ಬೈಕ್ ರೇಸರ್ ಆಗ್ಬೇಕಿದ್ದ 'ಗಿಣಿರಾಮ' ಧಾರಾವಾಹಿಯ ಈ ನಟ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ಕನ್ನಡ ಕಿರುತೆರೆಯ ಜನಪ್ರಿಯ ನಟ, 'ಗಿಣಿರಾಮ' ಖ್ಯಾತಿಯ ಪ್ರಸನ್ನ ಜೈ ಅವರು ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ಸುಂದರ ಪಯಣವನ್ನು ಈ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ. ವಿಜಯಪುರದ ಈ ಪ್ರತಿಭೆ ಒಬ್ಬ ಬೈಕ್ ರೇಸರ್ ಆಗುವ ಕನಸು ಕಂಡು, ಅನಿರೀಕ್ಷಿತ ತಿರುವುಗಳಿಂದ ನಟನಾ ಕ್ಷೇತ್ರಕ್ಕೆ ಬಂದವರು.

ರಂಗಭೂಮಿಯ ಶಿಸ್ತು ಮತ್ತು ನೀನಾಸಂನ ತರಬೇತಿಯಿಂದ ಪಳಗಿದ ಇವರು, ಇಂದು ಮನೆಮಾತಾಗಿರುವ ಪರಿ ಮತ್ತು ಪಾತ್ರಗಳಿಗಾಗಿ ಅವರು ಮಾಡುವ ಕಠಿಣ ಪರಿಶ್ರಮ ನಿಜಕ್ಕೂ ಮಾದರಿ. ಸಾಧಾರಣ ಹಿನ್ನೆಲೆಯಿಂದ ಬಂದು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಪ್ರಸನ್ನ ಅವರ ಮಾತುಗಳು ಇಲ್ಲಿವೆ.

Beyond the speed How a bike racer Prasanna became Kannada television Shivaram

ನೀವು ಎಲ್ಲಿಯವರು ಮತ್ತು ನಟನೆಗೆ ಬಂದಿದ್ದು ಹೇಗೆ?

ಪ್ರಸನ್ನ ಜೈ: ನಾನು ಮೂಲತಃ ವಿಜಯಪುರದವನು. ಸತ್ಯ ಹೇಳ್ಬೇಕಂದ್ರೆ ನಾನು ಒಬ್ಬ ಆಕ್ಟರ್ ಆಗ್ತೇನಿ ಅಂತ ಕನಸಲ್ಲೂ ಅನ್ಕೊಂಡಿರಲಿಲ್ಲ. ನನಗೆ ಬೈಕ್ ಅಂದ್ರೆ ಪ್ರಾಣ, ಒಬ್ಬ ದೊಡ್ಡ 'ಡ್ರ್ಯಾಗ್ ರೇಸರ್' ಆಗ್ಬೇಕು ಅಂತ ಹಗಲು ರಾತ್ರಿ ಕನಸು ಕಾಣ್ತಿದ್ದೆ. ಆದ್ರೆ ನಮ್ಮದು ಮಿಡಲ್ ಕ್ಲಾಸ್ ಫ್ಯಾಮಿಲಿ, ಅಷ್ಟು ಕಾಸ್ಟ್ಲಿ ಬೈಕ್ ಅದೆಲ್ಲ ತರೋಕೆ ಶಕ್ತಿ ಇರ್ಲಿಲ್ಲ. ಒಂದು ದಿನ ನನ್ನ ಜೊತೆ ರೇಸ್ ಮಾಡ್ತಿದ್ದ ಫ್ರೆಂಡ್ಗೆ ಜೋರಾಗಿ ಆಕ್ಸಿಡೆಂಟ್ ಆಯ್ತು, ಅದನ್ನ ನೋಡಿ ಮನೆಯಲ್ಲಿ ಕಂಪ್ಲೀಟ್ ಭಯ ಬಿದ್ದು ರೇಸಿಂಗ್ ಮಾಡೋದು ಬೇಡ ಅಂದ್ರು. ಆಮೇಲೆ ಒಂದು ಆರು ತಿಂಗಳು ಸುಮ್ಮನೆ ಕೂತಾಗ ನನಗೆ ಅನಿಸಿದ್ದು ಒಂದೇ-ನನಗೆ ಈ 9 ರಿಂದ 5 ರ ಕೆಲಸ ಮಾಡೋಕೆ ಆಗಲ್ಲ ಅಂತ. ಆಗ ಮಾಡೆಲಿಂಗ್ ಕಡೆ ಗಮನ ಹೋಯ್ತು, ಆದ್ರೆ ಅಲ್ಲಿನ ಫೋಟೋಶೂಟ್ ಖರ್ಚು ಕೇಳಿ ಸುಮ್ಮನಾದೆ. ಕೊನೆಗೆ ನಟನೆ ಮಾಡೋಣ ಅಂತ ಡಿಸೈಡ್ ಮಾಡಿ, 20ನೇ ವಯಸ್ಸಿಗೆ 'ನೀನಾಸಂ'ಗೆ ಎಂಟ್ರಿ ಕೊಟ್ಟೆ. ಅಲ್ಲಿಂದಲೇ ನನ್ನ ಈ ಜರ್ನಿ ಶುರುವಾಗಿದ್ದು.

