ಬೆಳಗ್ಗೆ 3 ಗಂಟೆಗೆ ರಾಕಿ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ನನಗೆ ಮೈಯೆಲ್ಲಾ ನಡುಕ ಬಂತು- ಕಾಮಿಡಿ ಕಿಲಾಡಿ ಮಂಥನ..!
ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಇದಕ್ಕೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಅವರ ಅಕಾಲಿಕ ನಿಧನ ಮತ್ತೊಂದು ಸಾಕ್ಷಿ.
ಹೌದು ರಾಕೇಶ್ ಪೂಜಾರಿ ಅಗಲಿ ಎರಡು ವಾರಗಳಾಗುತ್ತಾ ಬಂದರೂ ಕೂಡ ಇವತ್ತು ಕೂಡ ಅನೇಕರು ರಾಕೇಶ್ ಪೂಜಾರಿ ನಮ್ಮ ನಡುವೆ ಇಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ರಾಕೇಶ್ ಪೂಜಾರಿ ನಮ್ಮ ನಡುವೆ ಇದ್ದಾರೆ ಎಂದೇ ಅನೇಕರು ಅಂದುಕೊಂಡಿದ್ದಾರೆ. ರಾಕೇಶ್ ಪೂಜಾರಿಯ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳುತ್ತಾ ಭಾವುಕರಾಗುತ್ತಿದ್ದಾರೆ.

ಆ ಪೈಕಿ ಇದೇ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಥನಾ, ರಾಕೇಶ್ ಪೂಜಾರಿಯವರನ್ನು ''ಫಿಲ್ಮಿ ಬೀಟ್ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ನೆನಪು ಮಾಡಿಕೊಂಡಿದ್ದಾರೆ. ಹಳೆಯ ದಿನಗಳನ್ನು ನೆನೆದು ಬಿಕ್ಕಿದ್ದಾರೆ. ಹಾಗಿದ್ದರೆ ರಾಕೇಶ್ ಪೂಜಾರಿಯ ಬಗ್ಗೆ ಮಂಥನಾ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಅವತ್ತು ನನಗೆ ನಿದ್ದೆನೇ ಬರ್ತಿರಲಿಲ್ಲ
''ನನಗೆ ಅದ್ಯಾಕೋ ಏನೋ ಅವತ್ತು ನಿದ್ದೆನೇ ಬರ್ತಿರಲಿಲ್ಲ, ತುಂಬಾ ಅನ್ ಕಂಫರ್ಟಬಲ್ ಫೀಲ್ ಆಗ್ತಿತ್ತು. ಆಗ ಮೂರು ಅಥವಾ ಮೂರುವರೆ ಆಗಿರಬೇಕು ನಮ್ಮ ಕೋ ಕಂಟೆಸ್ಟೆಂಟ್ ಸದಾನಂದ್ ಅವರು ಕಾಲ್ ಮಾಡಿದರು. ಯಾಕೆ ಈ ಟೈಮ್‌ನಲ್ಲಿ ಕಾಲ್ ಮಾಡ್ತಿದ್ದಾರಲ್ಲಾ ಅಂತ ಅಂದುಕೊಂಡು ಕಾಲ್ ರಿಸೀವ್ ಮಾಡ್ದೇ, ಆಗ ಅವರು ಮಂಥನ ರಾಕಿ ನಮ್ಮ ನಡುವೆ ಇನ್ನಿಲ್ಲ ಎಂದು ಹೇಳಿದರು.ಅವರು ಹಾಗೇ ಹೇಳುತ್ತಿದ್ದಂತೆಯೇ ನನಗೆ ಮೈಯೆಲ್ಲ ನಡುಕ ಬಂತು, ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ'' ಎಂದು ಹೇಳಿದ್ದಾರೆ.
