'ನಿನ್ನ ಜೊತೆ ನನ್ನ ಕಥೆ' ಮಾಡಲು ಹಿಂದೇಟು ಹಾಕಿದ್ದೇಕೆ ? 18 ವರ್ಷಗಳ ಪ್ರಯಾಣ-ಅರ್ಚನಾ ಮನದ ಮಾತು

ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಫರ್ಧೆ ಇದ್ದೇ ಇರುತ್ತೆ. ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ. ಪ್ರೇಕ್ಷಕರನ್ನು ಸೆಳೆಯಲು ಕಿರುತೆರೆಯ ವಾಹಿನಿಗಳು ನಾನಾ ರೀತಿಯ ಕಸರತ್ತು ಮಾಡುತ್ತವೆ. ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಸಧಭಿರುಚಿಯ ಕಾರ್ಯಕ್ರಮಗಳನ್ನು ನೀಡುವ ಉದ್ದೇಶದಿಂದ ಹೊಸತನ ಮೈಗೂಡಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತವೆ.ಆ ಪೈಕಿ ಕಳೆದ ಹಲವು ವರ್ಷಗಳಿಂದ ತನ್ನನ್ನೂ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿರುವ ವಾಹಿನಿಗಳಲ್ಲಿ '' ಸ್ಟಾರ್ ಸುವರ್ಣ '' ಕೂಡ ಒಂದು.

''ಆಸೆ''.. ''ಗೌರಿ ಶಂಕರ್''.. ''ವಸುದೇವ ಕುಟುಂಬ''.. ''ನೀ ಇರಲು ಜೊತೆಯಲಿ''.. ''ಸ್ನೇಹದ ಕಡಲಲ್ಲಿ''.. ''ಮಾತಾಡು ಮಾತಾಡು ಮಲ್ಲಿಗೆ'' .. ಹೀಗೆ ಹಲವು ಧಾರಾವಾಹಿಗಳನ್ನು ಪ್ರಸಾರ ಮಾಡುವ ''ಸ್ಟಾರ್ ಸುವರ್ಣ''ದಲ್ಲಿ ''ಬೊಂಬಾಟ್ ಭೋಜನ''.. ''ಸುವರ್ಣ ಸಂಕಲ್ಪ''.. ''ಸುವರ್ಣ ಗೃಹಮಂತ್ರಿ 2'' ಅಂತಹ ಕಾರ್ಯಕ್ರಮಗಳು ಕೂಡ ಪ್ರಸಾರವಾಗುತ್ತವೆ.

18 Years of Excellence Why Ninna Jothe Nanna Kathe Archana Satyanarayan Initially Said No to Sharada

ಇಂಥಾ ''ಸ್ಟಾರ್ ಸುವರ್ಣ''ದಲ್ಲಿ ಜನ ಮನ ಗೆದ್ದ ಧಾರಾವಾಹಿಗಳಲ್ಲಿ ''ನಿನ್ನ ಜೊತೆ ನನ್ನ ಕಥೆ'' ಕೂಡ ಒಂದು. 480ಕ್ಕೂ ಅಧಿಕ ಸಂಚಿಕೆಗಳನ್ನು ಪೂರೈಸಿರುವ ಈ ಧಾರಾವಾಹಿಯಲ್ಲಿ ಶಾರದಾ ಪಾತ್ರವನ್ನು ನಿರ್ವಹಿಸುತ್ತಿರುವ ಅರ್ಚನಾ ಸತ್ಯನಾರಾಯಣ್ ನಿಮ್ಮ ಫಿಲ್ಮಿಬೀಟ್ ಕನ್ನಡ ಜೊತೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅರ್ಚನಾ ಸತ್ಯ ನಾರಾಯಣ್ ಹೇಳಿದ್ದೇನು..? ಆರಂಭದಲ್ಲಿ ಈ ಧಾರಾವಾಹಿ ಮಾಡಲು ಹಿಂಜರಿದಿದ್ದು ಯಾಕೆ ಎಂದು ತಿಳಿಯಲು ಮುಂದೆ ಓದಿ.

