twitter
    For Quick Alerts
    ALLOW NOTIFICATIONS  
    For Daily Alerts

    ''ದೇವರೇ ನನ್ನ ತಾಯಿಯನ್ನು ಕೊಂದು ಬಿಡಪ್ಪ'' ಎಂದಿದ್ದರಂತೆ ನಿರ್ದೇಶಕ ದಿನೇಶ್ ಬಾಬು

    |

    ಇಂದು ವಿಶ್ವ ಮಾತೃದಿನ. ಖ್ಯಾತ ನಿರ್ದೇಶಕ ದಿನೇಶ್ ಬಾಬು ಅವರು ತಮ್ಮ ಅಪರೂಪದ ಅನಿಸಿಕೆಗಳನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. ವಿಷ್ಣುವರ್ಧನ್ ಅವರು ನಾಯಕರಾಗಿದ್ದಂಥ 'ಲಾಲಿ' ಚಿತ್ರದಲ್ಲಿ ತಂದೆಯ ಪ್ರೀತಿ ಬಗ್ಗೆ ಸುಂದರವಾಗಿ ಹೇಳಿದವರು ದಿನೇಶ್ ಬಾಬು. ಅವರ ನಿರ್ದೇಶನದ ಚಿತ್ರ ಮತ್ತು 'ಅಭಿ', 'ಚಿತ್ರ' ಮೊದಲಾದ ಸಿನಿಮಾಗಳಲ್ಲಿ ತಾಯಿಯ ಪ್ರೀತಿಯ ಬಗ್ಗೆಯೂ ಮನಮುಟ್ಟುವ ಉಲ್ಲೇಖವಿದೆ.

    ಆದರೆ ನಿಜ ಬದುಕಿನಲ್ಲಿ ಕೂಡ ನಿರ್ದೇಶಕ ದಿನೇಶ್ ಬಾಬು ಅವರಿಗೆ ತಾಯಿ ತುಂಬ ಪ್ರೀತಿ ಪಾತ್ರರಾಗಿದ್ದರು. ಆ ಕಾಲದಲ್ಲಿಯೇ ತಾಯಿ ಮತ್ತು ಮಗ ಉತ್ತಮ ಸ್ನೇಹಿತರಂತೆ ಬದುಕಿದ್ದರು. ಹೀಗೆ ತಾಯಿಯ ಕುರಿತಾದ ಒಂದಷ್ಟು ವಿಶೇಷಗಳನ್ನು 'ಫಿಲ್ಮೀಬೀಟ್ ಕನ್ನಡ' ಜೊತೆಗೆ ಎಕ್ಸ್ ಕ್ಲೂಸಿವ್ ಆಗಿ ಹಂಚಿಕೊಂಡಿದ್ದಾರೆ ಸ್ವತಃ ದಿನೇಶ್ ಬಾಬು. ಅದು ಏನು ಎನ್ನುವುದನ್ನು ಅವರ ಮಾತುಗಳಲ್ಲೇ ನೋಡೋಣ.

    ದೇವರೇ ನನ್ನ ತಾಯಿಯನ್ನು ಕೊಂದು ಬಿಡಪ್ಪ!

    ದೇವರೇ ನನ್ನ ತಾಯಿಯನ್ನು ಕೊಂದು ಬಿಡಪ್ಪ!

