15 years of Navagraha: "PUC ಟೈಮಲ್ಲಿ ಅಂಬಾರಿ ಕದ್ದರೆ ಹೇಗೆ? ಅನ್ಕೊಂಡಿದ್ದೆ.. ಕೊನೆಯಲ್ಲಿ ಜಗ್ಗು ಕಣ್ಣು ಬಿಡೋದು ಯಾಕಂದ್ರೆ?"
ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳೆಲ್ಲಾ ಒಟ್ಟಾಗಿ ನಟಿಸಿದ ಸಿನಿಮಾ 'ನವಗ್ರಹ'. ದಿನಕರ್ ತೂಗುದೀಪ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದೀಗ 15 ವರ್ಷ ಪೂರೈಸಿದೆ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ತರುಣ್ ಸುಧಿರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಅಭಿಮಾನಿಗಳು ಇಂದಿಗೂ 'ನವಗ್ರಹ' ಸಿನಿಮಾ ಮರೆತ್ತಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ 'ನವಗ್ರಹ' ಸಿನಿಮಾ 15 ವರ್ಷ ಪೂರೈಸಿದ ಸಂಭ್ರಮವನ್ನು ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಸೀಕ್ವೆಲ್ ಬರಬೇಕು ಎಂದು ಕೇಳುತ್ತಲೇ ಇದ್ದಾರೆ. ಈ ಸಂಭ್ರಮದ ಬಗ್ಗೆ ಚಿತ್ರದ ನಿರ್ದೇಶಕ ದಿನಕರ್ ತೂಗುದೀಪ್ ಫಿಲ್ಮಿಬೀಟ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಸಾರಥಿ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದರೂ 'ಜೊತೆ ಜೊತೆಯಲಿ' ಸಿನಿಮಾ ಸಕ್ಸಸ್ ಕಂಡರೂ ಜನ 'ನವಗ್ರಹ' ಸಿನಿಮಾವನ್ನು ಮರೆತ್ತಿಲ್ಲ. ಇವತ್ತಿಗೂ ಆ ಸಿನಿಮಾ ಬಗ್ಗೆ ಮಾತನಾಡುತ್ತಿರುವುದು ಖುಷಿಯಾಗುತ್ತಿದೆ ಎಂದಿದ್ದಾರೆ.

* ಸಿನಿಮಾ 15 ವರ್ಷ ಪೂರೈಸಿದ ಸಂಭ್ರಮ ಹೇಗಿದೆ?
"ನವಗ್ರಹ ಸಿನಿಮಾ 15 ವರ್ಷ ಪೂರೈಸಿದ್ದು ಬಹಳ ಖುಷಿಯಾಗುತ್ತಿದೆ. ಅಂದುಕೊಳ್ಳುವುದು ಸುಲಭ. ಆದರೆ ಅದನ್ನು ಅಷ್ಟೆ ಸೊಗಸಾಗಿ ತೆರೆಮೇಲೆ ತರುವುದು ಬಹಳ ಕಷ್ಟ. ಅಂದುಕೊಂಡಂತೆ ಮಾಡಿಬಿಟ್ಟರೆ ಸಾಕು. ಸಕ್ಸಸ್ ಫೇಲ್ಯೂರ್ ಸೆಕೆಂಡರಿ. ಸಿನಿಮಾ ರಿಲೀಸ್‌ಗೂ ಮುನ್ನ ರೀರೆಕಾರ್ಡಿಂಗ್ ಹಾಕಿ ಫಸ್ಟ್ ಕಾಪಿ ನೋಡ್ತಿವಲ್ಲ. ಆಗಲೇ ತೃಪ್ತಿ ಸಿಗುತ್ತದೆ. ನವಗ್ರಹ ಸಿನಿಮಾ ಮಾಡಿದಾಗ ಆ ರೀತಿ ಅನ್ನಿಸಿತ್ತು. ಬಹಳ ತೃಪ್ತಿ ಆಗಿತ್ತು."
