ಅನ್ಸಿದ್ದನ್ನ ಪಟ್ ಅಂತ ಹೇಳಿಬಿಡ್ತೀನಿ, ಅದರಿಂದ ಹಲವರಿಗೆ ನೋವಾಗಿದೆ: 30 ವರ್ಷದ ಜರ್ನಿ ಬಿಚ್ಚಿಟ್ಟ 'ಭಾಗ್ಯಲಕ್ಷ್ಮೀ' ಸುಂದ್ರಿ
'ಸಿಲ್ಲಿ ಲಲ್ಲಿ' ಧಾರಾವಾಹಿ ಯಾರಿಗೆ ನೆನಪಿಲ್ಲ ಹೇಳಿ. ಆ ಧಾರಾವಾಹಿಯ ವಿಶಾಲು ಕೂಡ ಎಲ್ಲರಿಗೂ ನೆನಪಿರುತ್ತೆ ಅಲ್ವಾ. ವಿಶಾಲು ಅಲಿಯಾಸ್ ಸುನೇತ್ರಾ ಪಂಡಿತ್ ಇಂಡಸ್ಟ್ರಿಗೆ ಬಂದು ಮೂವತ್ತು ವರ್ಷ ತುಂಬಿದೆ. ಇದರ ನಡುವೆ ಅದೆಷ್ಟೋ ಏಳುಬೀಳುಗಳನ್ನು ಕಂಡಿದ್ದಾರೆ. ಆ ಬಗ್ಗೆ ಫಿಲ್ಮೀಬೀಟ್ ಕನ್ನಡದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.
30 ವರ್ಷಗಳ ಜರ್ನಿ ಹೇಗಿತ್ತು..?
"ಯಾವುದು ಈಸಿ ಅಲ್ಲ. ನಮ್ಮ ಪ್ರೊಫೆಷನ್ ಅಂತ ಅಲ್ಲ. ಮನೆಯಲ್ಲಿರುವವರಿಗೂ ಸುಲಭವಲ್ಲ, ಕೆಲಸಕ್ಕೆ ಹೋಗುವವರ ಜೀವನವೂ ಸುಲಭವಲ್ಲ. ಎಲ್ಲಾದರಲ್ಲೂ ರಿಸ್ಕ್ ಇದ್ದೆ ಇರುತ್ತದೆ. ಆದರೆ ನಾವೂ ಅದನ್ನು ಹೇಗೆ ತೆಗೆದುಕೊಳ್ಳುತ್ತೀವಿ ಎಂಬುದರ ಮೇಲೆ ಡಿಪೆಂಡ್ ಆಗುತ್ತೆ. ನನಗೂ ಬೇಕಾದಷ್ಟು ಏರಿಳಿತ ಇತ್ತು. ಆದರೆ ಏನಾದರೂ ಸಾಧನೆ ಮಾಡಿ ತೋರಿಸಬೇಕು ಎಂಬ ಹಠ ಇತ್ತು. ದೇವರು ಇಷ್ಟೆಲ್ಲಾ ಸೌಕರ್ಯ ಕೊಟ್ಟಿರುವಾಗ ಏನು ಮಾಡದೆ ಸುಮ್ಮನೆ ಕುಳಿತುಕೊಳ್ಳುವುದು ಮೂರ್ಖತನ. ನಮಗೆ ಇದ್ದಂತ ಟ್ಯಾಲೆಂಟ್ ಅನ್ನು ಒಳ್ಳೆಯ ರೀತಿ ಬಳಸಿಕೊಂಡರೆ ಕೀರ್ತಿ ಬರುತ್ತೆ ಎಂಬ ಕಾರಣಕ್ಕೆ ತುಂಬಾ ಎಫರ್ಟ್ ಹಾಕಿದ್ದೀನಿ. 30 ವರ್ಷ ಇಂಡಸ್ಟ್ರಿಯಲ್ಲಿ ಬಂದಿದ್ದೀವಿ ಅಂದಾಗ ನಮಗೆ ತಿರುಗಿ ನೋಡುವುದಕ್ಕೆ ಹೆಮ್ಮ ಅನ್ನಿಸುತ್ತೆ.

ಹಾಸ್ಯ ಪ್ರಧಾನವಾದ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?
