63 ವರ್ಷದ ಸೂಪರ್ ಸ್ಟಾರ್‌ಗೆ ಕೈ ಕೊಟ್ಟಳು 37 ವರ್ಷದ ಖ್ಯಾತ ನಟಿ, 4ನೇ ಮದುವೆ ಕನಸು ಭಗ್ನ
ಲವ್ ಮಾಡೋಕೆ ನಾನಾ ವಿಧ. ಯಾರು ಯಾರು ಯಾವ ಯಾವ ಉದ್ದೇಶಕ್ಕೆ ಲವ್ ಮಾಡ್ತಾರೋ ಅದು ಅವರ ಅವರಿಗಷ್ಟೇ ಗೊತ್ತಿರುತ್ತೆ. ಆದರೆ ..ಹಿಂದೆ ರೀಲ್‌ನಲ್ಲಿ ಚಿಗುರೊಡೆಯುವ ಪ್ರೀತಿ ಬಹುತೇಕ ರಿಯಲ್ ಆಗಿರುತ್ತಿತ್ತು. ಇದಕ್ಕೆ.. ಉದಾಹರಣೆ ಎಂಬಂತೆ ಹೃದಯದಿಂದ ಮದುವೆಯಾಗಿ ಇವತ್ತು ಕೂಡ ಸುಖ ಸಂಸಾರ ನಡೆಸುತ್ತಿರುವ ಅನೇಕರು ಈ ಬಣ್ಣದ ಪ್ರಪಂಚದಲ್ಲಿದ್ದಾರೆ. ಆದರೆ .. ಈಗ ಕಾಲ ಬದಲಾಗಿದೆ.
ಬದಲಾದ ಈ ಕಾಲದಲ್ಲಿ ಲವ್‌ಗೆ ಅರ್ಥವೇ ಇಲ್ಲದಂತಾಗಿದೆ. ಇಂದು ಜೊತೆಯಾಗಿ ಓಡಾಡುವರು ಮಾರನೇ ದಿನ ಗುರುತು ಪರಿಚಯ ಇಲ್ಲದವರಂತೆ ವರ್ತಿಸುತ್ತಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ಇರುವ ಬಹುತೇಕರಿಗೆ ಇತ್ತೀಚೆಗೆ ಪ್ರೀತಿ ಆಟಿಕೆ ವಸ್ತು ಅಷ್ಟೇ. ಇಲ್ಲಿ ಪ್ರೀತಿಯಲ್ಲಿ ಬೀಳುವುದು ಆ ನಂತರ ಸಂಬಂಧ ಮುರಿದುಕೊಂಡು ಹೊರ ಬರುವುದು ಬಟ್ಟೆ ಬದಲಿಸಿದಷ್ಟೇ ಸುಲಭ.ಉದಾಹರಣೆಗೆ ಟಾಮ್ ಕ್ರೋಸ್ ಅವರನ್ನೇ ತೆಗೆದುಕೊಳ್ಳಿ.

ಹೌದು, ಟಾಮ್ ಕ್ರೂಸ್.. ಭಯ ಅಂದರೇನು ಎಂದು ಅರಿಯದ ವ್ಯಕ್ತಿ. ಹಿಂದೆ ಮುಂದೆ ಆಲೋಚನೆ ಮಾಡದೇ ಎಲ್ಲಿಂದ ಬೇಕಾದರೂ ಎಗರಬಲ್ಲ ಟಾಮ್ ಕ್ರೂಸ್, ಜಾಕಿ ಚಾನ್ ಹೊರತುಪಡಿಸಿದರೆ ಅತ್ಯಂತ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವ ಸ್ಟಾರ್ ಕೂಡ ಹೌದು. ಇಂಥಾ ಟಾಮ್ ಕ್ರೂಸ್ ಗೆ ಈಗ 63 ವರ್ಷ.