* 'ನವಗ್ರಹ' ಡೈಲಾಗ್ಸ್ ಪ್ರೇಕ್ಷಕರು ಇನ್ನು ಮರೆತ್ತಿಲ್ಲ
ಚಿಂತನ್ ಚಿತ್ರಕ್ಕೆ ಡೈಲಾಗ್ಸ್ ಬರೆದರು. ಫಸ್ಟ್ ವರ್ಷನ್ ಡೈಲಾಗ್ಸ್‌ಗೆ ಕೂತಾಗ ಬಹಳ ಟೈಂ ತೆಗೆದುಕೊಳ್ಳುತ್ತಿದ್ದ. ಇದೇ ವಿಚಾರಕ್ಕೆ ನನಗೂ ಚಿಂತನ್‌ಗೆ ಕ್ಲಾಶ್‌ಗಳು ಕೂಡ ಆಗೋಗಿತ್ತು. ಕೋ ಡೈರೆಕ್ಟರ್ ಹತ್ತಿರ ಚಿಂತನ್ ಬಹಳ ಚೇಂಗ್ ಆಗಿಬಿಟ್ಟಿದ್ದಾನೆ. ಅವನನ್ನು ಬಿಟ್ಹಾಕಿ ಬೇರೆಯವರ ಬಳಿ ಡೈಲಾಗ್ಸ್ ಬರೆಸೋಣ ಎಂದುಕೊಂಡೆ. ಬೇರೆ ಒಂದಿಬ್ಬರ ಬಳಿ ಹೋಗಿದ್ದೆ. ಒಂದು ವಾರ ಕೂತರೂ ಒಂದು ಸನ್ನಿವೇಶ ಬರೆಸೋಕೆ ಆಗಲಿಲ್ಲ. ಚಿಂತನ್ ಬೆಸ್ಟ್ ಅಂತ ಡಿಸೈಡ್ ಆಗಿದ್ದೆ. ಕೋ ಡೈರೆಕ್ಟರ್ ಹತ್ರ ಹೇಳಿ ಫೋನ್ ಮಾಡಿಸಿದ್ದೆ. ಚಿಂತನ್ ಬ್ಯುಸಿ ಎಂದುಬಿಟ್ಟನಂತೆ. ಮೂರು ದಿನಗಳ ಬಳಿಕ ಸ್ವತಃ ಚಿಂತನ್ ಫೋನ್ ಮಾಡಿ ಮಾತನಾಡಿದ. ನವಗ್ರಹ ರೀಡಿಂಗ್ ಕೊಡ್ತೀನಿ ಬಾ ಅಂದ. ಚಾಲೆಂಜಿಂಗ್ ಆಗಿ ತಗೊಂಡು 9 ದಿನದಲ್ಲಿ ಡೈಲಾಗ್ಸ್ ಬರೆದು ಮುಗಿಸಿದ್ದ"

ಚಿತ್ರದ ಒನ್‌ಲೈನರ್ಸ್ ಇವತ್ತಿಗೂ ಅಭಿಮಾನಿಗಳ ಬಾಯಲ್ಲಿ ನಲಿದಾಡ್ತಿದೆ
ಚಿಂತನ್ ಕರೆದು ಎರಡೂವರೆ ಗಂಟೆ ಡೈಲಾಗ್ಸ್ ರೀಡಿಂಗ್ ಕೊಟ್ಟ. ನಾನು ಒಂದೇ ಒಂದು ಕರೆಕ್ಷನ್ ಹೇಳಲಿಲ್ಲ. ಚಿಂತನ್ ನನ್ನ ಸಹೋದರ ಸಮಾನ. ಅವನೊಟ್ಟಿಗೆ ಸಣ್ಣದಾಗಿ ಕ್ಲ್ಯಾಶ್ ಆಯ್ತಲ್ಲ. ಚಾಲೆಂಜ್ ಆಗಿ ತಗೊಂಡು ಅಷ್ಟು ಚೆನ್ನಾಗಿ ಬರೆದಿದ್ದ. ತುಂಬಾ ಜನ ಈಗ ಒನ್‌ಲೈನರ್ಸ್ ಟ್ರೈ ಮಾಡ್ತಾರೆ. ನಾವು ನವಗ್ರಹದಲ್ಲೇ ಟ್ರೈ ಮಾಡಿದ್ವಿ. ಶೂಟಿಂಗ್ ವೇಳೆ ದರ್ಶನ್‌ಗೆ ಡೈಲಾಗ್ಸ್ ಕೊಟ್ಟಾಗ ಬಹಳ ಖುಷಿಪಟ್ಟು ಚಿಂತನ್‌ಗೆ ಫೋನ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದರು. ಬಹಳ ಚೆನ್ನಾಗಿದೆ, ಅದ್ಭುತವಾಗಿ ಬರ್ದೀದಿಯಾ ಖುಷಿಯಾಗುತ್ತೆ ಡೈಲಾಗ್ ಡೆಲಿವರಿ ಮಾಡೋಕೆ ಎನ್ನುತ್ತಿದ್ದರು. ಚಿಂತನ್ ಡೈಲಾಗ್ಸ್, ಒನ್‌ಲೈನರ್ ಬರೆಯೋದ್ರಲ್ಲಿ ಮಾಸ್ಟರ್".
