ಆ ಕಾಲದಲ್ಲೇ ಹಾಲಿವುಡ್ ಜೊತೆ ಕೈ ಜೋಡಿಸಿದ್ದರು ರಾಜೇಂದ್ರ ಸಿಂಗ್ ಬಾಬು? 'ಬಣ್ಣದ ಗೆಜ್ಜೆ'ಗೆ ನಾಗಾರ್ಜುನ ಅಪಸ್ವರವೇಕೆ?
ಕನ್ನಡ ಚಿತ್ರರಂಗಕ್ಕೆ ಈಗ 91ರ ಹರೆಯ. ಈ 91 ವರ್ಷದಲ್ಲಿ ಅನೇಕರು ಬಂದಿದ್ದಾರೆ. ಹೋಗಿದ್ದಾರೆ. ಇನ್ನು ಕೆಲವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹಲವಾರು ನಾಯಕರು.. ನಾಯಕಿಯರು.. ನಿರ್ದೇಶಕರು.. ತಂತ್ರಜ್ಞರು.. ಕಾರ್ಮಿಕರು.. ಈ 91 ವರ್ಷದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕೆಲವರು ಮರೆಯಲಾಗದ ಚಿತ್ರಗಳನ್ನು ನೀಡಿದ್ದರೆ.. ಇನ್ನೂ ಕೆಲವರು ಅವಿಸ್ಮರಣೀಯ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಡಾ.ರಾಜ್ ಕುಮಾರ್.. ಡಾ.ವಿಷ್ಣುವರ್ಧನ್ ಅವರಿಂದ ಹಿಡಿದು ಬಿ.ಆರ್.ಪಂತಲು ಅವರಿಂದ ಹಿಡಿದು ಪುಟ್ಟಣ್ಣ ಕಣಗಾಲ್‌ವರೆಗೂ ಹಲವರು ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಚಿತ್ರರಂಗದ ಶ್ರೇಯೋಭಿವೃದ್ದಿಗೆ ಹಗಲಿರುಳು ಬೆವರು ಸುರಿಸಿದ್ದಾರೆ. ಆ ಪೈಕಿ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಕೂಡ ಒಬ್ಬರು.

ಹೌದು, ಎಸ್.ವಿ.ರಾಜೇಂದ್ರ ಸಿಂಗ್ ಬಾಬು.. ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಆ ಕಾಲದಲ್ಲಿಯೇ ಕನ್ನಡ ಚಿತ್ರರಂಗದತ್ತ ಎಲ್ಲರು ತಿರುಗಿ ನೋಡುವಂತೆ ಮಾಡುವಲ್ಲಿ ಇವರ ಪಾತ್ರ ಬಹುಮುಖ್ಯವಾದದ್ದು. ಪ್ರಮುಖವಾದದ್ದು.
ನಿಜಾ.. ಸಿಂಗ್ ಬಾಬು ಅವರ ತಂದೆ ಶಂಕರ್ ಸಿಂಗ್ ಆ ಕಾಲದಲ್ಲಿಯೇ ಖ್ಯಾತ ನಿರ್ದೇಶಕರು. ಅವರ ಪ್ರಭಾವಳಿಯಲ್ಲಿಯೇ ರಾಜೇಂದ್ರ ಸಿಂಗ್ ಬಾಬು ಚಿತ್ರರಂಗಕ್ಕೆ ಬಂದರು. ಆದರೆ.. ಆ ನಂತರ ಅವರು ಬೆಳೆದ ರೀತಿ ಮತ್ತು ರೂಪಿಸಿದ ಚಿತ್ರಗಳೆಲ್ಲವೂ ಅವರಲ್ಲಿನ ಪ್ರತಿಭೆಗೆ ಹಿಡಿದ ಕೈಗನ್ನಡಿಗಳೇ.
ಕೇವಲ 22-23ರ ಹರೆಯದಲ್ಲಿಯೇ ನಿರ್ದೇಶಕನಾಗಿ ಚಿತ್ರರಂಗವನ್ನು ಪ್ರವೇಶ ಮಾಡಿದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಇಲ್ಲಿಯವರೆಗೆ ಹಲವಾರು ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ್ದಾರೆ. ಆ ಪೈಕಿ ಹಲವು ಬ್ಲಾಕ್‌ಬಸ್ಟರ್‌ಗಳಾಗಿವೆ.