'ಅದು ಆಯ್ಕೆ ಮಾಡಿಕೊಂಡಿದ್ದು ಅಂತ ಅಲ್ಲ. ಕಲಾವಿದರು ಎಂದ ಮೇಲೆ ನಾವೂ ಒಂದು ರೀತಿ ನೀರಿನ ಥರ ಇರಬೇಕು. ವೈಯಕ್ತಿಕವಾಗಿ ಕೇಳಿದರೂ ಕೂಡ ನಾನು ಕಾಮಿಡಿಗೆ ಬಿಗ್ ಫ್ಯಾನ್. ಕಾಮಿಡಿ ಸಿನಿಮಾ, ಕಾಮಿಡಿ ಸೀನ್‌ಗಳು ತುಂಬಾ ಇಷ್ಟವಾಗುತ್ತದೆ. ಡ್ರಾಮಾದಲ್ಲೂ ಕೂಡ ನಾನು ಕಾಮಿಡಿ ಮಾಡಬೇಕು ಅಂತಾನೇ ಇಷ್ಟಪಡುವವಳು ನಾನು. ನಮ್ಮ ಲೈಫ್‌ನಲ್ಲಿ ಬೇಕಾದಷ್ಟು ಪೆಟ್ಟು ಬಿದ್ದಿರುತ್ತದೆ. ಆದರೆ ಜನ ನೋಡುವಾಗ ನಕ್ಕು ನಲಿಯಬೇಕು ಎಂಬ ಆಸೆ. ಅಳುವ ಪಾತ್ರವನ್ನು ಮಾಡಬೇಕು. ಆದರೆ ನಾನು ಕಾಮಿಡಿ ಪಾತ್ರವನ್ನು ತುಂಬಾ ಎಂಜಾಯ್ ಮಾಡ್ತೀನಿ.
ನಿಮ್ಮ ಜರ್ನಿಯಲ್ಲಿ ಮಾಡಿದ ಸಿನಿಮಾ, ಸೀರಿಯಲ್, ನಾಟಕಗಳೆಷ್ಟು?
ಬೇಕಾದಷ್ಟು ಮಾಡಿಬಿಟ್ಟಿದ್ದೀವಿ. ಇಂಟರ್ ನ್ಯಾಷನಲ್ ಸಿನಿಮಾ ಅದು. ಒಳ್ಳೆ ಸಿನಿಮಾದಿಂದ ಓಪನಿಂಗ್ ಸಿಕ್ತು. ಆಗಿನ್ನು ಸೆಕೆಂಡ್ ಪಿಯುಸಿನಲ್ಲಿದ್ದೆ. 30 ವರ್ಷದಲ್ಲಿ 30 ಸಿನಿಮಾ ಅಷ್ಟೇ ಮಾಡಿರಬಹುದು. ಮುಖ್ಯವಾದ ಪಾತ್ರಗಳಲ್ಲೂ ಅಭಿನಯಿಸಿದ್ದೀನಿ. ಸೀರಿಯಲ್ಸ್ ಅಂತೂ ಸಿಕ್ಕಾಪಟ್ಟೆ ಮಾಡಿದ್ದೀನಿ. ಅದರಲ್ಲಿ ಸಾಕಷ್ಟು ಎಪಿಸೋಡ್ ಪ್ರಸಾರವಾಗಿವೆ. ಜನ ಈಗಲೂ ನೆನಪಿಟ್ಟುಕೊಳ್ಳುವುದು 'ಸಿಲ್ಲಿಲಲ್ಲಿ' ಧಾರಾವಾಹಿಯ ವಿಶಾಲು ಪಾತ್ರವನ್ನ. 'ಬೆಟ್ಟದ ಹೂ' ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಾಡಿದ್ದೆ. ಆದರೆ ಆ ಕ್ಷಣದಲ್ಲಿ ಆ ಬಗ್ಗೆ ಹೇಳುತ್ತಿದ್ದರು. ಆಮೇಲೆ ಅದನ್ನು ಮರೆತೆ ಹೋಗಿದ್ದರು. ಆದರೆ ವಿಶಾಲು ಪಾತ್ರವನ್ನು ಮಾತ್ರ ಇನ್ನು ಮರೆತಿಲ್ಲ.

ಸುಂದ್ರಿ ಬಗ್ಗೆ ಹೇಳುವುದಾದರೆ?