''ನಿನ್ನ ಜೊತೆ ನನ್ನ ಕಥೆ'' ಮಾಡಲು ಆರಂಭದಲ್ಲಿ ಹಿಂದೆ ಸರಿದಿದ್ದೇಕೆ ?

''ನಾನು ಒಪ್ಪಿಕೊಳ್ಳುವ ಮುಂಚೆ ಮೊದಲು ಅಮ್ಮ ಪಾತ್ರ ಅಂದಾಗ ಹಿಂಜರಿಕೆ ಇತ್ತು. ಆದರೆ ಇಲ್ಲ ನಮ್ಮ ಧಾರಾವಾಹಿಯಲ್ಲಿ ನಿಮಗೊಂದು ಪಾತ್ರ ಇದೆ. ಒಳ್ಳೆಯ ಕ್ಯಾರೆಕ್ಟರ್‌ನ್ನೇ ಕೊಡ್ತಿದ್ದೀವಿ, ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರ ಎಂದು ಸೂರಿ ಅವರ ಪ್ರೊಡಕ್ಷನ್‌ ಸಂಸ್ಥೆ ಹೇಳಿದಾಗ ನಾನು ಒಪ್ಪಿಕೊಂಡೆ. ಯಾಕೆಂದರೆ ಮೊದಲಿಂದ ಪಾತ್ರ ಯಾವುದೇ ಇರಲಿ ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರವನ್ನೇ ನಾನು ಹುಡುಕುವುದು. ಹೀಗಾಗಿ ಕಥೆ ಹೇಳಿದ ನಂತರ ನಾನು ಒಪ್ಕೊಂಡೆ. ಅದು ಹೋಗ್ತಾ ಹೋಗ್ತಾ ಆರು ತಿಂಗಳಾಯ್ತು. ಈಗ 400 ಸಂಚಿಕೆಗಳು ಮುಕ್ತಾಯವಾಗಿವೆ'' ಎಂದಿದ್ದಾರೆ ಅರ್ಚನಾ.

ಮುಂದುವರೆದು ''ನಾನು ಯಾವತ್ತು ಫೋನ್ ಮಾಡಿ ನನ್ನ ಪಾತ್ರ ಹೇಗೆ ಬರುತ್ತೆ, ಯಾವತ್ತು ಬರುತ್ತೆ, ಎಂದೆಲ್ಲ ಕೇಳಿಲ್ಲ. ಯಾಕೆಂದರೆ ''ನಿನ್ನ ಜೊತೆ ನನ್ನ ಕಥೆ'' ಕಥೆಯನ್ನು ಅವರು ತಗೆದುಕೊಂಡು ಹೋಗ್ತಿರುವ ರೀತಿ ತುಂಬಾ ಚೆನ್ನಾಗಿದೆ. ಪ್ರೇಕ್ಷಕರಿಗೆ ಬೇಜಾರಾಗದೇ ಕಥೆ ಹೇಳಿಕೊಂಡು ಹೋಗ್ತಿದ್ದಾರೆ. ನೋಡೋಕೂ ಖುಷಿಯಾಗುತ್ತೆ ಎಂದಾಗ ನನ್ನ ಪಾತ್ರ ಕೂಡ ಚೆನ್ನಾಗಿರುತ್ತೆ ಎಂದುಕೊಂಡು ನಾನು ಕಾದೆ. ಈಗ ಎಲ್ಲರ ಪಾತ್ರಕ್ಕೂ ತುಂಬಾನೇ ಮಹತ್ವ ಬಂದಿದೆ. ನನ್ನ ವೃತ್ತಿ ಬದುಕಿನಲ್ಲಿ ಹಲವು ಪಾತ್ರಗಳು ಅಚ್ಚಳಿಯದೇ ಉಳಿದಿವೆ. ಆ ಸಾಲಿಗೆ ಸೇರುವಂತಹ ಪಾತ್ರ ಈ ಶಾರದಾ ಪಾತ್ರ. ಎಲ್ಲರ ಜೊತೆ ಹೊಂದುಕೊಂಡು ಇರುವಂತಹ ಪಾತ್ರ ಇದು'' ಎನ್ನುತ್ತಾರೆ ಅರ್ಚನಾ.


