ಕೌಬಾಯ್ಸ್ & ಇಂಡಿಯನ್ಸ್: ಹಾಲಿವುಡ್ ಗೆ ಶ್ರೀದೇವಿ
'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಮೂಲಕ ಬೆಳ್ಳಿಪರದೆಗೆ ರೀ ಎಂಟ್ರಿ ಕೊಟ್ಟ ಶ್ರೀದೇವಿ ತಮ್ಮ ನಟನೆ, ಅಂದಚೆಂದಗಳಲ್ಲಿ ಪ್ರೇಕ್ಷಕರನ್ನು ಸೆಳೆದು ಮತ್ತೊಮ್ಮೆ ತಮ್ಮನ್ನು ತಾವು ನಿರೂಪಿಸಿಕೊಂಡರು. ಸೆಕೆಂಡ್ ಇನ್ನಿಂಗ್ಸ್ ನಲ್ಲೂ ತಮ್ಮದೇ ಆದಂತಹ ಮುದ್ರೆಯನ್ನು ಅಭಿಮಾನಿಗಳ ಹೃದಯದಲ್ಲಿ ಒತ್ತಿದರು.
ಈಗ ಶ್ರೀದೇವಿ ಸದ್ದಿಲ್ಲದಂತೆ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಾಲಿವುಡ್ ಖ್ಯಾತ ತಾರೆ ಮೆರಿಲ್ ಸ್ಟ್ರೀಪ್ ಜೊತೆಗಿನ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಕೌಬಾಯ್ಸ್ & ಇಂಡಿಯನ್ಸ್' ಎಂಬುದು ಚಿತ್ರದ ಹೆಸರು. ಹಾಲಿವುಡ್ ನಿರ್ಮಾಪಕರಾದ ಜೆರೆಮಿ ವಾಲ್, ಜೆರ್ರಿ ಲೈಡರ್ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ತೆರೆಯ ಮೇಲೆ ಇಬ್ಬರು ಬ್ಯೂಟಿಗಳನ್ನು ನೋಡಲು ಎರಡು ಕಣ್ಣು ಸಾಲದು ಎಂಬ ಮಾತುಗಳು ಈಗಾಗಲೆ ಕೇಳಿಬರುತ್ತಿವೆ. ಇನ್ನು ಮೆರಿಲ್ ಸ್ಟ್ರಿಪ್ ವಿಚಾರಕ್ಕೆ ಬಂದರೆ ಅವರು ಆಸ್ಕರ್ ಪ್ರಶಸ್ತಿ ಪುರಸ್ಕೃತ ತಾರೆ. ಎಂಟು ಸಲ ಗೋಲ್ಡನ್ ಗ್ಲೋಬ್ ಅವಾರ್ಡ್ ಸಹ ಪಡೆದಿದ್ದಾರೆ.ಇನ್ನು ಶ್ರೀದೇವಿ ಸಹ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಐದು ಬಾರಿ ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಈಗ ಇಬ್ಬರು ಪ್ರತಿಭಾನ್ವಿತ ತಾರೆಗಳು ಕಲಿತು ಅಭಿನಯಿಸುತ್ತಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಕೌಬಾಯ್ಸ್ & ಇಂಡಿಯನ್ಸ್ ಚಿತ್ರಕ್ಕೆ ಹಾಲಿವುಡ್ ನಿರ್ದೇಶಕಿ ಅಮಿ ರೆಡ್ ಫೋರ್ಡ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಮಿ ಬೇರಾರು ಅಲ್ಲ ಹಾಲಿವುಡ್ ಲೆಜೆಂಡ್ ರಾಬರ್ಟ್ ರೆಡ್ ಫೋರ್ಡ್ ಮಗಳು. ಚಿತ್ರಕ್ಕೆ ಸಂಬಂಧಿಸಿದ ಮತ್ತಷ್ಟು ವಿವರಗಳು ಶೀಘ್ರದಲ್ಲೇ ತಿಳಿಯಲಿವೆ.


Click it and Unblock the Notifications












