ಮಗು ಆದ್ಮೇಲೆ 22 ಕೆ.ಜಿ ತೂಕ ಇಳಿಸಿದ ನಟಿ, ಸೆಕೆಂಡ್ ಇನ್ನಿಂಗ್ಸ್ ಗಾಗಿ ಶ್ವೇತಾ ತಯಾರಿ!
Recommended Video

ಮೈಸೂರು, ಫೆಬ್ರವರಿ 6 : ಸಿಂಪಲ್ ಹುಡುಗಿ ಶ್ವೇತಾ... ಸ್ಯಾಂಡಲ್ ವುಡ್ ನಲ್ಲಿ ಈಕೆ ಎಲ್ಲರಿಗೂ ಚಿರಪರಿಚಿತ. ಮಾಡಿದ ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದಿಂದ ಎಲ್ಲರ ಮನಕದ್ದ ಚೆಲುವೆ. ಎಲ್ಲವನ್ನೂ ಸಿಂಪಲ್ ಆಗಿ ತೆಗೆದುಕೊಂಡ ನಟಿ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.
ಹೌದು, ಇಷ್ಟು ದಿನ ತಮ್ಮ ತಾಯ್ತನದ ಅನುಭವ ಹಾಗೂ ಮಗುವಿನ ಲಾಲನೆಯಲ್ಲಿ ತೊಡಗಿದ್ದ ನಟಿ, ಈಗ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಹೊರಟಿದ್ದಾರೆ.
ಮಾಡಿರುವುದು ಬೆರಳೆಣಿಕೆಯ ಸಿನಿಮಾಗಳಾದರೂ, ಎರಡು ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಶ್ವೇತಾ ಶ್ರೀವಾತ್ಸವ್ ಮೊನ್ನೆಯಷ್ಟೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪ್ರತಿನಿಧಿ ಜೊತೆ ಮಾತಿಗೆ ಸಿಕ್ಕರು. ಆಗ ಶ್ವೇತಾ ನಮ್ಮೊಂದಿಗೆ ಹಂಚಿಕೊಂಡ ಕೆಲ ವಿಷಯಗಳಿವು...

* ತಾಯ್ತನವನ್ನು ಹೇಗೆ ಅನುಭವಿಸುತ್ತಿದ್ದೀರಿ.?
- ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಇದು ಮಹತ್ತರವಾದದ್ದು. ಕಳೆದ 6 ತಿಂಗಳಿನಿಂದ ಮಗುವಿನ ಲಾಲನೆ-ಪಾಲನೆಯ ಕೆಲಸಗಳನ್ನು ನಾನೇ ನಿರ್ವಹಿಸುತ್ತಿದ್ದೇನೆ. ಇದು ನನಗೆ ಖುಷಿ ತಂದಿದೆ. ತಾಯಿಯ ಮಹತ್ವ ಎಂಥದ್ದು ಎಂದು ನನಗೆ ಈಗ ಅರಿವಾಗುತ್ತಿದೆ.

ಗರ್ಭಿಣಿ ಆದ ನಂತರದ ನಿಮ್ಮ ಡಯೆಟ್ ಪ್ಲಾನ್ ಏನು.?
* ಡಯೆಟ್ ಪ್ಲಾನ್ ಅಂತಾ ಏನೂ ಮಾಡುತ್ತಿಲ್ಲ. ಇಷ್ಟು ದಿನ ಡಾಕ್ಟರ್ ಏನು ತಿಳಿಸಿದ್ದರೋ, ಅದನ್ನೇ ರೂಢಿಸಿಕೊಂಡು ಬಂದಿದ್ದೇನೆ. ಅವರ ಅನುಸಾರದಂತೆಯೇ ನಡೆಯುತ್ತಿದ್ದೇನೆ. ಸದ್ಯ ಯೋಗ ಮಾಡಲು ತಿಳಿಸಿದ್ದಾರೆ. ಇನ್ಮುಂದೆ ದಿನಕ್ಕೆ ಒಂದು ಗಂಟೆ ಯೋಗಕ್ಕಾಗಿ ಮೀಸಲಿಡುತ್ತೇನೆ.

ನಿಮ್ಮ ತೂಕ ಇಳಿದಿದೆಯೇ.?
- ಅಫ್ ಕೋರ್ಸ್... ಮಗು ಹುಟ್ಟಿದ ಬಳಿಕ ನಾನು 22 ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ.

ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಮಗು ಸಖತ್ ಹೆಸರು ಮಾಡುತ್ತಿದೆ ಅಲ್ವಾ.!
- ನನ್ನ ಪತಿ ಅಮಿತ್, ನನ್ನ ಹೆಸರು ಶ್ವೇತಾ... ಎರಡು ಸೇರಿ ಅಶ್ಮಿತಾ ಎಂದು ನಾಮಕರಣ ಮಾಡಿದ್ದೇವೆ. ಅವಳ ಮುದ್ದಾಟ, ನಗು ನಮ್ಮೆಲ್ಲರನ್ನು ಸಂತೋಷದ ಗಡಲಲ್ಲಿ ತೇಲಿಸಿದೆ. ಒಂದು ಕ್ಷಣವೂ ಅವಳನ್ನು ಬಿಟ್ಟಿರಲು ಮನಸ್ಸೇ ಆಗುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅವಳ ಫೋಟೋ, ವಿಡಿಯೋ ಮಾಡುವುದರಿಂದ ನಮಗೆ ಸಂತಸವೆಂದೆನಿಸುತ್ತಿದೆ.

ಮಗುವಿನ ಪಾಲನೆಯಲ್ಲಿ ನಿಮ್ಮ ಪತಿಯ ಪಾತ್ರವೇನು.?
- ಅಮಿತ್ ಇಸ್ ದಿ ಬೆಸ್ಟ್ ಫಾದರ್ ಫಾರ್ ಅಶ್ಮಿತಾ. ಅಮಿತ್ ಈ ಜವಾಬ್ದಾರಿಯನ್ನು ಹೊರಲು ಸಮರ್ಥ ವ್ಯಕ್ತಿ ಎಂದು ನಾನು ಯೋಚನೆ ಸಹ ಮಾಡಿರಲಿಲ್ಲ. ಅವನು ಈಗಲ್ಲ
ಮೊದಲಿನಿಂದಲೂ ನನ್ನ ಸಪೋರ್ಟೀವ್ ಆಗೇ ಇದ್ದವನು. ನನಗೆ ಯಾವಾಗಲೂ ಅಮಿತ್ ಓರ್ವ ಬೆಸ್ಟ್ ಫ್ರೆಂಡ್ ಇದ್ದ ಹಾಗೆ.

ಮುಂದೆ ಚಿತ್ರರಂಗದಲ್ಲಿ ನಟಿಸುತ್ತೀರಾ ?
ಖಂಡಿತಾ. ನಾನು ಮದುವೆ ಆದ ಮೇಲೆಯೇ ಚಿತ್ರರಂಗಕ್ಕೆ ಬಂದದ್ದು. ನಟನೆ ನನ್ನ ಜೀವಾಳ. ಮಗುವಾದ ಮೇಲೆ ನಟನೆ ನಿಲ್ಲಿಸಬೇಕೆಂದೇನಿಲ್ಲ. ಮನೆಯವರ ಸಪೋರ್ಟ್ ಇದೆ. ಹಾಗಾಗಿ ನಟನೆ ಮುಂದುವರೆಸುತ್ತೇನೆ. ಕನ್ನಡ ಚಿತ್ರರಂಗ ನನ್ನನ್ನು ಗುರುತಿಸಿದೆ. ಇಲ್ಲಿ ಇನ್ನು ಅನೇಕ ಚಿತ್ರಗಳಲ್ಲಿ ನಟಿಸುವ ಶಕ್ತಿಯೂ ಇದೆ.

ಆಫರ್ ಗಳು ಬಂದಿವೆಯೇ ?
- ಹೌದು. ಇನ್ನೆರಡು ಮೂರು ತಿಂಗಳಲ್ಲಿ ಶೂಟಿಂಗ್ ನಡೆಯಲಿದೆ. ಅದು ಯಾವ ಚಿತ್ರ, ಏನು ಎಂದು ತಿಳಿಸಲಾರೆ. ಮುಂದಿನ ವರುಷದೊಳಗಾಗಿ ನನ್ನ ಎರಡು ಚಿತ್ರಗಳು ತೆರೆಯ ಮೇಲೆ ಬರಲಿದೆ. ನಿರೀಕ್ಷಿಸಿ


Click it and Unblock the Notifications











