»   » ಅಭಿಮಾನಿಗಳಿಗಾಗಿ 'ರಾಜರ ರಾಜ' ಅಪ್ಪು ಹುಟ್ಟುಹಬ್ಬ ಅರ್ಪಣೆ

ಅಭಿಮಾನಿಗಳಿಗಾಗಿ 'ರಾಜರ ರಾಜ' ಅಪ್ಪು ಹುಟ್ಟುಹಬ್ಬ ಅರ್ಪಣೆ

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದ ಪವರ್ ಸ್ಟಾರ್... ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು... ಪ್ರೀತಿಸೋರಿಗೆ ರಾಜರ ರಾಜ... ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯಿಸಿಕೊಳ್ಳುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಇಂದು.

ಅಪ್ಪು ಅಭಿಮಾನಿಗಳಿಗಂತೂ ವಾರದಿಂದಲೇ ಹುಟ್ಟುಹಬ್ಬದ ಸಂಭ್ರಮ ಜೋರಾಗಿದೆ. ಹಿಂದಿನಿಂದಲೂ ಎಲ್ಲವೂ ಅಭಿಮಾನಿಗಳಿಂದ, ಅಭಿಮಾನಿಗಳಿಗಾಗಿ ಎನ್ನುತ್ತಾ ಅವರನ್ನೇ ದೇವರು ಎಂದು ಪಾಲಿಸುತ್ತಾ ಬಂದಿರುವ ಪವರ್ ಸ್ಟಾರ್ ಈ ಬಾರಿ ಹುಟ್ಟುಹಬ್ಬವನ್ನ ಅವರಿಗಾಗಿಯೇ ಮೀಸಲಿಟ್ಟಿದ್ದಾರೆ.

ಪ್ರತಿ ವರ್ಷ ಮಾರ್ಚ್ 17 ಬಂದರೆ ಪುನೀತ್ ಅಭಿಮಾನಿಗಳಿಗೆ ಹಬ್ಬ. ಸಾವಿರಾರು ಅಭಿಮಾನಿಗಳು ಪ್ರೀತಿಸುವ ನಟನನ್ನ ಭೇಟಿ ಮಾಡಲು ದೂರದ ಊರುಗಳಿಂದ ಬರುತ್ತಾರೆ. ಅಂತಹ ಅಭಿಮಾನಿಗಳ ಬಗ್ಗೆ ಪುನೀತ್ ಭಾವನೆ ಏನು? ಹೊಸ ಚಿತ್ರದ ಲುಕ್ ಮತ್ತು ಟೈಟಲ್ ಬಗೆಗಿನ ಅಭಿಪ್ರಾಯವೇನು? ಈ ಹುಟ್ಟುಹಬ್ಬ ಹೇಗಿರುತ್ತೆ ಇಂತಹ ಪ್ರಶ್ನೆಗಳಿಗೆಲ್ಲಾ ಅಪ್ಪು ಅವರಿಂದಲೇ ಉತ್ತರ ಪಡೆಯಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತೆ.

ಅಂತಹ ಪ್ರಶ್ನೆಗಳನ್ನ ಫಿಲ್ಮಿಬೀಟ್ ಮೂಲಕ ಪುನೀತ್ ಅವರನ್ನ ಕೇಳುವ ಪ್ರಯತ್ನ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫಿಲ್ಮಿಬೀಟ್ ಸಂದರ್ಶನದಲ್ಲಿ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ್ದಾರೆ. ಅದರ ಸಂಪೂರ್ಣ ಸೂಪರ್ ಎಕ್ಸ್‌ಕ್ಲೂಸಿವ್ ಮಾಹಿತಿ ನಿಮಗಾಗಿ ಇಲ್ಲಿದೆ....

* ಪ್ರತಿ ವರ್ಷ ಹುಟ್ಟುಹಬ್ಬ ಬರುತ್ತೆ, ಬರ್ತಡೇ ದಿನ ಸಾಮಾನ್ಯ ದಿನ ಅನ್ನಿಸುತ್ತಾ? ಅಥವಾ ಜವಾಬ್ದಾರಿಯ ದಿನ ಎನ್ನಿಸುತ್ತಾ?