ಥಿಯೇಟರ್ ಆರ್ಟಿಸ್ಟ್ ಆಗಿ ನೀವು ಕಲಿತ ದೊಡ್ಡ ಪಾಠ ಯಾವುದು?

ಪ್ರಸನ್ನ ಜೈ: ನೀನಾಸಂ ಅನ್ನೋದು ಬರಿ ಆಕ್ಟಿಂಗ್ ಸ್ಕೂಲ್ ಅಲ್ಲ, ಅದು ಲೈಫ್ ಸ್ಕೂಲ್. ಅಲ್ಲಿ ನಾನು ಕಲಿತ ದೊಡ್ಡ ಪಾಠ ಅಂದ್ರೆ 'ಆಕ್ಟಿಂಗ್ ಅಂದ್ರೆ ಬರಿ ನಟಿಸೋದಲ್ಲ, ಅದು ಆ ಕ್ಷಣದಲ್ಲಿ ಸ್ವಾಭಾವಿಕವಾಗಿ ಘಟಿಸುವುದು'. ಎಷ್ಟೋ ಜನಕ್ಕೆ ಲಿಸನಿಂಗ್ ಅಭ್ಯಾಸ ಇರಲ್ಲ, ಬರಿ ಡೈಲಾಗ್ ಹೊಡೆಯೋಕೆ ನೋಡ್ತಾರೆ. ಆದ್ರೆ ಎದುರಿಗಿರೋರು ಹೇಳೋದನ್ನ ಸರಿಯಾಗಿ ಲಿಸನ್ ಮಾಡಿ ಅದಕ್ಕೆ ರಿಯಾಕ್ಟ್ ಮಾಡೋದೇ ನಿಜವಾದ ನಟನೆ ಅಂತ ನಾನು ಅಲ್ಲೇ ಕಲಿತಿದ್ದು. ಮನುಷ್ಯರನ್ನ ಮತ್ತು ಅವರ ಎಮೋಷನ್ಸ್ನ್ನ ಹೇಗೆ ಗೌರವಿಸಬೇಕು ಅನ್ನೋದನ್ನ ಥಿಯೇಟರ್ ನನಗೆ ಕಲಿಸಿಕೊಡ್ತು.

Beyond the speed How a bike racer Prasanna became Kannada television Shivaram

'ಗಿಣಿರಾಮ' ಸೀರಿಯಲ್ ನಿಮ್ಮ ಲೈಫ್ ಬದಲಿಸಿದ್ದು ಹೇಗೆ?

ಪ್ರಸನ್ನ ಜೈ: ಗಿಣಿರಾಮ ನನ್ನ ಮೊದಲ ಸೀರಿಯಲ್, ಇದಕ್ಕೂ ಮೊದಲು ನಾನು ನಾಟಕ, ರಂಗಭೂಮಿ ಮತ್ತು ತಿರುಗಾಟಗಳಲ್ಲಿ ತೊಡಗಿಸಿಕೊಂಡಿದ್ದೆ. 19ನೇ ವಯಸ್ಸಿನಲ್ಲೇ ಮುಂದಿನ ಹತ್ತು ವರ್ಷಗಳ ವೃತ್ತಿಜೀವನದ ಬಗ್ಗೆ ಒಂದು ಪ್ಲಾನ್ ಮಾಡಿಕೊಂಡಿದ್ದೆ, ಅದರಂತೆ 22-23ನೇ ವಯಸ್ಸಿಗೆ ಗಿಣಿರಾಮ ಮೂಲಕ ಜನ ನನ್ನನ್ನು ಗುರುತಿಸುವಂತಾಯಿತು. ಈ ಧಾರಾವಾಹಿ ನನ್ನ ಬದುಕನ್ನೇ ಬದಲಿಸಿತು. ಆರಂಭದಲ್ಲಿ ರಂಗಭೂಮಿಯಲ್ಲಿದ್ದಾಗ ನನ್ನನ್ನು ನೋಡಿ ಆಡಿಕೊಂಡವರು ಮತ್ತು ಹೀಯಾಳಿಸಿದವರೇ ಇಂದು ನನ್ನ ಪ್ರೋಮೋಗಳನ್ನು ಹೆಮ್ಮೆಯಿಂದ ಶೇರ್ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಗಿಣಿರಾಮ ನನ್ನ ವೃತ್ತಿಜೀವನಕ್ಕೆ ಒಂದು ಭದ್ರ ಬುನಾದಿ ಹಾಕಿಕೊಟ್ಟಿತು.

'ಜೈಲಲಿತಾ' ಧಾರಾವಾಹಿಯ 'ರಘು' ಪಾತ್ರದ ಬಗ್ಗೆ ಏನು ಹೇಳ್ತೀರಿ?

