ದಿಡಗೂರು 'ಹನುಮ ಭಕ್ತ'ನ ಕೈಬರಹದಲ್ಲಿ ಹುಟ್ಟಿದ್ದು 1500 ಗೀತೆಗಳು
ಫಿಲ್ಮಿಬೀಟ್: ಸರ್....ಅಂದಾಜು ಎಷ್ಟು ಹಾಡು ಬರೆದಿರಬಹುದು?
ಮೋಹನ್ ಕುಮಾರ್: ಇಂದಿಗೆ, ಅಂದ್ರೆ ಆಗಸ್ಟ್ 26ನೇ ತಾರೀಖಿಗೆ 1480 ಹಾಡು ಬರೆದಿದ್ದೇನೆ.
ಫಿಲ್ಮಿಬೀಟ್: ಯಾವ್ಯಾವ ರೀತಿಯ ಹಾಡು ಬರೆದಿದ್ದೀರಾ?
ಮೋಹನ್: ಎಲ್ಲವೂ ಭಕ್ತಿ ಗೀತೆಗಳೇ, ಸುಮಾರು 1450 ಹಾಡು ಹನುಮನ ಕುರಿತು ಇದೆ. ಉಳಿದಂತೆ ಎಲ್ಲ ರೀತಿಯ ಭಕ್ತಿಗೀತೆಗಳು ಸೇರಿವೆ.
ಸರಿ ಸುಮಾರು ಒಂದೂವರೆ ಸಾವಿರ ಹಾಡ ಬರೆದಿದ್ದಾರೆ ಎಂದು ಕೇಳಿದ ತಕ್ಷಣ ನಿಜಕ್ಕೂ ಅಚ್ಚರಿ ಆಯಿತು. ಇಷ್ಟು ಗೀತೆ ರಚಿಸಿದ್ದರೂ ಯಾವುದೇ ಪ್ರಚಾರ ಇಲ್ಲದೇ, ಯಾವುದೇ ಉದ್ದೇಶ ಇಲ್ವಾ ಎಂದು ಕೇಳಿದ್ರೆ 'ಆತ್ಮತೃಪ್ತಿಗಾಗಿ ಬರೆಯುತ್ತಿದ್ದೇನೆ' ಎನ್ನುತ್ತಾರೆ ದಿಡಗೂರು ಮೋಹನ್ ಕುಮಾರ್.
ಇವರ ಬಗ್ಗೆ ಹೇಳಬೇಕಾಗಿರುವುದು ಬಹಳ ಇದೆ. ಚಿಕ್ಕದಾಗಿ ಹೇಳುವ ಪ್ರಯತ್ನ ಮಾಡ್ತೇನೆ.

'ದಿಡಗೂರು' ಎಂಬ ಅಂಕಿತನಾಮದಲ್ಲಿ ಭಕ್ತಿಗೀತೆಗಳನ್ನ ರಚಿಸುವುದು ಇವರ ಹವ್ಯಾಸ. ಹನುಮನ ಪರಮಭಕ್ತ. ದಾವಣೆಗೆರೆಯ ಹೊನ್ನಾಳಿ ತಾಲೋಕಿನ ದಿಡಗೂರು ಗ್ರಾಮದ ನಿವಾಸಿ. ಪ್ರಸ್ತುತ ಬೆಂಗಳೂರಿನ ಹೆಬ್ಬಗೋಡಿ ಬಳಿಯಿರುವ ತಿರುಪಾಳ್ಯದಲ್ಲಿ ನೆಲೆಸಿದ್ದಾರೆ.
ಬಿಡುವು ಸಿಕ್ಕಿದ್ರೆ ಸಾಕು ಹಾಡು ಬರೆಯುತ್ತಾರೆ. ಕೆಲಸದ ಅವಧಿ ಬಿಟ್ಟು ಬಹುತೇಕ ಎಲ್ಲ ಸಮಯದಲ್ಲೂ ಸಾಹಿತ್ಯ ರಚಿಸಿದ್ದಾರೆ. ವಿಶೇಷ ಅಂದ್ರೆ ಅರ್ಧದಷ್ಟು ಹಾಡುಗಳು ಬೆಂಗಳೂರಿನ ಟ್ರಾಫಿಕ್ ನಲ್ಲೆ ಹುಟ್ಟಿದೆಯಂತೆ. ಸ್ನೇಹಿತ ಡಿಸೋಜಾ ಅವರ ಕಾರಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ನಲ್ಲೇ ಗೀತೆ ಗೀಚಿದ್ದಾರೆ.
ಫಿಲ್ಮಿಬೀಟ್: ಭಕ್ತಿಗೀತೆಗಳನ್ನ ಮಾತ್ರ ಯಾಕೆ ಬರೆಯುತ್ತೀರಾ?
ಮೋಹನ್: ಗೊತ್ತಿಲ್ಲ, ಹನುಮ ಬರೆಸುತ್ತಾನೆ, ನಾನು ಬರೆಯುತ್ತೇನೆ. ಅವನಿಲ್ಲದೇ ಏನೂ ಊಹಿಸಲು ಸಾಧ್ಯವಿಲ್ಲ. ಅವನೇ ನನಗೆ ಎಲ್ಲ.
ಫಿಲ್ಮಿಬೀಟ್: ಸಿನಿಮಾಗಳಿಗೆ ಹಾಡು ಬರೆಯಬೇಕು ಎಂಬ ಆಸಕ್ತಿ ಇದ್ಯಾ?
ಮೋಹನ್: ಇಲ್ಲ, ನನಗೆ ಸಿನಿಮಾ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ನಾನು ಭಕ್ತಿಗೀತೆಗಳನ್ನ ಮಾತ್ರ ಬರೆಯವುದು. ನಾನು ಆತ್ಮತೃಪ್ತಿಗಾಗಿ ಬರೆಯುತ್ತೇನೆ ಅಷ್ಟೇ. ಯಾವುದೇ ನಿರೀಕ್ಷೆ ನನಗೆ ಇಲ್ಲ.

