twitter
    For Quick Alerts
    ALLOW NOTIFICATIONS  
    For Daily Alerts

    ಎಕ್ಸ್ ಕ್ಲೂಸಿವ್ ಸಂದರ್ಶನ: 'ಕೆ.ಜಿ.ಎಫ್'ನಲ್ಲಿ ಕಂಡ ಸಂಪತ್ತು

    By ಶಶಿಕರ ಪಾತೂರು
    |

    ಕೆ.ಜಿ.ಎಫ್ ಚಿತ್ರ ನೋಡಿದವರು... ಅದರಲ್ಲಿ ತನ್ನ ಪತ್ನಿ ಮತ್ತು ಮಗುವನ್ನು ಉಳಿಸಬೇಕು ಎನ್ನುವ ಧಾವಂತದಲ್ಲಿ ಖುದ್ದು ಸಾವಿಗೆ ಬಲಿಯಾಗುವ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ.

    ಒಂದು ಹಂತದಲ್ಲಿ ನಾಯಕ ಅಪಾಯಕ್ಕೆ ಸಿಕ್ಕಿ ಬೀಳುವ ಸಂದರ್ಭದಿಂದ ಪಾರು ಮಾಡುವಂಥ ಆ ಪಾತ್ರಕ್ಕೆ ಜೀವ ತುಂಬಿದವರು ರಂಗಭೂಮಿಯ ಜನಪ್ರಿಯ ತಾರೆ ಸಂಪತ್ ಕುಮಾರ್. ಕಳೆದ 17 ವರ್ಷಗಳಿಂದ ಕಲಾರಂಗದ ವಿವಿಧ ವಿಭಾಗಗಳಲ್ಲಿ ವೃತ್ತಿನಿರತರಾಗಿರುವ ಸಂಪತ್ ಕುಮಾರ್ ಅವರೊಂದಿಗೆ ನಡೆಸಲಾದ ವಿಶೇಷ ಸಂದರ್ಶನ ಇದು.. ಓದಿರಿ..

    ಪ್ರಶ್ನೆ: ನೀವು ಕೆ.ಜಿ.ಎಫ್ ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ?

    ಪ್ರಶ್ನೆ: ನೀವು ಕೆ.ಜಿ.ಎಫ್ ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ?

    ಉತ್ತರ: 'ಕೆ.ಜಿ.ಎಫ್'ಗೆ ನನ್ನ ಹೆಸರನ್ನು ಸೂಚಿಸಿದ್ದು ಚಿತ್ರದ ಕ್ಯಾಮರಾಮ್ಯಾನ್ ಭುವನ್ ಗೌಡ. ಅವರು 'ಪುಷ್ಪಕ ವಿಮಾನ'ದಲ್ಲಿನ ನನ್ನ ಪಾತ್ರ ನೋಡಿ ಮೆಚ್ಚಿದ್ದರು. ಹಾಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ನನ್ನನ್ನು ಕರೆಸಿ ಮಾತನಾಡಿ ಆಯ್ಕೆಯನ್ನೂ ಮಾಡಿದ್ದರು. ಆದರೆ ಅವರು ಚಿತ್ರೀಕರಣಕ್ಕೆ ಹೇಳಿದ ದಿನಗಳಲ್ಲಿ ನಾನು ಬೇರೆಯವರಿಗೆ ಕಾಲ್ ಶೀಟ್ ನೀಡಿದ್ದೆ. ಇನ್ನೇನು ಕೈ ತಪ್ಪಿಹೋಯಿತೆಂದೇ ಅಂದುಕೊಂಡು ವಾಪಾಸಾಗಿದ್ದೆ. ಹಾಗಾಗಿ ನಿರಾಶೆಯಿಂದಲೇ ವಿದಾಯ ಹೇಳಲು ಮುಂದಾಗಿದ್ದೆ. ಆದರೆ ಕೆಲವೇ ದಿನಗಳಲ್ಲಿ ಕೆ.ಜಿ.ಎಫ್ ಶೂಟಿಂಗ್ ಮುಂದೂಡಿದ್ದಾಗಿ ಹೇಳಿ ಮತ್ತೆ ನನ್ನನ್ನು ಸಂಪರ್ಕಿಸಿದರು. ಹಾಗೆ ನಾನು ಫಿಕ್ಸ್ ಆದೆ.

