ಗಾಝಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಮುಗ್ಧ ಮಕ್ಕಳ ಸಾವಿಗೆ ನಟಿ ಏಂಜಲೀನಾ ಜೋಲಿ ಆಕ್ರೋಶ
ಇಸ್ರೇಲ್- ಗಾಜಾ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ಈ ಯುದ್ಧದಲ್ಲಿ ಸಾವು ನೋವು ಅನುಭವಿಸುತ್ತಿರುವುದು ಮಾತ್ರ ಅಮಾಯಕ ಮಕ್ಕಳು ಮತ್ತು ಮಹಿಳೆಯರು. ಈಗಾಗಲೇ ಪ್ಯಾಲೆಸ್ಟೈನ್ ನಿವಾಸಿಗಳು ಇದ್ದ ಗಾಜಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದ್ದು, ನೂರಾರು ಮಂದಿ ಪ್ರಾಣ ಬಿಟ್ಟಿದ್ದಾರೆ.
ಹಲವು ಮಂದಿ ಸೆಲಬ್ರಿಟಿಗಳು ಈ ದಾಳಿಯನ್ನು ಖಂಡಿಸಿದ್ದಾರೆ. ಹಾಲಿವುಡ್ ನಟಿ ಏಂಜಲೀನಾ ಜೋಲಿ ಕೂಡ ಇಸ್ರೇಲ್ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಸಿಕ್ಕಿಬಿದ್ದ ಜನಸಂಖ್ಯೆಯ ಮೇಲೆ ಉದ್ದೇಶಪೂರ್ವಕವಾಗಿ ಬಾಂಬ್ ದಾಳಿ ನಡೆಸಿರುವುದಕ್ಕೆ ಇಸ್ರೇಲ್ ಕಾರಣ ಎಂದು ಕಿಡಿಕಾರಿದ್ದಾರೆ. ಅದರೊಂದಿಗೆ, ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಸಂಭವಿಸಿದ ವಿನಾಶವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಇಸ್ರೇಲಿ ವೈಮಾನಿಕ ದಾಳಿ ಖಂಡಿಸಿದ ಏಂಜೆಲಿಯಾ ಜೋಲಿ
ಹಾಲಿವುಡ್ ನಟಿ ಏಂಜಲೀನಾ ಜೋಲಿ ತಮ್ಮ ಮಾನವೀಯ ಕೆಲಸಕ್ಕೆ ವಿಶ್ವದೆಲ್ಲೇಡೆ ಹೆಸರುವಾಸಿಯಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿದ್ದಾರೆ. ಗಾಜಾದ ಅತಿದೊಡ್ಡ ನಿರಾಶ್ರಿತರ ಶಿಬಿರವಾದ ಜಬಾಲಿಯಾದ ಮೇಲೆ ನಡೆದ ವೈಮಾನಿಕ ದಾಳಿಗೆ ಆಕ್ರೋಶ ಹೊರಹಾಕಿದ್ದಾರೆ.
ಇಸ್ರೇಲ್ ನಡೆಸಿದ ಈ ವೈಮಾನಿಕ ದಾಳಿ 'ಸಿಕ್ಕಿಬಿದ್ದ ಜನಸಂಖ್ಯೆಯ ಮೇಲೆ ನಡೆದ ಉದ್ದೇಶಪೂರ್ವಕ ಬಾಂಬ್ ದಾಳಿ' ಎಂದು ಖಂಡಿಸಿದ್ದಾರೆ. ಜೊತೆಗೆ. ತಮ್ಮ ಫೋಸ್ಟ್‌ನಲ್ಲಿ ಗಾಜಾದ ಅತಿದೊಡ್ಡ ನಿರಾಶ್ರಿತರ ಶಿಬಿರವಾದ ಜಬಾಲಿಯಾದಲ್ಲಿ ವೈಮಾನಿಕ ದಾಳಿಯಿಂದ ಉಂಟಾದ ವಿನಾಶವನ್ನು ಚಿತ್ರಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ನಟಿ ಏಂಜಲೀನಾ ಜೋಲಿ ಹೇಳಿದ್ದೇನು...?