ಆದರೆ ಪ್ರೀತಿ ಇದ್ದಲ್ಲಿ ವಯಸ್ಸಿನ ಹಂಗೆಲ್ಲಿ..? ಇದಕ್ಕೆ ಕೈಗನ್ನಡಿ ಎಂಬಂತೆ ಕೆಲ ದಿನಗಳ ಹಿಂದೆಯಷ್ಟೇ ಟಾಮ್ ಕ್ರೂಸ್ ಅವರ ಹೆಸರು ಇವರಿಗಿಂತ 26 ವರ್ಷ ಚಿಕ್ಕವಳಾದ ಹಾಲಿವುಡ್ ಚೆಲುವೆ ''ಅನಾ ಡಿ ಅರ್ಮಾಸ್'' ಅವರ ಜೊತೆ ಥಳುಕು ಹಾಕಿಕೊಂಡಿತ್ತು. 63ರ ಹರೆಯದ ಟಾಮ್ ಕ್ರೂಸ್ 37 ವರ್ಷದ ಅನಾ ಡಿ ಅರ್ಮಾಸ್ ಅವರ ಜೊತೆ ನಾಲ್ಕನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಾಲಿವುಡ್‌ನೆಲ್ಲೆಡೆ ಸದ್ದು ಮಾಡಿತ್ತು.
ಇಷ್ಟೇ ಅಲ್ಲ ''ರಾಡಾರ್'' ಆನ್‌ಲೈನ್ ಪತ್ರಿಕೆ ಟಾಮ್ ಕ್ರೂಸ್ ಮತ್ತು ಅನಾ ಅವರ ಮದುವೆ ಆಕಾಶದಲ್ಲಿ ನಡೆಯಲಿದೆ. ಟಾಮ್ ಮತ್ತು ಅನಾ ಸ್ಕೈಡೈವಿಂಗ್ ಮಾಡುವ ಮೂಲಕ ಹೊಸ ಬದುಕಿಗೆ ಮುನ್ನುಡಿ ಬರೆಯಲಿದ್ದಾರೆ ಎಂದು ಕೂಡ ವರದಿಯನ್ನು ಮಾಡಿತ್ತು. ಇನ್ನೇನು ಇವರು ಇಬ್ಬರು ಮದುವೆಯಾಗಬೇಕು ಅಷ್ಟರಲ್ಲಿ ಈಗ ಇವರ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಸದ್ಯ ಹೊರ ಬಿದ್ದಿದೆ.

ಟಾಮ್ ಕ್ರೂಸ್ ಮತ್ತು ಅನಾ ಡಿ ಅರ್ಮಾಸ್ ಅವರ ಲವ್ & ಬ್ರೇಕಪ್ ಕುರಿತು ''ಡೇಲಿಮೇಲ್'' ವರದಿಯನ್ನು ಮಾಡಿದ್ದು ಟಾಮ್ ಕ್ರೂಸ್ ಮತ್ತು ಅನಾ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಯಾವತ್ತೂ ಒಪ್ಪಿಕೊಳ್ಳದಿದ್ದರೂ ಕೂಡ ಇಬ್ಬರು ಈಗ ದೂರವಾಗಿರುವುದು ನಿಜಾ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇನ್ನು 'ಯುಕೆ'ಯ ಪ್ರಖ್ಯಾತ ಟ್ಯಾಬ್ಲಾಯ್ಡ್ ''ದಿ ಸನ್'' ಕೂಡ ಟಾಮ್ ಕ್ರೂಸ್ ಮತ್ತು ಅನಾ ಡಿ ಅರ್ಮಾಸ್ ಅವರ ಪ್ರೇಮ ವಿರಹದ ಕುರಿತು ವರದಿಯನ್ನು ಮಾಡಿದ್ದು ಟಾಮ್ ಕ್ರೂಸ್ ಮತ್ತು ಅನಾ ನಡುವೆ ಇದ್ದ ಪ್ರೀತಿ ಸದ್ಯ ಕಣ್ಮರೆಯಾಗಿದೆ. ಈ ಹಿನ್ನೆಲೆ ಸ್ನೇಹಿತರಾಗಿರಲು ಇಬ್ಬರು ನಿರ್ಧಾರ ಮಾಡಿದ್ದಾರೆ ಎಂದು ತನ್ನ ಲೇಖನದಲ್ಲಿ ಉಲ್ಲೇಖಿಸಿದೆ.
