ಆಸ್ಕರ್ ಅಂಗಳದಲ್ಲಿ ಮಿಂಚಿದ ಪ್ಯಾರಸೈಟ್, ಏನಿದರ ಯಶಸ್ಸಿನ ಗುಟ್ಟು?
ಅಮೆರಿಕದ ಡಾಲ್ಬಿ ಥಿಯೇಟರ್ ನಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಜೋಕರ್, ಒನ್ಸ್ ಅಪನ್ ಎ ಟೈಮ್ ಇನ್ ಹಾಲಿವುಡ್, ಮ್ಯಾರೇಜ್ ಸ್ಟೋರಿ, ದಿ ಐರಿಷ್ ಮ್ಯಾನ್, 1917 ಚಿತ್ರಗಳು ಹೆಚ್ಚು ಸದ್ದು ಮಾಡಿವೆ. ಆದರೆ, ಈ ಎಲ್ಲಾ ಚಿತ್ರಗಳ ನಡುವೆ ದಕ್ಷಿಣ ಕೊರಿಯಾ ಚಿತ್ರವೊಂದು ಉತ್ತಮ ಚಿತ್ರ ವಿಭಾಗದಲ್ಲಿ ನಾಮಿನೇಟ್ ಆಗಿ ಇತಿಹಾಸ ನಿರ್ಮಿಸಿದ್ದಲ್ಲದೆ, ಪ್ರಶಸ್ತಿ ಬಾಚಿಕೊಂಡು ಹೊಸ ಮಾರ್ಗವನ್ನು ಹಾಕಿಕೊಟ್ಟಿದೆ.
ಪ್ಯಾರಸೈಟ್ ಚಿತ್ರವು ಅಂತಾರಾಷ್ಟ್ರೀಯ ಫೀಚರ್ ಚಿತ್ರವಿಭಾಗದಲ್ಲಿ ಜೋಕರ್ ಸೇರಿದಂತೆ ಘಟಾನುಘಟಿ ಚಿತ್ರಗಳ ಸಾಲಿನಲ್ಲಿ ರೇಸಿನಲ್ಲಿತ್ತು. ಈ ವಿಭಾಗಕ್ಕೆ ಆಯ್ಕೆಯಾದ ಮೊದಲ ದಕ್ಷಿಣ ಕೊರಿಯನ್ ಚಿತ್ರ ಎನಿಸಿಕೊಂಡಿದ್ದಲ್ಲದೆ, ಪ್ರಶಸ್ತಿಯನ್ನು ಗೆದ್ದು ಬೀಗಿದೆ.
ಒಟ್ಟು 6 ವಿಭಾಗದಲ್ಲಿ ಪ್ರಶಸ್ತಿಗಾಗಿ ರೇಸಿನಲ್ಲಿದ್ದ ಪ್ಯಾರಸೈಟ್ 4 ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದೆ. ಅದರಲ್ಲೂ ಶ್ರೇಷ್ಠ ಚಿತ್ರ ಪ್ರಶಸ್ತಿ ಗೆದ್ದ ಮೊದಲ ವಿದೇಶಿ ಭಾಷಾ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
92ನೇ ಅಕಾಡೆಮಿ ಪ್ರಶಸ್ತಿ ಸುತ್ತಿನಲ್ಲಿ ಶ್ರೇಷ್ಠ ಚಿತ್ರವಲ್ಲದೆ, ಶ್ರೇಷ್ಠ ನಿರ್ದೇಶಕ, ಶ್ರೇಷ್ಠ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ, ಶ್ರೇಷ್ಠ ಮೂಲ ಚಿತ್ರಕಥೆ, ಶ್ರೇಷ್ಠ ಪ್ರೊಡೆಕ್ಷನ್ ವಿನ್ಯಾಸ ಹಾಗೂ ಶ್ರೇಷ್ಠ ಸಿನಿಮಾ ಸಂಕಲನ ವಿಭಾಗದಲ್ಲಿ ಸ್ಪರ್ಧಿಸಿತ್ತು. ಈ ಪೈಕಿ ಶ್ರೇಷ್ಠ ಚಿತ್ರ, ಶ್ರೇಷ್ಠ ಮೂಲಕಥೆ, ಶ್ರೇಷ್ಠ ಅಂತಾರಾಷ್ಟ್ರೀಯ ಫೀಚರ್ ಚಿತ್ರ, ಶ್ರೇಷ್ಠ ನಿರ್ದೇಶನ ಪ್ರಶಸ್ತಿ ಗೆದ್ದುಕೊಂಡಿದೆ.