ತಾಯಿ ಪಾತ್ರಕ್ಕೆ ಬ್ರ್ಯಾಂಡ್ ಆಗುವ ಭಯ ಇಲ್ವಾ ?

''ಅವನು ಮತ್ತೆ ಶ್ರಾವಣಿ''ಯಲ್ಲಿ ಕೂಡ ನಾನು ತಾಯಿ ಪಾತ್ರ ಮಾಡಿದ್ದೇ. ಆದರೆ ನನಗೆ ಅಲ್ಲಿ ನಾನು ತಾಯಿ ಪಾತ್ರ ಮಾಡುತ್ತಿದ್ದೇನೆ ಎನ್ನುವ ಭಾವನೆ ಬಂದಿರಲಿಲ್ಲ. ಯಾಕೆಂದರೆ ಅಲ್ಲಿ ಐಶಾರಾಮಿ ಜೀವನಕ್ಕೋಸ್ಕರ ನಾನು ಹೀರೋನ ಬಿಟ್ಟು ಅವನ ಬಾಸ್ ಜೊತೆ ಸಂಬಂಧ ಹೊಂದಿರುತ್ತೇನೆ. ಹೀಗಾಗಿ ಅಲ್ಲಿ ಎರಡು ಮಕ್ಕಳಿದ್ದರೂ ಕೂಡ ನಾನು ತಾಯಿ ಮಾಡುತ್ತಿದ್ದೇನೆ ಎಂದು ಅನಿಸಿರಲಿಲ್ಲ. ನೆಗೆಟಿವ್ ಪಾತ್ರ ಮಾಡ್ತಿದ್ದೀನಿ ಎನ್ನುವ ಭಾವನೆ ಇತ್ತು''.

18 Years of Excellence Why Ninna Jothe Nanna Kathe Archana Satyanarayan Initially Said No to Sharada

''ಇನ್ನು ನೀವು ಹೇಳಿದಂತೆ ತಾಯಿ ಪಾತ್ರ ಅಂದರೆ ಅದಕ್ಕೆ ಬ್ರ್ಯಾಂಡ್ ಮಾಡ್ತಾರೆ ಆದರೆ ನನ್ನ ವಿಚಾರದಲ್ಲಿ ಇದಾಗಿಲ್ಲ. ಯಾಕೆಂದರೆ 15 ವರ್ಷದ ಹಿಂದೆ ನಾನು ಹೇಗೆ ಇದ್ದೆ ಈಗಲೂ ಅದೇ ತರ ಕಾಣಿಸ್ತೀನಿ. ಹೀಗಾಗಿ ನೀವು ಅಮ್ಮನಂತೆ ಕಾಣಿಸಲ್ಲ ಅಂತ ಹೇಳಿ ತುಂಬಾ ತಾಯಿ ಪಾತ್ರವನ್ನು ನನಗೆ ಕೊಡಲು ಹಿಂದೇಟು ಹಾಕಿದ್ದಾರೆ. ನನ್ನ ಉದ್ದೇಶ ಜನರ ಮನದಲ್ಲಿ ಉಳಿಯಬೇಕು ಅನ್ನೋದಷ್ಟೇ. ಇನ್ನು ಒಮ್ಮೆ ಪ್ರಮುಖ ಪಾತ್ರವಾದ ಪಾತ್ರಕ್ಕೆ ನನ್ನನ್ನೂ ಕೇಳಿದ್ದರು. 5 ಜನ ಮಕ್ಕಳ ತಾಯಿಯ ಪಾತ್ರ ಅದು. ಆದರೆ ನಾನು ಆ ರೀತಿ ಕಾಣಿಸದ ಕಾರಣ, ನನ್ನ ದೇಹಾಕೃತಿ ಆ ರೀತಿ ಇಲ್ಲದಿರುವುದಿಂದ ಅವರೇ ಬೇಡ ಅಂತೇಳಿ ಅದೇ ತರಹದ ಮತ್ತೊಂದು ಪ್ರಮುಖವಾದ ಅಷ್ಟೇ ತೂಕ ಇದ್ದ ಪಾತ್ರವನ್ನು ನನಗೆ ನೀಡಿದರು'' ಅನ್ನೋದು ಅರ್ಚನಾ ಅವರ ಮನದ ಮಾತು.

