twitter
    For Quick Alerts
    ALLOW NOTIFICATIONS  
    For Daily Alerts

    ಹೆಚ್ಚಿನ ನಿರೀಕ್ಷೆ ಇಲ್ಲ, ಆದರೆ ನಟಿಸುತ್ತಿರಬೇಕೆಂಬ ಹಂಬಲ ಇದೆ: ಅಕ್ಷತಾ ಪಾಂಡವಪುರ

    |

    'ಪಿಂಕಿ ಎಲ್ಲಿ?' ಸಿನಿಮಾದ ನಟನೆಗೆ ಅಕ್ಷತಾ ಪಾಂಡವಪುರ ಅವರಿಗೆ 'ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟ್‌' ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಕಳೆದು ಹೋದ ಎರಡು ತಿಂಗಳ ಮಗುವನ್ನು ಹುಡುಕುವ ತಾಯಿಯ ಪಾತ್ರದಲ್ಲಿ ಅಕ್ಷತಾ ಪಾಂಡವಪುರ ನಟಿಸಿದ್ದು, ತಮ್ಮ ನಟನೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಗುರುತು ಪಡೆದ ಖುಷಿಯನ್ನು 'ಫಿಲ್ಮೀಬೀಟ್' ಜೊತೆಗೆ ಹಂಚಿಕೊಂಡಿದ್ದಾರೆ.

    ''ಪ್ರಶಸ್ತಿ ಬಂದಿರುವುದು ಸಹಜವಾಗಿಯೇ ಖುಷಿಯಾಗಿದೆ. ಆದರೆ ಕೊರೊನಾ ಕಾರಣಕ್ಕೆ ಸಂಭ್ರಮ ಆಚರಿಸಲಾಗದೇ ಇರುವ ಬಗ್ಗೆ ತುಸು ಬೇಸರವೂ ಇದೆ. ಕೊರೊನಾ ಇಲ್ಲದೇ ಇದ್ದಿದ್ದರೆ ಅಲ್ಲಿಗೇ ಹೋಗಿ ಪ್ರಶಸ್ತಿ ಪಡೆದು ಸಂಭ್ರಮಿಸಬಹುದಿತ್ತು'' ಎಂದಿದ್ದಾರೆ ಅಕ್ಷತಾ.

    ನಟನೆಗೆ ಅಕ್ಷತಾ ಪಾಂಡವಪುರ ಪ್ರಶಸ್ತಿ ಪಡೆಯುತ್ತಿರುವುದು ಇದು ಮೊದಲೇನೂ ಅಲ್ಲ, 'ಪಲ್ಲಟ' ಸಿನಿಮಾಕ್ಕಾಗಿ ಈಗಾಗಲೇ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ ಅವರು. ಆದರೆ ಇದು ಅವರ ಮೊದಲ ಅಂತರಾಷ್ಟ್ರೀಯ ಪ್ರಶಸ್ತಿ. ಹಾಗಾಗಿಯೇ ಖುಷಿ ತುಸು ಹೆಚ್ಚು.

    ನಿರ್ದೇಶಕರಿಗೆ ಸ್ಪಷ್ಟತೆ ಇತ್ತು: ಅಕ್ಷತಾ ಪಾಂಡವಪುರ

    ನಿರ್ದೇಶಕರಿಗೆ ಸ್ಪಷ್ಟತೆ ಇತ್ತು: ಅಕ್ಷತಾ ಪಾಂಡವಪುರ

    ಪ್ರಶಸ್ತಿ ಬಂದಿದ್ದಕ್ಕೆ 'ಪಿಂಕಿ ಎಲ್ಲಿ?' ಸಿನಿಮಾದ ನಿರ್ದೇಶಕ ಪೃಥ್ವಿ ಕೋಣನೂರುಗೆ ಧನ್ಯವಾದ ತಿಳಿಸಿರುವ ಅಕ್ಷತಾ, ''ಯಾವ ರೀತಿಯ ನಟನೆ ಬೇಕು ಎಂಬ ಬಗ್ಗೆ ನಿರ್ದೇಶಕ ಪೃಥ್ವಿಗೆ ಸ್ಪಷ್ಟತೆ ಇತ್ತು. ನಟನೆಯನ್ನು ಚೆನ್ನಾಗಿ ಶೇಪ್ ಮಾಡಿದರು. ಜೊತೆಗೆ ಚಿತ್ರೀಕರಣಕ್ಕೆ ಮುನ್ನಾ ಸಾಕಷ್ಟು ತಾಲೀಮು, ಕಾರ್ಯಾಗಾರಗಳನ್ನು ಮಾಡಿಸಿದರು. ನಾನು ಚೆನ್ನಾಗಿ ಅಭಿನಯಿಸಲು ಅವುಗಳು ಸಹಾಯ ಮಾಡಿದವು'' ಎಂದು ನೆನಪಿಸಿಕೊಂಡಿದ್ದಾರೆ.