    "ಬಾಲ್ಯದಲ್ಲಿ ನನಗೆ ತಾಯಿ ಎಂದರೆ ಶಿಕ್ಷೆ ಎನ್ನುವ ಹಾಗಿದ್ದರು. ಯಾಕೆಂದರೆ ಮುಂಜಾನೆಯೇ ಎಬ್ಬಿಸಿ ಬಿಡುತ್ತಿದ್ದರು. ಶಾಲಾ ದಿನಗಳಲ್ಲಿ ಬೆಳಿಗ್ಗೆ 4 ಗಂಟೆಗೆ ಎದ್ದು ಪಠ್ಯ ಪುಸ್ತಕಗಳನ್ನು ಓದಬೇಕಾಗಿತ್ತು!. ಅದು ಯಾವ ಮಟ್ಟಿಗೆ ಅಭ್ಯಾಸವಾಗಿ ಉಳಿದುಕೊಂಡಿದೆ ಎಂದರೆ, ಇಂದಿಗೂ ಮುಂಜಾನೆ 4 ಗಂಟೆಗೆಲ್ಲ ಎದ್ದು ಬಿಡುತ್ತೇನೆ! ವಿಶೇಷ ಏನೆಂದರೆ ಶಾಲಾ ದಿನವಷ್ಟೇ ಅಲ್ಲ, ಅದಕ್ಕೂ ಮೊದಲೇ ಅಮ್ಮ ನನ್ನನ್ನು ಬೆಳಿಗ್ಗೆ ಬೇಗ ಎಬ್ಬಿಸಿ ಬಿಡುತ್ತಿದ್ದರಂತೆ. ನನ್ನನ್ನು ತಮ್ಮ ಜೊತೆಗೆ ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದರಂತೆ. ನಾನು ಸ್ವಲ್ಪ ದೊಡ್ಡವನಾದ ಮೇಲೆ ಆ ದಿನಗಳಲ್ಲಿ ನನ್ನ ಪ್ರಾರ್ಥನೆ ಏನಾಗಬೇಕಿತ್ತು ಎನ್ನುವುದನ್ನು ಆ ದೇವಾಲಯದ ಅರ್ಚಕರು ಹೇಳಿ ನಗುತ್ತಿದ್ದರು. ಅದೇನೆಂದರೆ ಮುಂಜಾವಿನ ಸಿಹಿ ನಿದ್ದೆಯಿಂದ ಎಬ್ಬಿಸಿದ್ದಕ್ಕೆ ತಾಯಿಯೊಂದಿಗೆ ರಂಪ ಮಾಡುತ್ತಾ ಬರುತ್ತಿದ್ದ ನಾನು ದೇವರ ಎದುರು ನಿಂತು, ''ದೇವರೇ ನನ್ನ ತಾಯಿಯನ್ನು ಬೇಗ ಕೊಂದು ಬಿಡಪ್ಪ'' ಎಂದು ಗಟ್ಟಿಯಾಗಿ ಬೇಡಿಕೊಳ್ಳುತ್ತಿದ್ದೆನಂತೆ. ಅರ್ಚಕರು ಸೇರಿದಂತೆ ಅಲ್ಲಿ ನೆರೆದ ಭಕ್ತರಿಗೆ ಅದು ತಮಾಷೆಯ ವಿಚಾರವಾಗಿತ್ತಂತೆ.

    ಮಾತೆ ಸಕಲ ಪುರಾಣ ಪಾರಂಗತೆ

    ಮಾತೆ ಸಕಲ ಪುರಾಣ ಪಾರಂಗತೆ

    ನನ್ನ ತಾಯಿಯ ಹೆಸರು ಭವಾನಿಯಮ್ಮ. ಬಾಲ್ಯದಿಂದಲೇ ಅವರು ನನಗೆ ಪುರಾಣದ ಕತೆಗಳನ್ನು ಹೇಳಿಕೊಡುತ್ತಿದ್ದರು. ತಾಯಿಗೆ 18 ಪುರಾಣಗಳು ಕೂಡ ತಿಳಿದಿದ್ದವು. ಆ ಕತೆಗಳು ನನ್ನ ಓದಿನ ಆಸಕ್ತಿಗೆ ಮೊದಲ ಕಾರಣವಾಗಿದ್ದವು. ಹಾಗೆ ಕತೆಗಳ ಮೂಲಕ ಕುತೂಹಲ ತುಂಬಿದ್ದ ಅಮ್ಮ ನನ್ನ ಜೊತೆಗೆ ಆತ್ಮೀಯತೆ ಪ್ರಕಟಿಸತೊಡಗಿದ್ದು ನಾನು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾದ ಮೇಲೆ. ಅವರಿಗೆ ನಾವು ಮೂರು ಜನ ಗಂಡು ಮಕ್ಕಳು. ನಾನು ಮಧ್ಯದವನು. ರಜಾದಿನಗಳಲ್ಲಿ ಹೊರಗಡೆ ಸುತ್ತಾಡಲು ಹೋಗುವಾಗ ನಿನ್ನ ಮೆಚ್ಚಿನ ಸ್ಥಳ ಯಾವುದು ಎನ್ನುವ ಸಮಾಲೋಚನೆಯ ಮೂಲಕ ನನಗೆ ಆಯ್ಕೆಯ ಸ್ವಾತಂತ್ರ್ಯ ನೀಡತೊಡಗಿದ್ದು ಎಸ್ ಎಸ್ ಎಲ್ ಸಿಯ ಬಳಿಕವೇ. ಆದರೆ ಆನಂತರದಲ್ಲಿ ಅವರು ಎಷ್ಟೊಂದು ಆತ್ಮೀಯರಾಗಿಬಿಟ್ಟರು ಎಂದರೆ ನಾನು ಅವರಲ್ಲಿ ಎಲ್ಲ ವಿಚಾರಗಳನ್ನು ಕೂಡ ಹಂಚಿಕೊಳ್ಳತೊಡಗಿದೆ.

