Oscars 2023: ಆಸ್ಕರ್ ವೇದಿಕೆಯಲ್ಲಿ ಕುಣಿಯಲ್ಲ ಅಂದಿದ್ದೇಕೆ ತಾರಕ್- ಚರಣ್? ಅಸಲಿ ಕಾರಣ ಕೊನೆಗೂ ಬಹಿರಂಗ
ಈ ಬಾರಿ ಆಸ್ಕರ್ ಅವಾರ್ಡ್ಸ್ ಸೆರೆಮನಿಯಲ್ಲಿ 'ನಾಟು ನಾಟು' ಲೈವ್ ಪರ್ಫಾರ್ಮೆನ್ಸ್ ಎಲ್ಲರ ಗಮನ ಸೆಳೆಯಿತು. ತೆಲುಗು ಚಿತ್ರವೊಂದರ ಗೀತೆಯನ್ನು ಆಸ್ಕರ್ ವೇದಿಕೆಯಲ್ಲಿ ಪರ್ಫಾರ್ಮ್ ಮಾಡೋದು ಅಂದ್ರೆ ತಮಾಷೆ ಮಾತಲ್ಲ. ಅಂತಾದೊಂದು ಅದ್ಭುತ ಅವಕಾಶ ಈ ಬಾರಿ ಸಿಕ್ಕಿತ್ತು. ಆದರೆ ಅಮೆರಿಕಾದ ಡ್ಯಾನ್ಸರ್ಸ್ ಹಾಡಿಗೆ ಹೆಜ್ಜೆ ಹಾಕಿದರು. ಚರಣ್- ತಾರಕ್ ಯಾಕೆ ಹೆಜ್ಜೆ ಹಾಕಲಿಲ್ಲ ಎನ್ನುವುದು ಈಗ ಬಹಿರಂಗವಾಗಿದೆ.
'ನಾಟು ನಾಟು' ಹಾಡನ್ನು ರಾಹುಲ್ ಸಿಪ್ಲಿಗಂಜ್ ಹಾಗೂ ಕಾಲಭೈರವ ಹಾಡಿದ್ದರು. ಅವರಿಬ್ಬರೇ ಆಸ್ಕರ್ ವೇದಿಕೆಯಲ್ಲಿ ಹಾಡನ್ನು ಹಾಡಿ ಕೇಳಿಸಿದರು. ಜೊತೆಗೆ ಅಲ್ಲಿನ ಡ್ಯಾನ್ಸರ್ಸ್ ಬಿಂದಾಸ್ ಆಗಿ ಕುಣಿದು ರಂಗೇರಿಸಿದರು. ಪರ್ಫಾರ್ಮನ್ಸ್ ಮುಗಿಯುತ್ತಿದ್ದಂತೆ ಹಾಲ್‌ನಲ್ಲಿ ಇದ್ದ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಅಸಲಿಗೆ ಆಸ್ಕರ್ ವೇದಿಕೆಯಲ್ಲಿ ಡ್ಯಾನ್ಸ್ ಮಾಡುವಂತೆ ಜ್ಯೂ. ಎನ್‌ಟಿಆರ್ ಹಾಗೂ ರಾಮ್‌ಚರಣ್ ಇಬ್ಬರನ್ನು ಸಂಪರ್ಕಿಸಲಾಗಿತ್ತಂತೆ. ಆದರೆ ಇಬ್ಬರು ನಿರಾಕರಿಸಿದ್ದಕ್ಕೆ ಬೇರೆಯವರಿಂದ ಪರ್ಫಾರ್ಮ್ ಮಾಡಿಸುವಂತಾಯಿತು ಎಂದು ಆಸ್ಕರ್ ಪ್ರೊಡ್ಯೂಸರ್ ರಾಜ್ ಕಪೂರ್ ವಿವರಿಸಿದ್ದಾರೆ.

ಹಿಂದೆಂದಿಗಿಂತ ಈ ಬಾರಿ ಭಾರತದಲ್ಲಿ ಆಸ್ಕರ್ ಅವಾರ್ಡ್ ಸೆರಮನಿ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಅದಕ್ಕೆ ಕಾರಣ ಭಾರತದಿಂದ 'ನಾಟು ನಾಟು' ಗೀತೆ 'ಆಲ್ ದಿ ಬ್ರೆಥ್ಸ್' ಶಾರ್ಟ್ ಫಿಲ್ಮ್ ಹಾಗೂ 'ದಿ ಎಲಿಫೆಂಟ್ ವಿಸ್ಸರರ್ಸ್' ಡಾಕ್ಯುಮೆಂಟರಿ ಅಂತಿಮ ಸುತ್ತಿಗೆ ನಾಮಿನೇಟ್ ಆಗಿತ್ತು. ಜೊತೆಗೆ 'ನಾಟು ನಾಟು' ಪರ್ಫಾರ್ಮೆನ್ಸ್ ಕೂಡ ಇದೆ ಎಂದು ಸಿನಿರಸಿಕರು ಬೆಳಗ್ಗೆ 5.30ಕ್ಕೆ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಈವೆಂಟ್ ಲೈವ್ ನೋಡುತ್ತಿದ್ದರು. 'ನಾಟು ನಾಟು' ಲೈವ್ ಪರ್ಫಾರ್ಮೆನ್ಸ್ ಶುರುವಾದಾಗ ಎಲ್ಲರ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಅಮೇರಿಕಾ ಡ್ಯಾನ್ಸರ್ಸ್ ಬದಲು ಜ್ಯೂ. ಎನ್‌ಟಿಆರ್. ರಾಮ್‌ಚರಣ್ ಹೆಜ್ಜೆ ಹಾಕಿದ್ದರೆ ಇನ್ನು ಚೆನ್ನಾಗಿ ಇರುತ್ತಿತ್ತು ಎಂದು ಕೆಲವರು ಅಂದುಕೊಂಡರು.
