ಜನ ಕನ್‌ಫ್ಯೂಸ್ ಮಾಡ್ಕೊಂಡಿದ್ದೇ ಒಳ್ಳೆದಾಯ್ತು; 'ಟಾಕ್ಸಿಕ್' ಬೆಡಗಿ ನಟಾಲಿಯಾ ಬರ್ನ್ ಫುಲ್ ಖುಷ್
ವಾರದ ಹಿಂದೆ ಬಿಡುಗಡೆ ಆಗಿದ್ದ 'ಟಾಕ್ಸಿಕ್' ಟೀಸರ್ ಸೂಪರ್ ಹಿಟ್ ಆಗಿದೆ. ರಾಯ ಅವತಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ದರ್ಬಾರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್‌ನಲ್ಲಿರುವ ಹಸಿಬಿಸಿ ದೃಶ್ಯ ವಿವಾದಕ್ಕೆ ಕಾರಣವಾಗಿದೆ. ಅದನ್ನು ತೆಗೆದು ಹಾಕುವಂತೆ ದೂರುಗಳು ದಾಖಲಾಗಿದೆ.
ಯಶ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಟಾಕ್ಸಿಕ್' ಟೀಸರ್ ಹೊರಬಂದಿತ್ತು. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದ್ದು ಟೀಸರ್ ಪ್ರತಿ ಫ್ರೇಮ್ ಹುಬ್ಬೇರಿಸುವಂತಿದೆ. ಎದುರಾಳಿಗಳ ವಿರುದ್ಧ ರಾಯ ಸುನಾಮಿ ರೀತಿ ಅಪ್ಪಳಿಸುವ ಸನ್ನಿವೇಶ ಟೀಸರ್‌ನಲ್ಲಿದೆ. ಆದರೆ ನಡುವೆ ಕಾರ್ ಒಳಗೆ ಒಂದು ಅಶ್ಲೀಲ ದೃಶ್ಯವೂ ಇದೆ. ನಟಿ, ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ಆ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಸರ್ ರಿಲೀಸ್ ಬೆನ್ನಲ್ಲೇ ಆ ಚೆಲುವೆ ಯಾರು ಎಂದು ನೆಟ್ಟಿಗರು ಹುಡುಕಾಟ ನಡೆಸಿದ್ದರು. ಆದರೆ ಆರಂಭದಲ್ಲಿ ಬಹುತೇಕರು ಆಕೆ ನಟಾಲಿಯಾ ಬರ್ನ್ ಎಂದು ಕನ್‌ಫ್ಯೂಸ್ ಆಗಿದ್ದರು. ಕೊನೆಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಸ್ಪಷ್ಟನೆ ಕೊಟ್ಟರು. ಟಾಕ್ಸಿಕ್ ಟೀಸರ್‌ನಲ್ಲಿ ಮಿಂಚಿರುವುದು ಬೀಟ್ರಿಜ್ ಟೌಫೆನ್‌ಬಾಚ್ ಎಂದು ಮಾಹಿತಿ ನೀಡಿದ್ದರು. ಬಳಿಕ ಈಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹುಡುಕಲು ಆರಂಭಿಸಿದ್ದಾರೆ. ಬ್ರೆಜಿಲಿಯನ್ ನಟಿ ಹಾಗೂ ಮಾಡೆಲ್ ಬೀಟ್ರಿಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರೈವೇಟ್ ಮಾಡಿ ಇಟ್ಟಿದ್ದಾರೆ.