ನೀವು ಕಂಡಂತೆ ಸೆಟ್ ವಾತಾವರಣ

''ನನಗೆ ವ್ಯೆಯಕ್ತಿಕವಾಗಿ ಇಲ್ಲಿಯವರೆಗೆ ಯಾವ ತೊಂದರೆ ಆಗಿಲ್ಲ. 18 ವರ್ಷ ಆಯ್ತು ನಾನು ಬಂದು. ಆದರೆ ನನಗೆ ಯಾವುದೆ ಕಹಿ ಅನುಭವ ಆಗಿಲ್ಲ. ಎಲ್ಲಿಯೂ ಕಿರಿಕ್ ಆಗಿಲ್ಲ. ಮನೆಯಲ್ಲಿ ಇರುವುದಕ್ಕಿಂತ ಹೆಚ್ಚು ನಾವು ಸೆಟ್‌ನಲ್ಲಿರ್ತಿವಿ . ಹೀಗಾಗಿ ಮನೆಯಲ್ಲಿ ಹೇಗೆ ಹೊಂದಾಣಿಕೆ ಮಾಡಿಕೊಳ್ತಿವೋ ಅದೇ ರೀತಿ ಸೆಟ್‌ನಲ್ಲಿ ಕೂಡ ಹೊಂದಾಣಿಕೆ ಮಾಡಿಕೋಬೇಕು. ಅಲ್ಲಿನ ವಾತಾವರಣವನ್ನು ಸಕಾರಾತ್ಮಕವಾಗಿ ಇಟ್ಟುಕೊಳ್ಳಬೇಕು ಎನ್ನುವುದೇ ನನ್ನ ಆಶಯ ಆಗಿರುತ್ತೆ'' ಎಂದಿದ್ದಾರೆ ಅರ್ಚನಾ.


ನಿಮ್ಮ ಈ ಪ್ರಯಾಣದಲ್ಲಿ ಪತಿಯ ಬೆಂಬಲ

''ಮನೆಯವರ ಬೆಂಬಲದಿಂದಲೇ ಇಲ್ಲಿಯವರೆಗೆ ಬರಲು ಸಾಧ್ಯವಾಯ್ತು. ನನಗೆ ಆರು ವರ್ಷದ ಮಗಳಿದ್ದಾಳೆ. ಮಗಳು ನನ್ನ ಜೊತೆ ಇರಬೇಕು ಎಂದು ಬಯಸುತ್ತಾಳೆ. ಆದರೆ. ಅತ್ತೆ ಮಾವ ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಪತಿಯ ಬೆಂಬಲ ತುಂಬಾ ಇದೆ. ಅವರು ಮಗಳನ್ನು ನೋಡಿಕೊಳ್ತಾರೆ. ನಿನಗೆ ಹೇಗೆ ಅನ್ಸುತ್ತೆ ಹಾಗೇ ಮಾಡು ಅಂತ ಸಪೋರ್ಟ್ ಮಾಡ್ತಾರೆ. ನಿನಗೆ ಕೆಲಸ ಇದ್ದರೆ ನೀನು ಹೋಗು ನಾನು ಮಗಳನ್ನು ನೋಡಿಕೊಳ್ತೀನಿ ಅಂತ ಅವರೇ ಧೈರ್ಯವಾಗಿ ಹೇಳ್ತಾರೆ. ಆದರೆ ನನಗೆ ಮಗಳ ಚಿಂತೆ ಇದ್ದೇ ಇರುತ್ತೆ. ಒಮ್ಮೆ ನಾನು ಇರಲಿಲ್ಲ ಅಂತ ಜ್ವರ ಬಂದಿತ್ತು ಅವಳಿಗೆ. ರೀಲ್‌ನಲ್ಲಿ ಅಲ್ಲ ರಿಯಲ್ ಅಲ್ಲಿ ಕೂಡ ನಾನು ತಾಯಿ. ಹೀಗಾಗಿ ನನಗೆ ಈಗಲೂ ಒಂದು ದಿನ ಅವಳನ್ನು ಬಿಟ್ಟು ಇರಲು ಸಾಧ್ಯ ಇಲ್ಲ. ನನ್ನ ತಾಯಿ ನನಗೆ ನೀಡಿದಷ್ಟೇ ಬೆಂಬಲವನ್ನು ನನ್ನ ಗಂಡ ನನಗೆ ನೀಡುತ್ತಾ ಬಂದಿದ್ದಾರೆ. ನೀಡುತ್ತಿದ್ದಾರೆ. ಈ ವಿಚಾರದಲ್ಲಿ ನಾನು ನಿಜಕ್ಕೂ ಪುಣ್ಯ ಮಾಡಿದ್ದೆ'' ಎನ್ನುವುದು ಅರ್ಚನಾ ಮನದ ಮಾತು.


