ಇದು ಮನಸ್ಸಿಗೆ ಹತ್ತಿರವಾದ ಸಿನಿಮಾ ಮತ್ತು ಪಾತ್ರ
''ಈ ಸಿನಿಮಾ ಆಯ್ಕೆ ಮಾಡಿಕೊಂಡಿರುವ ಕಾರಣ ಸ್ಕ್ರಿಪ್ಟ್ ಮತ್ತು ನನ್ನ ಪಾತ್ರ. ಸ್ಕ್ರಿಪ್ಟ್ ಕೇಳಿದಾಗ ತುಂಬಾ ಚೆನ್ನಾಗಿತ್ತು'' ಎಂದು 'ಅಸತೋಮ ಸದ್ಗಮಯ' ಚಿತ್ರದ ಬಗ್ಗೆ ಮಾತು ಆರಂಭಿಸಿದರು ನಟಿ ರಾಧಿಕಾ ಚೇತನ್.
ರಾಜೇಶ್ ವೇಣೂರು ನಿರ್ದೇಶನದಲ್ಲಿ ರಾಧಿಕಾ ಚೇತನ್, ಲಾಸ್ಯ ನಾಗ್, ಕಿರಣ್ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಸಿನಿಮಾ ಇದೇ ವಾರ (ಜುಲೈ 6) ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಟ್ರೈಲರ್, ಹಾಡುಗಳ ಮೂಲಕ ಹೆಚ್ಚು ಗಮನ ಸೆಳೆದಿರುವ ಈ ಚಿತ್ರದಲ್ಲಿ ನಟಿ ರಾಧಿಕಾ ಚೇತನ್ ಅವರ ಪಾತ್ರವೇನು.? ಈ ಸಿನಿಮಾವನ್ನ ಅವರು ಯಾಕೆ ಒಪ್ಪಿಕೊಂಡ್ರು, ಈ ಚಿತ್ರದಲ್ಲಿನ ವಿಶೇಷತೆಗಳೇನು ಎಂಬುದನ್ನ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಚೇತನ್ ಅವರ ಪೂರ್ತಿ ಸಂದರ್ಶನ ಓದಿರಿ....
ಸಂದರ್ಶನ: ನವೀನ್ ಎಂ.ಎಸ್

'ಅಸತೋಮ ಸದ್ಗಮಯ' ಚಿತ್ರವನ್ನ ನೀವು ಆಯ್ಕೆ ಮಾಡಿಕೊಂಡಿದ್ದೇಕೆ.?
''ಈ ಸಿನಿಮಾ ಆಯ್ಕೆ ಮಾಡಿಕೊಂಡಿರುವ ಕಾರಣ ಸ್ಕ್ರಿಪ್ಟ್ ಮತ್ತು ನನ್ನ ಪಾತ್ರ. ಸ್ಕ್ರಿಪ್ಟ್ ಕೇಳಿದಾಗ ತುಂಬಾ ಚೆನ್ನಾಗಿತ್ತು. ಫಿನ್ ಲ್ಯಾಂಡ್ ನಿಂದ ತನ್ನ ಮೂಲವನ್ನ ಹುಡುಕಿಕೊಂಡು ಭಾರತಕ್ಕೆ ಬರುವ ಪಾತ್ರ ಇದು. ಕನ್ನಡದಲ್ಲಿ ಈ ರೀತಿಯ ಸಿನಿಮಾಗಳು ಕಮ್ಮಿ ಅಂತ ನನಗೆ ಅನಿಸ್ತಿದೆ. ನಮ್ಮ ಕರಿಯರ್ ನಲ್ಲಿ ಇಂತಹ ಸಿನಿಮಾನೂ ಮಾಡಿದ್ದೀನಿ ಎಂದು ಗುರುತಿಸಿಕೊಳ್ಳವ ಅವಕಾಶ ಸಿಗಲಿದೆ''

ನಿಮ್ಮ ಪಾತ್ರ ಹೇಗಿರಲಿದೆ.?
''ಈಕೆ ತುಂಬಾ ಟ್ಯಾಲೆಂಟೆಡ್ ಆಗಿರ್ತಾಳೆ. ಯೋಗ ಅಂದ್ರೆ ತುಂಬಾ ಇಷ್ಟ. ನಿಜ ಜೀವನದಲ್ಲೂ ನನಗೂ ಯೋಗ ಅಂದ್ರೆ ತುಂಬ ಇಷ್ಟ. ಭಾರತದ ಸಂಸ್ಕ್ರತಿ ಅಂದ್ರೆ ಅವಳಿಗೆ ಹೆಚ್ಚು ಇಷ್ಟ. ನನಗೂ ಅಷ್ಟೆ. ಭಾವನೆಗಳು, ಸಂಬಂಧಗಳು ಆಕೆಗೆ ತುಂಬ ಇಷ್ಟ. ನನಗೂ ಅದೇ ತರದ ಒಲವು. ಇಲ್ಲಿ ಬಂದು ಇಲ್ಲಿನ ಜನರ ಜೊತೆಯಲ್ಲಿ ಬೆರೆತಾಗ ಏನ್ ಆಗುತ್ತೆ, ಏನೇನ್ ಸವಾಲುಗಳು ಎದುರಿಸುತ್ತಾಳೆ ಎಂಬುದು ತುಂಬಾ ಚೆನ್ನಾಗಿ ಚಿತ್ರೀಸಲಾಗಿದೆ. ಇನ್ನು ಎಜುಕೇಶನ್ ಸಿಸ್ಟಂ ಬಗ್ಗೆಯೂ ಕನ್ನಡಿ ಹಿಡಿಯು ರೀತಿಯಲ್ಲಿ ಒಂದು ಪ್ರಯತ್ನ ಮಾಡಿದ್ದೇವೆ.''