- ಹುಟ್ಟುಹಬ್ಬ ದಿನ ತುಂಬಾ ಸ್ಪೆಷಲ್ ಆಗಿರುತ್ತೆ. ಯಾಕಂದ್ರೆ ದೂರದ ಊರಿಂದ ಅಭಿಮಾನಿಗಳು ಮೀಟ್ ಮಾಡುವುದಕ್ಕೆ ಬಂದಿರುತ್ತಾರೆ. ಅವರನ್ನ ಭೇಟಿ ಮಾಡುವುದಕ್ಕೆ ಅದೊಂದು ದಿನ ಅವಕಾಶ ಸಿಗುತ್ತೆ. ಸಾಕಷ್ಟು ದಿನಗಳಿಂದ ಅವರೆಲ್ಲರು ಕಾಯುತ್ತಿರುತ್ತಾರೆ. ಹಾಗಾಗಿ ಅವರನ್ನೆಲ್ಲಾ ಭೇಟಿ ಮಾಡಿ ಮಾತನಾಡಿಸುವುದೇ ಒಂದು ಜವಾಬ್ದಾರಿ.

ಈ ಬರ್ತಡೇಯಲ್ಲಿ ಅಮ್ಮನನ್ನ ಮಿಸ್ ಮಾಡ್ಕೋತ್ತೀರಾ?

ಖಂಡಿತ ಈ ಬರ್ತಡೇ ಗೆ ಬೆಂಗಳೂರಿನಲ್ಲಿ ಇರಬಾರದು ಅಂದುಕೊಂಡಿದ್ದೆ. ಆದರೆ ಅಮ್ಮನಷ್ಟೇ ಮುಖ್ಯ ಅಭಿಮಾನಿಗಳು. ಅವರು ದೂರದ ಊರಿನಿಂದ ಬಂದಿರುತ್ತಾರೆ ಅವರಿಗೆ ಬೇಸರ ಮಾಡಬಾರದು. ಯಾಕಂದ್ರೆ ಅಪ್ಪಾಜಿ ಅಭಿಮಾನಿಗಳನ್ನ ದೇವರು ಅಂತ ಕರೆದವರು. ಅದಕ್ಕಾಗಿ ಈ ಹುಟ್ಟುಹಬ್ಬ ಆಚರಣೆ. ಅಮ್ಮನನ್ನ ಹುಟ್ಟುಹಬ್ಬದ ದಿನ ಮಾತ್ರ ಅಲ್ಲ ಪ್ರತಿ ಕ್ಷಣ ಮಿಸ್ ಮಾಡಿಕೊಳ್ತೀನಿ. ಯಾಕಂದ್ರೆ ಅವರು ನನ್ನ ಪ್ರತಿ ಹೆಜ್ಜೆಯಲ್ಲಿ ಜೊತೆಯಲ್ಲಿ ನಿಂತಿದ್ದರು. ಇವತ್ತು ನಾವು ಏನಿದ್ದರೂ ಅಪ್ಪ-ಅಮ್ಮನ ಕೊಡುಗೆ ಅದು.

ಅಭಿಮಾನಿಗಳು ಟಾಟ್ಯೂ ಹಾಕಿಸಿಕೊಳ್ಳುವುದು, ಹೇರ್ ಕಟ್ ಮಾಡಿಸಿಕೊಳ್ಳುವುದು ಹೆಚ್ಚಾಗಿದೆ. ಅವರನ್ನ ನೋಡಿದಾಗ ಹೇಗನ್ನಿಸುತ್ತೆ?