    ಚಿಮ್ಮುಹಲಗೆ ಆಗುತ್ತದೆಂಬ ನಿರೀಕ್ಷೆ ಇಲ್ಲ: ಅಕ್ಷತಾ

    ಚಿಮ್ಮುಹಲಗೆ ಆಗುತ್ತದೆಂಬ ನಿರೀಕ್ಷೆ ಇಲ್ಲ: ಅಕ್ಷತಾ

    ''ಈ ಅಂತರಾಷ್ಟ್ರೀಯ ಪ್ರಶಸ್ತಿ ನನ್ನ ನಟನಾ ವೃತ್ತಿಗೆ ಚಿಮ್ಮುಹಲಗೆ ಆಗಿಬಿಡುತ್ತದೆ ಎಂಬ ದೊಡ್ಡ ನಿರೀಕ್ಷೆಗಳನ್ನೆಲ್ಲ ಇಟ್ಟುಕೊಂಡಿಲ್ಲ'' ಎಂದಿರುವ ಅಕ್ಷತಾ, ''ನಾನು ನಟಿ, ನನಗೆ ನಟಿಸುತ್ತಿರುವುದು ಮುಖ್ಯವಷ್ಟೆ. ಪ್ರಶಸ್ತಿ ಬಂದಿದೆ ಎಂದ ಕೂಡಲೇ ದೊಡ್ಡ ಪಾತ್ರಗಳು ಸಿಕ್ಕಿಬಿಡುತ್ತವೆ, ದೊಡ್ಡ ನಿರ್ದೇಶಕರು ಅರಸಿ ಬರುತ್ತಾರೆ ಎಂಬೆಲ್ಲ ಭಾರಿ ನಿರೀಕ್ಷೆಗಳು ಇಲ್ಲ. ಆದರೆ ನಟಿಸುತ್ತಿರಬೇಕು ಎಂಬ ಆಸೆಯಂತೂ ಇದೆ'' ಎಂದಿದ್ದಾರೆ.

    ಭಿನ್ನ ಕಥಾವಸ್ತುವುಳ್ಳ ಸಿನಿಮಾ 'ಪಿಂಕಿ ಎಲ್ಲಿ?'

    ಭಿನ್ನ ಕಥಾವಸ್ತುವುಳ್ಳ ಸಿನಿಮಾ 'ಪಿಂಕಿ ಎಲ್ಲಿ?'

    ''ಪಿಂಕಿ ಎಲ್ಲಿ?' ಸಿನಿಮಾ ಒಂದು ಭಿನ್ನ ವಸ್ತುವುಳ್ಳ ಸಿನಿಮಾ. ತಾಯೊಬ್ಬಳು ಕಳೆದು ಹೋದ ತನ್ನ ಎರಡು ತಿಂಗಳ ಮಗುವಿಗಾಗಿ ಬೆಂಗಳೂರಿನಂತ ಜನಾರಣ್ಯದಲ್ಲಿ ಹುಡುಕುವುದು, ಆ ಹುಡುಕಾಟದ ನಡುವೆ ಆಕೆ ಎದುರುಗೊಳ್ಳುವ ಜನ, ಪರಿಸ್ಥಿತಿ, ವ್ಯಕ್ತಿಯಾಗಿ ಆಕೆ ಕಲಿಯುವ ವಿಷಯಗಳು ಇವುಗಳೆಲ್ಲವೂ ಬಹಳ ಪರಿಣಾಮಕಾರಿಯಾಗಿ ಸಿನಿಮಾದಲ್ಲಿ ಅಳವಡಿಸಲಾಗಿದೆ. ಎರಡು ದಿನದಲ್ಲಿ ನಡೆವ ಘಟನೆಗಳ ಗುಚ್ಛ 'ಪಿಂಕಿ ಎಲ್ಲಿ?'' ಎಂದು ಮಾಹಿತಿ ನೀಡಿದರು ಅಕ್ಷತಾ ಪಾಂಡವಪುರ.