    ಮೊದಲ ಪ್ರೀತಿ, ಪ್ರೇಮ ಮತ್ತು ಅಮ್ಮ

    ಮೊದಲ ಪ್ರೀತಿ, ಪ್ರೇಮ ಮತ್ತು ಅಮ್ಮ

    ನಾನು ಕಾಲೇಜ್ ದಿನಗಳಲ್ಲಿ ಒಬ್ಬಳನ್ನು ಪ್ರೀತಿಸಿದ್ದೆ. ಆಕೆ ಕ್ರಿಶ್ಚಿಯನ್ ಆಗಿದ್ದಳು ಮತ್ತು ಅದು ತುಂಬ ಅರ್ಲಿ ಆಗಿತ್ತು ಎನ್ನುವ ಕಾರಣಕ್ಕೆ ನಮ್ಮ ವಿವಾಹ ನಡೆಯಲಿಲ್ಲ. ಆದರೆ ಆಕೆಯ ವಿವಾಹ ಬೇರೊಬ್ಬನ ಜೊತೆಗೆ ನಡೆಯಿತು. ಒಂದು ವರ್ಷ ಸಂಸಾರ ಮಾಡಿದ ಮೇಲೆ ನಿನ್ನ ಹಳೆಯ ಪ್ರೀತಿಯನ್ನು ಮರೆತು ಬಿಡುತ್ತೀ ಎನ್ನುವುದು ಅವರ ಮನೆಯವರ ನಂಬಿಕೆಯಾಗಿತ್ತು. ಆದರೆ ಆಕೆ ಸರಿಯಾಗಿ ಒಂದು ವರ್ಷದ ಬಳಿಕ ನನಗೆ ಹಳೆಯ ಪ್ರೀತಿಯೇ ಬೇಕು ಎಂದು ನನ್ನನ್ನು ಹುಡುಕಿಕೊಂಡು ಬಂದಳು! ನಾನು ಆಗ ಪೂನಾ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿದ್ದೆ. ಆಕೆಯನ್ನು ಸ್ವಲ್ಪ ದಿನ ನನ್ನೊಂದಿಗೆ ಇರಿಸಿ ಮತ್ತೆ ಊರಿಗೆ ಹೋಗುವಂತೆ ತಿಳಿಸಿದೆ.

