ಸ್ಟಾರ್ ಹೀರೋಗಳ ಫೇವರೇಟ್ ತಂತ್ರಜ್ಞ, ಯಾರಿವರು..?
ಈಗೀಗ ಸ್ಪಾಟ್ ಎಡಿಟಿಂಗ್ ಅನ್ನು ಕನ್ನಡದ ಬಹುತೇಕ ಎಲ್ಲ ಸಿನಿಮಾಗಳು ಬಳಸುತ್ತಿವೆ. ಚಿತ್ರೀಕರಣವಾಗುವ ಸ್ಥಳದಲ್ಲಿಯೇ ಒಂದು ಶಾಟ್ ಮುಗಿದ ನಂತರ ಅಲ್ಲೇ ದೃಶ್ಯವನ್ನು ಎಡಿಟ್ ಮಾಡಿ ನೋಡುವುದೇ ಸ್ಪಾಟ್ ಎಡಿಟಿಂಗ್.
ಕನ್ನಡದಲ್ಲಿ ಸ್ಪಾಟ್ ಎಡಿಟಿಂಗ್ ವಿಭಾಗದಲ್ಲಿ ಒಬ್ಬ ಪ್ರತಿಭಾವಂತ ತಂತ್ರಜ್ಞ ಗುರುತಿಸಿಕೊಂಡಿದ್ದಾರೆ. ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದರ ನಂತರ ಒಂದು ಅವಕಾಶಗಳು ಅವರಿಗೆ ಸಿಗುತ್ತಿದೆ. ಅವರೇ ಉಮೇಶ್ ಆರ್ ಬಿ.
ಉತ್ತರ ಕರ್ನಾಟಕ ಭಾಗಗಳಲ್ಲಿ ಸಿನಿಮಾದ ಕ್ರೇಜ್ ಬಹಳ ಹೆಚ್ಚು. ಬಿಜಾಪುರದಲ್ಲಿ ಸಿನಿಮಾ ಬಗ್ಗೆ ಕನಸು ಕಾಣುತ್ತಿದ್ದ ಹುಡುಗ ಈಗ ಚಿತ್ರರಂಗದಲ್ಲಿ ಒಂದೊಂದೆ ಮೆಟ್ಟಿಲು ಏರುತ್ತಿದ್ದಾರೆ. ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ. ಕಷ್ಟಪಟ್ಟು ಇಂಡಸ್ಟ್ರಿಯಲ್ಲಿ ಗುರಿತಿಸಿಕೊಂಡಿದ್ದಾರೆ.

25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ
ಉಮೇಶ್ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಪಾಟ್ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಆ ಎಲ್ಲ ಸಿನಿಮಾಗಳು ದೊಡ್ಡ ದೊಡ್ಡ ಚಿತ್ರಗಳಾಗಿವೆ. 'ಸಂತು ಸ್ಟ್ರೈಟ್ ಫಾರ್ವರ್ಡ್', 'ಚೌಕ', '8MM', 'ಕವಚ', 'ರಾಜಕುಮಾರ' 'ದಿ ವಿಲನ್', 'ದ್ರೋಣ', 'ದಿ ವಿಲನ್', 'ಬಜಾರ್', 'ಕಿಸ್' 'ಅಯೋಗ್ಯ', 'ಪೈಲ್ವಾನ್', 'ಏಕ್ ಲವ್ ಯಾ', 'ಅವತಾರ ಪುರುಷ' ಹೀಗೆ ಅವರ ಸಿನಿಮಾಗಳ ಸಂಖ್ಯೆ ಬೆಳೆಯುತ್ತ ಹೋಗುತ್ತದೆ.

ಸೆಟ್ ಬಾಯ್ ನಿಂದ ಜರ್ನಿ ಶುರು
ಉಮೇಶ್ ಚಿತ್ರರಂಗದ ಜರ್ನಿ ಶುರು ಆಗಿದ್ದು ಸೆಟ್ ಬಾಯ್ ಆಗಿ. ಪಿಯುಸಿ ನಂತರ ಬಿಜಾಪುರದಿಂದ ಬೆಂಗಳೂರಿಗೆ ಬಂದರು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಇದ್ದ ಉಮೇಶ್ ಕಲಾ ನಿರ್ದೇಶನದ ವಿಭಾಗದಲ್ಲಿ ಸಹಾಯಕನಾಗಿ ಸೇರಿಕೊಂಡರು. 'ಚಾರುಲತಾ', 'ಜಯಮ್ಮನ ಮಗ', 'ಬಚ್ಚನ್' ಚಿತ್ರಗಳ ಮೂಲಕ ಚಿತ್ರರಂಗದ ಪ್ರವೇಶ ಪಡೆದರು.

