ಬಾಲ್ಯದ ಫೋಟೋ ಹಂಚಿಕೊಂಡ ಕಾವೇರಿ ಟೀಚರ್; ಏನು ವಿಶೇಷ ಗೊತ್ತಾ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಕಾವೇರಿ ಕನ್ನಡ ಮೀಡಿಯಂ' ಕೂಡಾ ಒಂದು. 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ಕನ್ನಡ ಟೀಚರ್ ಕಾವೇರಿಯಾಗಿ ನಟಿಸುತ್ತಿರುವ ಪ್ರಿಯಾ ಜೆ ಆಚಾರ್ ತನ್ನ ನಟನೆಯ ಮೂಲಕ ಗುರುತಿಸಿಕೊಂಡಿರುವ ಬೆಡಗಿ. ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿರುವ ಪ್ರಿಯಾ ಜೆ ಆಚಾರ್ ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋವೊಂದು ಸಖತ್ ಸದ್ದು ಮಾಡುತ್ತಿದೆ.
ಹೌದು, ಎರಡು ದಿನಗಳ ಹಿಂದೆಯಷ್ಟೇ ಪ್ರಿಯಾ ಅವರ ಅಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹಳೆಯ ಫೋಟೋವೊಂದನ್ನು ಹಂಚಿಕೊಳ್ಳುವುದರ ಮೂಲಕ ಪ್ರಿಯಾ ಅವರು ಅಮ್ಮನಿಗೆ ಶುಭಾಶಯವನ್ನು ಕೋರಿದ್ದರು. ತಮ್ಮ ಬಾಲ್ಯದ ಫೋಟೋವೊಂದನ್ನು ಈಕೆ ಹಂಚಿಕೊಂಡಿದ್ದು ಇದರಲ್ಲಿ ಆಕೆ ಅಮ್ಮಮ ತೊಡೆಯ ಮೇಲೆ ಕುಳಿತುಕೊಂಡಿದ್ದಾರೆ.

ಹಳೆಯ ಎರಡು ಫೋಟೋಗಳನ್ನು ಅಪ್ ಲೋಡ್ ಮಾಡಿರುವ ಪ್ರಿಯಾ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮುದ್ದಮ್ಮ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಅವಳ ಒಲವ ನಗೆ, ಅವಳ ಮೊಗ ಸಿರಿಗೆ ಅಂದದ ಬಿಂದಿಗೆ ಎಂಬ ಸಾಲುಗಳನ್ನು ಕೂಡಾ ಬರೆದುಕೊಂಡಿದ್ದಾರೆ.
ಇನ್ನು ಟಿಕ್ ಟಾಕ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಈಕೆಗೆ ನಟಿಯಾಗುವ ಕನಸಿತ್ತು. ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂದು ಬಯಸಿದ್ದ ಪ್ರಿಯಾ ಅವರು ಕಿರುತೆರೆಗೆ ಕಾಲಿಟ್ಟಿದ್ದು ಪೋಷಕ ಪಾತ್ರಗಳ ಮೂಲಕ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ತಂಗಿ ಅದಿತಿ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದರು.
ಜೀ ಕುಟುಂಬ ಅವಾರ್ಡ್ಸ್‌ನಲ್ಲಿ 'ಬೆಸ್ಟ್ ಸಹೋದರಿ' ಪ್ರಶಸ್ತಿ ಪಡೆದಿರುವ ಈಕೆ ನಂತರ ಹಾರಿದ್ದು ತೆಲುಗು ಕಿರುತೆರೆಗೆ. ಹೌದು, ತೆಲುಗಿನ 'ಆನಂದರಾಗಂ' ಎನ್ನುವ ಧಾರಾವಾಹಿಯಲ್ಲಿ ನಾಯಕಿ ಐಶ್ವರ್ಯಾ ಆಗಿ ಬಣ್ಣ ಹಚ್ಚಿದ ಪ್ರಿಯಾ ಪರಭಾಷೆಯ ಕಿರುತೆರೆಯಲ್ಲಿಯೂ ಗುರುತಿಸಿಕೊಂಡಿರುವ ಬೆಡಗಿ. ಇದರ ಜೊತೆಗೆ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿದ ಈ ಚೆಂದುಳ್ಳಿ ಚೆಲುವೆ ಅಲ್ಲೂ ನಾಯಕಿಯಾಗಿ ನಟಿಸಿದರು.

ಲಕ್ಷ್ಮಿ ರಮೇಶ್ ನಿರ್ದೇಶನದ 'ಧಮಾಕಾ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಈಕೆ ನಂತರ ಕಾಣಿಸಿಕೊಂಡಿದ್ದು ಕಾವೇರಿಯಾಗಿ. ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಪ್ರಿಯಾ ಆಚಾರ್ ಇದೀಗ ವೀಕ್ಷಕರ ಪಾಲಿಗೆ ಪ್ರೀತಿಯ ಕಾವೇರಿ ಟೀಚರ್ ಹೌದು. ನವಿರಾದ ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಪ್ರಿಯಾ ಅವರ ನಟನೆಗೆ ಫಿದಾ ಆಗದವರಿಲ್ಲ.
ಇನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್' ರಿಯಾಲಿಟಿ ಶೋವಿನಲ್ಲಿ ಕಾಣಿಸಿಕೊಂಡಿರುವ ಪ್ರಿಯಾ ಆಚಾರ್ ಅಲ್ಲೂ ತಮ್ಮ ನೃತ್ಯದ ಮೂಲಕ ಗುರುತಿಸಿಕೊಂಡಿದ್ದರು.


Click it and Unblock the Notifications











