twitter
    For Quick Alerts
    ALLOW NOTIFICATIONS  
    For Daily Alerts

    'ನನ್ನ ಸಿನಿಮಾನೇ ಅವನ ಕೊನೆ ಸಿನಿಮಾ ಆಗಿಬಿಟ್ಟಿತು ಎಂಬ ವ್ಯಥೆ ಕಾಡುತ್ತಿದೆ'

    |

    ಸಂಚಾರಿ ವಿಜಯ್ ನಟಿಸಿದ ಕೊನೆಯ ಸಿನಿಮಾಗಳಲ್ಲಿ ಒಂದಾದ 'ತಲೆದಂಡ'ದ ಟ್ರೇಲರ್ ನಿನ್ನೆ ರಾತ್ರಿ ಬಿಡುಗಡೆ ಆಗಿದೆ. ಟ್ರೇಲರ್ ನೋಡಿದವರ ಕಣ್ಣಾಲೆಗಳು ಒದ್ದೆಯಾಗಿವೆ. ಇಂಥ ಅದ್ಭುತವಾದ ನಟನನ್ನು ನಾವು ಕಳೆದುಕೊಂಡೆವೆಲ್ಲ ಎಂದು ವ್ಯಥೆ ಪಡುತ್ತಿದ್ದಾರೆ.

    ಕೃಪಾಕರ್ ನಿರ್ದೇಶಿಸಿರುವ 'ತಲೆದಂಡ' ಸಿನಿಮಾದಲ್ಲಿ ಅರೆಬುದ್ಧಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ಸಂಚಾರಿ ವಿಜಯ್ ಅಕಾಲಿಕ ಮರಣದಿಂದ ತೀವ್ರ ಆಘಾತಕ್ಕೆ ಒಳಗಾಗಿರುವ ನಿರ್ದೇಶಕ ಕೃಪಾಕರ್, ಭಾರವಾದ ಮನಸ್ಸಿನಿಂದಲೇ 'ಫಿಲ್ಮೀಬೀಟ್' ಜೊತೆ ಮಾತನಾಡಿದ್ದಾರೆ.

    ''ನನ್ನ ಸಿನಿಮಾನೇ ಅವನ ಕೊನೆಯ ಸಿನಿಮಾ ಆಗಿಬಿಟ್ಟಿತು ಎಂಬ ವ್ಯಥೆ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ' ಎಂದು ಉಕ್ಕಿಬರುತ್ತಿದ್ದ ದುಃಖವನ್ನು ತಡೆದು ಹೇಳಿದರು ಕೃಪಾಕರ್. 'ಅವನಂಥ ನಟನನ್ನು ನಾನು ನೋಡಿಯೇ ಇಲ್ಲ. ಒಂದೆರಡು ಸಿನಿಮಾಗಳಲ್ಲಿ ನಟಿಸಿದವರಿಗೆ ಕೋಡು ಮೂಡಿಬಿಟ್ಟಿರುತ್ತದೆ. ಆದರೆ ರಾಷ್ಟ್ರಪ್ರಶಸ್ತಿ ವಿಜೇತ ನಟನಾದರೂ ಸಾಸಿವೆ ಕಾಳಿನಷ್ಟೂ ಸಹ ಅಹಂ ಇರಲಿಲ್ಲ ವಿಜಯ್‌ಗೆ,'' ಎಂದು ಸಂಚಾರಿ ವಿಜಯ್ ಸರಳತೆಯನ್ನು ಕೊಂಡಾಡಿದರು ಕೃಪಾಕರ್.