ಒಂದು ಹಾಡು ಬರೆಯುವುದಕ್ಕೆ ಅರ್ಧಗಂಟೆಯಿಂದ ಆರು ಗಂಟೆಯವರೆಗೂ ತೆಗೆದುಕೊಂಡಿರುವ ಉದಾಹರಣೆ ಇದೆಯಂತೆ. ಅದೇ ರೀತಿ ಒಂದು ದಿನಕ್ಕೆ ಒಂದರಿಂದ ಆರು ಹಾಡು ಬರೆದಿದ್ದಾರಂತೆ. ಒಂದೇ ಒಂದು ಹಾಡು ಬರೆಯದೇ ಇದ್ದ ದಿನವೂ ಇದೆಯಂತೆ. 1480 ಹಾಡುಗಳು ರಚಿತವಾಗಿರುವುದು ಕಳೆದ ಮೂರು ವರ್ಷದಿಂದ ಅಷ್ಟೆ.
ಸಾಹಿತ್ಯವನ್ನ ಇವರು ಪೇಪರ್ ಮತ್ತು ಪೆನ್ನು ಬಳಸಿ ಬರೆಯವುದಿಲ್ಲ. ಇಷ್ಟು ಹಾಡುಗಳನ್ನ ತಮ್ಮ ಮೊಬೈಲ್ ನಲ್ಲೇ ಬರೆದಿದ್ದಾರೆ. ಹಾಡು ಬರೆಯುವುದಕ್ಕಾಗಿಯೇ ಮೊಬೈಲ್ ನಲ್ಲಿ ಕನ್ನಡ ಸಾಫ್ಟ್ ವೇರ್ ಬಳಸುತ್ತಾರೆ. ಉಳಿದಂತೆ ಮೊಬೈಲ್ ವಿನ್ಯಾಸ ಕೂಡ ಕನ್ನಡದಲ್ಲೇ ಇದೆ. ಕನ್ನಡದ ಬಗ್ಗೆ ಪರಿಣಿತಿ ಹೊಂದಿರುವ ಮೋಹನ್ ಕುಮಾರ್ ಓದಿದ್ದು ಕನ್ನಡ ಮಾಧ್ಯಮದಲ್ಲೇ.
''ಹೊಂಟ, ಹೊಂಟ, ಹನುಮ ಹೊಂಟ...ರಾಮಬಿಟ್ಟ ಬಾಣದಂತೆ ಕಡಲಾರಿ ಹೊಂಟ...'' ಎಂದು ಮೊಟ್ಟ ಮೊದಲ ಬಾರಿಗೆ ಗೀತೆ ಬರೆಯಲು ಆರಂಭಿಸಿದ ಮೋಹನ್ ಈಗ 1480 ಗೀತೆಗಳಿಗೆ ಒಡೆಯರಾಗಿದ್ದಾರೆ.

