For Quick Alerts
ALLOW NOTIFICATIONS  
For Daily Alerts

ಕನ್ನಡದ ಒರಿಜಿನಲ್ ಪ್ರತಿಭೆ ವರ್ಜಿನಿಯಾ ಮಾತುಕತೆ

|

ವರ್ಜಿನಿಯಾ ಎನ್ನುವ ಹೆಸರು ಕೇಳಿದಾಕ್ಷಣ ಇವರು ಪರಭಾಷೆಯವರೇನೋ ಎನ್ನುವ ಸಂದೇಹ ಸಹಜ. ಆದರೆ ಅಲ್ಲ, ಈಕೆ ಅಚ್ಛಗನ್ನಡತಿ. ಇತ್ತೀಚೆಗೆ ತೆರೆಕಂಡ ಮಹಿರಾ ಸಿನಿಮಾ ಸಾಕಷ್ಟು ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸಿತು. ಪರದೆಯ ಹಿಂದಿನ ತಂತ್ರಜ್ಞರಾಗಿ ಕೆಲವರು ಬಂದರೆ ನಾಯಕಿಯಾಗಿ ಕಾಣಿಸಿಕೊಂಡ ವರ್ಜಿನಿಯಾ ರಾಡ್ರಿಗಸ್ ಕೂಡ ಕನ್ನಡ ಬೆಳ್ಳಿತೆರೆಗೆ ಹೊಸ ಮುಖವೇ.

ಮೂಲತಃ ಮಂಗಳೂರಿನ ಕದ್ರಿಯವರಾದ ವರ್ಜಿನಿಯಾ ಕೊಂಕಣಿ,ತುಳು, ಕನ್ನಡ, ಮಲಯಾಳಂ, ಹಿಂದಿ, ಇಂಗ್ಲಿಷ್, ಒಂದಷ್ಟು ಮರಾಠಿ ಮತ್ತು ಸ್ವಲ್ಪ ಜರ್ಮನ್ ಇಷ್ಟು ಭಾಷೆಗಳನ್ನು ಮಾತನಾಡಬಲ್ಲವರು! ಕನ್ನಡದಲ್ಲಿ ಸಿನಿಮಾ ಮಾಡಿಲ್ಲವಾದರೂ ರಂಗಭೂಮಿ ನಾಟಕಗಳ ಮೂಲಕ ಗಮನ ಸೆಳೆದ ಪ್ರತಿಭಾವಂತೆ. ಹದಿನಾರರ ಹರೆಯದಲ್ಲೇ ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದ ಇವರು ಮಿಸ್ ಕೊಂಕಣ್ ಆದಂಥವರು.

ಮುಂಬೈನಲ್ಲಿ ಲ್ಯಾಕ್ಮೆ ಫ್ಯಾಷನ್ ಕಾರ್ಯಕ್ರಮದಲ್ಲಿ ಪ್ರಿಯಾಂಕ ಚೋಪ್ರಾ ಮೊದಲಾದವರ ಜತೆಗೆ ರ್ಯಾಂಪ್ ವಾಕ್ ಮಾಡಿ ಗುರುತಿಸಿಕೊಂಡ ಇವರು ತಾಯಿ ಪಾತ್ರದ ಮೂಲಕ ಕನ್ನಡ ಸಿನಿಮಾಕ್ಕೆ ಪ್ರವೇಶಿಸಿದ್ದು ಮಾತ್ರ ವಿಶೇಷ. ಈ ಲೇಟ್ ಎಂಟ್ರಿ ಸೇರಿದಂತೆ ಸಾಕಷ್ಟು ವಿಶೇಷ ಮಾಹಿತಿಗಳನ್ನು ಫಿಲ್ಮೀಬೀಟ್ ಜತೆಗೆ ಹಂಚಿಕೊಂಡಿದ್ದಾರೆ ವರ್ಜಿನಿಯಾ ರಾಡ್ರಿಗಸ್. ಮುಂದೆ ಓದಿ...

 ನೀವು ಕನ್ನಡದವರಾದರೂ ಮೊದಲ ಸಿನಿಮಾ ಮಲಯಾಳಂನಲ್ಲಿ ಹೇಗಾಯಿತು?

ನೀವು ಕನ್ನಡದವರಾದರೂ ಮೊದಲ ಸಿನಿಮಾ ಮಲಯಾಳಂನಲ್ಲಿ ಹೇಗಾಯಿತು?