    ಜೂನಿಯರ್ ರಾಕಿಗೆ ಸಿಕ್ತು ಮತ್ತೊಂದು ದೊಡ್ಡ ಅವಕಾಶಜೂನಿಯರ್ ರಾಕಿಗೆ ಸಿಕ್ತು ಮತ್ತೊಂದು ದೊಡ್ಡ ಅವಕಾಶ

    ಪ್ರಶ್ನೆ: ಕೆ.ಜಿ.ಎಫ್ ಚಿತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು?

    ಪ್ರಶ್ನೆ: ಕೆ.ಜಿ.ಎಫ್ ಚಿತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು?

    ಉತ್ತರ: ಚಿತ್ರಕ್ಕಾಗಿ 'ಕೆ.ಜಿ.ಎಫ್'ನಲ್ಲೇ ಸೆಟ್ ಹಾಕಿ ಮಾಡಲಾಗಿತ್ತು. ಮಿನಿಮಮ್ ಇನ್ನೂರರಿಂದ ಆರು ನೂರರಷ್ಟು ಜನ ಜ್ಯೂನಿಯರ್ಸ್ ಅಲ್ಲಿದ್ದರು. ಯಾರಿಗೂ ಏನೂ ತೊಂದರೆಯಾಗದ ರೀತಿಯಲ್ಲಿ ಆಹಾರ ಮತ್ತು ಉಳಿದುಕೊಳ್ಳುವ ವ್ಯವಸ್ಥೆ ಎಲ್ಲವೂ ಇತ್ತು. ಅಷ್ಟೊಂದು ಜ್ಯೂನಿಯರ್ಸ್ ಇಟ್ಟುಕೊಂಡು ಚಿತ್ರೀಕರಿಸುವಾಗ ಟೆಕ್ನಿಕಲ್ ಟೀಮ್ ಮಿಕ್ಸಾದರೆ ಕಷ್ಟ ಎಂಬ ಕಾರಣಕ್ಕೆ ತಂತ್ರಜ್ಞರಿಗೂ ಅವರದೇ ಯುನಿಫಾರ್ಮ್ ನೀಡಲಾಗಿತ್ತು. ಎಲ್ಲರೂ ಗಡ್ಡಧಾರಿಗಳಾಗಬೇಕಿತ್ತು. ನಾನು ಇದ್ದಂಥ ದೃಶ್ಯವನ್ನು ಹದಿನೈದು ದಿನಗಳಲ್ಲಿ ಚಿತ್ರೀಕರಣ ಮಾಡಲಾಯಿತು. ಒಂದು ಸಲ ಧೂಳೆದ್ದರೆ ಹತ್ತಡಿ ದೂರದಲ್ಲಿರುವುದೂ ಕಾಣಿಸುತ್ತಿರಲಿಲ್ಲ.

    4ನೇ ದಿನವೂ 'ಕೆಜಿಎಫ್' ಅಬ್ಬರ: ಹಿಂದಿ ಕಲೆಕ್ಷನ್ ಕಂಡು ದಂಗಾದ ಬಾಲಿವುಡ್.!4ನೇ ದಿನವೂ 'ಕೆಜಿಎಫ್' ಅಬ್ಬರ: ಹಿಂದಿ ಕಲೆಕ್ಷನ್ ಕಂಡು ದಂಗಾದ ಬಾಲಿವುಡ್.!

    ಪ್ರಶ್ನೆ: ಚಿತ್ರದಲ್ಲಿ ಯಶ್ ಅವರೊಂದಿಗಿನ ಒಡನಾಟದ ಬಗ್ಗೆ ಹೇಳಿ

    ಪ್ರಶ್ನೆ: ಚಿತ್ರದಲ್ಲಿ ಯಶ್ ಅವರೊಂದಿಗಿನ ಒಡನಾಟದ ಬಗ್ಗೆ ಹೇಳಿ

    ಉತ್ತರ: ಯಶ್ ನನಗೆ ರಂಗಭೂಮಿಯಿಂದಲೇ ಪರಿಚಯ. ಎಚ್ಚೆಲ್ ಕಲಾಕ್ಷೇತ್ರದ ಬಳಿ ನಮ್ಮ ತಂಡಗಳು ಭೇಟಿಯಾಗುತ್ತಿದ್ದವು. ಸೆಟ್ನಲ್ಲಿ ನನ್ನನ್ನು ಕಂಡಾಗ ಹೆಸರು ನೆನಪಿಸಿರಿಸಿಕೊಂಡು ಮಾತನಾಡಿಸಿದ್ದನ್ನು ಕಂಡಾಗ ಖುಷಿಯಾಯಿತು.