ಪ್ರಸನ್ನ ಜೈ: ನಾನು 'ನೀನಾದೆ ನಾ' ಧಾರಾವಾಹಿಯ ಮುನ್ನಾ ಪಾತ್ರವನ್ನು ಮಾಡುತ್ತಿದ್ದಾಗ, ನನ್ನ ಅಭಿನಯವನ್ನು ಮೆಚ್ಚಿ ಚಾನಲ್ನ ಶಿಲ್ಪಾ ಮ್ಯಾಡಂ ಮತ್ತು ವಾಸು ಸರ್ ಅವರು ಈ 'ರಘು' ಪಾತ್ರಕ್ಕೆ ನನ್ನನ್ನು ನೇರವಾಗಿ ಆಯ್ಕೆ ಮಾಡಿದರು. ವಿಶೇಷವೆಂದರೆ ಈ ಪಾತ್ರಕ್ಕಾಗಿ ನಾನು ಯಾವುದೇ ಲುಕ್ ಟೆಸ್ಟ್ ನೀಡಿರಲಿಲ್ಲ. ರಘು ಒಬ್ಬ ಅತ್ಯಂತ Innocent, Decent ಮತ್ತು ಫ್ರೆಂಡ್ಲಿ ಹುಡುಗ. ಲಲಿತಾ ಎಂಬ ತನ್ನ ಗೆಳತಿಯನ್ನು ಪ್ರೀತಿಸುತ್ತಿದ್ದರೂ ಅದನ್ನು ವ್ಯಕ್ತಪಡಿಸಲಾಗದೆ ಒದ್ದಾಡುವ ಮತ್ತು ಕೊನೆಯಲ್ಲಿ ಪ್ರಣಯರಾಜನಂತೆ ತ್ಯಾಗ ಮಾಡುವ ಈ ಜಾಯ್ಫುಲ್ ಪಾತ್ರವನ್ನು ನಿರ್ವಹಿಸಿದ್ದು ನನಗೆ ತುಂಬಾ ಖುಷಿ ನೀಡಿದೆ.

ಪ್ರತಿಯೊಂದು ಪಾತ್ರಕ್ಕೂ ನೀವು ಮಾಡುವ 'ರಿಸರ್ಚ್' ಹೇಗಿರುತ್ತೆ?

ಪ್ರಸನ್ನ ಜೈ: ನಾನು ಬೇಸಿಕಲಿ ಆಕ್ಟಿಂಗ್ ಕಲಿತಿದ್ದು ಅಬ್ಸರ್ವೇಷನ್ ಮೂಲಕ. ಒಬ್ಬ ನಟನಿಗೆ ಅಬ್ಸರ್ವೇಷನ್ ಅನ್ನೋದು ತುಂಬಾ ಮುಖ್ಯ, ಇದನ್ನ ನಾನು ನೀನಾಸಂನಲ್ಲಿ ಕಲಿತೆ. ರಿಯಲಿಸ್ಟಿಕ್ ಆಕ್ಟಿಂಗ್ ಬಗ್ಗೆ Stanislavski ಅವರ ಥಿಯರಿಗಳಿಂದ ನಾನು ಪ್ರಭಾವಿತನಾಗಿದ್ದೇನೆ. ನೀನಾಸಂನಲ್ಲಿದ್ದಾಗ 'ನೋ ಒನ್ ರೈಟ್ಸ್ ಟು ದಿ ಕರ್ನಲ್' ಅನ್ನೋ ನಾಟಕದಲ್ಲಿ ನನಗೆ ಒಂದು ಕೋಳಿ ಪಾತ್ರ ನೀಡಲಾಗಿತ್ತು. ಆ ಪಾತ್ರಕ್ಕಾಗಿ ನಾನು ಹೆಗ್ಗೋಡಿನಲ್ಲಿದ್ದಾಗ ಕೋಳಿಗಳು ಹೇಗೆ ನಡೆಯುತ್ತವೆ, ಹೇಗೆ ಕಾಲು ಇಡುತ್ತವೆ, ಕಾಲು ಇಟ್ಟಾಗ ಕತ್ತು ಮತ್ತು ಕಣ್ಣುಗಳನ್ನು ಹೇಗೆ ಆಡಿಸುತ್ತವೆ ಅನ್ನೋದನ್ನ ಇಂಚಿಂಚಾಗಿ ಅಬ್ಸರ್ವ್ ಮಾಡಿ ವರ್ಕ್ ಮಾಡಿದ್ದೆ. ಆ ನಾಟಕದಲ್ಲಿ ನನಗೆ ಯಾವುದೇ ಮಾತುಗಳಿಲ್ಲದಿದ್ದರೂ ಆ ಕೋಳಿ ಪಾತ್ರಕ್ಕೆ ಔಟ್ಸ್ಟ್ಯಾಂಡಿಂಗ್ ಕ್ಲಾಪ್ಸ್ ಮತ್ತು ಪ್ರಶಂಸೆ ಸಿಕ್ಕಿತ್ತು.

