'ಸ್ಕ್ವಿಡ್ ಗೇಮ್' ನಟನಿಗೂ ಈ ಕನ್ನಡ ಸಿನಿಮಾ ಅಂದ್ರೆ ಅಚ್ಚುಮೆಚ್ಚು
ಸೂಪರ್ ಹಿಟ್ ಕೊರಿಯನ್ ವೆಬ್ ಸೀರಿಸ್ 'ಸ್ಕ್ವಿಡ್ ಗೇಮ್' ಸಿನಿರಸಿಕರಿಗೆ ಬಹಳ ಇಷ್ಟ. 3 ಸೀಸನ್‌ಗಳಲ್ಲಿ 22 ಎಪಿಸೋಡ್‌ಗಳಾಗಿ ಈ ಸರಣಿ ಬಂದಿದೆ. ಇದನ್ನು ನೋಡಿ ಪ್ರೇರಣೆಗೊಂಡು ಸಿನಿಮಾ, ವೆಬ್ ಸೀರಿಸ್ ಮಾಡುವವರು ಇದ್ದಾರೆ. ಇನ್ನು 'ಸ್ಕ್ವಿಡ್ ಗೇಮ್' ಸೀರಿಸ್‌ನಲ್ಲಿ ಹ್ವಾಂಗ್ ಜುನ್-ಹೊ ಪಾತ್ರದಲ್ಲಿ ನಟಿಸಿದ್ದ ವೈ ಹಾ-ಜೂನ್ ಅವರನ್ನು ಮರೆಯೋಕ್ಕಾಗಲ್ಲ.
ದಕ್ಷಿಣ ಕೊರಿಯಾ ನಟ ವೈ ಹಾ-ಜೂನ್ ಹಲವು ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದಾರೆ. ಕೊರಿಯನ್ ಚಿತ್ರರಂಗದಲ್ಲೇ ಹೆಚ್ಚು ಗುರ್ತಿಸಿಕೊಂಡಿದ್ದಾರೆ. ನಟ ಭಾರತೀಯ ಸಿನಿಮಾಗಳನ್ನು ನೋಡುತ್ತಾರೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ಆತ ತನ್ನ ನೆಚ್ಚಿನ 3 ಭಾರತೀಯ ಸಿನಿಮಾಗಳ ಹೆಸರು ಹೇಳಿದ್ದ. ಸದ್ಯ ಆ ವೀಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ.

ಆಮೀರ್ ಖಾನ್ ನಟನೆಯ '3 ಈಡಿಯಟ್ಸ್' ಹಾಗೂ 'ಕಿಲ್' ಸಿನಿಮಾ ನನಗೆ ಇಷ್ಟ ಎಂದು ವೈ ಹಾ-ಜೂನ್ ಹೇಳಿದ್ದಾರೆ. ಜೊತೆಗೆ ಯಶ್ ನಟನೆಯ 'KGF- ಚಾಪ್ಟರ್-1' ಕೂಡ ನನ್ನ ಫೇವರಿಟ್ ಎಂದಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಟನೆಯ 'KGF' ಸರಣಿ ಸೂಪರ್ ಹಿಟ್ ಆಗಿತ್ತು. ದೇಶ ವಿದೇಶಗಳಲ್ಲಿ ಸಿನಿಮಾ ಸದ್ದು ಮಾಡಿತ್ತು. ಹಾಲಿವುಡ್ ಮಂದಿ ಕೂಡ ಮೆಚ್ಚಿಕೊಂಡಿದ್ದರು.