    'ಕೆಜಿಎಫ್' ಎರಡನೇ ದಿನದ ಕಲೆಕ್ಷನ್ ಎಷ್ಟು? ಎಷ್ಟು ಕೋಟಿ ಬಂತು?'ಕೆಜಿಎಫ್' ಎರಡನೇ ದಿನದ ಕಲೆಕ್ಷನ್ ಎಷ್ಟು? ಎಷ್ಟು ಕೋಟಿ ಬಂತು?

    ಪ್ರಶ್ನೆ: ನಿಮ್ಮ ಕಲಾ ಬದುಕಿಗೆ ಸ್ಫೂರ್ತಿಯಾಗಿದ್ದೇನು?

    ಪ್ರಶ್ನೆ: ನಿಮ್ಮ ಕಲಾ ಬದುಕಿಗೆ ಸ್ಫೂರ್ತಿಯಾಗಿದ್ದೇನು?

    ಉತ್ತರ: ನಾನು ಹುಟ್ಟಿದ್ದು ರಾಮನಗರದ ಹಳ್ಳಿಯಲ್ಲಿ. ಮುಂಜಾನೆ ನಾಲ್ಕಾದರೆ ಸಾಕು, ಆ ಮನೆಯಲ್ಲಿ ರಾಗಿ ಬೀಸುವಾಗ ಹಾಡುತ್ತಿದ್ದರು. ಎದ್ದು ಹೊಲಕ್ಕೆ ಹೋದರೆ ಜನಪದಗೀತೆ ಹಾಡುತ್ತಾ ಕಳೆ ಕೀಳುವ ದೃಶ್ಯವಿರುತ್ತಿತ್ತು. ಅಲ್ಲಿ ಒಂದೆರಡು ವರ್ಷಗಳಿಗೊಮ್ಮೆ ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಿತ್ತು. ಜನ ತತ್ವ ಪದಗಳನ್ನು ಹಾಡುತ್ತಿದ್ದರು. ಮದುವೆಗಳಲ್ಲಿ ಸೋಬಾನೆ ಹಾಡುಗಳು ಕೇಳಿ ಬರುತ್ತಿದ್ದವು. ಬಹುಶಃ ಕಲೆಯ ಮೇಲೆ ಆಸಕ್ತಿ ಮೂಡಲು ಇಂಥ ವಾತಾವರಣವೊಂದೇ ಸಾಕಲ್ಲವೇ? ನನಗೂ ಕಲೆಯ ಗೀಳು ಆರಂಭವಾಗಿದ್ದು ಅಲ್ಲಿಂದಲೇ ಎನ್ನಬಹುದು.

    ಇವರೇ 'ಕೆಜಿಎಫ್'ಗೆ ಶಿಳ್ಳೆ ಹೊಡೆಯುವ ಸಂಭಾಷಣೆ ಬರೆದವರುಇವರೇ 'ಕೆಜಿಎಫ್'ಗೆ ಶಿಳ್ಳೆ ಹೊಡೆಯುವ ಸಂಭಾಷಣೆ ಬರೆದವರು

    ಪ್ರಶ್ನೆ: ಅಲ್ಲಿಂದ ಬೆಂಗಳೂರಿನ ಬಣ್ಣದ ಲೋಕ ಸೇರಿದ್ದು ಹೇಗೆ?

    ಪ್ರಶ್ನೆ: ಅಲ್ಲಿಂದ ಬೆಂಗಳೂರಿನ ಬಣ್ಣದ ಲೋಕ ಸೇರಿದ್ದು ಹೇಗೆ?