'ಸಂತು ಸ್ಟ್ರೈಟ್ ಫಾರ್ವರ್ಡ್' ಮೊದಲ ಸಿನಿಮಾ
ಇದರ ನಂತರ, ಧಾರಾವಾಹಿಗೆ ಕಡೆ ಹೋದರು. ಆದರೆ, ಆ ಕೆಲಸ ಪೂರ್ಣ ಆಗಲಿಲ್ಲ. ಎಡಿಟಿಂಗ್ ಕಲಿತು, ಬಳಿಕ ಸುದ್ದಿ ವಾಹಿನಿಯಲ್ಲಿ ವಾಹಿನಿಯಲ್ಲಿ ಎಡಿಟರ್ ಆದರು. ಇದರ ನಡುವೆ 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದ ಅವಕಾಶ ಬಂದು. ಆ ಸಿನಿಮಾದ ಕೆಲಸದ ನಂತರ ಉಮೇಶ್ ಬಿಡುವಿಲ್ಲದೆ ಚಿತ್ರರಂಗದಲ್ಲಿ ಒಂದರ ನಂತರ ಒಂದು ಸಿನಿಮಾ ಮಾಡುತ್ತಿದ್ದಾರೆ.

ಸ್ಟಾರ್ ನಟರ ಹೊಗಳಿಕೆ
ಸುದೀಪ್, ಶಿವರಾಜ್ ಕುಮಾರ್, ಯಶ್, ಜಗ್ಗೇಶ್, ಮಿಥುನ್ ಚಕ್ರವರ್ತಿ, ಅನೀಶ್, ನಿರ್ದೇಶಕ ಪ್ರೇಮ್, ಎಸ್ ನಾರಾಯಣ್, ಎಪಿ ಅರ್ಜುನ್, ಸುನಿ, ಕೃಷ್ಣ, ನಟಿ ರಚಿತಾ ರಾಮ್, ಅದಿತಿ ಪ್ರಭುದೇವ ಹೀಗೆ ಅನೇಕರ ಜೊತೆಗೆ ಉಮೇಶ್ ಕೆಲಸ ಮಾಡಿದ್ದಾರೆ. ಡೇಟ್ ಸಮಸ್ಯೆಯಿಂದ 'ಕೆಜಿಎಫ್' ಚಿತ್ರದಲ್ಲಿ ಕೆಲಸ ಮಾಡಲು ಆಗಲಿಲ್ಲವಂತೆ. ಉಮೇಶ್ ಕೆಲಸ ನೋಡಿ ಸುದೀಪ್ ಸೂಪರ್ ಎಂದರೆ, ಶಿವಣ್ಣ ಶಹಬ್ಬಾಸ್ ಎಂದಿದ್ದಾರೆ.

ನಿರ್ದೇಶನ ಮಾಡುವ ತಯಾರಿ
ಉಮೇಶ್ ನಿರ್ದೇಶಕ ಆಗಬೇಕು ಎನ್ನುವ ಗುರಿ ಹೊಂದಿದ್ದು, ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ. ಇದೇ ವರ್ಷ ತಮ್ಮ ನಿರ್ದೇಶನದ ಸಿನಿಮಾವನ್ನು ಘೋಷಣೆ ಮಾಡಲಿದ್ದಾರೆ. ತಮ್ಮೊಳಗೆ ಇರುವ ಕಥೆಗಳನ್ನು ಹೇಳಬೇಕು ಎನ್ನುವುದು ಅವರ ಆಸೆಯಾಗಿದೆ. ಬಹುತೇಕ ಎಲ್ಲ ನಟರ ಜೊತೆಗೆ ಕೆಲಸ ಮಾಡಿದ್ದು, ದರ್ಶನ್ ರೊಂದಿಗೆ ಸಿನಿಮಾ ಮಾಡಬೇಕು ಎನ್ನುವ ಬಯಕೆ ಅವರದ್ದಾಗಿದೆ.

ಸ್ಪಾಟ್ ಎಡಿಟಿಂಗ್ ಆತ್ಮವಿಶ್ವಾಸ ಹೆಚ್ಚಿಸುತ್ತದೆ
ನಮ್ಮ ಜೊತೆಗೆ ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ ಉಮೇಶ್ ಹಾಗೇಯೇ ಸ್ಪಾಟ್ ಎಡಿಟಿಂಗ್ ಬಗ್ಗೆಯೂ ತಿಳಿಸಿದರು. ಸ್ಪಾಟ್ ಎಡಿಟಿಂಗ್ ಎಂದರೆ, ಚಿತ್ರೀಕರಣದ ಸ್ಥಳದಲ್ಲೇ ಎಡಿಟಿಂಗ್ ಮಾಡಿ ನೋಡುತ್ತೇವೆ. ಆಗ ಆ ಶಾಟ್ ಗೆ ಏನು ಬೇಕು, ಬೇಡ ತಿಳಿಯುತ್ತದೆ. ಶಾಟ್ ಬೈ ಶಾಟ್ ಎಡಿಟ್ ಮಾಡುತ್ತೇವೆ. ಇದರಿಂದ ಮತ್ತೆ ಪ್ಯಾಚ್ ವರ್ಕ್ ಮಾಡುವ ಅಗತ್ಯ ಇರುವುದಿಲ್ಲ. ನಿರ್ದೇಶಕರಿಗೆ, ನಿರ್ಮಾಪಕರಿಗೆ, ಕಲಾವಿದರಿಗೆ ಇದು ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸಿನಿಮಾ ಹೇಗೆ ಮೂಡಿ ಬರುತ್ತಿದೆ ಎನ್ನುವ ಐಡಿಯಾ ಬರುತ್ತದೆ ಎಂದರು.


Click it and Unblock the Notifications