ಉತ್ತಮ ಅವಕಾಶಗಳೇ ಹೊಸ ಅಧ್ಯಾಯ ಬರೆಯ ಬಲ್ಲವು- ಆದ್ಯ ಮಾಚಯ್ಯ

ಆದ್ಯ ಮಾಚಯ್ಯ ಎನ್ನುವ ಹೆಸರು ಕಂಡೊಡನೇ ಬೆಡಗಿ ಕೊಡಗಿನವಳೇ ಎಂದು ನಿಮಗೆ ತಿಳಿದಿರುತ್ತದೆ. ಹೌದು ಆದ್ಯ ಹುಟ್ಟಿದ್ದು ಕೊಡಗಿನ ಪೊನ್ನಂಪೇಟೆಯಲ್ಲಿ. ಹಾಗಂತ ಇತರ ಕೊಡಗಿನ ಬೆಡಗಿಯರಂತೆ ಎತ್ತರದ ಮೈಕಟ್ಟಿನ ಹುಡುಗಿಯೇನಲ್ಲ. ಆದರೆ ಎತ್ತರದ ಆಕಾಂಕ್ಷೆಗಳನ್ನು ಕಟ್ಟಿಕೊಂಡು ಬಂದ ಪ್ರತಿಭಾ ಸಂಪನ್ನೆ ಈಕೆ.

ಒಂದು ರೀತಿಯಲ್ಲಿ ಇವರದು ಪೊಲೀಸ್ ಫ್ಯಾಮಿಲಿ. ಆದರೆ ಬಾಲ್ಯದಿಂದಲೇ ಈಕೆ ಮಾತ್ರ ಬೇಬಿ ಶ್ಯಾಮಿಲಿ! ಶಾಲಾ ದಿನಗಳಿಂದಲೇ ಡ್ಯಾನ್ಸ್, ಡ್ರಾಮ ಅಂದರೆ ಇಷ್ಟವಿತ್ತು. ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತಿದ್ದರು. ಹಾಗೆ ಬೆಳೆದ ಆಸಕ್ತಿ ಇಂದು ಅವರನ್ನು ಸಿನಿಮಾ ಕ್ಷೇತ್ರದ ತನಕ ಕರೆದು ತಂದಿದೆ.

'ಬಯಮ್ ಒರು ಪಯಣಮ್' ಎನ್ನುವ ತಮಿಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಈಕೆ, ಅಲ್ಲಿ ಒಂದೆರಡು ಚಿತ್ರಗಳಲ್ಲಿ ನಟಿಸಿದ ಬಳಿಕ ಮನೋರಂಜನ್ ರವಿಚಂದ್ರನ್ ನಾಯಕನಾಗಿ ನಟಿಸಿದ ಪ್ರಥಮ ಚಿತ್ರ 'ಸಾಹೇಬ'ದಲ್ಲಿ ಸಾನ್ವಿಯ ಗೆಳತಿಯಾಗಿ ಕಾಣಿಸಿಕೊಂಡರು. ಸಣ್ಣಪುಟ್ಟ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಾ ನಿಧಾನಕ್ಕೆ ತನ್ನ ಪ್ರತಿಭೆಯ ಬಗ್ಗೆ ವೇದ್ಯಗೊಳಿಸುತ್ತಿರುವ ಆದ್ಯ ಜತೆಗಿನ ಮಾತುಕತೆ ಇದು. ಮುಂದೆ ಓದಿ...

 ಸಿನಿಮಾ ಮೋಹ ಹುಟ್ಟಿದ್ದು ಹೇಗೆ?

ಸಿನಿಮಾ ಮೋಹ ಹುಟ್ಟಿದ್ದು ಹೇಗೆ?