    ಉತ್ತರ: ಎಸ್.ಎಸ್.ಎಲ್.ಸಿ ಮುಗಿಸಿದೊಡನೆ ಹೊಲ, ಗದ್ದೆ ನೋಡಿಕೊಳ್ಳುತ್ತ ಇರುವಂತೆ ಮನೆಯಿಂದ ಒತ್ತಡ ಶುರುವಾಗಿತ್ತು. ಆದರೆ ಇನ್ನಷ್ಟು ಕಲಿಯಬೇಕು ಎಂದು ಹೇಳಿ ಬೆಂಗಳೂರಿಗೆ ಬಂದು ದೊಡ್ಡಪ್ಪನ ಮನೆ ಸೇರಿಕೊಂಡೆ. ರಾತ್ರಿಶಾಲೆ ಮೂಲಕ ವಿದ್ಯಾಭ್ಯಾಸ ಮುಂದುವರಿಸಿದೆ. ಹಗಲೆಲ್ಲ ಬದುಕಿಗಾಗಿ ಡ್ರೈವರ್, ಸೇಲ್ಸ್ ರೆಪ್ರೆಸೆಂಟೆಟಿವ್... ಹೀಗೆ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಂಡಿದ್ದ ನನಗೆ ರಾತ್ರಿಶಾಲೆಯ ಶಿಕ್ಷಕ ಸುದರ್ಶನ್ ಕುಮಾರ್ 'ಅಭಿನಯ ತರಂಗ'ದ ಬಗ್ಗೆ ತಿಳಿಸಿದರು. ಹಾಗೆ 'ಅಭಿನಯ ತರಂಗ'ದಲ್ಲಿ ವಾರಾಂತ್ಯದ ನಟನಾ ತರಬೇತಿಗೆ ವಿದ್ಯಾರ್ಥಿಯಾದೆ. ಸಾಹಿತ್ಯ ಪ್ರೇಮಿಯಾಗಿದ್ದ ದೊಡ್ಡಪ್ಪನ ಮಗನಿಂದ ಕತೆ ಕಾದಂಬರಿ ಓದುವ ಹವ್ಯಾಸ ಬೆಳೆಸಿಕೊಂಡೆ. ಯಾವಾಗ ರಂಗಭೂಮಿ ತುಂಬ ಕ್ರಿಯೇಟಿವ್ ಆಗಿದೆ ಎಂದು ಅನಿಸಿತೊಡಗಿತೋ ಆಗ ಸಂಪೂರ್ಣವಾಗಿ ಅಲ್ಲಿಗೆ ಸೀಮಿತಗೊಳ್ಳಲು ತೀರ್ಮಾನಿಸಿದೆ.

    ಪ್ರಶ್ನೆ: ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲಿನ ಅನುಭವದ ಬಗ್ಗೆ ಹೇಳಿ

    ಪ್ರಶ್ನೆ: ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲಿನ ಅನುಭವದ ಬಗ್ಗೆ ಹೇಳಿ