    ''ಪರಿಸರದ ಬಗ್ಗೆ, ಅರಣ್ಯದ ಬಗ್ಗೆ ಪ್ರೀತಿ ಬುದ್ಧಿಮಾಂದ್ಯನೊಬ್ಬ ಅಧಿಕಾರಶಾಹಿ ವಿರುದ್ಧ ಹೋರಾಡುವ ಕತೆಯನ್ನು 2007ರಿಂದಲೂ ಹೆಣೆಯುತ್ತಿದ್ದೆ. ನಿಜವಾದ ಬುದ್ಧಿಮಾಂದ್ಯ ವ್ಯಕ್ತಿಯೊಬ್ಬನ ಜೀವನದಿಂದ ಪ್ರೇರೇಪಿತಗೊಂಡು 'ತಲೆದಂಡ' ಕತೆ ರಚಿಸಿಕೊಂಡಿದ್ದೆ. ಚಿತ್ರಕತೆ ಚೆನ್ನಾಗಿ ಮೂಡಿಬರುತ್ತಲೆ ಇದನ್ನು ಸಿನಿಮಾ ಮಾಡಬೇಕೆಂಬ ಹುಕಿ ಹೆಚ್ಚಾಗಿ ಬುದ್ಧಿಮಾಂದ್ಯನ ಪಾತ್ರಕ್ಕಾಗಿ ನಟರನ್ನು ಹುಡುಕುತ್ತಲಿದ್ದೆ. ಆಗ 'ಮಜಾ ಟಾಕೀಸ್‌ಗೆ' ಸಂಚಾರಿ ವಿಜಯ್‌ ಬಂದಿದ್ದ. ಅವನು ಅಲ್ಲಿ ಬುದ್ಧಿಮಾಂದ್ಯನ ಪಾತ್ರವನ್ನು ಅಭಿನಯಿಸಿ ತೋರಿಸಿದ. ಅದು ನನಗೆ ಬಹಳವೇ ಇಷ್ಟವಾಗಿ ಇವನೇ ನನ್ನ ಸಿನಿಮಾದ ನಾಯಕನೆಂದು ನಿಶ್ಚಯ ಮಾಡಿದೆ'' ಎಂದು ವಿಜಯ್‌ ಅನ್ನು ಸಿನಿಮಾಕ್ಕೆ ಆರಿಸಿದ್ದು ಹೇಗೆಂಬ ಬಗ್ಗೆ ಮಾಹಿತಿ ನೀಡಿದರು ಕೃಪಾಕರ್.

    ಸಂಭಾವನೆ ಬಗ್ಗೆ ಯೋಚಿಸಬೇಡಿ ಎಂದಿದ್ದ ವಿಜಯ್

    ಸಂಭಾವನೆ ಬಗ್ಗೆ ಯೋಚಿಸಬೇಡಿ ಎಂದಿದ್ದ ವಿಜಯ್

    2017ರಲ್ಲಿ ವಿಜಯ್‌ರನ್ನು ಭೇಟಿಯಾಗಿ ಕತೆ ಹೇಳಿದ್ದರು ಕೃಪಾಕರ್. ವಿಜಯ್‌ಗೆ ಕತೆ ವಿಪರೀತ ಹಿಡಿಸಿಬಿಟ್ಟಿತು. ''ದಯವಿಟ್ಟು ಈ ಕತೆಯನ್ನು ಬೇರೆಯವರಿಗೆ ಹಳಬೇಡಿ. ನಾನೇ ಈ ಪಾತ್ರದಲ್ಲಿ ನಟಿಸಬೇಕು'' ಎಂದು ಕೃಪಾಕರ್‌ ಬಳಿ ಮನವಿ ಮಾಡಿದ್ದರು ವಿಜಯ್. ''ನಾನು ಅವರಿಗೆ ಹೇಳಿದೆ 'ನನ್ನದು ಸಣ್ಣ ಬಜೆಟ್‌ನ ಸಿನಿಮಾ ಸಂಭಾವನೆ ಎಲ್ಲ ಹೆಚ್ಚಿಗೆ ಕೊಡಲಾಗಲಾರದು' ಎಂದು' ಅದಕ್ಕೆ ಅವರು 'ಅಯ್ಯೋ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ಅದೆಲ್ಲ ಆಮೇಲಿನ ಮಾತು. ಈ ಪಾತ್ರವನ್ನು ನಾನೇ ನಟಿಸುತ್ತೇನೆ'' ಎಂದಿದ್ದರು' ಎಂದು ಕೃಪಾಕರ್ ನೆನಪಿಸಿಕೊಂಡರು. ಒಳ್ಳೆಯ ಪಾತ್ರದಲ್ಲಿ ನಟಿಸಬೇಕೆಂಬ ಹಪಾ-ಹಪಿ ವಿಜಯ್‌ಗೆ ಎಷ್ಟಿತ್ತೆಂಬುದಕ್ಕೆ ಇದನ್ನು ಉದಾಹರಣೆಯಾಗಿ ನೀಡಿದರು.