ನಾನು ಹುಟ್ಟಿ ಬೆಳೆದಿದ್ದು ವಿದ್ಯಾರ್ಜನೆ ಮಾಡಿದ್ದು ಎಲ್ಲವೂ ಮಂಗಳೂರಲ್ಲಿ. ರಂಗಭೂಮಿ ಪ್ರವೇಶವೂ ಮಂಗಳೂರಲ್ಲೇ ಆಯಿತು. ಆಗ ನನಗೆ ಹನ್ನೊಂದನೇ ವರ್ಷ. ಹಾಗಾಗಿ ಬಾಲ್ಯದಿಂದಲೇ ರಂಗಭೂಮಿಯಲ್ಲಿ ಆಸಕ್ತಿ ಇತ್ತು. ಭರತನಾಟ್ಯ, ಪಾಶ್ಚಾತ್ಯ ನೃತ್ಯಗಳನ್ನು ಕೂಡ ಕಲಿತೆ. ಕನ್ನಡ, ಕೊಂಕಣಿಗಳಲ್ಲಿ ನಾಟಕ ಮಾಡಿದೆ. ಆದರೆ ಹಿಂದಿ ಇಂಗ್ಲಿಷ್ ಗಳಲ್ಲಿ ಮಾಡಿರುವ ನಾಟಕಗಳು ಹೆಚ್ಚು. ಅವುಗಳ ಹೊರತು ಸಿನಿಮಾರಂಗಕ್ಕೆ ಬರಬೇಕು ಎನ್ನುವ ಆಕಾಂಕ್ಷೆಯೇ ನನಗೆ ಇರಲಿಲ್ಲ. ಬಹುಶಃ ಅದಕ್ಕೆ ನಾನು ವೇದಿಕೆ ಬಿಟ್ಟು ಬೇರೆ ಕಡೆ ಜನರೊಂದಿಗೆ ಹೆಚ್ಚು ಬೆರೆಯದಿರುವುದು ಕಾರಣವಿರಬಹುದು. ಹಾಗಾಗಿ ಸಿನಿಮಾ ಕ್ಷೇತ್ರಕ್ಕಿಂತ ನನಗೆ ರಂಗಭೂಮಿ ಇಷ್ಟವೆನಿಸಿತ್ತು. ನಾಟಕಗಳು ವೇದಿಕೆಯ ಮೇಲೆ ನಟಿಸಿದರೆ ಆಗಲೇ ಮುಗಿಯುತ್ತದೆ. ಆದರೆ ಸಿನಿಮಾಗಳು ನಾವು ನಟಿಸಿ ಮುಗಿಸಿದ ಮೇಲೆ ನಮಗೂ ನೋಡಬಹದಾದ ಕೃತಿಯಾಗಿ ಎದುರಿಗೆ ಸಿಗುತ್ತದೆ. ನನ್ನ ನಟನೆಯನ್ನು ನಾನೇ ಎದುರಿಗೆ ನಿಂತು ನೋಡುವುದು ನನಗೆ ಕಂಫರ್ಟೇಬಲ್ ಆಗಿರಲಿಲ್ಲ. ಆದರೆ ಮಲಯಾಳಂ ಸಿನಿಮಾದಿಂದ ದೊರಕಿದ ಸಬ್ಜೆಕ್ಟ್ ಚಿತ್ರವನ್ನು ಒಪ್ಪುವಂತೆ ಮಾಡಿತು.

 ನಿಮ್ಮ ಆಯ್ಕೆಯ ಸಿನಿಮಾಗಳು ಇತರ ಚಿತ್ರಗಳಿಗಿಂತ ಹೇಗೆ ವಿಭಿನ್ನವಾಗಿರುತ್ತವೆ?

ನಿಮ್ಮ ಆಯ್ಕೆಯ ಸಿನಿಮಾಗಳು ಇತರ ಚಿತ್ರಗಳಿಗಿಂತ ಹೇಗೆ ವಿಭಿನ್ನವಾಗಿರುತ್ತವೆ?