'ನಾಟು ನಾಟು' ಗೀತೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗುತ್ತಿದ್ದಂತೆ ವೇದಿಕೆಯಲ್ಲಿ ಲೈವ್ ಪರ್ಫಾರ್ಮೆನ್ಸ್ ಮಾಡುವಂತೆ ಚರಣ್, ತಾರಕ್ ಇಬ್ಬರನ್ನು ಸಂಪರ್ಕಿಸಿದ್ದರಂತೆ. ಆದರೆ ಅವರು ನಯವಾಗಿಯೇ ಈ ಅವಕಾಶವನ್ನು ನಿರಾಕರಿಸಿದರಂತೆ. ಇದನ್ನು ದೆಹಲಿ ಮೂಲದ ರಾಜ್ ಕಪೂರ್ ತಿಳಿಸಿದ್ದಾರೆ. 2017ರಿಂದಲೂ ರಾಜ್ ಕಪೂರ್ ಆಸ್ಕರ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ನಡೆಯುವ ಅಕಾಡೆಮಿ ಅವಾರ್ಡ್ಸ್ ಸೆರೆಮನಿ ವೇದಿಕೆ ಮೇಲೆ ನಡೆಯುವ ಲೈವ್ ಪರ್ಫಾರ್ಮೆನ್ಸ್ ನೋಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಈ ಬಾರಿ 'ನಾಟು ನಾಟು' ಲೈವ್ ಪರ್ಫಾರ್ಮೆನ್ಸ್ ಪ್ಲ್ಯಾನ್ ಮಾಡಿದ್ದರು. ಈ ಬಗ್ಗೆ ವೆಬ್‌ಸೈಟ್ ಒಂದಕ್ಕೆ ಮಾಹಿತಿ ನೀಡಿದ್ದಾರೆ.

'"ಆಸ್ಕಾರ್ ವೇದಿಕೆ ಮೇಲೆ 'ನಾಟು ನಾಟು' ಪರ್ಫಾರ್ಮನ್ಸ್ ಅದ್ಭುತವಾಗಿ ಬರಲು ಆ ಸಿನಿಮಾ ಕ್ರಿಯೇಟಿವ್ ಟೀಂ ಜೊತೆ ಸೇರಿ ಕೆಲಸ ಮಾಡಿದಕ್ಕಾಗಿ ನಮಗೆ ತುಂಬಾ ಹೆಮ್ಮೆ ಇದೆ. ನಮ್ಮ ಕ್ರಿಯೇಟಿವ್ ಟೀಂ ಆಣತಿಯಂತೆ ನಾವು ಪಿಆರ್ ಟೀಂ ಜೊತೆ ಮಾತನಾಡಿದೆವು. ಕಾರ್ತಿಯೇಯ, ಸಿನಿಮಾ ನಿರ್ಮಾಪಕ, ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಜೊತೆ ಚರ್ಚಿಸಿದೆವು. ನಾಮಿನೇಟ್ ಘೋಷಣೆ ಆಗುತ್ತಿದ್ದಂತೆ ಕೊರಿಯೋಗ್ರಫರ್ ಪ್ರೇಮ್ ರಕ್ಷಿತ್ ಅವರನ್ನು ಸಂಪರ್ಕಿಸಿದೆವು. 'ನಾಟು ನಾಟು' ಹಾಡನ್ನು ಅದ್ಭುತವಾಗಿ ಕಟ್ಟಿಕೊಟ್ಟ ಅವರ ಸಹಕಾರ ಕೇಳಿದೆವು.