ಹಾಗಂಥ ಇಬ್ಬರ ನಡುವೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ ಅಂತೇನೂ ಇಲ್ಲ. ಯಾಕೆಂದರೆ ಇಬ್ಬರು ''ಡೀಪರ್'' ಎಂಬ ಚಿತ್ರದಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದು ಸ್ನೇಹಿತರಾಗಿ ಇಬ್ಬರು ಈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದಾರೆ ಎಂದು ಕೂಡ ತನ್ನ ವರದಿಯಲ್ಲಿ ಉಲ್ಲೇಖ ಮಾಡಿರುವ ''ದಿ ಸನ್'' ಗೌರವಯುವಾಗಿ ಇಬ್ಬರು ದೂರವಾಗಿದ್ದಾರೆ. ಈ ಮೂಲಕ 09 ತಿಂಗಳ ಸಂಬಂಧ ಮುರಿದು ಬಿದ್ದಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ''ಸ್ಕೈ ನ್ಯೂಸ್'' ಕೂಡ ಇವರಿಬ್ಬರ ಸಂಬಂಧದ ಕುರಿತು ಚರ್ಚೆಯನ್ನು ಮಾಡಿದೆ.
ಅಂದ್ಹಾಗೇ ಟಾಮ್ ಕ್ರೂಸ್ ಅವರಿಗೆ ಅನಾ ಡಿ ಅರ್ಮಾಸ್ ಪರಿಚಯವಾಗಿದ್ದು ಈ ವರ್ಷದ ಆರಂಭದಲ್ಲಿ. ಜಸ್ಟ್ ಮಾತ್ ಮಾತಲ್ಲಿ ಶುರುವಾದ ಸ್ನೇಹ ಆ ನಂತರ ಪ್ರೀತಿಯ ಸ್ವರೂಪ ಪಡೆದಿದೆ. ಈ ವರ್ಷದ ಮೇನಲ್ಲಿ ''ಗುಡ್ ಮಾರ್ನಿಂಗ್ ಅಮೆರಿಕಾ'' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನಾ, ಟಾಮ್ ಕ್ರೂಸ್ ಬಗ್ಗೆ ಮಾತನಾಡಿದ್ದರು. ಆಗಲೇ ಹಲವರಿಗೆ ಅನಾ ಬಾಯಲ್ಲಿ ಟಾಮ್ ಕ್ರೂಸ್ ಹೆಸರು ಕೇಳಿ ಅನುಮಾನ ಬಂದಿತ್ತು. ಇನ್ನೂ ಅನುಮಾನ ಇವರು ಇಬ್ಬರು ಒಟ್ಟಿಗೆ ವೆರ್ಮೋಂಟ್ ಪ್ರವಾಸಕ್ಕೆ ಹೋದಾಗ ಹೆಚ್ಚಾಗಿತ್ತು.
ಇನ್ನುಳಿದಂತೆ 1987ರಲ್ಲಿ ''ಮಿಮಿ ರೋಜರ್ಸ್'' ಅವರ ಜೊತೆ ಮದುವೆಯಾಗಿದ್ದರು. ಆದರೆ ಈ ಸಂಬಂಧ ಕೇವಲ ಮೂರು ವರ್ಷಕ್ಕೆ ಮುರಿದು ಬಿತ್ತು. ಆ ನಂತರ ''ಮಿಮಿ ರೋಜರ್ಸ್'' ಅವರಿಗೆ ನೀಡಿದ ವರ್ಷದಲ್ಲಿಯೇ ಅಂದರೆ 1990ರಲ್ಲಿ ತಮ್ಮ ''ಡೇಸ್ ಆಫ್ ಥಂಡರ್'' ಚಿತ್ರದ ನಾಯಕಿ ''ನಿಕೋಲ್ ಕಿಡ್ಮನ್'' ಅವರ ಜೊತೆ ಟಾಮ್ ಕ್ರೂಸ್ ಮದುವೆಯಾದರು.ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು. ಹನ್ನೊಂದು ವರ್ಷ ಸಂಸಾರ ನಡೆಸಿದ್ದರು. ನಿಕೋಲ್ ಅವರಿಂದ ದೂರವಾದ ನಂತರ ಟಾಮ್ ಕ್ರೂಸ್ 2006ರಲ್ಲಿ '' ಕೇಟಿ ಹೋಮ್ಸ್'' ಅವರನ್ನು ಮದುವೆಯಾದರು. ಇಟಲಿಯಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆ ಆರು ವರ್ಷಕ್ಕೆ ಮುರಿದು ಬಿತ್ತು. ಇವರ ಈ ಪ್ರೀತಿಯ ಸಂಕೇತವಾಗಿ ಇಬ್ಬರಿಗೆ ಸೂರಿ ಎಂಬ ಮಗಳಿದ್ದಾಳೆ.


Click it and Unblock the Notifications