ಇಂಥಾ ರಾಜೇಂದ್ರ ಸಿಂಗ್ ಬಾಬು ಚಿತ್ರರಂಗಕ್ಕೆ ಬಂದು ಈ ವರ್ಷ 50 ವಸಂತಗಳಾಗಿವೆ. ಈ ಹಿನ್ನೆಲೆ ನಿಮ್ಮ ''ಫಿಲ್ಮಿಬೀಟ್ ಕನ್ನಡ ವೆಬ್‌ಸೈಟ್ '' ರಾಜೇಂದ್ರ ಸಿಂಗ್ ಬಾಬು ಅವರ ಜೊತೆ ವಿಶೇಷವಾದ ಸಂದರ್ಶನವನ್ನು ನಡೆಸಿದ್ದು, ಈ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಚಿತ್ರರಂಗದ ಸೆಳೆತ ಶುರುವಾಗಿದ್ಹೇಗೆ ?
''ಕಲೆ ನನ್ನ ರಕ್ತದಲ್ಲಿಯೇ ಇತ್ತು. ನನ್ನ ತಂದೆ ಆಗಲೇ ಮಹಾತ್ಮ ಪಿಕ್ಚರ್ಸ್ ಸಂಸ್ಥೆ ಶುರು ಮಾಡಿದ್ದರಿಂದ ನನ್ನ ಬಾಲ್ಯವೆಲ್ಲ ನಾನು ಕ್ಯಾಮರಾ ಮತ್ತು ಚಿತ್ರಕ್ಕೆ ಸಂಬಂಧಿಸಿದ ಉಪಕರಣಗಳ ಜೊತೆಯೇ ಹೆಚ್ಚು ಕಳೆದೆ.
ನಮ್ಮ ಮನೆಯಿಂದ ಕೂಗಳತೆಯ ದೂರದಲ್ಲಿ ಆಗ ನವಜ್ಯೋತಿ ಸ್ಟುಡಿಯೋ ಕೂಡ ಇತ್ತು. ಅಲ್ಲಿಯೇ ನಾನು ಆಡಿ ಬೆಳೆದಿದ್ದು. ಇನ್ನು.. ಎಲ್ಲರೂ ಈಗ ಪ್ಯಾನ್ ಇಂಡಿಯಾ ಚಿತ್ರ ಎನ್ನುತ್ತಿದ್ದಾರೆ. ಆದರೆ.. ಆ ಕಾಲದಲ್ಲಿಯೇ ನಮ್ಮ ನಾಗಕನ್ನಿಕಾ.. ಜಗನ್ಮೋಹಿನಿ ಸೇರಿ ಮೂರು ನಾಲ್ಕು ಚಿತ್ರ ಬೇರೆ ಭಾಷೆಗಳಿಗೆ ಡಬ್ ಆಗಿತ್ತು.
ಆದರೂ ಕೂಡ ನಮ್ಮ ತಂದೆಗೆ ಖುಷಿ ಇರಲಿಲ್ಲ. ಹೀಗಿರುವಾಗ ನಮ್ಮ ತಂದೆಯವರ ಪಾರ್ಟ್ನರ್ ಬಿ. ವಿಠ್ಠಲಾಚಾರ್ಯ ಇಲ್ಲಿ ಬೇಡ ತೆಲುಗು ಅಥವಾ ತಮಿಳಿಗೆ ಹೋಗೋಣ ಎಂದರು. ಆದರೆ.. ನಮ್ಮ ತಂದೆಯವರು ಮನಸು ಮಾಡಲಿಲ್ಲ. ಇಲ್ಲಿಯೇ ಮುಂದುವರೆಯುವ ಮನಸು ಮಾಡಿದರು. ಬಿ. ವಿಠ್ಠಲಾಚಾರ್ಯ ಅವರು ಆ ಕಡೆ ಹೋದರು.
ಇನ್ನು ಮತ್ತೊಂದು ಕಡೆ.. ನಾನು ಮೂರು ನಾಲ್ಕು ಚಿತ್ರದಲ್ಲಿ ಅಭಿನಯಿಸಿದ್ದೆ. ಆರು ಅಥವಾ ಏಳು ವರ್ಷದವನಿದ್ದಾಗಲೇ ನಾನು ಡಾ.ರಾಜ್ ಕುಮಾರ್ ಅವರ ಜೊತೆ ಆಕ್ಟ್ ಮಾಡಿದ್ದೇ. ಆದರೆ.. ಅದ್ಯಾಕೋ ನನಗೆ ಆಕ್ಟಿಂಗ್ ನಲ್ಲಿ ಮುಂದುವರೆಯಬೇಕು ಎಂಬ ಭಾವನೆ ಬರಲೇ ಇಲ್ಲ. ತೆರೆಯ ಮುಂದೆ ಬರುವುದಕ್ಕಿಂತ ತೆರೆಯ ಹಿಂದೆ ಕೆಲಸ ಮಾಡುವುದರಲ್ಲಿ ನನಗೆ ಆಸಕ್ತಿ ಮೂಡಿತು. ಹೀಗೆ ಶುರುವಾದ ಸೆಳೆತ ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ'' ಎಂದು ಹೇಳಿದ್ದಾರೆ ಸಿಂಗ್ ಬಾಬು.