ನನ್ನ ಕುಟುಂಬದಲ್ಲಿಯೇ ಸಿನಿಮಾ ಬಗ್ಗೆ ಮೋಹ ಇರಿಸಿಕೊಂಡಿರುವುದು ನಾನು ಮಾತ್ರ ಎನ್ನಬಹುದು. ಅಣ್ಣ ಅನಿತ್ ರಾಜ್ ಎಮ್ ಎಸ್ ಸಿ ಮಾಡಿ ಐ ಎಎಸ್ ಎಕ್ಸಾಮ್ ಬರೆದು ಫಾರೆಸ್ಟ್ ಡಿಪಾರ್ಟ್ಮೆಂಟಲ್ಲಿ ರೇಂಜರ್ ಆಫೀಸರ್ ಆಗಿದ್ದಾರೆ. ಅಪ್ಪ ಬಾಲಕೃಷ್ಣ ಪೊನ್ನಂಪೇಟೆಯಲ್ಲಿ ಪೊಲೀಸ್ ಸ್ಟೇಷನ್ನಲ್ಲಿ ಅಧಿಕಾರಿ. ತಾಯಿ ಯಶೋಧ ಗೃಹಿಣಿ. ಆದರೆ ನಾನು ಮಾತ್ರ ಚಿಕ್ಕಂದಿನಿಂದಲೂ ಸಿನಿ ಪ್ರೇಮಿ. ಟಿವಿಯಲ್ಲಿ ಸಿನಿಮಾ ನೋಡುವಾಗ ಶ್ರುತಿಯವರ ಸಿನಿಮಾಗಳು ಇಷ್ಟವಾಗುತ್ತಿತ್ತು. ‘ಅಪ್ಪು' ಚಿತ್ರದ ಮೂಲಕ ರಕ್ಷಿತಾ ಅವರ ಎಂಟ್ರಿಯಾದಾಗಲಂತೂ, ನಾನು ಕೂಡ ಅವರಂತೆ ಚಿತ್ರೋದ್ಯಮಕ್ಕೆ ಬರಬೇಕು ಎನ್ನುವ ಆಕಾಂಕ್ಷೆ ಶುರುವಾಯಿತು.

 ಚಿತ್ರರಂಗ ಪ್ರವೇಶಕ್ಕಾಗಿ ನೀವು ಮಾಡಿದ ಪೂರ್ವ ತಯಾರಿ ಏನು?

ಚಿತ್ರರಂಗ ಪ್ರವೇಶಕ್ಕಾಗಿ ನೀವು ಮಾಡಿದ ಪೂರ್ವ ತಯಾರಿ ಏನು?

ಸಾಮಾನ್ಯವಾಗಿ ಸಿನಿಮಾರಂಗದ ಹಿನ್ನೆಲೆ ಇಲ್ಲದ, ಅದರಲ್ಲಿಯೂ ಪೊಲೀಸ್ ಕುಟುಂಬದ ಹೆಣ್ಣು ಮಗಳಿಗೆ ಚಿತ್ರರಂಗ ಪ್ರವೇಶಕ್ಕೆ ಒಪ್ಪಿಗೆ ಸಿಗುವುದು ಕಷ್ಟದ ವಿಚಾರವೇ ಸರಿ. ಆದರೆ ನನ್ನ ವಿಚಾರದಲ್ಲಿ ಹಾಗೇನೂ ಆಗಲಿಲ್ಲ. ನನ್ನ ಆಸೆಗೆ ತಂದೆ ತಾಯಿ ಅಡ್ಡಿ ಪಡಿಸಲಿಲ್ಲ. ಆದರೆ ಸಿನಿಮಾರಂಗಕ್ಕೆ ನೇರವಾಗಿ ಹೋಗುವ ಬದಲು, ಒಂದಷ್ಟು ಪೂರ್ವತಯಾರಿ ಮಾಡಿಕೊಂಡು ಹೋಗುವಂತೆ ಸಲಹೆ ನೀಡಿದ್ದರು. ಹಾಗಾಗಿ ವಿರಾಜಪೇಟೆಯಲ್ಲಿ ಬಿಬಿಎಂ ಮುಗಿಸಿದ ಬಳಿಕ ಮುಂದಿನ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಂದುವರಿಸುವ ಯೋಜನೆಯೊಂದಿಗೆ ಗಾಂಧಿನಗರಕ್ಕೆ ಕಾಲಿಟ್ಟೆ! ಯಾವುದಕ್ಕೂ ಒಂದು ವೃತ್ತಿಪರ ಕೋರ್ಸ್ ಜೊತೆಗೆ ಬೆಂಗಳೂರಿನ ಪರಿಚಯ ಇಟ್ಟುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಸಹಾಯಕವಾದೀತು ಎನ್ನುವುದು ನನ್ನ ಅನಿಸಿಕೆಯಾಗಿತ್ತು. ಹಾಗಾಗಿ ಬೆಂಗಳೂರಿನ ಐಡಿಯಾ ವಲ್ಡ್ ವೈಡ್ ಇನ್ಸ್ಟಿಟ್ಯೂಟ್ನಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡುತ್ತಲೇ ಅವಕಾಶಕ್ಕಾಗಿ ಅರಸಿದೆ.

 ಪ್ರಥಮ ಅವಕಾಶ ತಮಿಳು ಚಿತ್ರರಂಗದಿಂದ ದೊರಕಿದ್ದು ಹೇಗೆ?

ಪ್ರಥಮ ಅವಕಾಶ ತಮಿಳು ಚಿತ್ರರಂಗದಿಂದ ದೊರಕಿದ್ದು ಹೇಗೆ?