    ಕೊಟ್ಟಿದ್ದು ತಿಂದ, ಯಾವ ಬೇಡಿಕೆಯೂ ಇಡಲಿಲ್ಲ: ಕೃಪಾಕರ್

    ಕೊಟ್ಟಿದ್ದು ತಿಂದ, ಯಾವ ಬೇಡಿಕೆಯೂ ಇಡಲಿಲ್ಲ: ಕೃಪಾಕರ್

    ''ಸಿನಿಮಾದ ಕತೆಯ ಪೂರ್ಣ ಪಯಣದಲ್ಲಿ ಅವನು ನನ್ನೊಟ್ಟಿಗಿದ್ದ. ಚರ್ಚೆಗಳಲ್ಲಿ ಭಾಗವಹಿಸಿದ. ಕತೆ ಇಂಪ್ರೂವ್ ಮಾಡುವಲ್ಲಿ ನೆರವಾದ. ಒಟ್ಟು 38 ದಿನಗಳಲ್ಲಿ ಚಿತ್ರೀಕರಣ ಮುಗಿಸಿದೆವು. ಬಹುತೇಕ ಎಲ್ಲ ದಿನವೂ ಸಂಚಾರಿ ವಿಜಯ್ ಸೆಟ್‌ನಲ್ಲಿ ಇದ್ದ. ಸೆಟ್‌ನಲ್ಲಿ ಇದ್ದಾಗ ತಾನೊಬ್ಬ ಸೆಲೆಬ್ರಿಟಿ ಎಂಬುದನ್ನು ಎಂದೂ ತೋರಿಗೊಡಲಿಲ್ಲ. ಯಾವೊಂದು ವಸ್ತುವಿಗೂ ಅವನು ಬೇಡಿಕೆ ಇಡಲಿಲ್ಲ. ನನಗೆ ಅದು ಬೇಕು, ಇದು ಬೇಕು ಎಂದು ಕೇಳಲಿಲ್ಲ. ನಾವು ಹೇಳಿದಂತೆ ಮಾಡಿದ. ಕೊಟ್ಟಿದ್ದು ತಿಂದ. ಎಲ್ಲರೊಟ್ಟಿಗೆ ಪ್ರೀತಿಯಿಂದಲೇ ವ್ಯವಹರಿಸಿದ' ಎಂದ ಕೃಪಾಕರ್, 'ಆ ಮನುಷ್ಯನ ಒಳ್ಳೆತನಗಳ ಬಗ್ಗೆ ಹೇಳದೇ ಇದ್ದರೆ ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿದಂತೆ ಆಗುತ್ತದೆ' ಎಂದು ಗದ್ಗದಿತರಾದರು.