ನಿಮ್ಮ ಮೇಲೆ ತುಂಬಾ ಪ್ರಭಾವ ಬೀರಿದ ಸಿನಿಮಾ ಯಾವುದು ?
''ಆಗೆಲ್ಲ ನಮ್ಮ ಮನೆಯ ಬಳಿ ಗಣೇಶ ಮತ್ತು ಗಾಯತ್ರಿ ಎಂಬ ಚಿತ್ರಮಂದಿರಗಳಿದ್ದವು. ಅಲ್ಲಿ ಕೇವಲ ಇಂಗ್ಲೀಷ್ ಸಿನಿಮಾಗಳನ್ನು ಮಾತ್ರ ಹಾಕ್ತಿದ್ದರು. ಎರಡೇ ದಿವಸ ನಡೆಯುತ್ತಿದ್ದರು ಆ ಚಿತ್ರಗಳನ್ನು ತಪ್ಪದೇ ನೋಡುತ್ತಿದ್ದೆ. ಕೇವಲ ಇಂಗ್ಲೀಷ್ ಮಾತ್ರವಲ್ಲ ಮಲಯಾಳಂ ಮತ್ತು ತೆಲುಗು ಹೊರತು ಪಡಿಸಿದರೆ ಎಲ್ಲ ಭಾಷೆಯ ಸಿನಿಮಾ ನೋಡ್ತಿದ್ದೆ, ಅದರಲ್ಲಿಯೂ ಹಿಂದಿ ತುಸು ಜಾಸ್ತಿನೇ ನೋಡ್ತಿದ್ದೆ. ಇನ್ನೂ ನನಗೆ ನನ್ನ ಅಚ್ಚು ಮೆಚ್ಚಿನ ನಿರ್ದೇಶಕರು ತುಂಬಾ ಜನ ಇದ್ದಾರೆ. ಹೀಗೆ ಸುಮಾರು ಜನರ ಪ್ರಭಾವ ಮತ್ತು ಪ್ರೇರಣೆ ಇದೆ'' ಎನ್ನುವುದು ಸಿಂಗ್ ಬಾಬು ಅವರ ಮನದ ಮಾತು.
ಹಾಲಿವುಡ್‌ನ ವಾರ್ನರ್ ಬ್ರದರ್ಸ್ ಸಂಪರ್ಕಿಸಿದ್ದೇಕೆ ?
''ಆ ಕಾಲದಲ್ಲಿ ಕಲರ್ ಲ್ಯಾಬ್ ಇದ್ದಿದ್ದು ಚೆನ್ನೈನಲ್ಲಿದ್ದ ಜೆಮಿನಿ ಒಂದೇ. ಈ ಲ್ಯಾಬ್‌ಗೆ ಅದೊಂದು ದಿನ ವಾರ್ನರ್ ಬ್ರದರ್ಸ್ ಬಂದಿದ್ದರು. ಅವರ ಚಿತ್ರಕ್ಕೆ ಸಂಬಂಧಿಸಿದಂತೆ ಮಾತನಾಡಲು ಅವರು ಬಂದಾಗ ನಿಮ್ಮ ಕೆಲಸ ಹೇಗಿದೆ ಅಂತ ತಿಳಿದುಕೊಳ್ಳಲು ಯಾವುದಾದರೂ ಚಿತ್ರದ ಸನ್ನಿವೇಶಗಳಿದ್ದರೆ ತೋರಿಸಿ ಎಂದು ಲ್ಯಾಬ್‌ನವರಿಗೆ ಹೇಳಿದ್ದರು.