''ಆ ನಂತರ ನಾವು ಹೋಗೋಣ ನೀವು ಹೋಗೋಣ ಅಂತ ಎಲ್ಲರೂ ಮಾತಾಡಿಕೊಂಡು ಬೆಳಗ್ಗೆ 6 ಅಥವಾ 6-30ಕ್ಕೆ ಅಲ್ಲಿ ಹೋದ್ವಿ, ಅಲ್ಲಿ ಹೋಗೋವರೆಗೂ ಕಾರಿನಲ್ಲಿ ಸಂಪೂರ್ಣ ಮೌನ ಆವರಿಸಿಕೊಂಡಿತ್ತು, ಯಾರು ಮಾತನಾಡಲಿಲ್ಲ ನನಗೆ ಆಗ ಏನು ಮಾತನಾಡಬೇಕು ಎನ್ನುವುದೇ ಗೊತ್ತಾಗುತ್ತಿರಲಿಲ್ಲ'' ಎಂದು ಹೇಳಿದ್ದಾರೆ.
ನಮ್ಮ ಮನೆಯಲ್ಲೇ ಇರು ಎಂದು ಹೇಳಿದ್ದ
''15-20 ದಿನಗಳ ಹಿಂದೆ ನನ್ನ ಪಾಸ್‌ಫೋರ್ಟ್ ಸಮಸ್ಯೆಯಾಗಿತ್ತು. ಅದಕ್ಕೆ ನಾನು ಉಡುಪಿಗೆ ಹೋಗಬೇಕಿತ್ತು. ಹೀಗಾಗಿ ನಾನು ಅಲ್ಲಿಗೆ ಹೋಗುವಾಗ ಅವನಿಗೆ ಕಾಲ್ ಮಾಡಿದ್ದೇ, ನಾನು ಹೀಗೆ ಬರ್ತಾ ಇದೀನಿ, ನನಗೆ ಯಾರು ಅಲ್ಲಿ ಗೊತ್ತಿಲ್ಲ, ನಿಮ್ಮ ಮನೆಯಲ್ಲಿ ಉಳ್ಕೋಬಹುದಾ ಅಂತಾ ಕೇಳಿದ್ದೇ, ಅದಕ್ಕೆ ಅವನು ಅಲ್ಲಿ ಇಲ್ಲಿ ಉಳ್ಕೋಬೇಡ ನಮ್ಮ ಮನೆಗೆ ಬಾ ನಾನು ನಮ್ಮ ಅಮ್ಮನಿಗೆ ಹೇಳ್ತೀನಿ ಅಂದ'' ಎಂದು ಆ ದಿನವನ್ನು ಮಂಥನಾ ನೆನಪು ಮಾಡಿಕೊಂಡಿದ್ದಾರೆ.
ಮುಂದುವರೆದು ''ಆಗ ನಾನು ನೀನು ಎಲ್ಲಿದೀಯಾ ಎಂದು ಕೇಳಿದಾಗ ಇಲ್ಲ ನಾನು ಕಾಂತಾರ ಶೂಟಿಂಗ್‌ನಲ್ಲಿದ್ದೀನಿ ಬಹುಶಃ ನಾನು ಕಾಂತಾರ ಶೂಟಿಂಗ್‌ನಲ್ಲೇ ಇರ್ತಿನಿ, ನಾನು ಇಲ್ಲ ಅಂದರೂ ಅಮ್ಮನಿಗೆ ಹೇಳಿರ್ತಿನಿ ಎಂದಿದ್ದ ಆದರೆ ಅದೇ ಮನುಷ್ಯ 15-20 ದಿನ ಆದ ಮೇಲೆ ಇಲ್ಲ ಅಂದರೆ ಯಾರಿಗೆ ತಾನೇ ಹೇಗೆ ತಡೆದುಕೊಳ್ಳೋಕೆ ಆಗುತ್ತೆ, ತುಂಬಾ ಖುಷಿಯಾಗಿರುತ್ತಿದ್ದ ವ್ಯಕ್ತಿ ಅವನು'' ಎಂದು ಹೇಳಿದ್ದಾರೆ.
