'ಸ್ಪೈಡರ್‌ಮ್ಯಾನ್' ದಾಖಲೆ: ಭಾರತದಲ್ಲಿ 200 ಕೋಟಿ, ಉ.ಅಮೆರಿಕದಲ್ಲಿ 4000 ಕೋಟಿ, ವಿಶ್ವದಾದ್ಯಂತ?
ಒಂದೊಳ್ಳೆಯ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಹಣ ಗಳಿಸಬಹುದು ಎಂಬುದನ್ನು 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್ ಕಮಿಂಗ್' ತೋರಿಸಿಕೊಡುತ್ತಿದೆ.
Recommended Video
ಭಾರತ ಸೇರಿದಂತೆ ವಿಶ್ವದ ಹಲವೆಡೆ ಗಳಿಕೆಯನ್ನು 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾ ಗಳಿಕೆಯಲ್ಲಿ ದಾಖಲೆ ನಿರ್ಮಿಸಿದೆ.
ಡಿಸೆಂಬರ್ 17ರಂದು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆದ ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನ 'ಸ್ಪೈಡರ್‌ಮ್ಯಾನ್: ನೋ ವೇ ಹೋಮ್' ಸಿನಿಮಾ ಕೇವಲ 17 ದಿನಗಳಲ್ಲಿ ವಿಶ್ವದಾದ್ಯಂತ 10 ಸಾವಿರ ಕೋಟಿಗೂ ಹೆಚ್ಚು ಹಣ ಗಳಿಸಿದೆ!

ಭಾರತ ಒಂದರಲ್ಲಿಯೇ 200 ಕೋಟಿ ರುಪಾಯಿ ಹಣ ಗಳಿಸಿರುವ 'ಸ್ಪೈಡರ್‌ಮ್ಯಾನ್' ಉತ್ತರ ಅಮೆರಿಕ ಭಾಗದಲ್ಲಿ ದಾಖಲೆಯ 4000 ಕೋಟಿ ಹಣ ಗಳಿಸಿದೆ! ಈ ಹಿಂದೆ 'ಇನ್‌ಕ್ರಿಡಿಬಲ್ಸ್ 2' ಅನಿಮೇಷನ್ ಸಿನಿಮಾ ಉತ್ತರ ಅಮೆರಿಕದಲ್ಲಿ 4000 ಕೋಟಿ ಹಣ ಗಳಿಸಿತ್ತು, ಆ ದಾಖಲೆಯನ್ನು ಕೆಲವೇ ದಿನಗಳಲ್ಲಿ ಮುರಿದಿದೆ 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾ.
ವಿಶ್ವದಲ್ಲಿಯೇ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿರುವ 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾ 8 ಅಥವಾ ಏಳನೇ ಸ್ಥಾನಕ್ಕೆ ಏರಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.
2018ರಲ್ಲಿ ಬಿಡುಗಡೆ ಆಗಿದ್ದ 'ಬ್ಲಾಕ್ ಪ್ಯಾಂಥರ್' ಸಿನಿಮಾ 1.35 ಬಿಲಿಯನ್ ಡಾಲರ್ ಹಣ ಗಳಿಸಿ ಇತ್ತೀಚೆಗೆ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎನಿಸಿಕೊಂಡಿತ್ತು. 'ಬ್ಲಾಕ್ ಪ್ಯಾಂಥರ್' ಸಿನಿಮಾವನ್ನು ಹಿಂದಿಕ್ಕಿರುವ 'ಸ್ಪೈಡರ್‌ಮ್ಯಾನ್' 1.37 ಬಿಲಿಯನ್ ಡಾಲರ್ ಹಣವನ್ನು ಕೇವಲ 17 ದಿನದಲ್ಲಿ ಗಳಿಸಿದೆ.
ಭಾರತದಲ್ಲಿ ಈವರೆಗೆ ಅತಿ ಹೆಚ್ಚು ಹಣ ಗಳಿಸಿದ ಹಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆ 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾದ್ದಾಗಿದೆ. 'ಪುಷ್ಪ' ಹಾಗೂ '83' ಸಿನಿಮಾಗಳಿಂದ ಪ್ರಬಲ ಪ್ರತಿಸ್ಪರ್ಧೆ ಎದುರಿಸಿದರೂ ಸಹ 'ಸ್ಪೈಡರ್‌ಮ್ಯಾನ್' ಸಿನಿಮಾ ಭಾರತದಲ್ಲಿ ಈವರೆಗೆ 202.34 ಕೋಟಿ ರುಪಾಯಿ ಹಣ ಗಳಿಸಿದೆ. ಭಾರತದ ಕೆಲವು ರಾಜ್ಯಗಳಲ್ಲಿ 50% ಆಕ್ಯುಪೆನ್ಸಿಗಷ್ಟೆ ಅವಕಾಶ ನೀಡಲಾಗಿತ್ತು ಆದರೂ ಈ ಸಿನಿಮಾ ದೊಡ್ಡ ಮಟ್ಟದ ಹಣ ಗಳಿಸಲು ಸಫಲವಾಗಿದೆ.
ಟಾಮ್ ಹಾಲೆಂಡ್ ನಟನೆಯ ಕೊನೆಯ 'ಸ್ಪೈಡರ್‌ಮ್ಯಾನ್' ಸಿನಿಮಾ ಇದಾಗಿರಲಿದೆ ಎನ್ನಲಾಗುತ್ತಿದೆ. ಅಲ್ಲದೆ ಈ ಸಿನಿಮಾದಲ್ಲಿ 'ಸ್ಪೈಡರ್‌ಮ್ಯಾನ್' ಸಿನಿಮಾ ಸರಣಿಯ ಈ ಹಿಂದಿನ ವಿಲನ್‌ಗಳೆಲ್ಲ ತೆರೆ ಮೇಲೆ ಕಾಣಿಸಿಕೊಂಡು 'ಸ್ಪೈಡರ್‌ಮ್ಯಾನ್' ಸಿನಿಮಾ ಅಭಿಮಾನಿಗಳಿಗೆ ಹಬ್ಬವನ್ನೇ ಉಂಟು ಮಾಡಿದ್ದಾರೆ. ಸಿನಿಮಾದಲ್ಲಿ ಈ ಹಿಂದೆ ಸ್ಪೈಡರ್‌ಮ್ಯಾನ್ ಆಗಿ ನಟಿಸಿದ್ದ ನಟರೂ ಮರಳಿ ಬಂದಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