ಅದು ಸುಮಾರು ಮೂರುವರೆ ವರ್ಷಗಳ ಹಿಂದಿನ ಮಾತು. ಮಲಯಾಳಂ ಚಿತ್ರರಂಗದಲ್ಲಿ ಉತ್ತಮ ಕಲಾವಿದರಿಗೆ ಕೊರತೆಯಿಲ್ಲ. ಹಾಗಿದ್ದರೂ ಅವರು ನಟನೆಗೆ ಪ್ರಾಧಾನ್ಯತೆ ಇರುವ ಪಾತ್ರವೊಂದನ್ನು ನೀವೇ ಮಾಡಿ ಎಂದು ನನ್ನಲ್ಲಿ ಕೇಳಿಕೊಂಡಿದ್ದೇ ವಿಶೇಷವಾಗಿತ್ತು. ಅದು ಬೇರೆ ಸಿಂಕ್ ಸೌಂಡಲ್ಲಿ ಮೂಡಿ ಬಂದಂಥ ಚಿತ್ರವಾದ ಕಾರಣ ನಾನು ಮಲಯಾಳಂ ಕಲಿತು ಮಾತನಾಡಬೇಕಾದ ಚಾಲೆಂಜ್ ಕೂಡ ಇತ್ತು. ಸಮರ್ಪಣಂ ಎನ್ನುವ ಆ ಚಿತ್ರದಲ್ಲಿ ನಾನು ಸಾಯ ಎನ್ನುವ ಪಾತ್ರ ಮಾಡಿದ್ದೆ. ಅದರಲ್ಲಿ ಪೊಲೀಸ್ ಸರ್ಜನ್ ಪಾತ್ರ ನನ್ನದಾಗಿತ್ತು. ವಿಶೇಷ ಏನೆಂದರೆ ಇದೀಗ ಕನ್ನಡದಲ್ಲಿ ತೆರೆಕಂಡಿರುವ ಮೊದಲ ಚಿತ್ರದಲ್ಲಿಯೂ ನಾನು ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಮಾತ್ರವಲ್ಲ, ಅಲ್ಲಿ ಸಾಯ ಎಂದು ಕರೆಸಿಕೊಂಡರೆ ಇಲ್ಲಿನ ನನ್ನ ಪಾತ್ರದ ಹೆಸರು ಮಾಯ ಆಗಿತ್ತು!

 ನಿಮ್ಮ ಪ್ರಥಮ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು?

ನಿಮ್ಮ ಪ್ರಥಮ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು?

ಮಲಯಾಳಂನ ಸಿನಿಮಾ ಕಮರ್ಷಿಯಲ್ ಯಶಸ್ಸು ಪಡೆಯಲಿಲ್ಲವಾದರೂ, ವಿಮರ್ಶಕರಿಂದ ಉತ್ತಮ ಅಭಿಪ್ರಾಯವನ್ನು ಪಡೆಯುವ ಮೂಲಕ ಹೊಸ ಅವಕಾಶಗಳು ಬರತೊಡಗಿದವು. ಬಳಿಕ ‘ಮರುವಡಿ' ಎನ್ನುವ ಚಿತ್ರ ಲಭಿಸಿತು. ಮಲಯಾಳಂನ ಖ್ಯಾತ ನಿರ್ದೇಶಕ ವಿಎಂ ವಿನು ಅವರು ಅದರ ಡೈರೆಕ್ಟರ್. ಅದು ಕೂಡ ಬಿಡುಗಡೆಯಾಗಿದ್ದು ಮೂರನೇ ಮಲಯಾಳಂ ಚಿತ್ರವೂ ಒಂದು ಹಂತದ ಶೂಟಿಂಗ್ ಪೂರ್ತಿಗೊಳಿಸಿದೆ.

 ಕನ್ನಡದಲ್ಲಿ ಮಹಿರಾ ಸಿನಿಮಾ ದೊರಕಿದ್ದು ಹೇಗೆ?

ಕನ್ನಡದಲ್ಲಿ ಮಹಿರಾ ಸಿನಿಮಾ ದೊರಕಿದ್ದು ಹೇಗೆ?

ಪ್ರಸ್ತುತ ಬೆಂಗಳೂರಿನಲ್ಲಿ ನಿರ್ಮಾಪಕರಾಗಿರುವ ಅವಿನಾಶ್ ಶೆಟ್ಟಿಯವರು ರಂಗಭೂಮಿ ದಿನಗಳಿಂದಲೂ ಆತ್ಮೀಯರು. ಅವರು ಮಹಿರಾ ಸಿನಿಮಾದ ಬಗ್ಗೆ ಹೇಳಿದರು. ಚಿತ್ರದಲ್ಲಿ ಆ್ಯಕ್ಷನ್ ಇದೆ ಎನ್ನುವುದನ್ನು ಹೇಳಿದಾಗ, ಈ ಪಾತ್ರವೂ ನನಗೆ ವಿಭಿನ್ನ ಎನಿಸಿತು. ನನ್ನ ವಯಸ್ಸಿಗೆ ನಾಯಕಿ ಎಂದರೆ ನನಗೆ ಇಷ್ಟವಿರಲಿಲ್ಲ. ಆದರೆ ಮಗಳ ಮುದ್ದಿನ ತಾಯಿ ಜತೆಗೆ ಆಕ್ಷನ್ ದೃಶ್ಯಗಳಲ್ಲಿ ಭಾಗಿಯಾಗುವ ಪೊಲೀಸ್ ಅಧಿಕಾರಿ ಎಂದು ಹೇಳಿದ್ದು ಕೇಳಿ ಖುಷಿಯಾಯಿತು. ಆದರೆ ಕಂಡೀಶನ್ಸ್ ಆಗಿ ಚಿತ್ರದ ಹೊಡೆದಾಟಗಳಲ್ಲಿ ನೀವೇ ಭಾಗಿಯಾಗಬೇಕು ಎಂದಿದ್ದರು. ಅದು ಇನ್ನಷ್ಟು ಚಾಲೆಂಜ್ ತುಂಬಿತು. ಚಿತ್ರಕ್ಕಾಗಿಯೇ ಸ್ಟಂಟ್ ಮಾಸ್ಟರ್ ಚೇತನ್ ಡಿಸೋಜಾ ಅವರ ಬಳಿ ಸ್ಟಂಟ್ಸ್ ಅಭ್ಯಾಸ ಮಾಡಿದೆ.