    ಪಾತ್ರಕ್ಕೆ ಅವನು ಮಾಡಿಕೊಂಡ ತಯಾರಿ ಅದ್ಭುತ: ಕೃಪಾಕರ್

    ಪಾತ್ರಕ್ಕೆ ಅವನು ಮಾಡಿಕೊಂಡ ತಯಾರಿ ಅದ್ಭುತ: ಕೃಪಾಕರ್

    ನಂತರ ಸಾವರಿಸಿಕೊಂಡು, ''ಬುದ್ಧಿಮಾಂದ್ಯನ ಪಾತ್ರ ಮಾಡಲು ವಿಜಯ್ ಮಾಡಿಕೊಂಡ ತಯಾರಿ ನನಗೆ ಬೆರಗು ಮೂಡಿಸಿಬಿಟ್ಟಿತು. ಬುದ್ಧಿಮಾಂದ್ಯ 'ನಾಗು' (ಆತನ ಜೀವನದಿಂದ ಪ್ರೇರೇಪಣೆಗೊಂಡ ಸಿನಿಮಾ 'ತಲೆದಂಡ')ನ ವಿಡಿಯೋಗಳನ್ನು ನನ್ನಿಂದ ತರಿಸಿಕೊಂಡ. ಅರಣ್ಯ ಅಧಿಕಾರಿಗಳ ಅನುಮತಿ ಪಡೆದುಕೊಂಡು ಸೋಲಿಗರ ಹಾಡಿಗೆ ಹೋಗಿ ಇದ್ದು ಬಂದ. ಒಟ್ಟು ಮೂರು ಬಾರಿ ಹಾಡಿಗೆ ಹೋಗಿದ್ದ. ಮೈಸೂರಿನ 'ನಿರೀಕ್ಷೆ' ಬುದ್ಧಿಮಾಂದ್ಯರ ಆರೈಕೆ ಕೇಂದ್ರಕ್ಕೆ ಸುಮಾರು ನಾಲ್ಕು ಬಾರಿ ಬಂದಿದ್ದ. ಪ್ರತಿಬಾರಿ ಬಂದಾಗಲೂ ಅಲ್ಲಿನ ಬುದ್ಧಿಮಾಂದ್ಯರೊಟ್ಟಿಗೆ ಸಮಯ ಕಳೆದು, ಅವರ ವರ್ತನೆಗಳನ್ನು ವಿಡಿಯೋ ಮಾಡಿಕೊಂಡು ಹೋಗಿ ಅದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದ. ಸಿನಿಮಾದಲ್ಲಿ ಅವನು ನಿರ್ವಹಿಸುತ್ತಿರುವ ಪಾತ್ರದ ಮಾತುಗಳು ತುಸು ಭಿನ್ನವಾಗಿದ್ದವು. ಹಾಗಾಗಿಯೇ ಮೊದಲೇ ಸಂಭಾಷಣೆಗಳನ್ನೆಲ್ಲ ರೆಕಾರ್ಡ್ ಮಾಡಿಸಿಕೊಂಡು ದಿನವೂ ಅಭ್ಯಾಸ ಮಾಡಿ, ಅದನ್ನು ಪುನಃ ರೆಕಾರ್ಡ್ ಮಾಡಿ ನನಗೆ ಕಳುಹಿಸಿ ಸರಿಯಿದೆಯೇ ಎಂದು ಕೇಳುತ್ತಿದ್ದ. ಅವನ ತಾಲೀಮು ನೋಡಿ ನಮಗೆ ಇನ್ನಷ್ಟು ಉತ್ಸಾಹ ಮೂಡಿತು. ಅದಕ್ಕೇ ಹೇಳುವುದು ಅವನೊಬ್ಬ ಪರಿಪೂರ್ಣ ನಟ ಎಂದು. ಅಂಥ ನಟನನ್ನು ನಾನು ಈವರೆಗೆ ನೋಡಿಲ್ಲ' ಎಂದರು ಕೃಪಾಕರ್.

    'ತಿಪ್ಪೇಲಿ ಕೂರೆಂದರೂ, ಗೊಣಗದೇ ಕೂತು ನಟಿಸಿ ಬರುತ್ತಿದ್ದ'

    'ತಿಪ್ಪೇಲಿ ಕೂರೆಂದರೂ, ಗೊಣಗದೇ ಕೂತು ನಟಿಸಿ ಬರುತ್ತಿದ್ದ'