ಆಗ ಜೆಮಿನಿ ಅವರು ನನ್ನ ನಾಗರಹೊಳೆ ಚಿತ್ರದ ಟ್ರೇಲರ್ ಮಾಡಿದ್ದರು. ಅದನ್ನು ನೋಡಿ ಅವರು ಚಿತ್ರದ ನಿರ್ದೇಶಕ ಮತ್ತು ಛಾಯಾಗ್ರಾಹಕರು ಯಾರು ಎನ್ನುವ ಪ್ರಶ್ನೆ ಅವರಿಗೆ ಕೇಳಿದ್ದರು. ಆಗ ನಾನು ಮತ್ತು ಸಿನಿಮ್ಯಾಟೋಗ್ರಾಫರ್ ಪ್ರಕಾಶ್ ಅಲ್ಲಿಯೇ ಇದ್ವಿ. ಹೀಗೆ ಭೇಟಿಯಾಯ್ತು. ಆ ನಂತರ ಸೆಕೆಂಡ್ ಯುನಿಟ್‌ನಲ್ಲಿ ನಮಗೆ ಕೆಲಸ ಮಾಡಿ ಕೊಡಿ ಎಂದು ಕೇಳಿದರು. ''ಮೈಟಿ ಹಿಮಾಲಯನ್ ಮ್ಯಾನ್'' ಎನ್ನುವ ಚಿತ್ರ ಅದು. ಆ ಚಿತ್ರದಲ್ಲಿ ಇವತ್ತು ಕೂಡ ನನ್ನ ಹೆಸರಿದೆ'' ಎಂದು ನೆನಪು ಮಾಡಿಕೊಂಡಿದ್ದಾರೆ ಸಿಂಗ್ ಬಾಬು.
ಇಳಯರಾಜಾ ಅವರಿಂದ ದೂರವಾಗಿದ್ದೇಕೆ ?
''ನಿರ್ದೇಶಕನಾದವರಿಗೆ ಎಲ್ಲದರ ಜ್ಞಾನವೂ ಇರಬೇಕು. ಅದು ಸಂಗೀತ ಇರಲಿ.. ಛಾಯಾಗ್ರಹಣ ಇರಲಿ.. ತನ್ನ ಚಿತ್ರಕ್ಕೆ ಯಾವುದು ಸರಿ.. ಯಾವುದು ತಪ್ಪು.. ಯಾವುದು ಹೊಂದಿಕೆಯಾಗುತ್ತೆ ಎನ್ನುವ ಜ್ಞಾನ ತುಂಬಾನೇ ಮುಖ್ಯ. ಸಿನಿಮಾ ನಿರ್ದೇಶಕನ ಮಾಧ್ಯಮ ಎನ್ನುವ ಮಾತನ್ನು ನಂಬುವನು ನಾನು.
ಇನ್ನು ''ಬಣ್ಣದ ಗೆಜ್ಜೆ'' ಚಿತ್ರಕ್ಕೆ ಹಂಸಲೇಖಾ ಬದಲು ಮೊದಲು ಇಳಯರಾಜಾ ಸಂಗೀತ ನೀಡಬೇಕಿತ್ತು. ಯಾಕೆಂದರೆ ''ಭರ್ಜರಿ ಭೇಟೆ''ಯಲ್ಲಿ ನಾನು ಅವರ ಜೊತೆ ಕೆಲಸ ಮಾಡಿದ್ದೇ. ನಾಲ್ಕು ಒಳ್ಳೆಯ ಹಾಡು ಅವರು ನೀಡಿದ್ದರು.

ಹೀಗಾಗಿ ಬಣ್ಣದ ಗೆಜ್ಜೆಗೆ ಅವರನ್ನೇ ಆಯ್ಕೆ ಮಾಡಿಕೊಂಡಿದ್ದೇ. ಆದರೆ.. ನನ್ನ ಆಲೋಚನೆ ಅವರ ಆಲೋಚನೆಗೆ ತಾಳೆ ಆಗಲಿಲ್ಲ. ಎಲ್ಲೋ ಒಂದು ಕಡೆ ಅವರು ಅವರ ನಿರ್ಧಾರ ಹೇರುತ್ತಿದ್ದಾರೆ ಎನ್ನುವ ಭಾವನೆ ನನಗೆ ಬರಲು ಶುರುವಾಯ್ತು. ಹೀಗಾಗಿ ಇಳಯರಾಜಾ ಅವರ ಜಾಗಕ್ಕೆ ಹಂಸಲೇಖಾ ಅವರನ್ನು ಕರೆತರಬೇಕಾಯ್ತು'' ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ಧಾರೆ.