'ನವಗ್ರಹ' ಸಿನಿಮಾ ಕತೆ ಶುರುವಾಗಿದ್ದು ಹೇಗೆ?
ನಾನು ಸೆಕೆಂಡ್ ಪಿಯುಸಿಯಲ್ಲಿ ಇದ್ದಾಗ 'ನವಗ್ರಹ' ಈ ಕತೆಯ ಎಳೆ ಹೊಳೆದಿತ್ತು. ಪಿಯುಸಿ ಮುಗಿದ ಮೇಲೆ ಏನು ಮಾಡಬೇಕು ಎನ್ನುವ ಗೊಂದಲ ಇರುತ್ತಲ್ಲ. ಆ ಸಮಯದಲ್ಲಿ ನಾವು ಜಾಸ್ತಿ ಮೈಸೂರು ಪ್ಯಾಲೇಸ್‌ಗೆ ಹೋಗುತ್ತಿದ್ದೆವು. ನಮ್ಮ ಸ್ನೇಹಿತರ ಅಂಗಡಿ ಪ್ಯಾಲೇಸ್ ಹತ್ರ ಇರುತಿತ್ತು. ಸಿಬ್ಬಂದಿಗಳು ಓಡಾಡೋಕೆ ಇರುವ ದಾರಿಯಲ್ಲಿ ನಾವು ಪದೇ ಪದೇ ಪ್ಯಾಲೇಸ್ ಒಳಗೆ ಹೋಗುತ್ತಿದ್ದೆವು. ಪಿಯುಸಿ ಮುಗಿದ ಮೇಲೆ ಕೆಲಸದ ಬಗ್ಗೆ ಯಚನೆ ಇರುತ್ತೆ. ಸುಮ್ಮನೆ ಮಾತನಾಡುತ್ತಾ ತಮಾಷೆಯಾಗಿ ಅಂಬಾರಿ ಕದ್ದು ಬಿಟ್ಟರೆ ಜೀವನದ ಬಗ್ಗೆ ಯೋಚನೆ ಮಾಡೋದೇ ಇರಲ್ಲ ಅಂದೆ. ಎಲ್ಲರೂ ನಕ್ಕು ಸುಮ್ಮನಾದರು. ಆದರೆ ಅದು ತಲೆಯಲ್ಲಿ ಹಾಗೆ ಕುಳಿತ್ತಿತ್ತು. ಕೊನೆಗೆ ಸಿನಿಮಾ ಕತೆಯಾಯಿತು"
ಖಳ ನಟರ ಮಕ್ಕಳು ಒಟ್ಟಿಗೆ ನಟಿಸಬೇಕು ಎನ್ನುವ ಐಡಿಯಾ ಹೇಗೆ ಬಂತು?
