ಸೋಶಿಯಲ್ ಮೀಡಿಯಾ ಸೈಡ್ ಎಫೆಕ್ಟ್, ಮನೆಯಲ್ಲಿ ಶವವಾಗಿ ಪತ್ತೆಯಾದ 24 ವರ್ಷದ ಖ್ಯಾತ ನಟಿ..!
ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು. ಸಾಮಾನ್ಯ ಮಹಿಳೆಯರು ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಮುಂಚೂಣಿಯಲ್ಲಿರುವ ಅನೇಕ ಮಹಿಳೆಯರೂ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಹೆಣ್ಣು ಮಕ್ಕಳು ತೊಡುವ ಬಟ್ಟೆಯಿಂದ ಹಿಡಿದು ಅವರ ಆಲೋಚನಾ ಕ್ರಮದ ತನಕ ಹಲವು ವಿಷಯಗಳು ಟ್ರೋಲಿಗರಿಗೆ ಆಹಾರವಾಗಿವೆ.
ಯಾವುದೋ ರಾಜಕೀಯ ಪಕ್ಷ ಇಲ್ಲವೇ ಸಿದ್ಧಾಂತಕ್ಕೆ ಕಟ್ಟು ಬಿದ್ದವರು ತಮ್ಮ ಶ್ರೇಷ್ಠತೆಯ ವ್ಯಸನ ಮೆರೆಯಲು ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಟ್ರೋಲ್ ಮಾಡುವುದು ನಿತ್ಯದ ವಾಡಿಕೆ ಎಂಬಂತಾಗಿದೆ. ಕೆಲ ಮಹಿಳೆಯರು ಟ್ರೋಲಿಗರಿಗೆ ಅಲ್ಲಲ್ಲೇ ಉತ್ತರವನ್ನು ನೀಡಿದರೆ ಇನ್ನೂ ಕೆಲವರು ಬ್ಲಾಕ್ ಮಾಡಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಮತ್ತೂ ಕೆಲವರು ಮಾನಸಿಕವಾಗಿ ಕಿರಿಕಿರಿ ಅನುಭವಿಸಿ ಟ್ರೋಲಿಂಗ್‌ನ್ನು ಎದುರಿಸಲಾಗದೇ ಒಳಗೊಳಗೆ ಆತಂಕ ನೋವು ಅನುಭವಿಸಿ ಅದರಿಂದ ಹೊರಬರಲಾಗದೇ ಖಿನ್ನತೆಗೆ ಜಾರಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಇದಕ್ಕೆ ದಕ್ಷಿಣ ಕೊರಿಯಾದ ಪ್ರಖ್ಯಾತ ನಾಯಕಿ ಕಿಮ್ ಸೇ ರಾನ್ ಸದ್ಯದ ಉದಾಹರಣೆ.

ಹೌದು, 2009ರಲ್ಲಿ 'ಎ ಬ್ರ್ಯಾಂಡ್ ನ್ಯೂ ಲೈಫ್ ' ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗವನ್ನು ಪ್ರವೇಶಿಸಿ ಆನಂತರ ಐ ಆಮ್ ಎ ಡ್ಯಾಡ್, ಲಿಸನ್ ಟು ಮೈ ಹಾರ್ಟ್, ದಿ ನೈಬರ್ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಜನ ಮನ ಗೆದ್ದು 2015ರಲ್ಲಿ ನಾಯಕಿಯಾದ ಕಿಮ್ ಸೇ ರಾನ್ ದಕ್ಷಿಣ ಕೊರಿಯಾದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ದಿ ಮ್ಯಾನ್ ಫ್ರಾಮ್ ನೋವೇರ್ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಸ್ನೋವಿ ರೋಡ್, ಸೀಕ್ರೆಟ್ ಹೀಲರ್, ದಿ ವಿಲೇಜರ್ಸ್, ಲಿವರೇಜ್, ದಿ ಗ್ರೇಟ್ ಶಮನ್ ಗಾ ಡೂ ಶಿಮ್ ಚಿತ್ರಗಳಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು.
ಇಂಥಾ ಕಿಮ್ ಸೇ ರಾನ್ ಕೇವಲ 24ರ ಹರೆಯದಲ್ಲಿ ಉಸಿರು ಚೆಲ್ಲಿದ್ದಾರೆ. ಸಿಯೋಲ್‌ನ ಸಿಯೊಂಗ್ ಡಾಂಗ್-ಗುನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಿಮ್ ನಿಧನಕ್ಕೆ ಕಾರಣ ಇನ್ನೂ ತಿಳಿದಿಲ್ಲವಾದರೂ ಕೊರಿಯಾ ಜುಂಗ್ ಆಂಡ್ ಡೈಲಿ ವರದಿಯ ಪ್ರಕಾರ ಭಾನುವಾರ ಕಿಮ್ ತನ್ನ ಸ್ನೇಹಿತೆಯನ್ನು ಭೇಟಿಯಾಗಬೇಕಿತ್ತು. ಈ ಹಿನ್ನೆಲೆ ಸ್ನೇಹಿತೆ ಕಿಮ್ ಮನೆಗೆ ತೆರಳಿದ್ದರು. ಆಗ ಕಿಮ್ ಸೇ ರಾನ್ ಶವವಾಗಿ ಪತ್ತೆಯಾಗಿದ್ದಾರೆ.
