ಸಿನಿಮಾಕಾನ್ ಸಮಾವೇಶದಲ್ಲಿ 'ರಾಮಾಯಣ' ದಾಖಲೆ; ಹಾಲಿವುಡ್ ವೇದಿಕೆಯಲ್ಲಿ ಯಶ್ ದರ್ಬಾರ್
'ಟಾಕ್ಸಿಕ್' ಸಿನಿಮಾ ಪಕ್ಕಕ್ಕಿಟ್ಟು ಯಶ್ 'ರಾಮಾಯಣ' ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಹವಾ ಶುರುವಾಗಿದೆ. ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಸಿನಿಮಾ ತೆರೆಗೆ ಬರಲಿದೆ. ಆದರೆ ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿ ಚಿತ್ರದ ಪ್ರಮೋಷನ್ ಆರಂಭಿಸಿತ್ತು ಚಿತ್ರತಂಡ. ಈಗ ಸಿನಿಮಾಕಾನ್ ವೇದಿಕೆಯಲ್ಲಿ ಸಿನಿಮಾ ಸದ್ದು ಮಾಡ್ತಿದೆ.
ಲಾಸ್ ವೇಗಾಸ್‌ನ ಸೀಸರ್ಸ್ ಪ್ಯಾಲೇಸ್‌ನಲ್ಲಿ ನಡೆಯುವ ಚಿತ್ರರಂಗದ ಪ್ರಮುಖ ವಾರ್ಷಿಕ ಕೂಟ ಸಿನಿಮಾಕಾನ್. ಪ್ರಪಂಚದ ವಿವಿಧ ದೇಶಗಳ ಸಿನಿಮಾ ಪೋಸ್ಟರ್, ಟೀಸರ್ ಪ್ರದರ್ಶಿಸಿ ಚರ್ಚೆ ನಡೆಸಲಾಗುತ್ತದೆ. ಹಾಲಿವುಡ್‌ನ ದೊಡ್ಡ ದೊಡ್ಡ ಸಿನಿಮಾಗಳನ್ನು ಈ ವೇದಿಕೆಯಲ್ಲಿ ಘೋಷಿಸಲಾಗುತ್ತದೆ. ಇದೀಗ 'ರಾಮಾಯಣ' ಚಿತ್ರದ ಟೀಸರ್ ಪ್ರದರ್ಶಿಸಿ ಯಶ್ ಮಾತನಾಡಿದ್ದಾರೆ. ಅಲ್ಲಿನ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಚಿತ್ರ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಸಾಥ್ ಕೊಟ್ಟಿದ್ದಾರೆ. ಭಾರತದಲ್ಲಿ 'ರಾಮಾಯಣ' ಟೀಸರ್ ಬಿಡುಗಡೆಗೂ ಮುನ್ನ ಲಾಸ್ ಏಂಜಲೀಸ್‌ನಲ್ಲಿ ಪ್ರದರ್ಶನ ಮಾಡಿ ಪ್ರಚಾರ ಮಾಡಲಾಗಿತ್ತು. ಹಾಲಿವುಡ್ ಮಾಧ್ಯಮಗಳ ಜೊತೆ ಚಿತ್ರತಂಡ ಸಂವಾದ ನಡೆಸಿತ್ತು. ರಣ್ಬೀರ್, ನಿತೇಶ್ ತಿವಾರಿ ಹಾಗೂ ನಮಿತ್ ಮಲ್ಹೋತ್ರಾ ಆಗ ಅಲ್ಲಿಗೆ ಹೋಗಿದ್ದರು.

ನಿತೇಶ್ ತಿವಾರಿ 'ರಾಮಾಯಣ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 4000 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ.