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನನ್ನ ಕರೆದಿದ್ದು ಗೆಸ್ಟ್ ರೋಲ್‌ಗೆ ಅಂತ. ಆದರೆ ಪಾತ್ರ ಸಿಕ್ಕಾಪಟ್ಟೆ ಕ್ಲಿಕ್ ಆಗಿ ಹೋಯ್ತು. ಹೀಗಾಗಿ ಪ್ರತಿದಿನ ನಂಗೆ ಶೂಟಿಂಗ್ ನಡೀತಾ ಇದೆ. ಎಲ್ಲಾರೂ ಆ ಧಾರಾವಾಹಿಯಲ್ಲಿ ಗೋಳಾಡುತ್ತಿದ್ದಾರೆ. ಆದರೆ ನನ್ನ ಪಾತ್ರ ಆ ಧಾರಾವಾಹಿಯಲ್ಲಿ ನಗಿಸುತ್ತೆ. ನಂಗೆ ಬರುವ ಮೆಸೇಜಸ್‌ಗಳೆಲ್ಲಾ ಅದೇ. ಹೆಚ್ಚಿನ ಎಪಿಸೋಡ್‌ನಲ್ಲಿ ನೀವೂ ಬನ್ನಿ ಅಂತಾರೆ.
ರಮೇಶ್ ಪಂಡಿತ್ ಬೆಂಬಲ?
ಮುಂದಿನ ವರ್ಷ ಮದುವೆಯಾಗಿ ಕೂಡ 30 ವರ್ಷ ಆಗುತ್ತೆ. ದಿನಾ ಸಂತಸ ತುಂಬಿದೆ ಅಂತ ಹೇಳುವುದಕ್ಕೆ ಆಗಲ್ಲ. ಕಿತ್ತಾಡುತ್ತೀವಿ, ಜಗಳವಾಡುತ್ತೀವಿ. ನಮ್ಮ ನಡುವೆಯೂ ಅದು ಇದೆ. ಆದರೆ ಕೊನೆಯಲ್ಲಿ ನಾವಿಬ್ಬರು ಒಬ್ಬರನ್ನು ಒಬ್ಬರು ಬಿಟ್ಟು ಇರುವುದಕ್ಕೆ ಆಗಲ್ಲ. ಜನ್ಮಾಜನ್ಮಾಂತರದಿಂದ ಒಟ್ಟಿಗೆ ಇದ್ದೀವಿ ಅನ್ಸುತ್ತೆ. ಆ ಭಗವಂತನೇ ನಮ್ಮಿಬ್ಬರ ಜೋಡಿ ಬರೆದು ಕಳುಹಿಸಿದ್ದಾನೆ ಅನ್ಸುತ್ತೆ.
ಇಬ್ಬರೂ ಧಾರಾವಾಹಿಯಲ್ಲಿ ಬ್ಯುಸಿ?
ನಾವಿಬ್ಬರು ಮಾತನಾಡಿಕೊಂಡು ಒಟ್ಟಿಗೆ ಇರುತ್ತೀವಿ ಅಂತ ಅಲ್ಲ. ಆದರೆ ಒಟ್ಟಿಗೆ ಇದ್ದು ಬಿಡುತ್ತೀವಿ. ಇಡೀ ದಿನ ನಾವಿಬ್ಬರು ನೋಡಿಲ್ಲ ಅಂದರೆ ಮನಸ್ಸು ಕೊರೆಯುತ್ತಾ ಇರುತ್ತದೆ. ಇಬ್ಬರು ಜೊತೆಗೂಡಿ ಊಟ ಮಾಡುತ್ತೀವಿ. ಮನೆಯಲ್ಲಿ ಇರುತ್ತೀವಿ ಅಂದಾಗ ಮೂರು ಟೈಮ್ ಇಬ್ಬರು ಜೊತೆಗೆ ಕೂತ ಊಟ ಮಾಡುತ್ತೀವಿ. ಹೊರಗೆ ತಿನ್ನಲ್ಲ ಅವರು. ಹೀಗಾಗಿ ಅವರಿಗೆ ಅಡುಗೆ ಮಾಡಿ ಮಾಡಿ, 30 ವರ್ಷ ಕಳೆದೆ ಹೋಯ್ತು ನೋಡಿ.
ಸುನೇತ್ರಾರಲ್ಲೂ ಸುಂದ್ರಿ ಇದಾಳಾ..?