ಹತ್ತು ಹಲವು ಪ್ರಶಸ್ತಿ ಗೆದ್ದಿರುವ ಚಿತ್ರ
ದಕ್ಷಿಣ ಕೊರಿಯಾದ ಬಾಂಗ್ ಜೂನ್ ಹೊ ನಿರ್ದೇಶನದ ಪ್ಯಾರಸೈಟ್ ಚಿತ್ರವು ಅಸ್ಕರ್ ಪ್ರಶಸ್ತಿ ಗೆಲ್ಲುವುದಕ್ಕೂ ಮುನ್ನ ಗೋಲ್ಡನ್ ಗ್ಲೋಬ್ಸ್, ಸ್ಕ್ರೀನ್ ಆಕ್ಟರ್ ಗಿಲ್ಡ್ ಪ್ರಶಸ್ತಿ ಹಾಗೂ ರೈಟರ್ಸ್ ಗಿಲ್ಡ್ ಪ್ರಶಸ್ತಿಯನ್ನು ಬಾಚಿಕೊಂಡಿತ್ತು.
2019ರ ಕೇನ್ಸ್ ಫಿಲಂ ಫೆಸ್ಟಿವಲ್ ನಲ್ಲಿ ಮೊದಲಿಗೆ ಸದ್ದು ಮಾಡಿದ್ದ ಪ್ಯಾರಸೈಟ್ ಪಾಮ್ ಡಿ ಓರ್ ಪ್ರಶಸ್ತಿ ಗಳಿಸಿತ್ತು. ಸ್ಕ್ರೀನ್ ಗಿಲ್ಡ್ ಪ್ರಶಸ್ತಿ ಗೆದ್ದ ಮೊದಲ ನಾನ್ ಇಂಗ್ಲೀಷ್ ಚಿತ್ರ ಕೂಡಾ ಹೌದು.
ಚಿತ್ರದಲ್ಲಿ ಸಾಂಗ್ ಕಾಂಗ್ ಹೂ, ಲೀ ಸನ್ ಕ್ಯೂನ್, ಚೋ ಯಿಯೋ -ಜಿಯೋಂಗ್, ಚಾಯಿ ವೂ ಶಿಕ್, ಹಾಗೂ ಪಾರ್ಕ್ ಸೊ ದಾಮ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಚಿತ್ರಕಥೆಯಲ್ಲಿ ಏನಿದೆ ವಿಶೇಷ
ಚಿತ್ರಕಥೆ ಅತ್ಯಂತ ಸರಳವಾಗಿದ್ದು, ಸಮಾಜದ ವಿವಿಧ ಸ್ತರಗಳಲ್ಲಿನ ಜನರ ಬದುಕಿನ ಬದಲಾವಣೆ ಹಾಗೂ ಪರಿಣಾಮವನ್ನು ಸಮರ್ಥವಾಗಿ ತೋರಿಸಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಈ ರೀತಿಯ ಸುಂದರ ಸಾಂಸರಿಕ ಚಿತ್ರಗಳು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ರೀತಿಯಲ್ಲಿ ಬಂದಿವೆ.
