಷ ರುಪಾಯಿ ಹಣ ನೀಡುವುದಾಗಿ ಕೆಲವು ಸುದ್ದಿ ಸಂಸ್ಥೆಗಳು ಆಮಿಷ ಒಡ್ಡಿದ್ದವು. ನನಗೆ ಆ ಸಮಯದಲ್ಲಿ ವಿಪರೀತ ಹಣದ ಅವಶ್ಯಕತೆ ಇತ್ತು, ಆದರೆ ಮಹಿಳೆಯೊಬ್ಬಾಕೆ ಬಗ್ಗೆ ಇಲ್ಲ-ಸಲ್ಲದ್ದನ್ನು ಹೇಳುವಂಥಹಾ ವ್ಯಕ್ತಿ ನಾನಾಗಿರಲಿಲ್ಲ'' ಎಂದಿದ್ದಾರೆ ಸಿಮನ್ ರೆಕ್ಸ್.
ಸಿಮನ್ ರೆಕ್ಸ್ ಹಾಗೂ ಮೆಗನ್ ಮಾರ್ಕೆಲ್ ಒಟ್ಟಿಗೆ ಟಾಕ್ ಶೋ ಒಂದರಲ್ಲಿ ಪಾಲ್ಗೊಂಡಿದ್ದರು. ಅದೇ ದಿನ ಇಬ್ಬರೂ ಒಟ್ಟಿಗೆ ರೆಸ್ಟೊರೆಂಟ್‌ನಲ್ಲಿ ಊಟ ಮಾಡಿದ್ದರು. ಆಗ ಆ ಚಿತ್ರಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಅಸಲಿಗೆ ಸಿಮನ್ ರೆಕ್ಸ್ ಹಾಗೂ ಮೆಗನ್ ಮಾರ್ಕೆಲ್ ಪರಸ್ಪರ ಗೆಳೆಯರೇ ಅಲ್ಲ. ಒಂದು ಶೋನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅದರ ಭಾಗವಾಗಿಯೇ ಒಟ್ಟಿಗೆ ಊಟ ಮಾಡಿದ್ದು ಬಿಟ್ಟರೆ ಅವರಿಬ್ಬರ ನಡುವೆ ಸಂಪರ್ಕವೇ ಇಲ್ಲ. ಹಾಗಿದ್ದರೂ ಮಾಧ್ಯಮಗಳು ಮೆಗನ್ಗೆ ಕೆಟ್ಟ ಹೆಸರು ತರಲೆಂದು ಹಾಗೂ ತಮ್ಮ ಟಿಆರ್‌ಪಿ ಲಾಲಸೆಯಿಂದಾಗಿ ಹಣ ಕೊಟ್ಟು ಸುಳ್ಳು ಸುದ್ದಿ ಖರೀದಿಸಲು ಮುಂದಾಗಿದ್ದವು.
ಮೆಗನ್ ಮಾರ್ಕೆಲ್ ಬ್ರಿಟನ್ ರಾಜ ಹ್ಯಾರಿಸ್‌ನ ಪತ್ನಿಯಾಗಿದ್ದಾರೆ. ಆದರೆ 2020 ರಲ್ಲಿ ಅವರು ಬ್ರಿಟನ್‌ನ ರಾಯಲ್ ಫ್ಯಾಮಿಲಿಯಿಂದ ದೂರಾಗುತ್ತಿರುವುದಾಗಿ ಘೋಷಿಸಿದರು. ಅಷ್ಟೇ ಅಲ್ಲದೆ, ಅದಾದ ಒಂದು ವರ್ಷದ ಬಳಿಕ ಓಪ್ರಾ ವಿನ್‌ಫ್ರೆ ಜೊತೆಗಿನ ಸಂದರ್ಶನದಲ್ಲಿ ಬ್ರಿಟನ್ ರಾಯಲ್ ಕುಟುಂಬದ ಮೇಲೆ ಜನಾಂಗೀಯ ತಾರತಮ್ಯದ ಆರೋಪವನ್ನು ಹೊರಿಸಿದರು.


Click it and Unblock the Notifications