ಅದು ನನ್ನದೇ ಐಡಿಯಾ. ನವಗ್ರಹ ಕತೆ ಮಾಡಿದಾಗ ಅದಕ್ಕೆ ಒಂಭತ್ತು ಪಾತ್ರಗಳು ಬೇಕಿತ್ತು. ದೇಶದ ಬೇರೆ ಬೇರೆ ರಾಜ್ಯದ ಒಬ್ಬೊಬ್ಬರು ಅಂಬಾರಿ ಕದಿಯಲು ಪ್ರಯತ್ನಿಸುತ್ತಾರೆ ಅಂದಾಗ ಒಂದೊಂದು ಪಾತ್ರ ಬರೆದುಕೊಂಡಿದ್ದೆ. ವಿನೋದ್, ಸೃಜನ್, ತರುಣ್, ನಾಗೇಂದ್ರ ಅರಸ್ ಎಲ್ಲರೂ ನಮ್ಮ ಫ್ರೆಂಡ್ಸ್. ಇವರನ್ನೇ ಹಾಕಿಕೊಂಡು ಯಾಕೆ ಸಿನಿಮಾ ಮಾಡಬಾರದು ಐಡಿಯಾ ಬಂತು. ದರ್ಶನ್‌ಗೆ ಹೇಳ್ದೆ. ಯಾರನ್ನೋ ಹಾಕಿಕೊಳ್ಳುವ ಬದಲು ನಮ್ಮವರನ್ನೇ ಹಾಕಿಕೊಳ್ಳೋಣ ಎಂದು ಕಾಸ್ಟ್ ಮಾಡಿದ್ದು.
* ಹರಿಕೃಷ್ಣ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಆಲ್ಬಮ್ ಹಿಟ್
ಚಿತ್ರದ 4 ಸಾಂಗ್ಸ್ ಸಿದ್ಧವಾಗಿತ್ತು. 'ಜೊತೆ ಜೊತೆಯಲಿ' ಚಿತ್ರಕ್ಕೂ ಹರಿಕೃಷ್ಣ ಮ್ಯೂಸಿಕ್, ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದರು. ಈ ಚಿತ್ರಕ್ಕೇ ಅದೇ ರೀತಿ ಆಯಿತು. ಡುಯೆಟ್ ಸಾಂಗ್ ಶೂಟಿಂಗ್ ಟೈಮಲ್ಲೇ ಕೇಳಿದ್ದು. ಮೈದೂರಿನಲ್ಲಿ 18 ದಿನ ಫಸ್ಟ್ ಶೆಡ್ಯೂಲ್ ಪ್ಲಾನ್ ಮಾಡಿದ್ವಿ. ಆದರೆ ಬಹಳ ಬೇಗ ಚಿತ್ರೀಕರಣ ಮುಗೀತು. ಹಾಗಾಗಿ ಏನು ಮಾಡೋದು ಎಂದಾಗ ಹರಿ ಸರ್‌ಗೆ ಫೋನ್ ಮಾಡಿ ಡ್ಯುಯೆಟ್ ಸಾಂಗ್ ಕಳಿಸೋಕೆ ಹೇಳಿದೆ. ಅವರು ಸಾಧ್ಯವಿಲ್ಲ, ನೀವು ಚೇಂಜಸ್ ಹೇಳ್ತೀರಾ ಅಂದ್ರು. ಇಲ್ಲ ಸರ್ ಮಾಡಿ ಕಳ್ಸಿ ಎಂದೆ. 2 ದಿನದಲ್ಲಿ ಹರಿ, ನಾಗೇಂದ್ರ ಸೇರಿ ಸಾಂಗ್ ಮಾಡಿ ಕಳಿಸಿದರು. ನಾನು ಶೂಟಿಂಗ್ ಮಾಡುವಾಗಲೇ ಕೇಳಿದ್ದು. ಅದು ಸೂಪರ್ ಹಿಟ್ ಆಯ್ತು.
* ಅಭಿಮಾನಿಗಳು ಕೇಳುತ್ತಲೇ ಇದ್ದಾರೆ 'ನವಗ್ರಹ- 2' ಯಾವಾಗ?