18 ವರ್ಷದ ಪ್ರಯಾಣ ಹಿಂದೆ ತಿರುಗಿ ನೋಡಿದರೆ ?

''ಖಂಡಿತ ನನ್ನ ದಾರಿಯ ಬಗ್ಗೆ ನನಗೆ ಹೆಮ್ಮೆ ಇದೆ. ಪ್ರತಿ ಬಾರಿಯೂ ನನಗೆ ಭಿನ್ನ ವಿಭಿನ್ನವಾದ ಪಾತ್ರಗಳು ಸಿಕ್ಕಿವೆ. ನಮ್ಮ ತಂದೆ ಇರಲಿಲ್ಲ. ಆಗ ನಾನು ಇನ್ನೂ ಓದ್ತಿದ್ದೆ. ಓದುವ ಹಂಬಲ ಇದ್ದಿದ್ದರಿಂದ, ನಮ್ಮ ತಾಯಿ ಒಬ್ಬಳೇ ಇದ್ದಿದ್ದರಿಂದ, ನನಗೆ ಇಲ್ಲಿ ಬರುವ ಮನಸ್ಥಿತಿ ಇರಲಿಲ್ಲ. ನಾನು ಸ್ಕಾಲರಶಿಪ್‌ನಲ್ಲಿ ಓದಿದ್ದರಿಂದ ಮನೆಯಲ್ಲಿ ಆ ವಾತಾವರಣ ಇರಲಿಲ್ಲ. ಸಪೋರ್ಟ್ ಇರಲಿಲ್ಲ. ಆದರೆ ನನ್ನ ಅಮ್ಮ ನನ್ನ ಗಂಡು ಮಗುವಿನಂತೆ ನೋಡಿಕೊಂಡಿದ್ದಾರೆ. ರಾತ್ರಿ ತಡವಾಗಿ ಬಂದರೂ ಕೂಡ ಯಾಕೆ ಏನಾಯ್ತು ಅಂತ ಗಾಬರಿ ಬೀಳದೇ, ನಾನು ಕುಗ್ಗಿದಾಗ ಅವರು ನನ್ನನ್ನು ಹುರಿದುಂಬಿಸಿದ ರೀತಿ, ಇಂಡಸ್ಟ್ರೀಗೆ ಬಂದಾಗ ಜನ ಆಡಿಕೊಂಡರೂ ಕೂಡ ನನ್ನ ಅಮ್ಮ ಯಾವತ್ತು ನೆಗೆಟಿವ್ ಯೋಚನೆ ಮಾಡಲಿಲ್ಲ. ಅನುಮಾನ ಪಡಲಿಲ್ಲ''.