ಯಾವುದೇ ಪಾತ್ರ ಸಿಕ್ಕಾಗ ನಾನು ಮೊದಲು ಡೈರೆಕ್ಟರ್ ಮತ್ತು ರೈಟರ್ ಜೊತೆ ಮಾತನಾಡಿ ಆ ಪಾತ್ರದ ಬಗ್ಗೆ ಒಂದಿಷ್ಟು ಫೀಡ್ ತಗೋತೀನಿ. ಬರಿ ಡೈಲಾಗ್ ಹೊಡೆಯೋದು ಅಥವಾ ಹೇಳಿಕೊಟ್ಟಿದ್ದನ್ನ ಅಷ್ಟೇ ಮಾಡೋದು ನನಗೆ ಇಷ್ಟ ಆಗಲ್ಲ. ಅವರು ಒಂದು ಪಾತ್ರಕ್ಕೆ 10% ನಿರೀಕ್ಷಿಸಿದರೆ, ನಾನು ಅದಕ್ಕೆ ನನ್ನ ಕಡೆಯಿಂದ 40% ಇಂಪ್ರೊವೈಸೇಶನ್ ಮಾಡಿ ತೋರಿಸ್ತೀನಿ. ಮ್ಯಾನರಿಸಂ, ಹೇರ್ ಸ್ಟೈಲ್ ಅಥವಾ ನಡಿಗೆಯ ಬಗ್ಗೆ ಡೈರೆಕ್ಟರ್ ಜೊತೆ ಚರ್ಚಿಸಿ, ಅವರು ಬೇಡ ಅಂದಿದ್ದನ್ನ ಕಟ್ ಮಾಡಿ ಉಳಿದಿದ್ದನ್ನ ಪಾತ್ರಕ್ಕೆ ಅಳವಡಿಸಿಕೊಳ್ತೀನಿ. ಹೀಗೆ ಪ್ರತಿ ಕ್ಯಾರೆಕ್ಟರ್ ಅನ್ನು ಕಟ್ಟುಕೊಳ್ಳೋದ್ರಲ್ಲಿ ನನಗೊಂದು ಗ್ರಿಪ್ ಸಿಕ್ಕಿದೆ ಅನ್ಸುತ್ತೆ. ಆಕ್ಟಿಂಗ್ ಅನ್ನೋದು ಅನುಭವ ಆದಂತೆಲ್ಲಾ ನಮ್ಮ ಮೈಗೂಡುತ್ತಾ ಹೋಗುತ್ತದೆ.

'ಮುನ್ನಾ' ಪಾತ್ರದ ಬಗ್ಗೆ ಜನರಿಂದ ಸಿಕ್ಕ ಬೆಸ್ಟ್ ಕಾಮೆಂಟ್ ಯಾವುದು?

ಪ್ರಸನ್ನ ಜೈ: ಗಿಣಿರಾಮ ಧಾರಾವಾಹಿಯ ನಂತರ ನನಗೆ ಅತೀ ಹೆಚ್ಚು ಜನಪ್ರಿಯತೆ ಮತ್ತು ಗುರುತು ತಂದುಕೊಟ್ಟಿದ್ದು 'ನೀನಾದೆ ನಾ' ಧಾರಾವಾಹಿಯ ಮುನ್ನಾ ಪಾತ್ರ. ಈ ಸೀರಿಯಲ್ನಲ್ಲಿ ಹೀರೋ ಮತ್ತು ಹೀರೋಯಿನ್ ಜೋಡಿಗೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ಇತ್ತು. ಆದರೆ ನಾವು ನಮ್ಮ ಪಾತ್ರಗಳನ್ನು ಕೇವಲ ಹೇಳಿಕೊಟ್ಟಿದ್ದಷ್ಟೇ ಮಾಡದೆ, ಪ್ರತಿಯೊಂದಕ್ಕೂ ಒಂದಿಷ್ಟು ಸ್ವಂತ ಆಲೋಚನೆಗಳನ್ನು ಸೇರಿಸಿ, ಎಕ್ಸ್ಟ್ರಾ ವಿಷಯಗಳನ್ನು ಅಳವಡಿಸಿಕೊಂಡು ಆ ಪಾತ್ರಗಳನ್ನು ಗಟ್ಟಿಯಾಗಿ ನಿಲ್ಲಿಸಿದ್ದೆವು.

ಒಮ್ಮೆ ಸ್ವತಃ ಆ ಧಾರಾವಾಹಿಯ ನಾಯಕನೇ ನನ್ನ ಬಳಿ ಬಂದು, 'ಲೋ ಪ್ರಸನ್ನ, ಇದೇ ಮೊದಲ ಬಾರಿಗೆ ಹೀರೋ-ಹೀರೋಯಿನ್ ಪಾತ್ರಗಳಿಗಿಂತ ಹೆಚ್ಚಾಗಿ ಮುನ್ನಾ ಮತ್ತು ಬಾಲಾ ಎಂಬ ಎರಡನೇ ಹಂತದ ಪಾತ್ರಗಳ ಬಗ್ಗೆ ಅತೀ ಹೆಚ್ಚು ಕಾಮೆಂಟ್ಸ್ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೀವು ಆ ಪಾತ್ರಗಳನ್ನು ಅಷ್ಟು ಅದ್ಭುತವಾಗಿ ಮಾಡಿಕೊಂಡಿದ್ದೀರಿ' ಎಂದು ಮನಸಾರೆ ಹೊಗಳಿದ್ದರು. ಹೀರೋ ಮತ್ತು ಹೀರೋಯಿನ್ ಇಬ್ಬರಿಂದಲೂ ಸಿಕ್ಕ ಈ ಪ್ರಶಂಸೆ ಆ ಪಾತ್ರಕ್ಕೆ ಸಿಕ್ಕ ಅತೀ ದೊಡ್ಡ ರಿವಾರ್ಡ್ ಆಗಿತ್ತು.