    ಉತ್ತರ: ರಂಗಭೂಮಿಯಲ್ಲಿ ನಟನಾಗಿ, ಬ್ಯಾಕ್ ಸ್ಟೇಜ್ ವರ್ಕ್ ಗಳಲ್ಲಿ, ಆರ್ಗನೈಸರ್ ಆಗಿ ಹೀಗೆ ಎಲ್ಲ ಕೆಲಸಗಳ ಅನುಭವ ದೊರೆಯಿತು. ಅಲ್ಲಿ ಸಿಕ್ಕಂಥ ಗುರು ಬಸುಲಿಂಗಯ್ಯ. ಆ ಬಳಿಕ ಪ್ರೊ.ರಾಜಪ್ಪ ದಳವಾಯಿ. ಇವರಿಬ್ಬರ ಒಡನಾಟ ಸಾಹಿತ್ಯ, ಓದು ಎಲ್ಲವನ್ನು ಹೆಚ್ಚಿಸಿತು. ಹಾಗೆ ನಾಟಕದಲ್ಲಿ ಎಂ.ಎ ಮಾಡಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಾಟಕದ ಮೇಷ್ಟ್ರಾಗಿ ಎರಡೂವರೆ ವರ್ಷಗಳ ಕಾಲ ಅತಿಥಿ ಉಪನ್ಯಾಸಕ ವೃತ್ತಿಯಲ್ಲಿದ್ದೆ. ಆದರೆ ಎರಡೇ ವರ್ಷಕ್ಕೆ ಆಸಕ್ತಿ ಕಳೆದುಕೊಂಡೆ. ಇದರ ನಡುವೆ ನಾಟಕದಲ್ಲಿ ಪ್ರಧಾನ ಪಾತ್ರಗಳಲ್ಲಿ ಮುಂದುವರಿದೆ. ಆ ನಟನೆಯನ್ನು ಕಂಡೇ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಬೆಳ್ಳಿ ಚುಕ್ಕಿ', ನಾಗಾಭರಣ ಅವರ 'ಅಪ್ಪ' ಚೈತನ್ಯ ಅವರ 'ಮುಗಿಲು' ಹೀಗೆ ಒಂದಷ್ಟು ಧಾರಾವಾಹಿಗಳಲ್ಲಿ ಅವಕಾಶಗಳು ದೊರೆತವು. ಆದರೆ ಅಲ್ಲಿಗಿಂತಲೂ ರಂಗಭೂಮಿಯೇ ವಾಸಿ ಎನಿಸಿತು. ಯಾಕೆಂದರೆ ಸೃಜನಶೀಲತೆಗೆ ರಂಗಭೂಮಿಯಲ್ಲಿರುವಷ್ಟು ಅವಕಾಶ ಧಾರಾವಾಹಿಗಳಲ್ಲಿ ಕಾಣಿಸಿರಲಿಲ್ಲ. ಆದರೆ ಇತ್ತೀಚೆಗೆ ಸ್ನೇಹಿತರ ಒತ್ತಾಯದಿಂದ ಸಿನಿಮಾ ಕ್ಷೇತ್ರ ಪ್ರವೇಶಿಸಿದೆ. ಅನಂತ್ ಶೈನ್ ನಿರ್ದೇಶನದ 'ಮುದ್ದು ಮನಸೇ' ಪ್ರಥಮ ಚಿತ್ರ. ಟಿ.ಕೆ ದಯಾನಂದ್ ಅವರ 'ಬೆಂಕಿಪಟ್ಣ', ಗೌರೀಶ್ ಅಕ್ಕಿಯವರ 'ಸಿನಿಮಾ ಮೈ ಡಾರ್ಲಿಂಗ್' ಮೊದಲಾದ ಚಿತ್ರಗಳಲ್ಲಿ ನಟಿಸಿದೆ.

    ಪ್ರಶ್ನೆ: ಸಿನಿಮಾಗಳಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಪಾತ್ರ ಯಾವುದು?

    ಪ್ರಶ್ನೆ: ಸಿನಿಮಾಗಳಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಪಾತ್ರ ಯಾವುದು?

    ಉತ್ತರ: ಇರುವುದರಲ್ಲಿ ಒಂದಷ್ಟು ಹೆಸರು ತಂದುಕೊಟ್ಟಿದ್ದು ಸುಮನಾ ಕಿತ್ತೂರು ಅವರ 'ಕಿರಗೂರಿನ ಗಯ್ಯಾಳಿಗಳು'. ಈ ವರ್ಷ ಗಣೇಶ್ ನಾಯಕರಾಗಿದ್ದ 'ಪಟಾಕಿ', ಶಿವಣ್ಣ ನಾಯಕರಾಗಿದ್ದ 'ಶ್ರೀಕಂಠ' ಮೊದಲಾದ ಚಿತ್ರಗಳಲ್ಲಿ ಉತ್ತಮ ಪಾತ್ರಗಳು ಲಭ್ಯವಾಗಿತ್ತು. ಆದರೆ ಚಿತ್ರ ಸದ್ದು ಮಾಡದ ಕಾರಣ ಗುರುತಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈಗ 'ಕೆಜಿಎಫ್' ಚಿತ್ರ ನೋಡಿದ ಆತ್ಮೀಯರು ಫೋನ್ ಮಾಡಿ ಅಭಿನಂದಿಸುತ್ತಿದ್ದಾರೆ.