ಇಲ್ಲಿ ದಕ್ಷಿಣ ಕೊರಿಯಾದ ನಗರ ಜೀವನದ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ಬಡತನದ ಸಿರಿತನದ ಮನೆ, ದೈನಂದಿನ ಬದುಕು, ಕೆಳ ಮಟ್ಟದಲ್ಲಿದ್ದವರು ಸಿರಿವಂತರ ಮನೆಗೆ ಮೋಸದಿಂದ ಸೇರಿಕೊಳ್ಳುವುದು ಅಲ್ಲಿದ್ದ ಹೊಸ ಪ್ರಪಂಚವೇ ಸುಂದರ ಎಂದುಕೊಳ್ಳುವುದು, ಅಲ್ಲಿದ್ದ ಕೆಲಸಗಾರರನ್ನು ಉಪಾಯವಾಗಿ ಮನೆಯಿಂದ ಹೊರ ಹಾಕುವುದು ಇನ್ನೇನು ಇಡೀ ಮನೆ, ಅಲ್ಲಿರುವ ಶ್ರೀಮಂತರ ಮೇಲೆ ಹಿಡಿತ ಸಾಧಿಸಿದೆವು ಎನ್ನುವಷ್ಟರಲ್ಲಿ ಕಥೆ ತಿರುವು ಪಡೆದುಕೊಳ್ಳುತ್ತದೆ. ಶ್ರೀಮಂತರ ಮನೆ ಬಂಕರ್ ನಲ್ಲಿ ನೆಲೆಸಿದ್ದ ವ್ಯಕ್ತಿಯಾರು? ಮನೆಯಲ್ಲಿ ಹುಟ್ಟುಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಕಾಣಿಸಿಕೊಂಡು ನಡೆಸಿದ ಹತ್ಯಾಕಾಂಡದಿಂದ ಕೊನೆಗೆ ಪರಾವಲಂಬಿಯಾಗಿ ಉಳಿಯುವುದು ಯಾರು? ಎಂಬುದರದಲ್ಲಿ ಕಥೆ ಮುಗಿಯುತ್ತದೆ.

ಜಾಣ್ಮೆಯಿಂದ ಕಥೆ ಹೇಳುವ ಚಿತ್ರ
ಆದರೆ, ನಿರ್ದೇಶಕ ಬಾಂಗ್ ಜೂನ್ ಹೊ ಕಥೆ ಹೊಣೆಯುವ ಜಾಣ್ಮೆ ಹಾಗೂ ಸಮರ್ಥ ಎಡಿಟಿಂಗ್, ಸಹನೀಯ ನಟನೆ ಮೂಲಕ ಚಿತ್ರ ಎಲ್ಲಾ ವರ್ಗಕ್ಕೂ ಆಪ್ತವೆನಿಸುತ್ತದೆ. ಶ್ರೀಮಂತರು ಶ್ರೀಮಂತರಾಗೇ ಉಳಿಯುತ್ತಾರೆ, ವಿವಿಧ ಸ್ತರದ ಬದುಕಿನ ಮಜಲುಗಳನ್ನು ಸರಳವಾಗಿ ಸಾಂಕೇತಿಕವಾಗಿ ತೋರಿಸುವಲ್ಲಿ ಬಾಂಗ್ ಗೆದ್ದಿದ್ದಾರೆ. ಇದು ಪಕ್ಕಾ ನಿರ್ದೇಶಕನ ಜಾಣ್ಮೆಯಿಂದ ಕಥೆ ಹೇಳುವ ಚಿತ್ರ. ಕ್ಲೈಮ್ಯಾಕ್ಸ್ ಹಂತದಲ್ಲಿ ಚಿತ್ರದಲ್ಲಿ ರಕ್ತಪಾತ ಕಂಡರೂ ಥ್ರಿಲ್ಲರ್ ಸಿನಿಮಾವೊಂದರ ದೃಶ್ಯಕ್ಕಿಂತ ಷೇಕ್ಸ್ ಪಿಯರ್ ನ ದುರಂತ ನಾಟಕವೊಂದರದ ಅಂತಿಮ ದೃಶ್ಯಗಳಂತೆ ಪ್ರೇಕ್ಷಕರಿಗೆ ಭಾಸವಾಗುತ್ತದೆ. ಹೀಗಾಗಿ, ದೇಶ, ಭಾಷೆ, ಗಡಿ ಮೀರಿದ ಭಾವಲಹರಿ ಎಲ್ಲರನ್ನು ಆವರಿಸಿಕೊಳ್ಳುತ್ತದೆ.