ಈ ಪಾತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು.?
''ಈ ಪಾತ್ರಕ್ಕೆ ನಾನು ತಯಾರಾಗಲು ಹೋದಾಗ, ಫಿನ್ ಲ್ಯಾಂಡ್ ನಿಂದ ಇಲ್ಲಿಗೆ ಬರುವಾಗ, ಅವರು ಹೇಗಿರ್ತಾರೆ, ಅವರ ಭಾಷೆ ಹೇಗಿರುತ್ತೆ, ಅವರ ಉಡುಗೆ ತೊಡುಗೆಗಳು ಹೇಗಿರುತ್ತೆ ಎಂಬುದನ್ನ ಪರಿಗಣಿಸಿ, ನಿರ್ದೇಶಕರ ಜೊತೆ ಕೂತು ಚರ್ಚೆ ಮಾಡಿ ಈ ಲುಕ್ ಮಾಡಲಾಯಿತು. ಪ್ರತಿಯೊಂದು ಚಿತ್ರದಲ್ಲಿ ಡಿಫ್ರೆಂಟ್ ಆಗಿ ಕಾಣಿಸಬೇಕು ಎಂಬ ಉದ್ದೇಶದಿಂದ ನಾನೇ ಸ್ವಂತವಾಗಿ ಕಾಳಜಿ ವಹಿಸಿ, ಅವರ ಆಭರಣ, ವೇಷಭೂಷಣ ಸೇರಿದಂತೆ ಕೆಲವು ಸಿದ್ಧತೆ ಮಾಡಿದ್ದೇನೆ.''

ಪೂರ್ತಿ ಕಮರ್ಷಿಯಲ್ ಸಿನಿಮಾದಲ್ಲಿ ರಾಧಿಕಾ ಅವರನ್ನ ಯಾವಾಗ ನೋಡಬಹುದು.?
''ಖಂಡಿತಾ, ನಾನು ಯಾವಾಗಲೂ ರೆಡಿ. ನಾನು ಹೀಗೆ ಇರಬೇಕು, ಈ ಪಾತ್ರ ಮಾಡಲ್ಲ ಎನ್ನುವುದಿಲ್ಲ. ಪ್ರತಿ ಬಾರಿಯೂ ನಾನು ಸ್ಕ್ರಿಪ್ಟ್ ನೋಡ್ತೀನಿ, ಡೈರೆಕ್ಟರ್ ನೋಡ್ತೀನಿ, ನನ್ನ ಪಾತ್ರ ಹೇಗಿದೆ ಎಂದು ಗಮನ ಹರಿಸುತ್ತೇನೆ. ನನ್ನ ಮನಸ್ಸಿಗೆ ಹತ್ತಿರವಾದ್ರೆ ಅದನ್ನ ತಗೊಳ್ತೀನಿ. ಕಮರ್ಷಿಯಲ್ ಸಿನಿಮಾ ಮಾಡುವ ಆಸೆ ಇದೆ, ಅವಕಾಶ ಸಿಕ್ಕರೇ ಖಂಡಿತಾ ಮಾಡುತ್ತೇನೆ.''

ಪರಭಾಷೆಯಲ್ಲಿ ನಿಮ್ಮ ಚಿತ್ರಗಳನ್ನ ಯಾವಾಗ ನೋಡಬಹುದು.?
''ಖಂಡಿತಾ ಮಾಡುವ ಆಸೆ ಇದೆ. ಚೆನ್ನಾಗಿರುವ ಸ್ಕ್ರಿಪ್ಟ್ ಬಂದ್ರೆ ಪಕ್ಕಾ ಮಾಡ್ತೀನಿ. ಅದರಲ್ಲೂ ಮಣಿರತ್ನಂ ಅವರ ಜೊತೆ ಮಾಡುವ ಆಸೆ ಇದೆ. ನೋಡೋಣ.''

ಇತ್ತೀಚಿಗೆ ನೀವು ನೋಡಿದ ಚಿತ್ರ ಯಾವುದು.?
''ಇತ್ತೀಚಿಗೆ ನಾನು ಆಲಿಯಾ ಭಟ್ ಅವರ 'ರಾಝೀ' ಸಿನಿಮಾ ನೋಡಿದೆ. ಸಾಮಾನ್ಯವಾಗಿ ನಾನು ಈ ಸಿನಿಮಾಗಳನ್ನ ನೋಡಬೇಕು ಎಂದು ಪಟ್ಟಿ ಮಾಡಿರುತ್ತೇನೆ. ಆ ಪಟ್ಟಿಯಲ್ಲಿ ಇವರ ಹೆಸರು ಇದೆ ಅಂದ್ರೆ, ಅವರ ಎಲ್ಲ ಸಿನಿಮಾ ನೋಡ್ತೀನಿ.''


Click it and Unblock the Notifications