    ''ಚಿತ್ರೀಕರಣದ ಸಮಯದಲ್ಲಿ ಅವನನ್ನು ಕೆಸರಲ್ಲಿ, ತಿಪ್ಪೆಯಲ್ಲಿ, ಕೊಳಕು ಜಾಗಗಳಲ್ಲೆಲ್ಲ ಕೂರಿಸಿದ್ದೆ. ಕತೆಯೇ ಹಾಗಿತ್ತು. ಆದರೆ ಆತ ಮರುಮಾತನಾಡದೆ ಹೇಳಿದ್ದೆಲ್ಲವನ್ನೂ ಮಾಡುತ್ತಿದ್ದ. ಅವನಿಗೆ ನಟಿಸುವುದಷ್ಟೆ ಗೊತ್ತಿತ್ತು. ತಿಪ್ಪೆಯಲ್ಲಿ ಕೂರುವುದಿಲ್ಲ, ಕೆಸರಲ್ಲಿ ಒದ್ದಾಡುವುದಿಲ್ಲ ಎಂದೆಲ್ಲ ಒಂದು ದಿನವೂ ಹೇಳುತ್ತಿರಲಿಲ್ಲ. ಅಡ್ವಾನ್ಸ್ ನೀಡುವಾಗಲೇ ಹೇಳಿದ್ದೆ, ನಿನಗೆ ಕ್ಯಾರಾವ್ಯಾನ್ ನೀಡಲಾಗುವುದಿಲ್ಲ, ದೊಡ್ಡ ಫೈವ್‌ ಸ್ಟಾರ್ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಲು ಆಗುವುದಿಲ್ಲ ಎಂದು. ಅದಕ್ಕೆ ಅವನು, 'ಅಯ್ಯೋ ಅದಕ್ಕೆಲ್ಲ ನೀವು ತಲೆ ಕೆಡಿಸಿಕೊಳ್ಳಬೇಡಿ' ಎಂದಿದ್ದ. ಎಂದೂ ತನಗೆ ಇದು ಬೇಕು, ಅದು ಬೇಕು ಎಂದು ಗೊಣಗದೆ ಪೂರ್ಣ ಚಿತ್ರೀಕರಣ ಮಾಡಿಕೊಟ್ಟ. ಅವನ ಅಭಿನಯ ನಮ್ಮ ಸಿನಿಮಾದ ಕಳಶ. ಅದರಲ್ಲಿಯೂ ಅವನ ಗುರುಗಳಾದ ಮಂಗಳಾ ಈ ಸಿನಿಮಾದಲ್ಲಿ ಅವನ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಬ್ಬರ ದೃಶ್ಯಗಳಂತೂ ಅಮೋಘವಾಗಿ ಮೂಡಿಬಂದಿವೆ'' ಎಂದು ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಕೃಪಾಕರ್.

    'ಶೂಟಿಂಗ್‌ ಮುಗಿದ ಮೇಲೆ ಬೇರೆಯದೇ ವ್ಯಕ್ತಿಯಾಗಿಬಿಡುತ್ತಿದ್ದ'

    'ಶೂಟಿಂಗ್‌ ಮುಗಿದ ಮೇಲೆ ಬೇರೆಯದೇ ವ್ಯಕ್ತಿಯಾಗಿಬಿಡುತ್ತಿದ್ದ'

    'ಚಿತ್ರೀಕರಣದ ಸಮಯದಲ್ಲಿ ವಿಜಯ್, ಪಾತ್ರದಲ್ಲಿ ಅದೆಷ್ಟು ಮಗ್ನನಾಗಿ ಹೋಗಿಬಿಡುತ್ತಿದ್ದನೆಂದರೆ ಬೆಳಿಗ್ಗೆ ಬಂದು ಮೇಕಪ್‌ ಧರಿಸಿದ ಎಂದರೆ ಮುಗಿಯಿತು ಏನೇ ಆದರೂ ಆ ಪಾತ್ರದ ಮೂಡ್‌ನಿಂದ ಹೊರಗೆ ಬರುತ್ತಿರಲಿಲ್ಲ. ಯಾರೊಟ್ಟಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ನಗುತ್ತಲಿರಲಿಲ್ಲ. ನಗಿಸುತ್ತಲೂ ಇರಲಿಲ್ಲ. ಊಟದ ಸಮಯದಲ್ಲೂ ಮೇಕಪ್‌ ತೆಗೆಯುತ್ತಿರಲಿಲ್ಲ. ಶೂಟಿಂಗ್ ಪ್ಯಾಕಪ್‌ ಆಗುವವರೆಗೂ ಸಂಭಾಷಣೆಗಳನ್ನು ಓದುವುದು, ಪಾತ್ರದ ಬಗ್ಗೆ ಚರ್ಚೆ ಮಾಡುವುದು ಇಂಥಹುಗಳಲ್ಲಿಯೇ ತೊಡಗಿರುತ್ತಿದ್ದ. ಆದರೆ ಪ್ಯಾಕಪ್‌ ಆದ ಬಳಿಕ ಬೇರೆ ವ್ಯಕ್ತಿಯೇ ಆಗಿಬಿಡುತ್ತಿದ್ದ. ಎಲ್ಲರನ್ನೂ ಮಾತನಾಡಿಸುತ್ತಿದ್ದ. ನಗಿಸುತ್ತಿದ್ದ, ಕಾಲೆಳೆಯುತ್ತಿದ್ದ ಆದರೆ ಮೇಕಪ್‌ ಇದ್ದಾಗ ಅವನೊಬ್ಬ ಪಕ್ಕಾ ಪ್ರೊಫೆಶನಲಿಸ್ಟ್‌. ಅವನ ಏಕಾಗ್ರತೆಯನ್ನು ಯಾರೂ ಭಂಗ ಮಾಡಲಾಗುತ್ತಿರಲಿಲ್ಲ' ಎಂದು ವಿಜಯ್‌ಗೆ ಇದ್ದ ಶ್ರದ್ಧೆಯ ಬಗ್ಗೆ ಹೇಳಿದರು ಕೃಪಾಕರ್.