Beyond the speed How a bike racer Prasanna became Kannada television Shivaram

ಹೊಸಬರಿಗೆ ನೀವು ನಟನೆ ಹೇಳಿಕೊಡುವಾಗ ಹೆಚ್ಚು ಒತ್ತು ಯಾವುದಕ್ಕೆ ಕೊಡ್ತೀರಿ?

ಪ್ರಸನ್ನ ಜೈ: ನಾನು ನಟನೆ ಹೇಳಿಕೊಡುವಂತದ್ದಲ್ಲ, ಅದನ್ನ ಅವರ ಕಡೆಯಿಂದಲೇ ಘಟಿಸುವಂತೆ ಮಾಡಬೇಕು ಅನ್ನೋದು ನನ್ನ ನಂಬಿಕೆ. ನಾನು ಸಾಮಾನ್ಯವಾಗಿ ಹೇಗೆ ಮಾಡ್ತೀನಿ ಅಂದ್ರೆ, ಒಂದು ಕ್ಯಾರೆಕ್ಟರ್ ಇದೆ ಅಂದಾಗ ಆ ಕ್ಯಾರೆಕ್ಟರ್ ಅನ್ನ ಮೊದಲು ನಾನು ಮಾಡಿ ತೋರಿಸೋಕೆ ಟ್ರೈ ಮಾಡ್ತೀನಿ. ಫಾರ್ ಎಕ್ಸಾಂಪಲ್, ನಾನು ಒಬ್ಬರಿಗೆ 'ರಾಮ' ಅನ್ನೋ ಪಾತ್ರ ಮಾಡಿಸ್ತಿದ್ದೀನಿ ಅಂದುಕೊಳ್ಳಿ, ಫಸ್ಟ್ ನಾನು ರಾಮನ ತರಹ ಮಾಡಿ ತೋರಿಸ್ತೀನಿ. ಆಮೇಲೆ ಅವರು ರಾಮನಾಗಿದ್ದಾಗ, ನಾನು ಇನ್ನೊಂದು ಯಾವುದೋ ಪಾತ್ರವಾಗಿ (ರಹೀಮ ಅಥವಾ ಮತ್ಯಾವುದೋ) ಎಂಟ್ರಿ ಕೊಟ್ಟುಬಿಟ್ಟು, ಆಕ್ಟ್ ಮಾಡಿ ಅವರ ಕಡೆಯಿಂದ ರಿಯಾಕ್ಟ್ ಮಾಡೋ ತರಹ ಮಾಡ್ತೀನಿ. ಅಂದ್ರೆ ಆ ಕ್ಯಾರೆಕ್ಟರ್ಗೆ ಈ ತರಹ ಬಾಡಿ ಲ್ಯಾಂಗ್ವೇಜ್ ಇರುತ್ತೆ, ಈ ತರಹ ವಾಯ್ಸ್ ಟೋನ್ ಇರುತ್ತೆ ಅಂತ ಒಂದಿಷ್ಟು ಫೀಡ್ ಕೊಟ್ಟು, ನಾನು ಇನ್ನೊಂದು ಪಾತ್ರವಾಗಿ ಹೋಗಿ ಅವರ ಕಡೆಯಿಂದ ರಿಯಾಕ್ಷನ್ ತಗೋಳ್ತಾ ಆ ಪಾತ್ರವನ್ನ ಅವರಿಗೆ ಕಲಿಸ್ತೀನಿ. ಪ್ರತಿಯೊಂದು ಪಾತ್ರಕ್ಕೂ ಡೈಲಾಗ್ ಹೀಗೆ ಹೇಳು, ಇಲ್ಲಿ ಒತ್ತು ಕೊಡು ಅಂತ ಹೇಳೋದಕ್ಕಿಂತ, ರಿಯಾಕ್ಟ್ ಮಾಡಿಸ್ತಾ ಮಾಡಿಸ್ತಾ ಆ ಪಾತ್ರವನ್ನ ಅವರಿಗೆ ಮೈಗೂಡಿಸೋ ಒಂದು ವಿಧಾನವನ್ನ ನಾನು ಕಂಡುಕೊಂಡಿದ್ದೀನಿ.

ಮಂಗಳೂರು ಶೂಟಿಂಗ್ ದಿನಗಳ ನೆನಪು ಹೇಗಿದೆ?