ಎಲ್ಲರನ್ನೂ ನಗಿಸುತ್ತಿದ್ದ
''ಅವನು ಇರುವ ಜಾಗದಲ್ಲಿ ಯಾರು ನಗದೇ ಇರಲು ಸಾಧ್ಯ ಇಲ್ಲ. ಅಷ್ಟು ಖುಷಿ ಖುಷಿಯಾಗಿ ಇರುತ್ತಿದ್ದ ಆದರೆ ಈಗ ನೋಡಿದರೆ ಆ ವ್ಯಕ್ತಿ ನಮ್ಮ ನಡುವೆ ಇಲ್ಲ, ಇದು ನಂಬೋಕೆ ಸಾಧ್ಯವಾಗುತ್ತಿಲ್ಲ, ನಮ್ಮೆಲ್ಲರಿಗೆ ಆ ನೋವಿನಿಂದ ಹೊರ ಬರಲು ಇನ್ನು ಸಾಧ್ಯವಾಗುತ್ತಿಲ್ಲ, ತುಂಬಾ ಹಿಂಸೆ ಆಗುತ್ತಿದೆ, ಅದರಲ್ಲಿಯೂ ಅಲ್ಲಿ ಹೋದಾಗ ಅವರ ತಾಯಿಯನ್ನು ನೋಡಿದಾಗ ತುಂಬಾನೇ ದುಃಖ ಆಯಿತು, ನೀವು ಎಷ್ಟೇ ಕೋಟಿ ದುಡಿದರು ಕೂಡ ಕೊನೆಯಲ್ಲಿ ಬರುವುದು ನೀವು ಸಂಪಾದನೆ ಮಾಡಿರುವ ಜನ ಅಷ್ಟೇ ಎನ್ನುವುದು ನನಗೆ ರಾಕಿ ಸಾವಿನಿಂದ ನನಗೆ ಒಂದು ಅರ್ಥ ಆಯ್ತು'' ಎಂದು ಹೇಳಿದ್ದಾರೆ.
''ಎಲ್ಲರಿಗೂ ಖುಷಿ ಕೊಟ್ಟು ಹೋಗಿರುವ ಆತ್ಮ ಅದು ಆ ಆತ್ಮಕ್ಕೆ ಶಾಂತಿ ಸಿಗಲಿ ನಮ್ಮೆಲ್ಲರ ಮೇಲೆ ಅವನ ಆಶೀರ್ವಾದ ಇರಲಿ ಅವರ ತಾಯಿ ಮತ್ತು ತಂಗಿಗೆ ಈ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ'' ಎಂದು ಕೂಡ ಮಂಥನಾ ಹೇಳಿದ್ದಾರೆ.
ಎಲ್ಲ ವಿಧಿಲಿಖಿತ
''ಹೀಗಾಗಬಾರಿದಿತ್ತು ಎಂದು ನಾವು ಅಂದುಕೊಳ್ತೇವೆ ಆದರೆ ಎಲ್ಲವೂ ವಿಧಿಲಿಖಿತ, ಆ ದೇವರು ಬಹುಶಃ ಇಷ್ಟೇ ಆಯಸ್ಸು ನೀಡಿದ್ದರು ಅನ್ಸುತ್ತೆ, ನಾವು ಕೂಡ ಹಾಗೇ, ಯಾವತ್ತು ಏನಾಗುತ್ತೆ ಎಂದು ಹೇಳೋಕಾಗಲ್ಲ, ಹೀಗಾಗಿ ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು, ಇರುವಷ್ಟು ದಿನ ಚೆನ್ನಾಗಿ ಇರಬೇಕು, ನಾಲ್ಕು ಜನರ ಹತ್ರ ಒಳ್ಳೆಯ ಮಾತುಗಳನ್ನಾಡಬೇಕು, ಖುಷಿ ಖುಷಿಯಾಗಿರಬೇಕು'' ಎಂದು ಮಂಥನಾ ನಿಮ್ಮ ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ 'ಎಕ್ಸ್‌ಕ್ಲೂಸಿವ್ ಸಂದರ್ಶನ'ದಲ್ಲಿ ಹೇಳಿದ್ದಾರೆ.


Click it and Unblock the Notifications











