'ದಿ ಗರ್ಲ್ ಫ್ರೆಂಡ್' ಆಲೋಚನೆಗೆ ಹಚ್ಚುವ ಚರ್ಚೆ ಹುಟ್ಟಾಕುವ ಸಿನಿಮಾ- ದೀಕ್ಷಿತ್ ಶೆಟ್ಟಿ
ದೀಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ದಿ ಗರ್ಲ್ ಫ್ರೆಂಡ್' ಸಿನಿಮಾ ಈ ವಾರ ಬಿಡುಗಡೆ ಆಗ್ತಿದೆ. ರಾಹುಲ್ ರವಿಂದ್ರನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಟ್ರೈಲರ್ ಹಾಗೂ ಸಾಂಗ್ ಹಿಟ್ ಆಗಿ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ. ಕನ್ನಡ ನಟ ದೀಕ್ಷಿತ್ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಕೂಡ ಗುರ್ತಿಸಿಕೊಳ್ಳುತ್ತಿದ್ದಾರೆ.
ಕುಂದಾಪುರದ ಹುಡುಗ ದೀಕ್ಷಿತ್ ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. 'ದಿಯಾ' ಚಿತ್ರದಲ್ಲಿ ರೋಹಿತ್ ಆಗಿ ದೀಕ್ಷಿತ್ ಮೋಡಿ ಮಾಡಿದ್ದರು. ಬಳಿಕ ತೆಲುಗು ಸಿನಿಮಾ ಅವಕಾಶಗಳು ಅರಸಿ ಬಂದಿತ್ತು. ಸೂಪರ್ ಹಿಟ್ 'ದಸರಾ' ಚಿತ್ರದಲ್ಲಿ ನಾನಿ ಜೊತೆ ಒಂದೊಳ್ಳೆ ಪಾತ್ರದಲ್ಲಿ ಅವರು ನಟಿಸಿ ಗೆದ್ದಿದ್ದರು. ಕಳೆದ ವರ್ಷ ಬಂದ 'ಬ್ಲಿಂಕ್' ಹಾಗೂ 'ಕೆಟಿಎಂ' ಚಿತ್ರಗಳು ಗೆದ್ದಿತ್ತು.

ರೊಮ್ಯಾಂಟಿಕ್, ಮಾಸ್, ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಹೀಗೆ ಭಿನ್ನ ವಿಭಿನ್ನ ಚಿತ್ರದಲ್ಲಿ ದೀಕ್ಷಿತ್ ನಟಿಸುತ್ತಾ ಬರ್ತಿದ್ದಾರೆ. ಸದ್ಯ ಸಾಲು ಸಾಲು ಚಿತ್ರಗಳು ಅವರ ಕೈಯಲ್ಲಿವೆ. ಈ ವಾರ ತೆರೆಗೆ ಬರ್ತಿರೋ 'ದಿ ಗರ್ಲ್ ಫ್ರೆಂಡ್' ಚಿತ್ರದ ಮೇಲೆ ಬಹಳ ನಂಬಿಕೆಯಿಟ್ಟಿದ್ದಾರೆ. ಈ ಚಿತ್ರ ಗೆದ್ದು ಮತ್ತಷ್ಟು ಅವಕಾಶಗಳು ಹುಡುಕಿ ಬರುತ್ತದೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ಒಂದಷ್ಟು ಸಂಗತಿಗಳನ್ನು ದೀಕ್ಷಿತ್ ಬಿಚ್ಚಿಟ್ಟಿದ್ದಾರೆ.
ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಹೇಗನಿಸುತ್ತಿದೆ?
ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಯಂತೆ ಕಾತುರ, ಆತಂಕ ಎಲ್ಲವೂ ಇದೆ. ಪ್ರತಿ ಸಿನಿಮಾ ಬಿಡುಗಡೆ ಸಮಯದಲ್ಲಿ ಕೂಡ ನನಗೆ ಇದೇ ಭಾವನೆ ಇರುತ್ತದೆ.