''ನಾನು ತುಂಬಾನೇ ಫೇಮಸ್ ಆಗದಿರಬಹುದು. ಆದರೆ ಕೆಲ ಪಾತ್ರಗಳು ಮಾಡಿದಾಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನದಿಂದ ಜನ ಮೆಸೇಜ್ ಮಾಡ್ತಾರೆ, ಈ ಪಾತ್ರ ಚೆನ್ನಾಗಿತ್ತು ಅಂತಾರೆ, ನನ್ನ ಧಾರಾವಾಹಿಗಳ ಹೆಸರು ಹೇಳಿ ಗುರುತಿಸುತ್ತಾರೆ, ಇವತ್ತಿನವರೆಗೆ ಗಾಸಿಪ್ ಇಲ್ಲದೇ, ಯಾವುದೇ ಬ್ಲ್ಯಾಕ್ ಮಾರ್ಕ್ ಇಲ್ಲದೇ, ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುವ ಕಲಾವಿದರಲ್ಲಿ ನೀವು ಕೂಡ ಒಬ್ಬರು ಎಂದು ಜನ ಹೇಳ್ತಾರೆ, ಒಬ್ಬ ಕಲಾವಿದೆಗೆ ಇದಕ್ಕಿಂತ ಇನ್ನೇನು ಬೇಕು. ಈ ಪ್ರಶಂಸೆಗಳಿಗಿಂತ ಇನ್ಯಾವ ಪ್ರಶಸ್ತಿ ಬೇಕು. ಹೀಗೆಲ್ಲ ಆದಾಗ ಖುಷಿ ಆಗುತ್ತೆ. ಜೊತೆಗೆ ಹೆಮ್ಮೆ ಕೂಡ ಆಗುತ್ತೆ'' ಎಂದು ಅರ್ಚನಾ ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.


ನೆನಪಿನಲ್ಲಿ ಉಳಿದ ಪಾತ್ರ

''ಬಂಗಾರ'' ಧಾರಾವಾಹಿಯ ಸೇವಂತಿ ಪಾತ್ರ ನಾನು ಮರೆಯಲಾರೆ. 5 ವರ್ಷ ಪ್ರಸಾರವಾದ ಧಾರಾವಾಹಿ ಅದು. ಆ ಸಮಯದಲ್ಲಿ ''ಉದಯ ವಾಹಿನಿ''ಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಧಾರಾವಾಹಿ. ಶ್ರೀನಾಥ್ ಸರ್.. ಪದ್ಮಾ ವಾಸಂತಿ ಮೇಡಂ.. ನಾಗಾಭರಣ ಸರ್.. ಹೀಗೆ ಕನ್ನಡದ ದಂತಕತೆಗಳ ಜೊತೆ ಅಭಿನಯಿಸುವ ಸುವರ್ಣಾವಕಾಶ ಅದು. ಆ ಅವಕಾಶ ನನಗೆ ಸಿಕ್ಕಿದಾಗ ತುಂಬಾ ಖುಷಿ ಆಯ್ತು''.

''ಇನ್ನೂ ಬೇರೆಯವರು ಅರ್ಧಕ್ಕೆ ಧಾರಾವಾಹಿಯಿಂದ ಹೊರ ನಡೆದಾಗ ನಾನು ಆ ಸ್ಥಾನವನ್ನು ಹಲವಾರು ಬಾರಿ ಇಲ್ಲಿಯವರೆಗೆ ತುಂಬಿದ್ದೇನೆ. ಮೊದಲು ''ಸುಕನ್ಯಾ'' ಮಾಡಿದೆ. ''ಅವನು ಮತ್ತೆ ಶ್ರಾವಣಿ'' ಮಾಡಿದಾಗ ಮೊದಲು ಬೇರೆ ಅವರಿದ್ದರು. ನನ್ನನ್ನ ರವಿ ಗರಣಿ ಸರ್ ಆಯ್ಕೆ ಮಾಡಿದರು. ಈ ಪಾತ್ರವನ್ನು ಇವರೇ ಮಾಡ್ತಾರೆ. ಮಾಡಬಲ್ಲರು ಅಂತ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಆ ಪಾತ್ರ ನೀಡಿದರು. ಇವರು ನಿಜವಾಗಲೂ ಅರ್ಚನಾನಾ..? ಇಷ್ಟೆಲ್ಲ ಮಾಡ್ತಾರಾ..? ಇಲ್ಲಿಯವರೆಗೆ ಸಾಂಪ್ರದಾಯಿಕ ಶೈಲಿಯಲ್ಲಿಯೇ ಇವರನ್ನು ನಾವು ನೋಡಿದ್ದೇವೆ, ಇವರು ನೆಗೆಟಿವ್ ಪಾತ್ರ ಮಾಡ್ತಿದ್ದಾರಾ ಅಂತ ಆ ಪಾತ್ರದತ್ತ ಕಿರುತೆರೆ ತಿರುಗಿ ನೋಡಿತ್ತು''.