ಫ್ಯಾಷನ್ ಡಿಸೈನಿಂಗ್ ಮಾಡಿದರೂ, ನನಗೆ ಸಿನಿಮಾದ ಮೇಲಿನ ಪ್ಯಾಷನ್ ಕಡಿಮೆಯಾಗಿರಲಿಲ್ಲ. ಆದರೆ ನಿರೀಕ್ಷಿತ ಆಫರ್ಗಳು ಬರುತ್ತಲೇ ಇರಲಿಲ್ಲ. ಎಲ್ಲರೂ ಅಭಿನಯದ ಅನುಭವ ಇದೆಯೇ ಎಂದು ಪ್ರಶ್ನಿಸುತ್ತಿದ್ದ ಕಾರಣ, ಅಭಿನಯ ತರಬೇತಿ ಪಡೆದುಕೊಳ್ಳುವುದೇ ಉತ್ತಮ ಎಂದು ನಿರ್ಧರಿಸಿದೆ. ಹಾಗೆ ವಿಜಯಾ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಒಂದು ವರ್ಷ ಅಭಿನಯ ತರಬೇತಿ ಪಡೆದುಕೊಂಡೆ. ಆದರೆ ಆಗಲೂ ಕನ್ನಡದಲ್ಲಿ ಹೇಳಿಕೊಳ್ಳುವಂಥ ಅವಕಾಶಗಳು ಬರಲಿಲ್ಲ. ಹಾಗಾಗಿ ತಮಿಳಿನಿಂದ ಕರೆ ಬಂದಾಗ ಒಪ್ಪುವ ನಿರ್ಧಾರಕ್ಕೆ ಬಂದೆ. ಪಾತ್ರ ಚಿಕ್ಕದಾದರೂ ತಮಿಳು ಚಿತ್ರರಂಗವು ಕಲಾವಿದರಿಗೆ ಉತ್ತಮ ಅವಕಾಶಗಳನ್ನು ನೀಡುತ್ತದೆ ಮತ್ತು ಅಲ್ಲಿ ಅಭಿನಯಕ್ಕೆ ಮಾನ್ಯತೆ ಇರುವ ಪಾತ್ರಗಳು ಹೆಚ್ಚು ಸಿಗುತ್ತವೆ ಎನ್ನುವ ಕಾರಣದಿಂದ ತಕ್ಷಣ ಒಪ್ಪಿಕೊಂಡೆ. ಹಾಗೆ ಮೊದಲ ಬಾರಿ ಸುಮಾರು ಮೂರು ವರ್ಷಗಳ ಹಿಂದೆ ‘ಬಯಮ್ ಒರು ಪಯಣಮ್' ಚಿತ್ರದ ಮೂಲಕ ನಟಿಯಾದೆ.

 ಮುಂದೆ ನಿಮ್ಮ ಸಿನಿಮಾ ಪಯಣ ಸುಗಮವಾಯಿತೇ?

ಮುಂದೆ ನಿಮ್ಮ ಸಿನಿಮಾ ಪಯಣ ಸುಗಮವಾಯಿತೇ?

ಸುಗಮ ಎಂದು ಹೇಳುವಂತಿಲ್ಲ. ಆದರೆ ಒಂದಷ್ಟು ಅವಕಾಶಗಳು ಬಂದವು. ‘ಕೂಟತಿಲ್ ಒರುತನ್' ಎನ್ನುವ ಮತ್ತೊಂದು ತಮಿಳು ಚಿತ್ರದಲ್ಲಿಯೂ ನಟಿಸಿದೆ. ಅದರಲ್ಲಿ ಕನ್ನಡದ ‘ರಾಜ್ಕುಮಾರ' ಸಿನಿಮಾ ಖ್ಯಾತಿಯ ನಾಯಕಿ ಪ್ರಿಯಾ ಆನಂದ್ಗೆ ಸ್ನೇಹಿತೆಯಾಗಿ ನಟಿಸಿದ್ದೆ. ಸಿನಿಮಾದಲ್ಲಿ ನಾಯಕಿಯಾಗಬೇಕು ಎನ್ನುವ ಗುರಿಯಿದ್ದರೂ, ನಟನೆಯ ಅವಕಾಶವಿದೆ ಎಂದಾಗ ಕಿರುತೆರೆಯಿಂದ ಬಂದ ಅವಕಾಶಗಳನ್ನು ಕೂಡ ನಿರಾಕರಿಸಲಿಲ್ಲ. ನಟನೆಯ ಆಸಕ್ತಿ ಎಷ್ಟಿತ್ತು ಅಂದರೆ ಟಿಕ್ಟಾಕ್ನಲ್ಲೇ ಹಲವಾರು ಹಾಡು, ದೃಶ್ಯಗಳಿಗೆ ಅಭಿನಯಿಸುತ್ತಿದ್ದೆ. ಅಲ್ಲಿ ಸಾಕಷ್ಟು ಅಭಿಮಾನಿಗಳು ಸೃಷ್ಟಿಯಾಗಿದ್ದು, ‘ನೀವು ಸುಮಲತಾ ಅವರಂತೆ ಕಾಣುತ್ತೀರಿ' ಎಂದಿದ್ದಾರೆ. ‘ಜೀ ಕನ್ನಡ'ದ ‘ಯಾರೇ ನೀ ಮೋಹಿನಿ'ಧಾರಾವಾಹಿಯಲ್ಲಿ ನಾಯಕಿ ಮಾಯಾಗೆ ಗೆಳತಿಯಾಗಿ, ಸ್ಟಾರ್ ಸುವರ್ಣ ವಾಹಿನಿಯ ‘ಸತ್ಯ ಶಿವಂ ಸುಂದರಂ'ನಲ್ಲಿ ನಾಯಕನ ಜೊತೆಗೆ ಫ್ಲರ್ಟ್ ಮಾಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೆ. ಕಲರ್ಸ್ನ ‘ಶಾಂತಂ ಪಾಪಂ'ನಲ್ಲಿ ಎರಡು ಮೇಜರ್ ಪಾತ್ರಗಳು ದೊರಕಿದ್ದವು.