    ಪ್ರಶ್ನೆ: ಮುಂದಿನ ಚಿತ್ರಗಳ ಬಗ್ಗೆ ಹೇಳಿ

    ಪ್ರಶ್ನೆ: ಮುಂದಿನ ಚಿತ್ರಗಳ ಬಗ್ಗೆ ಹೇಳಿ

    ಉತ್ತರ: ದೇವನೂರು ಚಂದ್ರು ನಿರ್ದೇಶನದ ವಿನಯ ರಾಜಕುಮಾರ್ ನಟನೆಯ 'ಗ್ರಾಮಾಯಣ', ಪುನೀತ್ ರಾಜ್ ಕುಮಾರ್ ನಿರ್ಮಿಸಿ, 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಖ್ಯಾತಿಯ ಹೇಮಂತ್ ರಾವ್ ನಿರ್ದೇಶಿಸಿರುವ 'ಕವಲುದಾರಿ' ಮತ್ತು ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣದ ಮತ್ತೊಂದು ಹೊಸ ಚಿತ್ರದಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಲಿದ್ದೇನೆ. ವಿನೋದ್ ದಯಾಳನ್ ಎಂಬ ನವ ನಿರ್ದೇಶಕರ ಚಿತ್ರ ಜೋರ್ಡಾನ್ ಸ್ಲಮ್ ನಲ್ಲಿ ಮಕ್ಕಳನ್ನು ಎಷ್ಟು ಪ್ರ್ಯಾಕ್ಟಿಕಲ್ ಆಗಿ ಬೆಳೆಸಬಹುದು ಎಂದು ತೋರಿಸುವಂಥ ಆ ಚಿತ್ರದಲ್ಲಿ ತಂದೆ ಮತ್ತು ಮಗನದ್ದೇ ಪ್ರಧಾನ ಪಾತ್ರಗಳು. ಡ್ರಾಮಾ ಖ್ಯಾತಿಯ ಬಾಲನಟ ಮಹೇಂದ್ರನ ತಂದೆಯಾಗಿ ನಟಿಸಿದ್ದೇನೆ.

    ಪ್ರಶ್ನೆ: ಕೌಟುಂಬಿಕವಾಗಿ ಸಿಗುತ್ತಿರುವ ಬೆಂಬಲ ಹೇಗಿದೆ?

    ಪ್ರಶ್ನೆ: ಕೌಟುಂಬಿಕವಾಗಿ ಸಿಗುತ್ತಿರುವ ಬೆಂಬಲ ಹೇಗಿದೆ?

    ಉತ್ತರ: ನನ್ನ ನಾಟಕದ ಮೇಷ್ಟ್ರುಗಳಲ್ಲೊಬ್ಬರು ರಾಜಪ್ಪ ದಳವಾಯಿ. ನಾನು ಮದುವೆಗೆ ಹೆಣ್ಣು ಹುಡುಕುತ್ತಿರುವ ಬಗ್ಗೆ ಅರಿತುಕೊಂಡ ಅವರು ತಮ್ಮ ಸಂಬಂಧಿಕರ ಹುಡುಗಿಯನ್ನು ತೋರಿಸಿ ಮದುವೆಯ ಬಗ್ಗೆ ಯೋಚಿಸುವಂತೆ ಹೇಳಿದ್ದರು. ಮೈತ್ರಿ ಎಂಬ ಹುಡುಗಿಯನ್ನೇ ವಿವಾಹವಾದೆ. ಇಂದು ಆಕೆ ಉಪನ್ಯಾಸಕಿಯಾಗಿದ್ದುಕೊಂಡು ನನ್ನ ಕಲಾಬದುಕಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈಗ ನಮಗೆ ಅನಿಕೇತನ ಮತ್ತು ಚಂದ್ರಕಾಂತ ಎಂಬ ಇಬ್ಬರು ಮಕ್ಕಳಿದ್ದಾರೆ.

    English summary
    Kannada Actor Sampath Kumar reveals his acting experience in Kannada Movie KGF, in an exclusive interview with Filmibeat Kannada.
    Wednesday, December 26, 2018, 13:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X