'ನವಗ್ರಹ- 2' ಮಾಡುವ ಐಡಿಯಾ ಮೊದಲಿನಿಂದಲೂ ಇದೆ. ಅದೇ ಕಾರಣಕ್ಕೆ ಕ್ಲೈಮ್ಯಾಕ್ಸ್‌ನಲ್ಲಿ ದರ್ಶನ್ ಕಣ್ಣ್ ಬಿಡುವಂತೆ ತೋರಿಸಿದ್ದು. ಕತೆ ಕಂಟಿನ್ಯೂ ಆಗುತ್ತದೆ ಅನ್ನೋದು ಹೇಳೋದಕ್ಕೆ ಹಾಗೆ ಮಾಡಿದ್ದು. ಆದರೆ ಆಗ ಏನು ಮಾಡಬೇಕು ಎನ್ನುವ ಐಡಿಯಾ ಇರಲಿಲ್ಲ. ಛಾನ್ಸ್ ಸಿಕ್ಕರೆ ಮಾಡೋಣ ಎಂದುಕೊಳ್ಳುತ್ತಿದ್ದೆ. ಈಗ ಒಂದು ಐಡಿಯಾ ಇದೆ. ಅಭಿಮಾನಿ ಮಾಡಿದ ಆನಿಮೇಷನ್ ಸಿನಿಮಾ ನೋಡಿದೆ. ಬಹಳ ಚೆನ್ನಾಗಿದೆ. ಆದರೆ ನಾನು ಮಾಡಿಕೊಂಡಿರೋ ಐಡಿಯಾ ಬೇರೆನೆ ಇದೆ.
* 'ನವಗ್ರಹ'- 2 ಯಾವಾಗ ಅಂತ ಗೊತ್ತಿಲ್ಲ
ನಾವು ಯಾವುದೇ ಸಿನಿಮಾ ಮಾಡಿದರೂ ವರ್ಷಗಳು ಕಳೆಯುತ್ತದೆ. 'ನವಗ್ರಹ' ಸಿನಿಮಾ 15 ವರ್ಷ ಪೂರೈಸಿದೆ ಎನ್ನುವುದಕ್ಕಿಂತ ಇಷ್ಟ ವರ್ಷವಾದರೂ ಜನ ಇನ್ನು ಮರೆತ್ತಿಲ್ಲ, ನೆನಪಿಟ್ಟುಕೊಂಡಿದ್ದಾರೆ ಎನ್ನುವುದು ಖುಷಿಯಾಗುತ್ತಿದೆ. ಎಲ್ಲೇ ಹೋದರೂ 'ನವಗ್ರಹ'- 2 ಯಾವಾಗ ಅಂತಾರೆ. ಆದಷ್ಟು ಬೇಗ ಮಾಡ್ತೀನಿ ಎಂದು ಹೇಳ್ತಿರ್ತೀನಿ. ಇನ್ನು ಯಾವಾಗ ಅನ್ನೋದು ಗೊತ್ತಿಲ್ಲ.
'ರಾಯಲ್' ಸಿನಿಮಾ ಯಾವಾಗ ರಿಲೀಸ್?
ಜಯಣ್ಣ ಬ್ಯಾನರ್‌ನಲ್ಲಿ 'ರಾಯಲ್' ಅಂತ ಸಿನಿಮಾ ಮಾಡಿದ್ದೀನಿ. ಶೂಟಿಂಗ್ ಎಲ್ಲಾ ಕಂಪ್ಲೀಟ್ ಆಗಿದೆ. ಶೀಘ್ರದಲ್ಲೇ ರೀ ರೆಕಾರ್ಡಿಂಗ್ ಶುರುವಾಗುತ್ತದೆ. ತುಂಬಾ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ. ನನಗೆ ಬಹಳ ಖುಷಿಯಿದೆ. ವಿರಾಟ್ ಹೀರೊ. ಅವನು ನಮ್ಮ ಮೈಸೂರು ಹುಡುಗ. ಡಿಸೆಂಬರ್ ಎಂಡ್‌ಗೆ ಫಸ್ಟ್ ಕಾಪಿ ರೆಡಿ ಆಗುತ್ತದೆ. ಸಿನಿಮಾ ರಿಲೀಸ್ ಮಾಡುವ ಬಗ್ಗೆ ನಿರ್ಮಾಪಕ ಜಯಣ್ಣ ನಿರ್ಧರಿಸುತ್ತಾರೆ.


Click it and Unblock the Notifications