ಸಿನಿಮಾಕಾನ್ ವೇದಿಕೆಯಲ್ಲಿ ಪ್ರಚಾರ ಮಾಡುತ್ತಿರುವ ಮೊದಲ ಸಿನಿಮಾ 'ರಾಮಾಯಣ' ಎನ್ನಲಾಗ್ತಿದೆ. ಸೀಸರ್ಸ್ ಪ್ಯಾಲೇಸ್ ಒಳಗೆ ದೊಡ್ಡ ದೊಡ್ಡ ಸಿನಿಮಾಗಳ ಪೋಸ್ಟರ್ ಪ್ರದರ್ಶನ ಮಾಡಲಾಗಿದೆ. ಹಾಲಿವುಡ್ ಸಿನಿಮಾಗಳ ಪೋಸ್ಟರ್ ಕೂಡ ನೋಡಬಹುದು. ಆದರೆ ಎಲ್ಲಾ ಪೋಸ್ಟರ್ ಬೋರ್ಡ್‌ಗಳಿಂದ ದೊಡ್ಡದಾಗಿ 'ರಾಮಾಯಣ' ಪೋಸ್ಟರ್ ರಾರಾಜಿಸುತ್ತಿದೆ. 10 ಬೋರ್ಡ್‌ಗಳ ದೊಡ್ಡ ಕ್ಯಾನ್ವಾಸ್‌ನಲ್ಲಿ ರಾಮ- ರಾವಣರು ಎದುರು ಬದಿರಾಗಿರುವ ಪೋಸ್ಟರ್ ನೋಡಬಹುದು. ಅಲ್ಲಿನ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್ ಈ ಬಗ್ಗೆ ವೀಡಿಯೋ ಮಾಡಿ ಮಾತನಾಡಿರುವುದು ವೈರಲ್ ಆಗ್ತಿದೆ.
ನಿಕ್ಕಿ ನೊವಾಕ್ ನಿರೂಪಣೆಯಲ್ಲಿ ನಡೆದ ಸಂದರ್ಶನದಲ್ಲಿ ಯಶ್ ಹಾಗೂ ನಮಿತ್ ಮಲ್ಹೋತ್ರಾ ಭಾಗಿ ಆಗಿ ಮಾತನಾಡಿದ್ದಾರೆ. 'ರಾಮಾಯಣ' ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಕಥೆಯನ್ನು ವಿಶ್ವ ಸಿನಿರಸಿಕರು ಮುಂದಿಡುವ ಪ್ರಯತ್ನ ನಡೀತಿದೆ. ಅದಕ್ಕೆ ತಕ್ಕಂತೆ ಪ್ರಮೋಷನ್ ಮಾಡಲಾಗ್ತಿದೆ. ಹಾಲಿವುಡ್ ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುವ ನಿರೀಕ್ಷೆಯಿದೆ. ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಸಿನಿಮಾ ಇದು.
ಇತ್ತೀಚೆಗೆ ಯಶ್ ವಿಮಾನ ಏರಿ ಲಾಸ್ ವೇಗಾಸ್‌ಗೆ ಹೊರಟಾಗ 'ಟಾಕ್ಸಿಕ್' ಚಿತ್ರದ ಪ್ರಚಾರಕ್ಕಾಗಿ ಹೋಗುತ್ತಿದ್ದಾರೆ ಎಂದು ಕೆಲವರು ಭಾವಿಸಿದ್ದರು. ಆದರೆ 'ರಾಮಾಯಣ' ಚಿತ್ರದ ಪ್ರಚಾರಕ್ಕಾಗಿ ಅವರು ಅಲ್ಲಿಗೆ ತೆರಳಿದ್ದಾರೆ. ಜೂನ್ 4ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಅಪ್ಪಳಿಸಲಿದೆ. ನವೆಂಬರ್‌ನಲ್ಲಿ ಬೆಳ್ಳಿ ಪರದೆ ಮೇಲೆ 'ರಾಮಾಯಣ' ದರ್ಶನವಾಗಲಿದೆ. ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ ಈ ಸಿನಿಮಾ ಕಟ್ಟಿಕೊಡಲಾಗಿದೆ. ಹಾಗಾಗಿ ತೆರೆಮೇಲೆ ಅದ್ಭುತ ಅನುಭವ ನೀಡಲಿದೆ.
ರಾಮಾಯಣ ಎಲ್ಲರಿಗೂ ಗೊತ್ತಿರುವ ಕಥೆ. ಈಗಾಗಲೇ ಸಿನಿಮಾ, ಧಾರಾವಾಹಿ ರೂಪದಲ್ಲಿ ಕೂಡ ಸಾಕಷ್ಟು ಬಾರಿ ಬಂದಿದೆ. ಆದರೂ ಈಗ ಬಹಳ ಅದ್ಧೂರಿಯಾಗಿ ಆ ಕಥೆಯನ್ನು ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಟೀಸರ್ ರಿಲೀಸ್ ಆಗಿದೆ. ಇದೇ ರೀತಿ ರಾವಣನಾಗಿ ಯಶ್ ಅವತಾರ ಹೇಗಿರುತ್ತದೆ ಎನ್ನುವ ಗ್ಲಿಂಪ್ಸ್ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.


Click it and Unblock the Notifications