    ಪಾತ್ರ ಒಡ್ಡಿದ ಸವಾಲುಗಳು ಅನೇಕ: ಅಕ್ಷತಾ

    ಪಾತ್ರ ಒಡ್ಡಿದ ಸವಾಲುಗಳು ಅನೇಕ: ಅಕ್ಷತಾ

    ''ಸಿನಿಮಾದಲ್ಲಿ ನಟನೆ ಸರಳವಾಗಿಯೇನೂ ಇರಲಿಲ್ಲ. ಸಿನಿಮಾದಲ್ಲಿ ಹಲವಾರು ಮಂದಿ ನಟನೆ ಬಗ್ಗೆ ಅರಿವಿಲ್ಲದವರು ಇದ್ದರು. ಅವರೊಟ್ಟಿಗೆ ನಟಿಸುವಾಗ ಬೇರೆಯದ್ದೇ ಮಾದರಿಯ 'ಅಪ್ರೋಚ್' ಇರಬೇಕಿತ್ತು. ಜೊತೆಗೆ ತನ್ನ ಮಗುವನ್ನು ಕಳೆದುಕೊಂಡ ತಾಯಿಯ ಮನಸ್ಸಿನ ಹೊಯ್ದಾಟವನ್ನು ಮುಖಭಾವದಲ್ಲಿ ಕಟ್ಟಿಕೊಡುವುದು ಯಾವತ್ತೂ ಸವಾಲೆ. ಬಹಳಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಟಿಸಿದ್ದೆ. ಪ್ರಶಸ್ತಿ ಬಂದದ್ದು ಶ್ರಮಕ್ಕೆ ಈಗ ತಕ್ಕ ಪ್ರತಿಫಲ ದೊರೆತಂತಾಗಿದೆ'' ಎಂದು ಪಾತ್ರ ನೀಡಿದ್ದ ಸವಾಲುಗಳನ್ನು ಎದುರಿಸಿದ ರೀತಿ ಬಗ್ಗೆ ಮಾತನಾಡಿದರು ಅಕ್ಷತಾ.

    ವಿಶ್ವಾಸ ಹೆಚ್ಚಿದೆ: ಅಕ್ಷತಾ

    ವಿಶ್ವಾಸ ಹೆಚ್ಚಿದೆ: ಅಕ್ಷತಾ

    ''ಪಿಂಕಿ ಎಲ್ಲಿ?' ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡಕ್ಕೆ ಈ ಹಿಂದೆಯೇ ಇತ್ತು. ಆದರೆ ಕೊರೊನಾ ಕಾರಣಕ್ಕೆ ಸಾಧ್ಯವಾಗಲಿಲ್ಲ. ಇದೀಗ ಹಲವಾರು ಸಿನಿಮೋತ್ಸವಗಳಲ್ಲಿ ನಮ್ಮ ಸಿನಿಮಾ ಪ್ರದರ್ಶನ ಕಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಕಾರಣ ವಿಶ್ವಾಸ ಇನ್ನಷ್ಟು ಹೆಚ್ಚಿದೆ. ಲಾಕ್‌ಡೌನ್ ಮುಗಿದು ಚಿತ್ರಮಂದಿರಗಳು ತೆರೆದ ಬಳಿಕ ಸಿನಿಮಾವನ್ನು ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ'' ಎಂದಿದ್ದಾರೆ ಅಕ್ಷತಾ.

    ಮುಂದಿನ ಸಿನಿಮಾಗಳ ಬಗ್ಗೆ ಮಾತು

    ಮುಂದಿನ ಸಿನಿಮಾಗಳ ಬಗ್ಗೆ ಮಾತು

    ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜೀವನ ಆಧರಿಸಿದ ಸಿನಿಮಾದಲ್ಲಿ ನಾಯಕಿಯಾಗಿ ಅಕ್ಷತಾ ಪಾಂಡವಪುರ ನಟಿಸುತ್ತಿರುವ ಸುದ್ದಿ ಪ್ರಕಟವಾಗಿತ್ತು. ಈ ಬಗ್ಗೆ ಮಾತನಾಡಿದ ಅಕ್ಷತಾ, ''ಹೌದು, ಮಾತುಕತೆಗಳು ನಡೆಯುತ್ತಿವೆ. ಆದರೆ ಚಿತ್ರೀಕರಣ ಪ್ರಾರಂಭವಾಗುವವರೆಗೂ ಯಾವುದನ್ನೂ ಖಚಿತ ಎನ್ನಲಾಗುವುದಿಲ್ಲ. ಜೊತೆಗೆ ಇನ್ನೂ ಕೆಲವು ಸಿನಿಮಾಗಳು ಚರ್ಚೆಯ ಹಂತದಲ್ಲಿವೆ'' ಎಂದಿದ್ದಾರೆ ಅಕ್ಷತಾ ಪಾಂಡವಪುರ.

    English summary
    Actress Akshata Pandavapura talks about best actress award in New York's Indian film fest.
    Friday, June 18, 2021, 15:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X