ಬೇರೆ ಬೇರೆ ಭಾಷೆಗಳಿಗೆ ಸಿನಿಮಾ ಡಬ್ ಗಲ್ಫ್ ದೇಶಗಳಲ್ಲಿ ಯೂರೋಪಿನಲ್ಲಿ ಕೂಡ ಜನಪ್ರಿಯವಾಗಿತ್ತು. ಈ ಬಗ್ಗೆ ಈ ಹಿಂದೆ ಕೂಡ ಸಾಕಷ್ಟು ಜನ ಹೇಳಿದ್ದಾರೆ. ಒಮ್ಮೆ ಲಂಡನ್‌ಗೆ ಹೋಗಿದ್ದಾಗ ಅಲ್ಲಿನ ಯುವತಿ ನನ್ನನ್ನು ನೋಡಿ ಗುರ್ತಿಸಿ ನೀವು 'KGF' ಚಿತ್ರದಲ್ಲಿ ನಟಿಸಿದ್ದೀರಾ ಅಲ್ವಾ? ಎಂದು ಕೇಳಿದ್ದಳು ಎಂದು ನಟಿ ಮಾಳವಿಕಾ ಹೇಳಿದ್ದರು. ಹೀಗೆ ಸಾಕಷ್ಟು ಮಂದಿ 'KGF' ಯಾವ ಮಟ್ಟಿಗೆ ಪ್ರಪಂಚದಾದ್ಯಂತ ತಲುಪಿದೆ ಎನ್ನುವ ಬಗ್ಗೆ ಮಾತನಾಡಿದ್ದರು.
ಬಹಳ ಕಮ್ಮಿ ಬಜೆಟ್‌ನಲ್ಲಿ ಹಾಲಿವುಡ್ ಸಿನಿಮಾಗಳ ಶೈಲಿಯಲ್ಲಿ ಪ್ರಶಾಂತ್ ನೀಲ್ 'KGF' ಸಿನಿಮಾ ಕಟ್ಟಿಕೊಟ್ಟಿದ್ದರು. ಯಶ್ ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡಿದ್ದರು. ಈಗಾಗಲೇ 2 ಭಾಗಗಳಾಗಿ ಬಂದಿರುವ ಚಿತ್ರದ ಮತ್ತೊಂದು ಸೀಕ್ವೆಲ್ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಚಾಪ್ಟರ್-1 ಅಂದಾಜು 300 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಚಾಪ್ಟರ್-2 ಬರೋಬ್ಬರಿ 1000 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು.
'KGF' ಚಾಪ್ಟರ್-3 ಸಿನಿಮಾ ಮಾಡುವುದಾಗಿಯೂ ಚಿತ್ರತಂಡ ಘೋಷಿಸಿದೆ. ಆದರೆ ಯಾವಾಗ ಎನ್ನುವುದು ಖಚಿತವಾಗಿಲ್ಲ. ಸದ್ಯ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಬಳಿಕ ಚಾಪ್ಟರ್- 3 ಬಂದರೂ ಅಚ್ಚರಿ ಪಡಬೇಕಿಲ್ಲ. 'KGF' ಸರಣಿ ಸಿನಿಮಾಗಳಲ್ಲಿ ಕೆಲಸ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರ ನಸೀಬು ಬದಲಾಗಿಬಿಡ್ತು. ಎಲ್ಲರೂ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟರು.
ಪ್ರಶಾಂತ್ ನೀಲ್ ತೆಲುಗು ಚಿತ್ರರಂಗದತ್ತ ಮುಖ ಮಾಡಿದರು. 'ಸಲಾರ್' ಚಿತ್ರ ಮಾಡಿ ಗೆದ್ದರು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಚಿತ್ರನಿರ್ಮಾಣ ಸಂಸ್ಥೆಯಾಗಿ ಗುರ್ತಿಸಿಕೊಂಡಿದೆ. ಹೃತಿಕ್ ರೋಷನ್ ಜೊತೆಗೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ.
ಯಶ್ ಈಗ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾಗಳನ್ನು ನಿರ್ಮಿಸುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಸಂಗೀತ ನಿರ್ದೇಶಕ ರವಿಬಸ್ರೂರು, ಛಾಯಾಗ್ರಹಣ ಭುವನ್ ಗೌಡ ಹೀಗೆ ಚಿತ್ರದ ತಂತ್ರಜ್ಞರೆಲ್ಲಾ ಸಖತ್ ಬ್ಯುಸಿಯಾಗಿಬಿಟ್ಟಿದ್ದಾರೆ. ಚಾಪ್ಟರ್- 3 ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಭಾಷಾ ಸಿನಿಪ್ರೇಮಿಗಳು ಕಾತರದಿಂದ ಕಾಯುವಂತಾಗಿದೆ.


Click it and Unblock the Notifications