ಪ್ರಸನ್ನ ಜೈ: ನನಗೆ ಮಂಗಳೂರು ಶೂಟಿಂಗ್ ಅಂದ್ರೆ ಅದೊಂದು ಅದ್ಭುತ ಅನುಭವ. ಹತ್ತತ್ರ ನಾಲ್ಕೈದು ತಿಂಗಳು ಅಲ್ಲಿದ್ವಿ, ಮಂಗಳೂರಿಗೆ ಹೋಗಿದ್ದು ಅದು ಎರಡನೇ ಬಾರಿ. ಮನೆಯನ್ನೆಲ್ಲ ಬಿಟ್ಟು ಒಂದು ಹೊಸ ಪ್ರಪಂಚವನ್ನೇ ಅಲ್ಲೂ ಕಟ್ಟಿಕೊಂಡಿದ್ವಿ. ಅಲ್ಲಿ ನಮಗೆ ಹೊಸ ಹೊಸ ಆರ್ಟಿಸ್ಟ್ಗಳು, ಟೆಕ್ನಿಷಿಯನ್ಸ್ಗಳು ಮತ್ತು ಗೆಳೆಯರು ಸಿಕ್ಕರು.

ಅಲ್ಲಿನ ಜನರ ಮಾತು ಕೇಳೋಕೆ ತುಂಬಾ ಖುಷಿಯಾಗುತ್ತೆ, ಅವರು ತುಂಬಾ ಮುಗ್ಧರು. ಅಲ್ಲಿನ ಬೀಚ್, ನೀರಾ ಇದೆಲ್ಲವೂ ತುಂಬಾ ಇಷ್ಟವಾಯ್ತು. ಇಡೀ ಜರ್ನಿಯನ್ನು ಎಕ್ಸ್ಪ್ಲೈನ್ ಮಾಡ್ತಾ ಹೋದ್ರೆ ತುಂಬಾ ಉದ್ದ ಆಗುತ್ತೆ. ಒಟ್ಟಾರೆಯಾಗಿ ಮಂಗಳೂರು ಶೂಟಿಂಗ್ ನನ್ನ ಲೈಫ್ನ ಒಂದು ಒಳ್ಳೆಯ ಘಟ್ಟ ಮತ್ತು ಗ್ರೇಟ್ ಎಕ್ಸ್ಪೀರಿಯನ್ಸ್.

ಮದುವೆಯ ನಂತರದ ಜೀವನ ಮತ್ತು ಕೆಲಸದ ಬ್ಯಾಲೆನ್ಸ್ ಹೇಗಿದೆ?

ಪ್ರಸನ್ನ ಜೈ: ಮದುವೆ ನಂತರ ನನ್ನ ಜೀವನ ಮತ್ತು ಕೆಲಸದ ಬ್ಯಾಲೆನ್ಸ್ನಲ್ಲಿ ನನಗೆ ಅಂತ ವ್ಯತ್ಯಾಸವೇನು ಅನಿಸುತ್ತಿಲ್ಲ. ಯಾಕೆಂದರೆ ನನಗೆ ಅಂತಹ ಅಂಡರ್ಸ್ಟ್ಯಾಂಡಿಂಗ್ ಹೆಂಡತಿ ಸಿಕ್ಕಿದ್ದಾಳೆ. ಬ್ಯಾಚುಲರ್ ಆಗಿದ್ದಾಗ ಗೆಳೆಯರ ಮನೆಗೆ ಹೋದರೆ ಅಲ್ಲೇ ಉಳಿದುಕೊಳ್ಳುತ್ತಿದ್ದೆ, ಆದರೆ ಈಗ ಮನೆಗೆ ಬರಬೇಕು ಅನ್ನೋ ಒಂದು ಜವಾಬ್ದಾರಿ ಇದೆ ಅಷ್ಟೇ. ಜನರು ಮದುವೆ ಆದ ಮೇಲೆ ಹಂಗಾಗುತ್ತೆ ಹಿಂಗಾಗುತ್ತೆ ಅಂತ ಏನೇನೋ ಹೇಳುತ್ತಿರುತ್ತಾರೆ, ಆದರೆ ನನಗೆ ಪರ್ಸನಲ್ ಆಗಿ ಅಂತಹ ಯಾವುದೇ ಡಿಫರೆನ್ಸ್ ಕಾಣಿಸುತ್ತಿಲ್ಲ. ಅವಳು ಬೇಸಿಕಲಿ ನನ್ನ ಫ್ರೆಂಡ್ ಆಗಿದ್ದವಳು, ಅವಳನ್ನೇ ನಾನು ಮದುವೆಯಾಗಿದ್ದೇನೆ. ಹಾಗಾಗಿ ನಮಗೆ ಮದುವೆ ನಂತರದ ಜೀವನ ತುಂಬಾ ಚೆನ್ನಾಗಿದೆ.

ಮುಂದೆ ನೀವು ಮಾಡಲೇಬೇಕು ಎಂದುಕೊಂಡಿರುವ ಡ್ರೀಮ್ ರೋಲ್ ಯಾವುದು?