 ಮಹಿರಾ ಚಿತ್ರೀಕರಣದ ವೇಳೆ ನಡೆದಂಥ ಆದರೆ ಇದುವರೆಗೆ ಎಲ್ಲಿಯೂ ಹೇಳಿರದ ಘಟನೆ ಏನಾದರೂ ಇದೆಯೇ?

ಮಹಿರಾ ಚಿತ್ರೀಕರಣದ ವೇಳೆ ನಡೆದಂಥ ಆದರೆ ಇದುವರೆಗೆ ಎಲ್ಲಿಯೂ ಹೇಳಿರದ ಘಟನೆ ಏನಾದರೂ ಇದೆಯೇ?

ಮಹಿರಾ ಚಿತ್ರದ ಶೂಟಿಂಗ್ ಸಮಯದಲ್ಲಿ ಮೊದಲೇ ಹೇಳಿದಂತೆ ಫೈಟ್ಸ್ ಹೆಚ್ಚು ಇದ್ದವು. ಮೊಣಕಾಲೂರಿ ಹೊಡೆದಾಟ ನಡೆಸುವಂಥ ಸಂದರ್ಭದಲ್ಲಿ ನೀ ಪ್ಯಾಡ್ ಧರಿಸಬೇಕಾಗಿತ್ತು. ಆದರೆ ಇಡೀ ದಿನ ಟೈಟ್ ಜೀನ್ಸ್ ಪ್ಯಾಂಟ್ ನೊಳಗೆ ಟೈಟ್ ನೀ ಪ್ಯಾಡ್ ಇದ್ದ ಕಾರಣ ರಕ್ತ ಹೆಪ್ಪುಗಟ್ಟಿದ ಘಟನೆಗಳು ನಡೆದಿದ್ದವು. ದೈಹಿಕವಾದ ನೋವಲ್ಲೇ ಆ ದೃಶ್ಯಗಳಲ್ಲಿ ಭಾಗಿಯಾಗುತ್ತಿದ್ದೆ. ಈ ಬಗ್ಗೆ ನಾನು ಇದುವರೆಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಯಾಕೆಂದರೆ ಪರದೆಯಲ್ಲಿ ಆ ದೃಶ್ಯಗಳು ಹೇಗೆ ಮೂಡಿ ಬರುತ್ತಿವೆ ಎನ್ನುವುದಷ್ಟೇ ಮುಖ್ಯವಾಗಿತ್ತು. ಹಾಗಂತ ಹೇಗೆ ಮೂಡಿ ಬರುತ್ತಿದೆ ಎನ್ನುವ ಬಗ್ಗೆಯೂ ನನಗೆ ಗೊತ್ತಿರಲಿಲ್ಲ. ಯಾಕೆಂದರೆ ನಿರ್ದೇಶಕರು ಮಾನಿಟರ್ ನೋಡಲು ಕರೆದರೆ ಮಾತ್ರ ಆ ಕಡೆಗೆ ಹೋಗುತ್ತಿದ್ದೆ. ಹೊರತಾಗಿ ಅಲ್ಲಿ ಹೋಗಿ ನಿರ್ದೇಶಕರ ಕೆಲಸದಲ್ಲಿ ಮೂಗು ತೂರಿಸಬಾರದು ಎಂದು ಸುಮ್ಮನಿದ್ದೆ.

 ಇಂಥ ಚಾಲೆಂಜಿಂಗ್ ಪಾತ್ರಗಳ ನಿರ್ವಹಣೆಗೆ ನಿಮ್ಮ ಮನೆಯಿಂದ ಸಿಗುತ್ತಿರುವ ಬೆಂಬಲ ಹೇಗಿದೆ?