ನಾನು ಚಿಕ್ಕವನಿದ್ದಾಗಿನಿಂದ ಇದನ್ನ ನೋಡುತ್ತಿದ್ದೇನೆ. ಅಪ್ಪಾಜಿ ಅವರ ಜೊತೆ ಹೋದಾಗ ಅವರ ಸಿನಿಮಾ ಹೆಸರನ್ನ ಅವರ ಹೆಸರನ್ನ ಮೈ ಮೇಲೆ ಹಾಕಿಸಿಕೊಂಡಿದ್ದನ್ನ ನೋಡಿದ್ದೆ. ನಂತರ ನಾನು ಸಿನಿಮಾರಂಗಕ್ಕೆ ಬಂದಾಗ ನನ್ನ ಹೆಸರು ಭಾವಚಿತ್ರವನ್ನ ಎದೆ ಮೇಲೆ ಎಲ್ಲಾ ಹಾಕಿಸಿಕೊಂಡಿರುವುದನ್ನ ನೋಡಿದ್ದೇನೆ. ಆಗ ಯಾಕೆ ಹೀಗೆಲ್ಲಾ ಮಾಡ್ತಾರೆ ಅನ್ನಿಸುತ್ತೆ, ಅದಕ್ಕೆ ಅಪ್ಪಾಜಿ ಅವರನ್ನ ದೇವರುಗಳು ಎಂದು ಕರೆದದ್ದು.

ಪವರ್ ಸ್ಟಾರ್ ಹುಟ್ಟುಹಬ್ಬದ ದಿನ ಮಕ್ಕಳ ರೆಸ್ಪಾನ್ಸ್ ಹೇಗಿರುತ್ತೆ?

ನಾನು ಫ್ಯಾಮಿಲಿಗೆ ಕೊಡಬೇಕಾದ ಸಮಯವನ್ನ ಕೊಟ್ಟೆ ಕೊಡುತ್ತೇನೆ. ಇವರಿಗೆ ಈಗ ಎಕ್ಸಾಂ ನಡೆಯುತ್ತಿದೆ. ಅದರಲ್ಲಿ ಬ್ಯುಸಿ ಆಗಿದ್ದಾರೆ. ಅವರು ಈ ಆಚರಣೆಗಳನ್ನ ಚಿಕ್ಕವರಾಗಿದ್ದಾಗಿನಿಂದ ನೋಡುತ್ತಾ ಬಂದಿದ್ದಾರೆ. ಹಾಗಾಗಿ ಅವರಿಗೂ ಖುಷಿ ಇರುತ್ತೆ.

ಹೇರ್ ಸ್ಟೈಲ್ ಬದಲಾಯಿಸಿದ್ದೀರಾ, ಈ ಬಗ್ಗೆ ಹೇಳಿ?

ಹೇರ್ ಸ್ಟೈಲ್ ಸಿನಿಮಾಗಾಗಿ ಮಾತ್ರ ಮಾಡಿದ್ದು. ಫ್ರೆಂಡ್ಸ್ ಕೂಡ ಮೊದ ಮೊದಲಿಗೆ ಸುಮ್ಮನೆ ಮಾಡಿಸಿದ್ದೀನಿ ಅಂತ ಅಂದುಕೊಂಡಿದ್ದರು. ಸಿನಿಮಾ ಚಿತ್ರೀಕರಣಕ್ಕೆ ಇನ್ನು ಎರಡು-ಮೂರು ದಿನ ಬಾಕಿ ಇರೋವಾಗ ಮಾಡಿಸಿದ್ದು. ನಮಗೂ ಗೊತ್ತಿರಲಿಲ್ಲ ಈ ಮಟ್ಟಕ್ಕೆ ವೈರಲ್ ಆಗುತ್ತೆ ಅಂತ. ನನ್ನ ಸ್ಟೈಲಿಸ್ಟ್ ಕಾರ್ತಿಕ್ ಮತ್ತೆ ರಾಕೇಶ್ ಅವರು ಮಾಡಿದ್ದು. ಎಲ್ಲರಿಗೂ ಇಷ್ಟ ಆಗುತ್ತಿದೆ ಅದೇ ಖುಷಿ. ಇನ್‌ಫ್ಯಾಕ್ಟ್ ಒಂದು ಮಗು ಈ ರೀತಿ ಹೇರ್ ಕಟ್ ಮಾಡಿಸಿತ್ತು ಅದನ್ನ ನೋಡಿ ಈ ತರ ಚೆನ್ನಾಗಿದೆ ಅಲ್ವಾ ಅಂತಾನೂ ಅಂದುಕೊಂಡಿದ್ದೆ.