''ಆ ಪಾತ್ರಕ್ಕಾಗಿ ನಾನು ಹೇರ್ ಕಟ್‌ಯಿಂದ ಹಿಡಿದು ನನ್ನನ್ನು ನಾನೇ ಸಂಪೂರ್ಣ ಬದಲಿಸಿಕೊಂಡಿದ್ದೇ. ಇವಾಗ ಸಿಕ್ಕರೂ ಕೂಡ ನಿಮ್ಮ ಪಾತ್ರ ನಿಶಾ ಪಾತ್ರ ಅಚ್ಚಳಿಯದೇ ನನ್ನ ಮನಸಿನಲ್ಲಿ ಉಳಿದಿದೆ ಎಂದು ರವಿ ಸರ್ ಸಿಕ್ಕಾಗ ಹೇಳ್ತಿರ್ತಾರೆ. ಆ ಹಾವ ಭಾವ ವೇಷ ಭೂಷಣಕ್ಕೂ ಬಂಗಾರ ಧಾರಾವಾಹಿಯಲ್ಲಿನ ನನ್ನ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಇವೆರಡು ಪಾತ್ರ ನನ್ನ ಮನಸಿಗೆ ತುಂಬಾ ಹತ್ತಿರವಾದ ಪಾತ್ರಗಳು'' ಎಂದು ಪ್ರತಿಕ್ರಿಯೆ ನೀಡಿದ್ದಾರೆ ಅರ್ಚನಾ.

''ನಿನ್ನ ಜೊತೆ ನನ್ನ ಕಥೆ'' ಮೇಲೆ ನಿಮ್ಮ ನಿರೀಕ್ಷೆಗಳು ?

''ನಿನ್ನ ಜೊತೆ ನನ್ನ ಕಥೆ'' ಧಾರಾವಾಹಿಯಲ್ಲಿ ಸದ್ಯ ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಹೀರೋಯಿನ್ ಪಾತ್ರಕ್ಕೆ ಇರುವಷ್ಟೇ ತೂಕ ಇದೆ. ಶಾರದಾ ಪಾತ್ರದ ಅದರದ್ದೇ ಆದ ಟ್ರ್ಯಾಕ್ ಓಪನ್ ಆಗುತ್ತೆ. ಕಳೆದು ಹೋಗಿದ್ದೀನಿ ಮತ್ತೆ ಸಿಕ್ಕಿದೀನಿ, ಮತ್ತೆ ಶಾರದಾ ತುಂಬಾ ಭಯದಲ್ಲಿದ್ದಾಳೆ. ಮಾತು ಬರಲ್ಲ. ಮಾತಾಡಿದರೂ ಒಂದೆರಡು ಮಾತಷ್ಟೇ. ಯಾಕೆ ಈ ರೀತಿ ವರ್ತಿಸುತ್ತಿದ್ದಾಳೆ, ಎಲ್ಲಿ ಹೋಗಿದ್ದಳು, ಏನು ಮಾಡ್ತಿದ್ದಳು ಎನ್ನುವ ಹಲವಾರು ಪ್ರಶ್ನಾರ್ಥಕ ಚಿಹ್ನೆಗಳಿವೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಈ ಪ್ರೊಸೆಸ್ ಬಗ್ಗೆ ನನಗೂ ತೀವೃ ಕುತೂಹಲ ಇದೆ. ಶಾರದಾ ಪಾತ್ರ ಪ್ರಮುಖ ಘಟ್ಟಕ್ಕೆ ಹೋಗುತ್ತೆ ಎನ್ನುವ ಮನೋಭಾವ ನನ್ನಲ್ಲಿದೆ'' ಎನ್ನುವುದು ಅರ್ಚನಾ ಅವರ ಮನದಾಳದ ಮಾತು.

More from Filmibeat

English summary
Why did Archana Satyanarayan almost reject the role of Sharada in 'Ninna Jothe Nanna Kathe'? Read this exclusive look into her career growth, the success of the 480-episode milestone, and how she breaks "mother role" stereotypes on Star Suvarna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X