ಮೋಹನ್ ಕುಮಾರ್ ಅವರ ತಂದೆ ಮಂಜಪ್ಪ ಶಾಲಾ ಶಿಕ್ಷಕರು. ಹನುಮ ಭಕ್ತನಾಗಿರುವ ಇವರ ತಾಯಿಯ ಹೆಸರು ಹನುಮಮ್ಮ ಎನ್ನುವುದು ವಿಶೇಷ. ಇಬ್ಬರು ಅಕ್ಕ, ಇಬ್ಬರು ಅಣ್ಣ, ಒಬ್ಬ ತಮ್ಮ ಇದ್ದಾರೆ. ಪತ್ನಿ ಹೆಸರು ಪದ್ಮಾವತಿ, ಸ್ನೇಹಾ-ತೇಜಸ್ವಿನಿ ಇಬ್ಬರು ಹೆಣ್ಣು ಮಕ್ಕಳು. ಇಡೀ ಕುಟುಂಬ ತನ್ನನ್ನು ಪ್ರೋತ್ಸಾಹಿಸಿದೆ. ನಾನು ಭಕ್ತಿಗೀತೆಗಳ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳಲು ನನ್ನ ಪತ್ನಿಯೇ ಕಾರಣ ಎನ್ನುತ್ತಾರೆ ದಿಡಗೂರು ಮೋಹನ್.
ಇಷ್ಟೆಲ್ಲಾ ಹಾಡುಗಳನ್ನ ಬರೆದ್ಮೇಲೆ ಜೊತೆಯಲ್ಲಿರುವ ಸ್ನೇಹಿತರು ಸುಮ್ಮಿರುತ್ತಾರಾ ಹೇಳಿ, ಇರಲ್ಲ. ಡಿಸೋಜಾ, ಆನಂದ್ ಮನಗುಳಿ, ರಮೇಶ್ ಜಗತಾಪ್ ಎಂಬ ಗೆಳೆಯರು ಒಟ್ಟಿಗೆ ಸೇರಿ ದಿಡಗೂರು ಅವರಿಗೆ ಬೆಂಬಲವಾಗಿ ನಿಂತು ''ಚೆಂದವೋ ಚೆಂದ ದಿಡಗೂರು ಹನುಮ'' ಎಂಬ ಹೆಸರಿನಲ್ಲಿ ಸಿಡಿ ಕೂಡ ಮಾಡಿದ್ದಾರೆ.

ಫಿಲ್ಮಿಬೀಟ್: ಇಂದಿನ ಪರಿಸ್ಥಿಯಯಲ್ಲಿ ಸಂಗೀತ ಪ್ರಿಯರು ಆಧುನಿಕ ಸಾಹಿತ್ಯದ ಕಡೆ ಹೆಚ್ಚು ಗಮನ ಕೊಡ್ತಿದ್ದಾರೆ, ಭಕ್ತಿಗೀತೆಗಳಿಗೆ ಏನು ಪರಿಣಾಮ ಆಗಲ್ವಾ? ಎಂದು ಕೊನೆಯದಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋಹನ್ ''ಎಲ್ಲ ಹಾಡುಗಳಿಗೂ ಆಯಾ ವರ್ಗದ ಜನ ಇರ್ತಾರೆ. ದೇವಸ್ಥಾನಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಿಗೀತೆಗಳನ್ನ ಮಾತ್ರ ಮೊಳಗಿಸಲು ಸಾಧ್ಯ. ಆ ರೀತಿ ಯಾವುದೇ ಪರಿಣಾಮ ಆಗಲ್ಲ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೆಸರು: ಮೋಹನ್ ಕುಮಾರ್ ಡಿಎಂ
ವಿದ್ಯಾಭ್ಯಾಸ: ಐಟಿಐ, ಎಂಎ (ಸಮಾಜಶಾಸ್ತ್ರ)
ಅಂಕಿತನಾಮ: ದಿಡಗೂರು
ಊರು: ದಾವಣೆಗೆರೆ ಜಿಲ್ಲೆ, ಹೊನ್ನಾಳಿ ತಾಲ್ಲೂಕು, ದಿಡಗೂರು ಗ್ರಾಮ
ಹಾಡುಗಳು ಸಂಖ್ಯೆ: 1480 ಹಾಡುಗಳು ರಚನೆ


Click it and Unblock the Notifications