ರಾಜಕುಮಾರ ಈಗ ನಟ ಸಾರ್ವಭೌಮ ಟೈಟಲ್ ಬಗ್ಗೆ ಏನನ್ನಿಸುತ್ತೆ ?

ನಟ ಸಾರ್ವಭೌಮ ಅಂದ ತಕ್ಷಣ ಅಪ್ಪಾಜಿ ನೆನಪಾಗುತ್ತಾರೆ. ಈ ಚಿತ್ರದ ಕಥೆಗೆ ಆ ಟೈಟಲ್ ಸೂಟ್ ಆಗುತ್ತೆ ಅನ್ನಿಸಿತ್ತು. ಅದಕ್ಕೆ ಇಟ್ಟಿದ್ದಾರೆ. ಸಿನಿಮಾ ಕೂಡ ಟೈಟಲ್ ಗೆ ಯಾವುದೇ ಮೋಸ ಆಗದಂತೆ ಇರುತ್ತದೆ ಎನ್ನುವ ನಂಬಿಕೆ ಚಿತ್ರತಂಡಕ್ಕೆ ಇದೆ.

ಸಿನಿಮಾ ಟೀಂ ಬಗ್ಗೆ ಹೇಗನ್ನಿಸುತ್ತೆ?

ಇದು ನನ್ನ ಹೋಂ ಪ್ರೊಡಕ್ಷನ್ ಇದ್ದ ಹಾಗೆ. ಶಿವಣ್ಣ-ರಾಘಣ್ಣ ಹೇಗೋ ಅದೇ ರೀತಿ ರಾಕ್ಲೈನ್ ಅವರು ನನಗೆ. ಅವರ ಜೊತೆ ಕೆಲಸ ಮಾಡಲು ಯಾವತ್ತಿಗೂ ಬೇಸರ ಆಗಲ್ಲ. ಪವನ್ ಅವರ ಜೊತೆನೂ ಹಾಗೆ. ಇವರಷ್ಟೇ ಅಲ್ಲ ಸೂರಿ, ಸಂತೋಷ್ ಆನಂದ್ ರಾಮ್ ನಾನು ಯಾರ ಜೊತೆ ಕೆಲಸ ಮಾಡಿದ್ದೀನೋ ಅವರ ಜೊತೆಯಲ್ಲಾ ಕೆಲಸ ಮಾಡುವುದಕ್ಕೆ ಖುಷಿ ಇರುತ್ತೆ.

ಹುಟ್ಟುಹಬ್ಬಕ್ಕೆ ಪ್ರತಿ ವರ್ಷ ತಪ್ಪದೆ ಸಿಗುವ ವಸ್ತು, ಅಥವಾ ಗಿಫ್ಟ್ ಏನು?

ಊಟ, ಯಾಕಂದ್ರೆ ಎಲ್ಲಾರೂ ಮಾಡುವುದು ಅದಕ್ಕಾಗಿಯೇ. ಸ್ನೇಹಿತರು ಮನೆಯಿಂದ ಇಷ್ಟವಾದ ಊಟಗಳನ್ನ ಮಾಡಿಸಿಕೊಂಡು ಬರುತ್ತಾರೆ. ಅದು ಪ್ರತಿ ವರ್ಷವೂ ಇರುತ್ತೆ.

ನಿಮ್ಮ ಅಭಿಮಾನಿಗಳಿಗೆ ಕೊನೆಯ ಮಾತು?

ಖುಷಿಯಾಗಿರಿ ಯಾವತ್ತಿಗೂ. ನಿಮ್ಮ ಪ್ರೀತಿ ಅಭಿಮಾನ ಹೀಗೆ ಇರಲಿ. ನಿಮ್ಮ ತಂದೆ ತಾಯಿಯನ್ನ ಪ್ರೀತಿ ಮಾಡಿ ಚೆನ್ನಾಗಿ ನೋಡಿಕೊಳ್ಳಿ ನಿಮಗೆ ಎಲ್ಲವೂ ಒಳ್ಳೆಯದಾಗುತ್ತೆ.

English summary
Here is an Exclusive Interview with Power Star Puneeth Rajkumar. Appu is celebrating his 43rd Birthday today (March 17th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X