ಇಂಥ ಚಾಲೆಂಜಿಂಗ್ ಪಾತ್ರಗಳ ನಿರ್ವಹಣೆಗೆ ನಿಮ್ಮ ಮನೆಯಿಂದ ಸಿಗುತ್ತಿರುವ ಬೆಂಬಲ ಹೇಗಿದೆ?

ನಾನು ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ತೊಡಗಿದ್ದಾಗಲೇ ನನ್ನ ತಾಯಿ, ತಮ್ಮಂದಿರು ತುಂಬ ಬೆಂಬಲ ನೀಡಿದ್ದರು. ನಾನು ಹದಿನಾರು ವರ್ಷದಿಂದಲೇ ಮಾಡಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದೆ. ಮಿಸ್ ಕೊಂಕಣ್ ಕೂಡ ಆಗಿದ್ದೆ. ಆ ದಿನಗಳಿಂದಲೇ ಮಾಡೆಲಿಂಗ್, ಸಿನಿಮಾ ಆಫರ್ ಗಳು ಬರುತ್ತಿದ್ದವು. ಆದರೆ ಸಿನಿಮಾಗಿಂತ ರಂಗಭೂಮಿಯಲ್ಲೇ ತೊಡಗಿಸಿಕೊಂಡೆ. ಇದುವರೆಗೆ ಸುಮಾರು 45 ನಾಟಕಗಳ 250ಕ್ಕೂ ಅಧಿಕ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದೇನೆ. ಬೆಂಗಳೂರು ಹೊರತಾಗಿ ಮುಂಬೈ, ದೆಹಲಿ, ಬರೇಲಿ ಮೊದಲಾದೆಡೆ ನಾಟಕ ಮಾಡಿದ್ದೀನಿ. ಥಿಯೇಟರ್ ವರ್ಕ್ ಶಾಪ್ ಕೂಡ ನೀಡಿದ್ದೇನೆ. ಮಕ್ಕಳ ನಾಟಕ ನಿರ್ದೇಶನವನ್ನು ಮಾಡಿದ್ದೇನೆ. ಇವೆಲ್ಲ ಮಾಡಿ ಇಂದು ಈ ಹಂತಕ್ಕೆ ಬಂದಿದ್ದೇನೆ ಎಂದರೆ ಅದಕ್ಕೆ ನನಗೆ ಮನೆಯಿಂದ ಸಿಕ್ಕ ಬೆಂಬಲವೇ ಮುಖ್ಯ ಕಾರಣ ಎನ್ನುತ್ತೇನೆ.

 ನಿಮ್ಮ ಮುಂದಿನ ಗುರಿ ಏನು?

ನಿಮ್ಮ ಮುಂದಿನ ಗುರಿ ಏನು?

ಕಲಾವಿದೆಯಾಗಿ ನನಗೆ ಇದೇ ಗುರಿ ಅಂತ ಏನೂ ಇಲ್ಲ. ಆದರೆ ಎಲ್ಲ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಬೇಕು ಎನ್ನುವ ಆಸೆ ಇದೆ. ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡುತ್ತೀನಿ ಅಂತ ಪ್ರಶಸ್ತಿಗಳಿಗಾಗಿ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡುವುದಿಲ್ಲ. ಬಂದರೆ ಸಂತಸದಿಂದಲೇ ಸ್ವೀಕರಿಸುತ್ತೇನೆ. ಆದರೆ ನಾನು ಪ್ರತಿಯೊಂದು ಪಾತ್ರಗಳಿಂದ ಕಲಿಯಲು ಬಯಸುತ್ತೇನೆ. ಇದೀಗ ಮಹಿರಾ ಚಿತ್ರಕ್ಕಾಗಿ ಆರಂಭಿಸಿದ ಫೈಟ್ ಟ್ರೈನಿಂಗ್ ಅನ್ನು ಹಾಗೆಯೇ ಮುಂದುವರಿಸಿದ್ದೇನೆ. ಯಾಕೆಂದರೆ ಅದು ಒಂದು ವಿದ್ಯೆ. ಅಂಥ ವಿದ್ಯೆಗಳು ನಮ್ಮ ಜೀವನಾವಧಿಯ ಶಾಶ್ವತ ಸಂಪತ್ತು. ಅವುಗಳನ್ನು ಯಾರೂ ನಮ್ಮಿಂದ ಕದಿಯಲಾರರು.

English summary
Story about Kannada Film Heroine Virginia Rodriguez, about her life journey at film industry.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more