"ಇದು ಎಲ್ಲಿಯೂ ಪಲಾಯನ ಮಾಡಲು ಸಾಧ್ಯವಾಗದ ಸಿಕ್ಕಿಬಿದ್ದ ಜನಸಂಖ್ಯೆಯ ಮೇಲೆ ಉದ್ದೇಶಪೂರ್ವಕವಾಗಿ ನಡೆದ ಬಾಂಬ್ ದಾಳಿಯಾಗಿದೆ. ಗಾಜಾ ಸುಮಾರು ಎರಡು ದಶಕಗಳಿಂದ ಒಪನ್ ಏರ್ ಸೆರೆಮನೆಯಾಗಿದೆ. ಜೊತೆಗೆ ಸಾಮೂಹಿಕ ಸಮಾಧಿಯಾಗುತ್ತಿದೆ. ಈ ದಾಳಿಯಲ್ಲಿ ಕೊಲ್ಲಲ್ಪಟ್ಟವರಲ್ಲಿ 40% ಮುಗ್ಧ ಮಕ್ಕಳು. ಇಡೀ ಕುಟುಂಬಗಳನ್ನೇ ಕೊಲೆ ಮಾಡಲಾಗುತ್ತಿದೆ" ಎಂದಿದ್ದಾರೆ.
"ಜಗತ್ತು ವೀಕ್ಷಿಸುತ್ತಿರುವಾಗ ಮತ್ತು ಅನೇಕ ಸರ್ಕಾರಗಳ ಸಕ್ರಿಯ ಬೆಂಬಲದೊಂದಿಗೆ, ಲಕ್ಷಾಂತರ ಪ್ಯಾಲೇಸ್ಟಿನಿಯನ್ ನಾಗರಿಕರು, ಮಕ್ಕಳು, ಮಹಿಳೆಯರು, ಕುಟುಂಬಗಳು ಸಾಮೂಹಿಕವಾಗಿ ಶಿಕ್ಷೆ ಮತ್ತು ಅಮಾನವೀಯತೆಗೆ ಒಳಗಾಗುತ್ತಿದ್ದಾರೆ. ಎಲ್ಲರೂ ಆಹಾರ, ಔಷಧ ಮತ್ತು ಮಾನವೀಯ ನೆರವಿನಿಂದ ವಂಚಿತರಾಗಿದ್ದಾರೆ. ಈ ಕದನ ನಿಲ್ಲಿಸಲು ಒತ್ತಾಯಿಸದ ವಿಶ್ವಸಂಸ್ಥೆ ಮತ್ತು ವಿಶ್ವ ನಾಯಕರು ಈ ಅಪರಾಧಗಳಲ್ಲಿ ಪಾಲುದಾರರಾಗಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್- ಗಾಜಾ ವಿಷಯದ ಕುರಿತು ಮಾತನಾಡಿದ ಇತರ ಗಣ್ಯರು
ಇಸ್ರೇಲ್ ಮತ್ತು ಗಾಝಾ ಸಂಘರ್ಷದ ವಿಷಯವಾಗಿ ನಟಿ ಏಂಜಲೀನಾ ಜೋಲಿ ಜೊತೆಗೆ ಗ್ಯಾಲ್ ಗಡೋಟ್, ಜಸ್ಟಿನ್ ಬೈಬರ್ ಮತ್ತು ಡ್ವೇನ್ ಜಾನ್ಸನ್ ಅವರಂತಹ ಇತರ ಪ್ರಸಿದ್ಧ ವ್ಯಕ್ತಿಗಳು ಸಹ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
ಕಳೆದ ತಿಂಗಳು ಅಕ್ಟೋಬರ್ 7 ರಂದು ಇಸ್ರೇಲಿ ಪಟ್ಟಣಗಳು ಮತ್ತು ನಗರಗಳ ಮೇಲೆ ಹಮಾಸ್‌ನಿಂದ ಹಠಾತ್ ದಾಳಿಯಿಂದ ಪ್ರಾರಂಭವಾಯಿತು. ದಾಳಿಯಲ್ಲಿ 1400 ಮಂದಿ ಘಟನೆಯಲ್ಲಿ ಸಾವನ್ನಪ್ಪಿದ್ದರು. ನಂತರ ಇಸ್ರೇಲ್ ಹಮಾಸ್ ವಿರುದ್ಧ ಯುದ್ಧ ಘೋಷಿಸಿದೆ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಆರಂಭಗೊಂಡ ಸಂಘರ್ಷ ಗಾಝಾದ ನಾಗರಿಕರ ಮೇಲೆ ಇಸ್ರೇಲ್ ನಿರಂತರವಾಗಿ ರಾಕೆಟ್ ದಾಳಿ ನಡೆಸುತ್ತಿದೆ. ಗಾಝಾದ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ 8000 ಸಾವಿರಕ್ಕೂ ಹೆಚ್ಚಿನ ಜನರನ್ನು ಇದುವರೆಗೆ ಹತ್ಯೆ ಮಾಡಿದೆ.


Click it and Unblock the Notifications