"ಅಸಲಿಗೆ ಸಿಂಗರ್ಸ್ ರಾಹುಲ್ ಸಿಪ್ಲಿಗಂಜ್, ಕಾಲಭೈರವ ಜೊತೆಗೆ ಒಟ್ಟಿಗೆ ನಾಯಕರು ಇಬ್ಬರೂ ವೇದಿಕೆಯಲ್ಲಿ ಡಾನ್ಸ್ ಪರ್ಫಾರ್ಮನ್ಸ್ ನೀಡಬೇಕೆಂದು ಕೇಳಿಕೊಂಡೆವು. ಪ್ರೇಮ್ ರಕ್ಷಿತ್, ಅವರ ಸಹಾಯಕ ಸೇರಿ ಒಂದು ಆಡಿಷನ್ ಕೊರಿಯೋಗ್ರಫಿ ವೀಡಿಯೊವನ್ನು ಕಳುಹಿಸಿದ್ದರು. ಆ ವೀಡಿಯೊವನ್ನು ಲಾಸ್ ಏಂಜಲ್ಸ್‌ನಲ್ಲಿ ಅತಿದೊಡ್ಡ ಡಾನ್ಸ್ ಸಂಸ್ಥೆಗಳಿಗೆ ಕಳುಹಿಸಲಾಯಿತು. ನಾಪೀಟಾಬ್ಸ್ ಎನ್ನಲಾಗುವ ಟಬಿತಾ ಮತ್ತು ನೆಪೋಲಿಯನ್ ಡುಮೋ ಮುಂದೆ ಬಂದರು. ಒರಿಜಿನಲ್ ಕೊರಿಯೋಗ್ರಫಿಯನ್ನು ಟಿವಿಯಲ್ಲಿ ನೋಡಿದ ಹಾಗೆ ಕಟ್ಟಿಕೊಟ್ಟರು. ಎಡಿಟ್ ಮಾಡಿದ ಹಾಡಿಗೆ ಸಂಬಂಧಿಸಿದಂತೆ ಕೀರವಾಣಿ ಅವರಿಂದ ಅನುಮತಿ ಪಡೆದ ನಂತರ ಜೂಮ್ ಕಾಲ್ ಮೂಲಕ ಭಾರತ, ಲಾಸ್ ಏಂಜಲ್ಸ್‌ನ ಕೊರಿಯೋಗ್ರಫಿ ಟೀಂಗಳ ಜೊತೆ ಚರ್ಚಿಸಿದೆವು"

"ಭಾರತದ ಟೀಂನಿಂದ ಕಾಸ್ಟಿಂಗ್ ಚಾಯ್ಸ್, ಕಾಸ್ಟ್ಯೂಮ್ ಡಿಸೈನ್ ಐಡಿಯಾ, ವೇದಿಕೆಯಲ್ಲಿರಬೇಕಾದ ಇತರೆ ಪರಿಕರಗಳ ಬಗ್ಗೆ ಸಲಹೆಗಳನ್ನು ತೆಗೆದುಕೊಂಡೆವು. ಇದೇ ವಿಚಾರವಾಗಿ ಫೆಬ್ರವರಿಯಲ್ಲಿ ರಾಮ್ ಚರಣ್, ಜ್ಯೂ. ಎನ್‌ಟಿಆರ್‌ಗೆ ಹೇಳಿದೆವು. ಆದರೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗುತ್ತೇವೆ. ಆದರೆ ವೇದಿಕೆಯಲ್ಲಿ ಲೈವ್ ಪರ್ಫಾರ್ಮೆನ್ಸ್ ಸಾಧ್ಯವಿಲ್ಲ ಎಂದು ಅವರು ಹೇಳಿದರು. ಬೇರೆ ಬೇರೆ ಪ್ರೋಫೆಷನಲ್ ಕಮೀಟ್‌ಮೆಂಟ್ ಇದ್ದಿದ್ದರಿಂದ ರಿಹರ್ಸಲ್ ಮಾಡಲು ಸಮಯ ಇಲ್ಲದ ಕಾರಣ ಅವರು ಡ್ಯಾನ್ಸ್ ಮಾಡಲಿಲ್ಲ.
ಚಿತ್ರದಲ್ಲಿ ನಾವು ನೋಡಿದ ಡ್ಯಾನ್ಸ್‌ಗಾಗಿ 2 ತಿಂಗಳು ವರ್ಕ್‌ಶಾಪ್ ನಡೆಸಲಾಗಿತ್ತು. ಎರಡು ತಿಂಗಳು ರಿಹರ್ಸಲ್ ಮಾಡಲಾಗಿದೆ. 15 ದಿನಗಳ ಕಾಲ ಸಾಂಗ್ ಶೂಟಿಂಗ್ ಮಾಡಲಾಗಿದೆ. ಇನ್ನು ಆಸ್ಕರ್‌ಗಾಗಿ ಲಾಸ್ ಏಂಜಲ್ಸ್‌ನಲ್ಲಿ ವೃತ್ತಿಪರ ಡಾನ್ಸರ್‌ಗಳು 18 ಗಂಟೆಗಳ ಕಾಲ ರಿಹರ್ಸಲ್ ಮಾಡಿದ್ದಾರೆ. 90 ನಿಮಿಷ ಕ್ಯಾಮರಾ ಬ್ಲಾಕಿಂಗ್‌ನಲ್ಲಿ ಇದ್ದರು" ಎಂದು ರಾಜ್ ಕಪೂರ್ ವಿವರಿಸಿದ್ದಾರೆ. ಒಟ್ನಲ್ಲಿ ರಾಮ್‌ಚರಣ್ ಹಾಗೂ ತಾರಕ್ ಆಸ್ಕರ್ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ್ದರೆ ಆ ಮಜಾನೇ ಬೇರೆ ಇತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.


Click it and Unblock the Notifications