 ನಿಮ್ಮ ಮುಂದಿನ ಗುರಿಯೇನು?

ನಿಮ್ಮ ಮುಂದಿನ ಗುರಿಯೇನು?

ಈ ಹಿಂದೆ ನಾನು ‘ಕನ್ನಡ ಟಿವಿ' ಎಂಬ ಚಾನೆಲ್ನಲ್ಲಿ ಆಂಕರ್ ಗಾಗಿ ಟ್ರೈನಿಂಗ್ ಪಡೆದಿದ್ದೆ. ಆಗ ರಂಗಭೂಮಿ ಕಲಾವಿದೆ ನಿರ್ಮಲಾನಾಥನ್ ಅವರು ಟ್ರೈನಿಂಗ್ ನೀಡುತ್ತಿದ್ದರು. ಒಂದು ದಿನ ಅವರೊಂದಿಗೆ ‘ಭೈರಾದೇವಿ' ಚಿತ್ರದ ಸೆಟ್ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ರಮೇಶ್ ಅರವಿಂದ್ ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಅವರಲ್ಲಿ ನನ್ನ ನಟನಾ ಆಸಕ್ತಿಯ ಬಗ್ಗೆ ಹೇಳಿದಾಗ ತುಂಬ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ. ಜೊತೆಗೆ ಅವಕಾಶಗಳಿದ್ದಾಗ ಖಂಡಿತವಾಗಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಹಾಗಾಗಿ ಸಿನಿಮಾ ಮೇಲಿನ ಮೋಹ ಅಷ್ಟು ಬೇಗ ಹೋಗುವಂಥದ್ದಲ್ಲ. ಕರೆಸ್ಪಾಂಡೆನ್ಸ್ನಲ್ಲಿ ಎಂಬಿಎ ಮಾಡಿರುವ ನನಗೆ ಸಮಯವನ್ನು ಸದಾ ಸಕ್ರಿಯವಾಗಿಸುವ ಅಭ್ಯಾಸ. ಹಾಗಾಗಿಯೇ ಸಿನಿಮಾಗೆ ಇನ್ನಷ್ಟು ಸಹಾಯಕವಾಗಲಿ ಎನ್ನುವ ನಿಟ್ಟಿನಲ್ಲಿ ನೃತ್ಯ ನಿರ್ದೇಶಕ ಭೂಷಣ್ ಟ್ರೂಪಲ್ಲಿದ್ದುಕೊಂಡು ಫಿಲ್ಮ್ಡ್ಯಾನ್ಸ್ ಕೂಡ ಅಭ್ಯಾಸ ಮಾಡುತ್ತಿದ್ದೇನೆ. ನಾಯಕಿಯಾಗಿ ಒಂದೆರಡು ಆಫರ್ಗಳು ಬಂದಿವೆ. ಮಾತುಕತೆಗಳು ನಡೆಯುತ್ತಿವೆ. ಒಳ್ಳೆಯ ಪಾತ್ರಗಳ ಮೂಲಕ ಕಲಾವಿದೆಯಾಗಿ ಗುರುತಿಸಿಕೊಳ್ಳುವುದೇ ಗುರಿ ಎನ್ನಬಹುದು.

More from Filmibeat

English summary
Coorgi Actress Adya machaiah interview. she started her career in tamil. now acting in kannada movie also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X