ರಶ್ಮಿಕಾ ಮಂದಣ್ಣ ಜೊತೆ ನಟಿಸಿದ ಅನುಭವ
ಬಹಳ ಖುಷಿಯಾಗುತ್ತದೆ. ನಿಜಕ್ಕೂ ಆಕೆ ಶ್ರಮಜೀವಿ. ಒಂದೇ ಸಮಯದಲ್ಲಿ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುವುದು, ಪಾತ್ರಗಳಲ್ಲಿ ತೊಡಗಿಸಿಕೊಳ್ಳುವುದು, ನಟನೆ ಮೇಲಿನ ಪ್ರೀತಿ ಎಲ್ಲವೂ ಸ್ಫೂರ್ತಿ ಎನಿಸುತ್ತದೆ. ಕನ್ನಡ ಇಬ್ಬರೂ ಕಲಾವಿದರು ಬೇರೆ ಭಾಷೆಗೆ ಹೋಗಿ ಸಿನಿಮಾ ಮಾಡುತ್ತಿರುವುದು ಹೆಮ್ಮೆಯ ವಿಷಯ. ಇದು ನಿಜವಾ ಪ್ಯಾನ್ ಇಂಡಿಯಾ ಸಿನಿಮಾ ಅನ್ಸತ್ತೆ. ಕನ್ನಡದ ಕಲಾವಿದರು, ತೆಲುಗು ನಿರ್ಮಾಪಕರು, ತಮಿಳು ನಿರ್ದೇಶಕ. ಒಂದು ಒಳ್ಳೆ ಕಥೆ ಹೇಳಲು ಎಲ್ಲರೂ ಹೀಗೆ ಒಂದಾಗಿರುವುದು ವಿಶೇಷ. ಒಳ್ಳೆ ಬೆಳವಣಿಗೆ ಇದು.
'ದಿ ಗರ್ಲ್‌ಫ್ರೆಂಡ್' ಚಿತ್ರದ ಕಥೆ ಬಗ್ಗೆ ಹೇಳಿ
ದಿಯಾ ಚಿತ್ರಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಬಹಳ ಇಂಟೆನ್ಸ್ ಲವ್ ಸ್ಟೋರಿ. ಥಾಟ್ ಪ್ರೊವೋಕಿಂಗ್ ಲವ್ ಸ್ಟೋರಿ. ಬರೀ ಮನರಂಜನೆ ಇರುವ ಸಿನಿಮಾ ಅಲ್ಲ. ನಿಮ್ಮನ್ನು ಆಲೋಚನೆಗೆ ಹಚ್ಚುವ ಸಿನಿಮಾ. ನಾವು ಎಷ್ಟು ಮಟ್ಟಿಗೆ ಸರಿ ಇದ್ದೀವಿ ಎಂದು ನಮ್ಮಲ್ಲೇ ಪ್ರಶ್ನೆ ಮಾಡುತ್ತದೆ. ರಿಲೇಷನ್‌ಶಿಪ್‌ನಲ್ಲಿ ಇದ್ದಾಗ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕು ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಚಿತ್ರ ಮಾತನಾಡುತ್ತದೆ.
ಈ ಸಿನಿಮಾ ನಿಮ್ಮ ವೃತ್ತಿಬದುಕಿಗೆ ಎಷ್ಟು ಮುಖ್ಯವಾಗುತ್ತದೆ?
ಬಹಳ ಬಾಗಿಲುಗಳು ತೆರೆದುಕೊಳ್ಳುತ್ತದೆ. ಬಾಕ್ಸಾಫೀಸ್ ಕಲೆಕ್ಷನ್, ಜನ ಮೆಚ್ಚಿಕೊಂಡಾಡುವುದು ಒಂದು ಗೆಲುವು. ಒಂದು ಚಿತ್ರದಿಂದ ಎರಡು ಸಿನಿಮಾ ಅವಕಾಶ ಸಿಕ್ಕರೆ ಅದು ನಿಜವಾದ ಗೆಲುವು ನನ್ನ ಪ್ರಕಾರ. ಈ ಚಿತ್ರದ ಫಸ್ಟ್ ಶೆಡ್ಯೂಲ್ ಮುಗಿಯುವ ಹೊತ್ತಿಗೆ ಗೀತಾ ಆರ್ಟ್ಸ್ ಸಂಸ್ಥೆಯಿಂದ ಮತ್ತೊಂದು ಸಿನಿಮಾ ಮಾಡುವಂತೆ ಅಡ್ವಾನ್ಸ್ ಕೊಟ್ಟುಬಿಟ್ಟರು. ಹಾಗಾಗಿ ನಾನು ಈಗಾಗಲೇ ಗೆದ್ದಿದ್ದೀನಿ.