ಪ್ರಸನ್ನ ಜೈ: ನನಗೆ ಡ್ರೀಮ್ ರೋಲ್ ಅಂತ ಹಿಂಗೆ ಫಿಕ್ಸ್ ಆಗಿಲ್ಲ. ಒಬ್ಬ ನಟನಾಗಿ ನನಗೆ ಯಾವ ರೋಲ್ ಕೊಟ್ಟರೂನು ಆ ರೋಲ್ ಜನಗಳ ಮನಸ್ಸಲ್ಲಿ ರಿಜಿಸ್ಟರ್ ಆಗ್ಬೇಕು, ರಿಜಿಸ್ಟರ್ ಮಾಡ್ಲೇಬೇಕು ಅಂತ ಅನ್ಕೊಂಡು ಕೆಲಸ ಮಾಡ್ಕೊಂಡು ಹೊರಟಿರೋವನು ನಾನು. ಇಂತದೇ ಪಾತ್ರ ಮಾಡ್ಬೇಕು ಅಂತ ಹಂಗೇನೂ ನಾನು ಕನಸು ಕಟ್ಕೊಂಡಿಲ್ಲ. ಯಾವ ಪಾತ್ರ ಸಿಗುತ್ತೆ ಆ ಪಾತ್ರ ಒಂದು ಹತ್ತರಲ್ಲಿ ಒಂದು ನಾಲ್ಕು ಜನರ ಮನಸ್ಸಲ್ಲಾದ್ರೂ ಅಚ್ಚೊತ್ತಬೇಕು ಅನ್ನೋ ಪ್ರಯತ್ನ ಪಡ್ಕೊಂಡು ನಾನು ಹೋಗ್ತಾ ಇರೋವನು.

ಅಭಿಮಾನಿಗಳಿಗೆ ನಿಮ್ಮ ಸಂದೇಶ?

ಪ್ರಸನ್ನ ಜೈ: ನನಗೆ ಗೊತ್ತು ಇಲ್ಲದವರು ಕೂಡ ನಾನು ಮಾಡಿರುವ ಪಾತ್ರವನ್ನು ಮೆಚ್ಚಿ ಪ್ರತಿಸತಿ ಪ್ರಶಂಸೆ ಮಾಡುತ್ತಾರೆ. ಅವರು ತೋರುವ ಈ ಪ್ರೀತಿ ನನಗೆ ಒಂದು ವಿಸ್ಮಯದಂತೆ ಕಾಣಿಸುತ್ತದೆ. ಒಬ್ಬ ಕಲಾವಿದನಾಗಿ ನನಗೆ ಇದು ಭಗವಂತ ಕೊಟ್ಟ ಆಶೀರ್ವಾದ ಎಂದು ನಂಬಿದ್ದೇನೆ.

ನಾನು ಯಾರನ್ನೂ ಕಡೆಗಣಿಸುವುದಿಲ್ಲ. ಮೆಸೇಜ್ ಮಾಡಿದ ಪ್ರತಿಯೊಬ್ಬರಿಗೂ ಗೌರವದಿಂದ ಪ್ರತಿಕ್ರಿಯೆ ನೀಡುತ್ತೇನೆ. ಇತ್ತೀಚೆಗೆ ನನ್ನ ಹುಟ್ಟುಹಬ್ಬದಂದು ಅಸಂಖ್ಯಾತ ಅಭಿಮಾನಿಗಳು ಹಾರೈಸಿದ್ದಾರೆ, ಅವರಿಗೆ ಇಂದಿಗೂ ರಿಪ್ಲೈ ಮಾಡುತ್ತಲೇ ಇದ್ದೇನೆ. ಅಭಿಮಾನಿಗಳು ತೋರುವ ಈ ಅಕ್ಕರೆಗೆ ನಾನು ಯಾವತ್ತೂ ಚಿರಋಣಿ.

ಅಪ್ಪ ಕಂಡ ಆ 'ಒಂದು' ಕನಸು

ಒಂದಲ್ಲ ಒಂದು ದಿನ ನನ್ನ ಮಗನೂ ಹೀಗೆ ಸ್ಟೇಜ್ ಮೇಲೆ ಅವಾರ್ಡ್ ತಗೋತಾನೆ, ಆಗ ನಮ್ಮನ್ನು ವೇದಿಕೆ ಮೇಲೆ ಕರೆಸ್ತಾನಲ್ಲವಾ? - ಯಾವುದೋ ಒಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ನೋಡುತ್ತಿದ್ದಾಗ ಭಾವುಕರಾಗಿ ಅಪ್ಪ ಅಮ್ಮನ ಹತ್ತಿರ ಹೇಳಿಕೊಂಡಿದ್ದ ಮಾತುಗಳಿವು. ಆದರೆ ವಿಧಿಯ ಆಟ ಬೇರೆಯೇ ಇತ್ತು. ಮಗ ಪ್ರಶಸ್ತಿಯನ್ನು ಕೈಗೆತ್ತಿಕೊಳ್ಳುವ ಮೊದಲೇ ಅಪ್ಪ ಇಹಲೋಕ ತ್ಯಜಿಸಿದರು.