ಇಳಯರಾಜಾ ಬದಲು ಹಂಸಲೇಖಾ, ನಾಗಾರ್ಜುನ ಅಪಸ್ವರ
''ಬಣ್ಣದ ಗೆಜ್ಜೆ ಸಂಗೀತ ಪ್ರಧಾನ ಚಿತ್ರ. ಆ ಚಿತ್ರವನ್ನು ನಾನು ಆಗಲೇ ಎರಡು ಭಾಷೆಯಲ್ಲಿ ಕನ್ನಡದ ಜೊತೆಯಲ್ಲಿ ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಿದ್ದೇ. ಕನ್ನಡದಲ್ಲಿ ರವಿಚಂದ್ರನ್ ಹೀರೋ ಆದರೆ ತೆಲುಗಿನಲ್ಲಿ ನಾಗಾರ್ಜುನ ಹೀರೋ.
ಆದರೆ.. ಇಳಯರಾಜಾ ಬದಲು ನಾನು ಹಂಸಲೇಖಾ ಅವರನ್ನು ಕರೆತಂದಾಗ ನಾಗಾರ್ಜುನ ಪ್ರಶ್ನೆ ಮಾಡಿದರು. ಮೊದಲು ಇಳಯರಾಜಾ ಅಂತ ಹೇಳಿದ್ರೀ ಈಗ ಹಂಸಲೇಖಾ ಅಂತ ಹೇಳ್ತಿದ್ದೀರಾ. ತೆಲುಗು ಪ್ರೇಕ್ಷಕರಿಗೆ ಅವರು ಯಾರು ಅಂತ ಗೊತ್ತಿಲ್ಲ ಹೇಗೆ ಆಗುತ್ತೆ ಎಂದೆಲ್ಲ ಆತಂಕ ವ್ಯಕ್ತಪಡಿಸಿದರು.
ಆಗ ನಾನು ಒಂದು ಹಾಡು ಕೇಳಿ ನಿಮಗೆ ಇಷ್ಟ ಆಗಿಲ್ಲ ಅಂದರೆ ತೆಲುಗಿನಲ್ಲಿ ಬೇರೆಯವರಿಂದ ಮಾಡ್ಸೋಣ ಅಂತ ಹೇಳಿದೆ. ಇನ್ನು ಆ ಕಾಲದಲ್ಲಿ ಇಂದಿನಂತೆ ಸೌಲಭ್ಯಗಳಿರಲಿಲ್ಲ. ಎಲ್ಲ ಲೈವ್ ರೆಕಾರ್ಡಿಂಗ್ ಇತ್ತು. ಸುಮಾರು ಜನ ಆರ್ಕೆಸ್ಟ್ರಾದವರು ಬಂದು ಹಂಸಲೇಖಾ ಜೊತೆ ಸೇರಿದ್ದರು. ಅದೇ ಸಮಯಕ್ಕೆ ಬಾಲು ಬೇರೆ ಇದ್ದರು.
ಹೀಗಾಗಿ ಸಾಂಗ್ ರೆಕಾರ್ಡಿಂಗ್ ಮಾಡಿದ್ವಿ. ಆಗ ಅಲ್ಲಿಯೇ ನಾಗಾರ್ಜುನ ಸಿನಿಮಾ ನಡೆಯುತ್ತಿತ್ತು. ಹೀಗಾಗಿ ನಾನು ನಾಗಾರ್ಜುನ ಅವರನ್ನು ಕೂಡ ಕರೆಸಿದೆ. ಈ ಸಮಯದಲ್ಲಿ ಹಾಡು ರೆಕಾರ್ಡಿಂಗ್ ಆದ ಮೇಲೆ ಅಲ್ಲಿದ್ದ ಎಲ್ಲ ಮ್ಯೂಸಿಷಿಯನ್ಸ್ ಎದ್ದು ನಿಂತು ಹಂಸಲೇಖಾಗೆ ಚಪ್ಪಾಳೆ ತಟ್ಟಿದರು. ಈ ಸನ್ನಿವೇಶ ನೋಡಿ ನಾಗಾರ್ಜುನ ಮತ್ತೆ ಮರು ಮಾತನಾಡಲೇ ಇಲ್ಲ'' ಎಂದು ಆ ದಿನಗಳನ್ನು ಫಿಲ್ಮಿಬೀಟ್ ಕನ್ನಡ ಜೊತೆ ಮೆಲುಕು ಹಾಕಿದ್ದಾರೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು.


Click it and Unblock the Notifications