ಸೆಟ್‌ನಲ್ಲಿ ನೀವು, ರಶ್ಮಿಕಾ ಕನ್ನಡದಲ್ಲೇ ಮಾತನಾಡುತ್ತಿದ್ರಂತೆ
ಹೌದು. ಆರಂಭದಲ್ಲಿ ಸೆಟ್‌ನಲ್ಲಿ ಇಬ್ಬರೂ ಕನ್ನಡದಲ್ಲೇ ಮಾತನಾಡುತ್ತಿದ್ದೆವು. ಬಳಿಕ ತೆಲುಗು ಡೈಲಾಗ್ಸ್ ಹೇಳಬೇಕಿತ್ತು ಹಾಗಾಗಿ ನಿಧಾನವಾಗಿ ತೆಲುಗು ಮಾತನಾಡುತ್ತಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆವು. ತೆಲುಗು ಮಾತನಾಡ್ತೀನಿ, ಡಬ್ ಮಾಡ್ತೀನಿ, ಸಂದರ್ಶನಗಳಲ್ಲಿ ತೆಲುಗಿನಲ್ಲೇ ಮಾತನಾಡ್ತೀನಿ. ನಾವು ಬೇರೆ ರಾಜ್ಯಕ್ಕೆ ಹೋಗಿ ಕೆಲಸ ಮಾಡುವಾಗ ಅಲ್ಲಿನ ಭಾಷೆ ಕಲಿತು ಮಾತನಾಡಬೇಕು. ಅದೇ ಪ್ರಯತ್ನದಲ್ಲಿದ್ದೀನಿ.
ಮುಂದೆ ಯಾವೆಲ್ಲಾ ಸಿನಿಮಾಗಳಲ್ಲಿ ನಟಿಸ್ತಿದ್ದೀರಾ?
ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ಕೆಲಸ ಮಾಡ್ತಿದ್ದಿನಿ. ಒಂದು ತಮಿಳು ಚಿತ್ರದ ಫಸ್ಟ್ ಶೆಡ್ಯೂಲ್ ಮುಗಿದಿದೆ. ಇನ್ನು ಒಂದು ಮಲಯಾಳಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
'ದಿ ಗರ್ಲ್‌ಫ್ರೆಂಡ್' ಚಿತ್ರ ಪ್ರೇಕ್ಷಕರು ಯಾಕೆ ನೋಡಬೇಕು?
ನನ್ನ 'ದಿಯಾ', 'ದಸರಾ', 'ಬ್ಲಿಂಕ್' ಸಿನಿಮಾಗಳನ್ನು ನೀವು ನೋಡ್ತಾ ಬಂದಿದ್ದೀರ. ನಾನು ಒಂದೇ ತರಹದ ಸಿನಿಮಾ ಮಾಡಲ್ಲ, ಮುಂದೆ ಕೂಡ ಇದೇ ಪ್ರಯತ್ನ ಮಾಡ್ತೀನಿ. ಬಹಳ ಇಂಟೆನ್ಸ್ ಇರುವ ಸಿನಿಮಾ. ಕೆಲ ಸಿನಿಮಾಗಳನ್ನು ಮನರಂಜನೆಗಾಗಿ ನೋಡ್ತೀವಿ, ಮತ್ತೆ ಕೆಲವನ್ನು ಅದ್ಭುತ ಅನುಭವಕ್ಕಾಗಿ ನೋಡ್ತೀವಿ, ಇನ್ನು ಕೆಲವನ್ನು ಕಲಿಕೆಗಾಗಿ ನೋಡ್ತೀವಿ. 'ದಿ ಗರ್ಲ್‌ಫ್ರೆಂಡ್' ಅಂತಹ ಸಿನಿಮಾ. ನಾವು ಜೀವನದಲ್ಲಿ ಹೇಗೆ ಇರಬೇಕು, ಸಂಗಾತಿ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಸುತ್ತದೆ. ಸಿನಿಮಾ ನಿಜಕ್ಕೂ ನೋಡುಗರ ಮೇಲೆ ಪರಿಣಾಮ ಬೀರುತ್ತದೆ, ಬಹಳ ಚರ್ಚೆಗೆ ಒಳಪಡುತ್ತದೆ.


Click it and Unblock the Notifications