ಅಪ್ಪ ಇಂದು ನನ್ನ ಜೊತೆಗಿಲ್ಲದಿರಬಹುದು, ಆದರೆ ಅವರು ಕಂಡ ಆ ಕನಸು ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಮುಂದೊಂದು ದಿನ ನಾನು ಖಂಡಿತ ಆ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತೇನೆ. ಅಂದು ಆ ಗೌರವವನ್ನು ನನ್ನ ಅಪ್ಪನಿಗೇ ಅರ್ಪಿಸುತ್ತೇನೆ.

ಅಮ್ಮ ಎಂಬ ಅಚಲ ಶಕ್ತಿ

ನಟನೆಯ ಹಾದಿ ಅಷ್ಟು ಸುಲಭವಾಗಿರಲಿಲ್ಲ. 'ನೀನಾಸಂ'ಗೆ ಹೋಗುವ ನಿರ್ಧಾರದಿಂದ ಹಿಡಿದು ಇಂದಿನವರೆಗೂ ಬೆನ್ನೆಲುಬಾಗಿ ನಿಂತಿದ್ದು ನನ್ನ ತಾಯಿ. ಮನೆಯವರ ವಿರೋಧ, ಸಮಾಜದ ಹಂಗುಗಳ ನಡುವೆ ಮಗನ ಕನಸಿಗೆ ನೀರೆರೆದು ಸಲಹಿದವರು ಅಮ್ಮ. ನನ್ನ ಇಂದಿನ ಎಲ್ಲಾ ಸಾಧನೆಗೂ ನನ್ನ ತಾಯಿಯೇ ಕಾರಣ, ಅವರೇ ನನ್ನ ಸರ್ವಸ್ವ.

ಫ್ಯಾಕ್ಟರಿ ಕೆಲಸದಿಂದ ಫೋಟೋ ಸ್ಟುಡಿಯೋವರೆಗೆ

ಶಿಕ್ಷಣ ಮುಗಿದ ನಂತರ ಸಾಂಪ್ರದಾಯಿಕ '9 to 5' ಉದ್ಯೋಗ ಇಷ್ಟವಿಲ್ಲದೆ ಮನೆಯಲ್ಲೇ ಉಳಿದಾಗ ಎದುರಿಸಿದ ತಿರಸ್ಕಾರ ಒಂದೆರಡಲ್ಲ. ಏನೂ ಕೆಲಸವಿಲ್ಲದೆ ಮನೆಯಲ್ಲಿದ್ದಾನೆ ಎಂಬ ಹೀಯಾಳಿಕೆ ಕೇಳಿಬಂದಾಗ ಅನಿವಾರ್ಯವಾಗಿ ಸ್ಥಳೀಯ ಅಗರಬತ್ತಿ ಫ್ಯಾಕ್ಟರಿ, ನಂತರ ಜೀನ್ಸ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಬೇಕಾಯಿತು. ಆದರೆ ಒಳಗಿದ್ದ ಕಲಾವಿದನಿಗೆ ಅಲ್ಲಿನ ಯಾಂತ್ರಿಕ ಬದುಕು ಸಮಾಧಾನ ನೀಡಲಿಲ್ಲ. ಕೊನೆಗೆ ಎಲ್ಲವನ್ನೂ ತೊರೆದು, ಬೆಂಗಳೂರಿಗೆ ಬಂದು ಫೋಟೋ ಸ್ಟುಡಿಯೋವೊಂದರಲ್ಲಿ ಕೆಲಸ ಮಾಡುತ್ತಾ ನಟನಾಗುವ ಹಾದಿಯಲ್ಲಿ ಅಲೆದಾಡಿದೆ.

ಜೊಮ್ಯಾಟೊ ಡೆಲಿವರಿ ಬಾಯ್ ಆಗಿ ಸರ್ವೈವಲ್ ಹೋರಾಟ

'ಗಿಣಿ ರಾಮ' ಅಂತಹ ಜನಪ್ರಿಯ ಧಾರಾವಾಹಿಯಲ್ಲಿ ಗುರುತಿಸಿಕೊಂಡ ನಂತರವೂ ಸಂಕಷ್ಟಗಳು ಬೆನ್ನುಬಿಡಲಿಲ್ಲ. ಲಾಕ್‌ಡೌನ್ ಸಮಯದಲ್ಲಿ ಎದುರಾದ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಇವರು ಹಿಂಜರಿಯದೆ 'ಜೊಮ್ಯಾಟೊ' ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದರು. ಹಸಿವಿನ ಅರಿವಿದ್ದ ಕಾರಣ ಕೆಲಸವನ್ನು ಗೌರವಿಸಿ, ಆ ಕಷ್ಟದ ದಿನಗಳನ್ನು ಗೆದ್ದು ಬಂದರು.

ಸೋಲಿನ ಸುಳಿಯಲ್ಲಿ ಸಿಲುಕಿದಾಗಲೂ ಸೋಲೊಪ್ಪದೆ, ಇಂದು ಕನ್ನಡಿಗರ ಮನೆಮಾತಾಗಿರುವ ಇವರ ಪಯಣ ಪ್ರತಿಯೊಬ್ಬರಿಗೂ ಮಾದರಿ.

More from Filmibeat

English summary
Beyond the speed; How a bike racer Prasanna became Kannada television’s ‘Shivaram’.
Read more about: actor tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X