    'ಮಮ್ಮುಟಿ, ಕಮಲ್ ಹಾಸನ್‌ರ ಬೈಟ್ ತೆಗೆದುಕೊಳ್ಳೋಣ ಎಂದಿದ್ದ'

    'ಮಮ್ಮುಟಿ, ಕಮಲ್ ಹಾಸನ್‌ರ ಬೈಟ್ ತೆಗೆದುಕೊಳ್ಳೋಣ ಎಂದಿದ್ದ'

    ''ವಿಜಯ್‌ ತಲೆಯಲ್ಲಿ ಸದಾ ಸಿನಿಮಾವೇ ತುಂಬಿರುತ್ತಿತ್ತು. ಈ ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕರೆದುಕೊಂಡು ಹೋಗುವ ಆಸೆ ವಿಜಯ್‌ಗೆ ಇತ್ತು. 'ನನಗೆ ಮಮ್ಮುಟಿ ಪರಿಚಯ ಇದ್ದಾರೆ ಅವರಿಂದ ಸಿನಿಮಾ ಬಗ್ಗೆ ಬೈಟ್ ತೆಗೆದುಕೊಳ್ಳೋಣ. ಕಮಲ್ ಹಾಸನ್‌ ಅವರಿಂದ ಹಾಗೂ ಇನ್ನೂ ಕೆಲವು ರಾಷ್ಟ್ರಪ್ರಶಸ್ತಿ ವಿಜೇತರಿಂದ ಬೈಟ್ ತೆಗೆದುಕೊಂಡು ಪ್ರಚಾರ ಮಾಡೋಣ. ಸಿನಿಮಾವನ್ನು ಸಾಮಾಜಿಕ ಜಾಲತಾಣದಲ್ಲಿಯೂ ಚೆನ್ನಾಗಿ ಪ್ರೊಮೋಟ್ ಮಾಡೋಣ' ಎಂದೆಲ್ಲ ಹೇಳುತ್ತಿದ್ದ. ಸಾಯುವ ಕೆಲವು ದಿನಗಳ ಹಿಂದಷ್ಟೆ ಇದನ್ನೆಲ್ಲ ಅವನು ಹೇಳಿದ್ದ. ಸಾಯುವ ದಿನ ಸಹ ನನಗೆ ಕರೆ ಮಾಡಿ ಮೈಸೂರಿನ ಯಾರೋ ಕಲಾವಿದರು ಫುಡ್ ಕಿಟ್ ಬೇಕೆಂದು ಕರೆ ಮಾಡಿದ್ದರು. ಅವರಿಗೆ ನಿಜವಾಗಿಯೂ ಅಗತ್ಯ ಇದೆಯಾ ಒಮ್ಮೆ ಪರಿಶೀಲಿಸಿ ಹೇಳಿ ಎಂದು ನಂಬರ್ ಕೊಟ್ಟ. ಅಂತೆಯೇ ನಾನು ಪರೀಕ್ಷಿಸಿ ಅವರಿಗೆ ಅವಶ್ಯಕತೆ ಇರುವುದಾಗಿ ಹೇಳಿದೆ. ಕೂಡಲೇ ನನ್ನ ಖಾತೆಗೆ ಹಣ ಹಾಕಿ ನೀವೆ ಅವರಿಗೆ ಫುಡ್‌ಕಿಟ್ ಕೊಡಿಸಿಬಿಡಿ ಎಂದ. ನಾನೂ ತುಸು ಹಣ ಜೋಡಿಸಿ ಫುಡ್‌ ಕಿಟ್ ಕೊಡಿಸಿದೆ' ಎಂದು ವಿಜಯ್‌ ಜೊತೆ ಕೊನೆಯದಾಗಿ ಆಡಿದ ಮಾತುಗಳನ್ನು ಮೆಲುಕು ಹಾಕಿದರು ಕೃಪಾಕರ್.

