Top Gun: ಯುದ್ಧ ವಿಮಾನ ಏರಿ ಬಂದ ಟಾಮ್ ಕ್ರೂಸ್: ಮತ್ತೊಂದು ಹಿಟ್‌ಗೆ ರೆಡಿ
ಟಾಮ್ ಕ್ರೂಸ್, ವಿಶ್ವದ ಟಾಪ್ ಹೀರೋಗಳಲ್ಲಿ ಅಗ್ರಗಣ್ಯರು. ಟಾಮ್ ನಟಿಸಿರುವ 'ಮಿಷನ್ ಇಂಪಾಸಿಬಲ್' ಸರಣಿಯ ಹೊಸ ಸಿನಿಮಾ ಇನ್ನೇನು ತೆರೆಗೆ ಬರಲಿದೆ ಎಂದುಕೊಳ್ಳುತ್ತಿರುವಾಗಲೆ ಅವರ ನಟನೆಯ ಮತ್ತೊಂದು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.
ಹಲವು ಸೂಪರ್ ಹಿಟ್ ಸಿನಿಮಾ ಸರಣಿಗಳ ಭಾಗವಾಗಿದ್ದಾರೆ ಟಾಮ್ ಕ್ರೂಸ್. ಅವುಗಳಲ್ಲಿ ಒಂದು 'ಟಾಪ್ ಗನ್'. ಯುದ್ಧ ವಿಮಾನಗಳು, ಆಕಾಶದಲ್ಲಿ ನಡೆವ ಮೈನವಿರೇಳಿಸುವ ಆಕ್ಷನ್ ದೃಶ್ಯಗಳಿಂದ ತುಂಬಿದ 'ಟಾಪ್ ಗನ್' ಸಿನಿಮಾ ಸರಣಿ ವಿಶ್ವದೆಲ್ಲೆಡೆ ಜನಪ್ರಿಯ.
ಇದೀಗ ಹೊಸ 'ಟಾಪ್ ಗನ್: ಮೇವರಿಕ್' ಸಿನಿಮಾ ಬರುತ್ತಿದ್ದು, ಟಾಮ್ ಕ್ರೂಸ್ ಮತ್ತೊಮ್ಮೆ ಮಿಂಚಿನ ವೇಗದಲ್ಲಿ ಸಾಗುವ ಯುದ್ಧ ವಿಮಾನವನ್ನು ಏರಿ ಬರುತ್ತಿದ್ದಾರೆ. ಈ ಹಿಂದೆ 1986 ರಲ್ಲಿ 'ಟಾಪ್ ಗನ್' ಸಿನಿಮಾ ಬಿಡುಗಡೆ ಆಗಿತ್ತು. ಯುದ್ಧ ವಿಮಾನಗಳು, ನೌಕಾದಳ, ಆಕಾಶದಲ್ಲಿ ಯುದ್ಧ ವಿಮಾನಗಳ ಮೂಲಕ ಸ್ಟಂಟ್‌ಗಳು ಇವುಗಳ ಬಗ್ಗೆ ಕತೆಯನ್ನು ಒಳಗೊಂಡಿದ್ದ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು.

ಆದರೆ ಈಗ 36 ವರ್ಷಗಳ ಬಳಿಕ 'ಟಾಪ್ ಗನ್' ಸಿನಿಮಾವನ್ನು ಮತ್ತೆ ನಿರ್ಮಿಸಲಾಗಿದೆ. ಮುವತ್ತಾರು ವರ್ಷಗಳ ಹಿಂದಿನ ಕತೆಯ ಮುಂದುವರೆದ ಭಾಗವೇ ಈಗ ಬರುತ್ತಿರುವ 'ಟಾಪ್ ಗನ್: ಮೇವರಿಕ್' ಎನ್ನಲಾಗುತ್ತಿದೆ.
ಹೊಸ 'ಟಾಪ್ ಗನ್: ಮೇವರಿಕ್' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, 36 ವರ್ಷದ ಹಿಂದಿನಂತೆಯೇ ಈಗಲೂ 'ಯಂಗ್' ಆಗಿ ಕಾಣುತ್ತಾರೆ ನಟ ಟಾಮ್ ಕ್ರೂಸ್. ಆದರೆ ಕಳೆದ ಬಾರಿಗಿಂತಲೂ ಹೆಚ್ಚಿನ ಆಕ್ಷನ್ ದೃಶ್ಯಗಳು ಹೊಸ ಸಿನಿಮಾದಲ್ಲಿದ್ದಂತಿವೆ. ಟಾಮ್ ಕ್ರೂಸ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಯುದ್ಧ ವಿಮಾನ ಹಾರಿಸುವ ರೀತಿಯ ಬಗ್ಗೆ ಹೇಳಿಕೊಡುತ್ತಿದ್ದಾರೆ. ಜೊತೆಗೆ ಯುದ್ಧದಲ್ಲಿ ಸಿಲುಕಿ ಹೋರಾಡುವ ದೃಶ್ಯಗಳೂ ಸಹ ಟ್ರೇಲರ್‌ನಲ್ಲಿವೆ.
ಹೊಸ ಟಾಪ್ ಗನ್ ಸಿನಿಮಾವನ್ನು ಜೋಸೆಫ್ ಕೊಸಿಂಕಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ, 'ಟ್ರಾನ್', 'ಓನ್ಲಿ ದಿ ಬ್ರೇವ್', 'ಒಬ್ಲಿವೊನ್' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 'ಟಾಪ್ ಗನ್: ಮೇವರಿಕ್' ಸಿನಿಮಾವು ಮೇ 27 ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.
ಟಾಮ್ ಕ್ರೂಸ್ ನಟನೆಯ 'ಮಿಷನ್ ಇಂಪಾಸಿಬಲ್' ಸಿನಿಮಾ ಸಹ ಚಿತ್ರೀಕರಣ ಮುಗಿಸಿದೆ. ಕೊರೊನಾ ಕಾರಣದಿಂದ ಸಿನಿಮಾ ಚಿತ್ರೀಕರಣಕ್ಕೆ ಸಾಕಷ್ಟು ಅಡೆ-ತಡೆ ಉಂಟಾಗಿತ್ತು. ಈ ಸಿನಿಮಾವನ್ನು ಅಂತರಿಕ್ಷದಲ್ಲಿ ಚಿತ್ರೀಕರಿಸುವ ಉದ್ದೇಶ ಸಿನಿಮಾ ತಂಡಕ್ಕೆ ಇತ್ತು. ಆದರೆ ಅದು ಸಾಧ್ಯವಾಗಿಲ್ಲ. ವಿಶೇಷವೆಂದರೆ 'ಮಿಷನ್ ಇಂಪಾಸಿಬಲ್ 7' ಹಾಗೂ 'ಮಿಷನ್ ಇಂಪಾಸಿಬಲ್ 8' ಸಿನಿಮಾಗಳನ್ನು ಒಟ್ಟಿಗೆ ಚಿತ್ರೀಕರಣ ಮಾಡಲಾಗುತ್ತಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಈವರೆಗೆ ಘೋಷಿಸಲಾಗಿಲ್ಲ.


Click it and Unblock the Notifications