ಆರಂಭದಿಂದಲೇ ಸೆಳೆಯುವ ಚಿತ್ರ
ಸೆಮಿ ಬೇಸ್ಮೆಂಟ್ ನಲ್ಲಿರುವ ಕುಟುಂಬದ ಸದಸ್ಯನೊಬ್ಬ ವೈಫೈ ಸಂಪರ್ಕ(ಅದು ಬೇರೆಯವರ ವೈಫೈ ಕದ್ದು) ಹುಡುಕುವ ಮೂಲಕ ಆರಂಭವಾಗುವ ಚಿತ್ರ ಕೊನೆಯಲ್ಲಿ ಹುಡುಕಾಟದಲ್ಲೇ ಅಂತ್ಯ ಕಾಣುತ್ತದೆ. ಸೆಮಿ ಬೇಸ್ಮೆಂಟ್ ನಿಂದ ಬಂಕರ್ ನಲ್ಲಿದ್ದ ಕಿ ತಿಯಾಕ್(ಸಾಮ್ಗ್ ಕಾಂಗ್ ಹೋ) ನನ್ನು ಮತ್ತೆ ಹೊರ ಪ್ರಪಂಚಕ್ಕೆ ಕರೆ ತರಲು ಮಗ ಕಿ ವೂ(ಚಾಯಿ ವೂ ಶಿಕ್) ಪಣ ತೊಟ್ಟು ಹೆಜ್ಜೆ ಮುಂದಿಡುವಲ್ಲಿಗೆ ಚಿತ್ರ ಸಂಪನ್ನವಾಗುತ್ತದೆ. ಸಿಯೋಲ್ ನ ಸ್ಲಂ, ಸೆಮಿ ಬೇಸ್ಮೆಂಟ್ ನಲ್ಲಿ ವಾಸ, ಬಿಟ್ಟಿ ಜೀವನ ಜೊತೆಗೆ ಶ್ರೀಮಂತರ ಮನೆ ಐಭೋಗ ಎರಡು ಕಡೆ ಮನೆ ಮಕ್ಕಳ ಮನಸ್ಥಿತಿ ಹಾಗೂ ಬೆಳವಣಿಗೆ ರೀತಿ ಎಲ್ಲವೂ ಭಾರತದಲ್ಲಿ ಕಾಣಬಹುದಾದ ದಿನನಿತ್ಯದ ದೃಶ್ಯಗಳೆನಿಸುತ್ತವೆ. ಮನೆಯಲ್ಲಿನ ಹೌಸ್ ಕೀಪರ್ ಪಾತ್ರ ಮಹತ್ವದ್ದಾಗಿದ್ದು, ಕಥೆಗೆ ತಿರುವು ನೀಡುತ್ತದೆ. ಭಾವನ್ಮೋಷ ಮುಳುಗಿ ಭೀಷಣವಾಗಬೇಕಿದ್ದ ದೃಶ್ಯಗಳನ್ನು ಸರಳವಾಗಿ ಮನಮುಟ್ಟುವಂತೆ ತೋರಿಸಿದ್ದೇ ಚಿತ್ರದ ಜನಪ್ರಿಯತೆ ಹಾಗೂ ಯಶಸ್ಸಿನ ಗುಟ್ಟು ಎನ್ನಬಹುದು. ಇದು ಸಿಂಪಲ್ ಆಗಿ ಒಂದ್ ಫ್ಯಾಮಿಲಿ ಸ್ಟೋರಿ


Click it and Unblock the Notifications