'ಟಾಕ್ಸಿಕ್' ಟೀಸರ್ ವಿವಾದ ಹೆಚ್ಚಾಗುತ್ತಿದ್ದಂತೆ ಬೀಟ್ರಿಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡಿದ್ದಾರೆ ಎಂದು ಗುಲ್ಲಾಗಿತ್ತು. ಕೆಲ ಸಮಯ ಆಕೆಯ ಇನ್‌ಸ್ಟಾ ಖಾತೆ ಮಾಯವಾಗಿತ್ತು. ಆದರೆ ಈಗ ಮತ್ತೆ ಆಕ್ಟೀವ್ ಆಗಿದ್ದು ಪ್ರೈವೇಟ್ ಆಗಿಯೇ ಇದೆ. ಮತ್ತೊಂದು ಕಡೆ 'ಟಾಕ್ಸಿಕ್' ಟೀಸರ್ ರಿಲೀಸ ಬಳಿಕ ನಟಾಲಿಯಾ ಬರ್ನ್ ಇನ್‌ಸ್ಟಾಗ್ರಾಮ್ ಖಾತೆಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಬಗ್ಗೆ ಸ್ವತಃ ಉಕ್ರೇನ್ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಕಳೆದೊಂದು ತಿಂಗಳಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ವೀಕ್ಷಿಸುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ನಟಾಲಿಯಾ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಅದಕ್ಕೆ ಕಾರಣ ರಾಯನ ಜೊತೆ ಕಾರಿನಲ್ಲಿದ್ದ ಬ್ಯೂಟಿ ಎನ್ನುವುದು ಗೊತ್ತೇಯಿದೆ. ನಟಾಲಿಯಾ ಕೂಡ 'ಟಾಕ್ಸಿಕ್' ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಆ ಕಾರಿನ ಸನ್ನಿವೇಶದಲ್ಲಿ ಕಾಣಿಸಿಕೊಂಡಿರುವುದು ಮಾತ್ರ ಬ್ರೆಜಿಲಿಯನ್ ನಟಿ ಬೀಟ್ರಿಜ್ ಟೌಫೆನ್‌ಬಾಚ್. ಜನ ಕನ್‌ಫ್ಯೂಸ್ ಆಗಿದ್ದೇ ನಟಾಲಿಯಾಗೆ ಪ್ಲಸ್ ಆದಂತಾಗಿದೆ. ಕಳೆದೊಂದು ವಾರದಲ್ಲಿ ನಟಾಲಿಯಾ ಇನ್‌ಸ್ಟಾ ಪೋಸ್ಟ್, ಸ್ಟೋರಿಯನ್ನು ಲಕ್ಷ ಲಕ್ಷ ಜನ ನೋಡಿದ್ದಾರೆ. ಆಕೆಯನ್ನು ಫಾಲೋ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ನಟ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್ ದಾಸ್ ಇನ್‌ಸ್ಟಾಗ್ರಾಮ್ ಖಾತೆಯನ್ನು ನಟಾಲಿಯಾ ಫಾಲೋ ಮಾಡ್ತಿದ್ದಾರೆ. ಬೀಟ್ರಿಜ್ ಟೌಫೆನ್‌ಬಾಚ್, ನಟಾಲಿಯಾ ಹಾಗೂ ಕೈಲ್ ಪಾಲ್ ಸೇರಿ ಕೆಲ ವಿದೇಶಿ ಕಲಾವಿದರು 'ಟಾಕ್ಸಿಕ್' ಚಿತ್ರದಲ್ಲಿ ಮಿಂಚಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಣವಾಗ್ತಿದೆ.
ಗೋವಾದಲ್ಲಿ 80-90ರ ದಶಕದ ಡ್ರಗ್ಸ್ ಮಾಫಿಯಾ ಸುತ್ತಾ 'ಟಾಕ್ಸಿಕ್' ಚಿತ್ರದ ಕಥೆ ಸಾಗಲಿದೆ. ಆದರೆ ಇಡೀ ಟೀಸರ್ ಅನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಿತ್ರೀಕರಿಸಲಾಗಿತ್ತು. ವಾದ ವಿವಾದ ಏನೇ ಇದ್ದರೂ 'ಟಾಕ್ಸಿಕ್' ಝಲಕ್ ಹಿಟ್ ಆಗಿದೆ. ಮಾರ್ಚ್ 19ರಂದು ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ದೇಶ ವಿದೇಶದ ಭಾಷೆಗಳಿಗೆ ಡಬ್ ಆಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ಕಿಯಾರಾ ಅದ್ವಾನಿ ಚಿತ್ರದ ತಾರಾಗಣದಲ್ಲಿದ್ದಾರೆ.


Click it and Unblock the Notifications