    ಇದಕ್ಕಿಂತಲೂ ಉದಾಹರಣೆ ಬೇಕೆ?

    ಇದಕ್ಕಿಂತಲೂ ಉದಾಹರಣೆ ಬೇಕೆ?

    'ತಲೆದಂಡ' ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದಂತೆ ವಿಜಯ್ ಮಾಡಿದ್ದ ಯೋಜನೆಯೊಂದನ್ನು ಕೃಪಾಕರ್ ಹಂಚಿಕೊಂಡರು. ಸಂಚಾರಿ ವಿಜಯ್‌ಗೆ ನಟಿಸಲು ಅದೆಷ್ಟು ಉತ್ಸಾಹ, ಆಸೆ ಇತ್ತು. ಸ್ವಂತ ಹಿತಾಸಕ್ತಿಗಿಂತಲೂ ಸಿನಿಮಾ ಅವರಿಗೆ ಎಷ್ಟು ಮುಖ್ಯವಾಗಿತ್ತು ಎಂಬುದಕ್ಕೆ ಅವರ ಈ ಯೋಜನೆಯನ್ನು ಉದಾಹರಣೆಯಾಗಿ ನೋಡಬಹುದು. ''ತಲೆದಂಡ' ಸಿನಿಮಾದ ಪೋಸ್ಟರ್ ಅಥವಾ ಟ್ರೇಲರ್‌ ಬಿಡುಗಡೆಯನ್ನು ಸಿಎಂ ಯಡಿಯೂರಪ್ಪ ಕೈಯಿಂದ ಮಾಡಿಸೋಣ'' ಎಂದರಂತೆ ಕೃಪಾಕರ್. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ವಿಜಯ್, ''ಹೂ ಸರ್, ಜನರೆಲ್ಲ ಸೇರಿದ್ದಾಗ ನಾನು ಸಿನಿಮಾದ ಆ ಬುದ್ಧಿಮಾಂದ್ಯನ ವೇಷದಲ್ಲಿಯೇ ಜನರ ನಡುವಿನಿಂದ ವೇದಿಕೆಗೆ ಓಡಿಹೋಗಿ ಸಿಎಂ ಕೈಗೆ ಸಸಿಯೊಂದನ್ನು ನೀಡುತ್ತೀನಿ. ಸೂಪರ್ ಆಗಿರುತ್ತೆ' ಎಂದರಂತೆ. ಸಿಎಂ ಒಬ್ಬರು ವೇದಿಕೆ ಮೇಲಿದ್ದಾರೆಂದರೆ, ಸೂಟು-ಬೂಟು ಧರಿಸಿ ಅವರ ಪಕ್ಕ ನಿಂತು ಫೋಟೊಕ್ಕೆ ಫೋಸ್ ನೀಡುವುದು ಹಲವರ ಮೊದಲ ಆದ್ಯತೆ ಆಗಿರುತ್ತದೆ. ಆದರೆ ವಿಜಯ್, 'ಬುದ್ಧಿಮಾಂದ್ಯನ ವೇಷ ಧರಿಸಿಕೊಂಡು ಸಿಎಂ ಎದುರು ಬರುತ್ತೇನೆ' ಎಂದು ಯೋಚಿಸುವುದರಲ್ಲಿಯೇ ಅರ್ಥವಾಗುತ್ತದೆ ಅವರಿಗೆ ಸಿನಿಮಾದ ಮೇಲೆ ಅದೆಷ್ಟು ಪ್ರೀತಿ ಇತ್ತು ಎಂಬುದು.

    English summary
    Sanchari Vijay's last movie 'Taledanda' director Krupakar talked about Sanchari Vijay. He said he is a great actor, i never seen an actor like him.
    Tuesday, June 15, 2021, 19:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X