ಲೈಂಗಿಕ ಕಿರುಕುಳ ಪ್ರಕರಣದಲ್ಲಿ 80 ವರ್ಷದ ನಟನಿಗೆ ಜೈಲು ಶಿಕ್ಷೆ
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದಕ್ಷಿಣ ಕೊರಿಯಾ ನಟ ಓ ಯಂಗ್ ಸು ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. 4 ವರ್ಷಗಳ ಹಿಂದೆ ನೆಟ್‌ಫ್ಲಿಕ್ಸ್‌ನಲ್ಲಿ ಸೂಪರ್ ಹಿಟ್ ಆಗಿದ್ದ 'ಸ್ಕ್ವಿಡ್ ಗೇಮ್' ವೆಬ್ ಸೀರಿಸ್‌ನಲ್ಲಿ ಓ ಯಂಗ್ ಸು ನಟಿಸಿದ್ದರು. ಆತನ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಆತನಿಗೆ ಶಿಕ್ಷೆ ವಿಧಿಸಿರುವುದು ಭಾರೀ ಸುದ್ದಿಯಾಗಿದೆ.
8 ವರ್ಷಗಳ ಹಿಂದೆ, ಕಿರಿಯ ನಟಿಗೆ ನಟ ಓ ಯಂಗ್ ಸು ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಳು. ಇತ್ತೀಚೆಗೆ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ನ್ಯಾಯಾಲಯ ನಟನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದೇ ಪ್ರಕರಣದಲ್ಲಿ ನಟನಿಗೆ ಈ ಹಿಂದೆ 8 ತಿಂಗಳು ಶಿಕ್ಷೆಯಾಗಿತ್ತು.

'ಸ್ಕ್ವಿಡ್ ಗೇಮ್' ವೆಬ್ ಸೀರಿಸ್ 90 ದೇಶಗಳಲ್ಲಿ ನಂಬರ್ 1 ಸ್ಥಾನ ಪಡೆದಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಬಹಳ ಕಡಿಮೆ ಸಮಯದಲ್ಲಿ ಹೆಚ್ಚು ಜನ ವೀಕ್ಷಿಸಿದ ವೆಬ್ ಸೀರಿಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ವೆಬ್ ಸೀರಿಸ್‌ನಲ್ಲಿ ಓಹ್ ಇಲ್ ನಾಮ್ ಎಂಬ ಪಾತ್ರದಲ್ಲಿ 80 ವರ್ಷ ವಯಸ್ಸಿನ ನಟ ಓ ಯೊಂಗ್ ಸು ನಟಿಸಿದ್ದರು.
ಪ್ರಕರಣದ ಸಂಬಂಧ ನಿನ್ನೆ (ಏಪ್ರಿಲ್ 3), ಪ್ರಾಸಿಕ್ಯೂಷನ್ ತಮ್ಮ ಅಂತಿಮ ವಾದ ಮಂಡಿಸಿತು. ರಂಗಭೂಮಿಯಲ್ಲಿ ಸುಮಾರು ಐದು ದಶಕಗಳ ಕಾಲ ಸೇವೆ ಸಲ್ಲಿಸಿದ ಅನುಭವಿ ನಟ ಓ ಯೊಂಗ್ ಸು ಎಂದು ಬಣ್ಣಿಸಿದೆ. ಆದರೆ ಆತ ಮಾಡಿದ್ದು ಸರಿಯಲ್ಲ. ರಂಗಭೂಮಿ ತಂಡದ ಕಿರಿಯ ಸದಸ್ಯೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ.
ಚಿತ್ರರಂಗದಿಂದಲೂ ಓ ಯೊಂಗ್ ಸುಗೆ 2 ವರ್ಷ ನಿಷೇಧ ಹೇರಲಾಗಿದೆ. ಇನ್ನು ಪ್ರಕರಣ ಸಂಬಂಧ ನಟ ಕ್ಷಮೆ ಕೂಡ ಕೇಳಿದ್ದರು. ಆದರೆ ಅದಕ್ಕೆ ಈಗ ಆತನ ಪರ ವಕೀಲರು ಸ್ಪಷ್ಟನೆ ನೀಡಿದ್ದಾರೆ. ಆಗ 'ಸ್ಕ್ವಿಡ್ ಗೇಮ್' ಸೀರಿಸ್‌ನಿಂದ ಓಹ್ ಪ್ರಪಂಚದಾದ್ಯಂತ ಹೆಸರು ಮಾಡಿದ್ದರು. ಹಾಗಾಗಿ ಔಪಚಾರಿಕವಾಗಿ ಕ್ಷಮೆ ಕೇಳಿದ್ದರು ಅಷ್ಟೇ ಎಂದು ವಕೀಲರು ತಿಳಿಸಿದ್ದಾರೆ.
2017 ರಲ್ಲಿ, ಸಂತ್ರಸ್ತ ಯುವತಿ ನಡೆದುಕೊಂಡು ಹೋಗುತ್ತಿದ್ದಾಗ ಬಲವಂತವಾಗಿ ತಬ್ಬಿಕೊಂಡು ಆಕೆಯನ್ನು ಓ ಯೊಂಗ್ ಸು ಚುಂಬಿಸಿದ್ದಾನೆ ಎಂದು ಹೇಳಲಾಗಿತ್ತು. ಈ ಆತ ಮಾತನಾಡಿ "ಈ ವಯಸ್ಸಿನಲ್ಲಿ ನ್ಯಾಯಾಲಯದಲ್ಲಿ ನಿಲ್ಲಲು ನನಗೆ ನಾಚಿಕೆಯಾಗುತ್ತಿದೆ. ನನ್ನ ಮಾತುಗಳು ಅಥವಾ ಕ್ರಿಯೆಗಳು ತಪ್ಪಾಗಿದ್ದರೆ, ಅದರ ಪರಿಣಾಮಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೂ ನಾನು ಕಿರುಕುಳ ಎಂದು ಪರಿಗಣಿಸಬಹುದಾದ ಯಾವುದೇ ಕೃತ್ಯವನ್ನು ಮಾಡಿದ್ದೇನೆ ಎಂದು ನಂಬುತ್ತೇನೆ" ಎಂದಿದ್ದಾರೆ.
"ನನ್ನ ಅಜಾಗರೂಕ ಮಾತುಗಳು ಹಾಗೂ ಕ್ರಿಯೆಗಳು ನೋವುಂಟುಮಾಡಿದ್ದರೆ, ನಾನು ವಿಷಾದಿಸುತ್ತೇನೆ. ನನ್ನ 80 ವರ್ಷಗಳ ಜೀವನವು ಕ್ಷಣಮಾತ್ರದಲ್ಲಿ ಕುಸಿದುಬಿದ್ದಿದೆ. ನಾನು ಈಗ ಖಾಲಿತನವನ್ನು ಅನುಭವಿಸುತ್ತಿದ್ದೇನೆ. ನಾನು ನನ್ನ ಸ್ಥಾನಕ್ಕೆ ಮರಳಲು ಬಯಸುತ್ತೇನೆ" ಎಂದು ಶಿಕ್ಷೆಗೆ ಗುರಿಯಾಗಿರುವ ನಟ ಓ ಯೊಂಗ್ ಸು ಹೇಳಿದ್ದಾರೆ.


Click it and Unblock the Notifications