ಓ ಖಂಡಿತಾ.. ನಾನು ನಾನಾಗಿ ಇರುತ್ತೀನಿ. ನನ್ನ ಮನಸ್ಸಲ್ಲಿ ಯಾವುದನ್ನು ಇಟ್ಟುಕೊಳ್ಳಲ್ಲ. ಅನ್ಸಿದ್ದನ್ನು ಹೇಳಿದರೆ ಇನ್ನೊಬ್ಬರಿಗೆ ನೋವಾಗುತ್ತೆ ಅಂತ ಗೊತ್ತಿರುತ್ತೆ, ಆದರೆ ನನಗೆ ನಾಟಕ ಮಾಡುವುದಕ್ಕೆ ಬರಲ್ಲ. ಆ ಕ್ಷಣದಲ್ಲಿ ಅನ್ನಿಸಿದರೂ, ನಮ್ಮವರು ಅಲ್ವಾ ಅನ್ನಿಸಿ ಎಲ್ಲವನ್ನು ಹೇಳುತ್ತೀನಿ. ಹೆಚ್ಚು ಎದುರು ಮಾತನಾಡ್ತೀನಿ. ಆಗ ಕೊಂಚ ಕಿರಕಿರಿ ಆಗಿನೇ ಆಗುತ್ತೆ. ಆದರೆ ಆಮೇಲೆ ಎಲ್ಲವೂ ಸರಿ ಆಗುತ್ತೆʼ.
ಸ್ನೇಹ, ಸ್ನೇಹಿತರು?
ನಮಗೆ ಇಷ್ಟ ಅನ್ನಿಸಿದರೆ ಅದನ್ನು ಕಷ್ಟವಾದರೂ ಅದನ್ನು ನಿಭಾಯಿಸಿಕೊಂಡು ಹೋಗುತ್ತೀವಿ. ನನ್ನ ಶಕ್ತಿನೇ ನನ್ನ ಫ್ರೆಂಡ್ಸ್. ಎಲ್‌ಕೆಜಿಯಿಂದ ಹಿಡಿದು ಕಾಲೇಜಿನವರೆಗೂ ನನ್ನ ಜೊತೆಗೆ ಟಚ್‌ನಲ್ಲಿದ್ದಾರೆ. ನಾನು ಹೋಗಿಲ್ಲ ಅಂದ್ರೆನೇ ಕೋಪ ಮಾಡಿಕೊಳ್ಳುತ್ತಾರೆ. ನನ್ನ ಜೊತೆಗೆ ಇರಬೇಕು ಅಂತ ಆಸೆ. ನಾನು ಅವರು ಹೇಳುವುದೆಲ್ಲವನ್ನು ಕೇಳುತ್ತೀನಿ, ಜೊತೆಯಲ್ಲಿದ್ದಾಗ ನಗಿಸುತ್ತೀನಿ ನಗುತ್ತೀನಿ. ಹೀಗಾಗಿ ಬಾಂಡಿಂಗ್ ಹಾಗೇ ಮುಂದುವರೆದಿದೆ.
ಖುಷಿಯಾಗಿರುವುದಕ್ಕೆ ಯಾವ ಟಿಪ್ಸ್ ಫಾಲೋ ಮಾಡಬೇಕು?
ತುಂಬಾ ಜನ ತಲೆ ಕೆಡಿಸಿಕೊಳ್ಳುವುದಕ್ಕೆ ಶುರು ಮಾಡಿಬಿಟ್ಟಿದ್ದಾರೆ. ಹಣ ಹೇಗೆ ಸಂಪಾದನೆ ಮಾಡಬೇಕು. ಅವರು ಹೀಗೆ ಬೆಳೆದರು ನಾವು ಬೆಳೆಯಬೇಕು ಅಂತೆಲ್ಲಾ ಓವರ್ ಥಿಂಕಿಂಗ್ ಮಾಡಿ ಮಾಡಿ ಇರುವ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದದ್ದಾರೆ. ಕುಟುಂಬದವರ ಜೊತೆಗೂ ಹೆಚ್ಚು ಬೆರೆಯಲ್ಲ. ಹೀಗಾಗಿ ಅದೆಲ್ಲಾ ಜೀವನದ ಮೇಲೆ ಪರಿಣಾಮ ಬೀರುವುದಕ್ಕೆ ಶುರು ಮಾಡಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