ಇನ್ನು ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರು ಮನೆಯ ಸುತ್ತ ಮುತ್ತ ಯಾವುದೇ ಅಪರಾಧ ಚಟುವಟಿಕೆ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ. ಒಳಗಡೆಯಿಂದ ಬಾಗಿಲು ಲಾಕ್ ಆಗಿದ್ದು ಮನೆಯೊಳಗೆ ಕಿಮ್ ಹೊರತು ಪಡಿಸಿ ಯಾರು ಪ್ರವೇಶಿಸಿಲ್ಲ ಎಂದು ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆಯನ್ನು ಕೂಡ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೇ ಖ್ಯಾತಿಯ ಶಿಖರಕ್ಕೇರಿದ್ದ ಕಿಮ್ ಸೇ ರಾನ್ 2022ರಲ್ಲಿ ಕುಡಿದು ವಾಹನ ಚಲಾಯಿಸಿದ್ದರು. ಎಣ್ಣೆಯ ಅಮಲಿನಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದಿದ್ದರು. ದಕ್ಷಿಣ ಕೊರಿಯಾದಲ್ಲಿ ಕುಡಿದು ವಾಹನ ಚಲಾಯಿಸುವುದು ಬಹುದೊಡ್ಡ ಅಪರಾಧವಾದ ಹಿನ್ನೆಲೆ ಪೊಲೀಸರು ಕಿಮ್ ಅವರನ್ನು ಬಂಧಿಸಿದ್ದರು. ಡ್ರೈವಿಂಗ್ ಲೈಸನ್ಸ್ ಪರವಾನಗಿಯನ್ನು ರದ್ದು ಮಾಡಿದ್ದರು. ಇನ್ನು ನ್ಯಾಯಾಲಯ ಕಿಮ್ ಅವರಿಗೆ 20 ಮಿಲಿಯನ್ ವಾನ್ { $13,850 } ದಂಡ ವಿಧಿಸಿತ್ತು.
ಈ ಪ್ರಕರಣದ ನಂತರ ಕಿಮ್ ಸೇ ರಾನ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಟ್ರೋಲ್ ಮಾಡಲಾಗಿತ್ತು. ಕುಂತರು ನಿಂತರೂ ಕಿಮ್ ಅವರನ್ನು ಟೀಕೆ ಮಾಡಲಾಗುತ್ತಿತ್ತು. ಟ್ರೋಲ್‌ಗಳಿಂದ ಕಿಮ್ ಎಷ್ಟು ಬೇಸತ್ತಿದ್ದರು ಎಂದರೆ ತಮ್ಮ ಇನ್ಸ್ಟಾಗ್ರಾಮ್‌ನ ಕಾಮೆಂಟ್ ಸೆಕ್ಷನ್‌ನ್ನೇ ಕಿಮ್ ಆಫ್ ಮಾಡಿದ್ದರು.
ಇನ್ನು, ಚಿತ್ರರಂಗ ಕೂಡ ಕಿಮ್ ಸೇ ರಾನ್ ಅವರ ಕೈ ಬಿಟ್ಟಿತ್ತು. ಈ ಹಿನ್ನೆಲೆ 2023 ರಲ್ಲಿ ನೆಟ್‌ಫ್ಲಿಕ್ಸ್‌ನ ವೆಬ್ ಸರಣಿ ಬ್ಲಡ್ ಹೌಂಡ್ಸ್ ನಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಕಿಮ್ ಅವರಿಗೆ ಅವಕಾಶಗಳ ಕೊರತೆ ಕಾಡುತ್ತಿತ್ತು. ಆದರೂ ಕೂಡ ಮರಳಿ ಚಿತ್ರರಂಗಕ್ಕೆ ಹೇಗಾದರೂ ಮಾಡಿ ಬರುವ ಆಸೆಯನ್ನು ಹೊಂದಿದ್ದ ಕಿಮ್ ತಮ್ಮದೇ ಆದ ಕೆಫೆ ತೆರೆಯುವ ಆಲೋಚನೆಯನ್ನು ಮಾಡಿದ್ದರು. ಆದರೆ ಈಗ ಕಿಮ್ ಬಾರದ ಲೋಕಕ್ಕೆ ತೆರಳಿದ್ದಾರೆ. ಹೀಗಾಗಿಯೇ ಕಿಮ್ ಸೇ ರಾನ್ ಅವರ ಈ ಸಾವಿಗೆ ಸೋಶಿಯಲ್ ಮೀಡಿಯಾದಲ್ಲಿ ಕಿಮ್ ಬಗ್ಗೆ ಮಾಡಲಾದ ಟ್ರೋಲ್‌ಗಳೇ ಕಾರಣವೆನ್ನುವ ಅಭಿಪ್ರಾಯವನ್ನು ಈಗ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಚರ್ಚೆ ಮಾಡುತ್ತಿದ್ದಾರೆ. ನಿಜಕ್ಕೂ ಕಿಮ್ ಸಾವಿಗೆ ಕಾರಣವೇನು ಎನ್ನುವುದು ಪೊಲೀಸರ ತನಿಖೆಯ ನಂತರವಷ್ಟೇ ಗೊತ್ತಾಗಲಿದೆ.


Click it and Unblock the Notifications