    ಯಾಕೋ ನನ್ನ ಮನಸು ಹಾಗೆ ಹೇಳುತ್ತಿತ್ತು

    ಯಾಕೋ ನನ್ನ ಮನಸು ಹಾಗೆ ಹೇಳುತ್ತಿತ್ತು

    ಬಳಿಕ ನಾನು ಮನೆಗೆ ಬಂದು ವಿಷಯ ತಿಳಿಸಿ ಮಾತನಾಡುವ ಯೋಜನೆ ಹಾಕಿದ್ದೆ. ಅವಳನ್ನು ಊರಿಗೆ ಕಳುಹಿಸಿದ ಬೆನ್ನಲ್ಲೇ ನಾನು ಮನೆಗೆ ಹೊರಟೆ. ನನ್ನ ಮತ್ತು ತಾಯಿಯ ನಡುವೆ ಒಂದು ಟೆಲಿಪತಿ ಇತ್ತು. ನಾನು ಯಾವಾಗೆಲ್ಲ ಅನಿರೀಕ್ಷಿತವಾಗಿ ಮನೆಗೆ ಹೋಗುತ್ತಿದ್ದೇನೋ ಆ ದಿನಗಳಲ್ಲೆಲ್ಲ ಅಮ್ಮ ನನ್ನ ಇಷ್ಟದ ಅಡುಗೆ ತಯಾರು ಮಾಡಿಟ್ಟಿರುತ್ತಿದ್ದರು! ಅದು ಹೇಗೆ ನಾನು ಬರುತ್ತೇನೆ ಎನ್ನುವುದು ಗೊತ್ತಾಯಿತು ಎಂದು ಕೇಳಿದರೆ, ''ಯಾಕೋ ನನ್ನ ಮನಸು ಹಾಗೆ ಹೇಳುತ್ತಿತ್ತು'' ಎನ್ನುವುದು ಅವರ ಉತ್ತರವಾಗಿರುತ್ತಿತ್ತು. ಆದರೆ ಈ ಬಾರಿ ನಾನು ಪೂನಾದಿಂದ ನನ್ನ ಮನೆ ತಲುಪಿದಾಗ ಮಧ್ಯರಾತ್ರಿಯಾಗಿತ್ತು. ಬಾಗಿಲು ತೆಗೆದ ಅಮ್ಮ ನಿನಗೆಂದು ಮಾಡಿದ ಅಡುಗೆಯನ್ನು ಒಬ್ಬರು ಗೆಸ್ಟ್ ಬಂದು ಊಟ ಮಾಡಿದ್ದಾಗಿ ಹೇಳಿದರು. ನಾನು ಆ ಬಗ್ಗೆ ಬೇರೆ ಪ್ರಶ್ನೆ ಮಾಡದೆ ಫ್ರೆಶ್ ಆಗಲು ಮುಂದಾದೆ. ಅಮ್ಮ ಅಡುಗೆ ಕೋಣೆಗೆ ಹೊರಟರು. ಆದರೆ ಆಗ ಎದ್ದು ಬಂದ ನನ್ನ ಅಣ್ಣ, ಬಂದಿರುವ ಗೆಸ್ಟ್ ಬೇರೆ ಯಾರೂ ಅಲ್ಲ, ಮದುವೆಯಾದಲ್ಲಿಂದ ನಿನ್ನನ್ನು ಇಷ್ಟಪಟ್ಟು ಬಂದಿದ್ದಂಥ ಕ್ರಿಶ್ಚಿಯನ್ ಹುಡುಗಿ ಎಂದರು. ನನಗೆ ತುಂಬಾನೇ ಅಚ್ಚರಿಯಾಯಿತು.

    ನಾ ಕಂಡ ಜಗತ್ತಿನ ಶ್ರೇಷ್ಠ ಮಹಿಳೆ

    ನಾ ಕಂಡ ಜಗತ್ತಿನ ಶ್ರೇಷ್ಠ ಮಹಿಳೆ

    ನಾನು ಆ ವಿಚಾರವನ್ನು ಅಮ್ಮನಲ್ಲಿ ಹೇಳಿರದೇ ಇದ್ದರೂ, ಬಂದಾಕೆ ಹೇಳಿರುವ ಎಲ್ಲ ಮಾತುಗಳನ್ನು ನಂಬಿ, ಆಕೆಯನ್ನು ಅತಿಥಿಯಾಗಿ ಸ್ವೀಕರಿಸಿ, ಆಹಾರ ನೀಡಿ ನನ್ನ ಕೋಣೆಯಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಮಾತ್ರವಲ್ಲ ಆ ರಾತ್ರಿ ಅಮ್ಮ ಅಷ್ಟು ಬೇಗ ಬಂದು ಬಾಗಿಲು ತೆರೆಯಲು ಕಾರಣ ಅವರು ಇನ್ನೂ ಮಲಗಿರಲಿಲ್ಲ. ಆ ಹುಡುಗಿ ಬ್ಯಾಗ್ ತುಂಬ ತಂದಿದ್ದ ಆಕೆಯ ಕೊಳೆಯಾಗಿದ್ದ ಬಟ್ಟೆಗಳನ್ನೆಲ್ಲ ಅಮ್ಮ ಒಗೆದು ಹಾಕುತ್ತಿದ್ದರು! ಇಂಥದೊಂದು ವಿಚಾರಕ್ಕೆ ಬಹುಶಃ ಇಷ್ಟು ತಣ್ಣಗೆ ರಿಯಾಕ್ಟ್ ಮಾಡಬಲ್ಲ ತಾಯಿ ಜಗತ್ತಿನಲ್ಲಿ ಬೇರೆ ಸಿಗುತ್ತಾರೆ ಎಂಬ ನಂಬಿಕೆ ನನಗಿಲ್ಲ. ಹಾಗಾಗಿ ನನ್ನ ಅಮ್ಮ ಎಂದರೆ ಮನುಷ್ಯ ವರ್ಗದಲ್ಲೇ ನಾ ಕಂಡ ಜಗತ್ತಿನ ಶ್ರೇಷ್ಠ ಮಹಿಳೆ.

    ಅಂತ್ಯ ದರ್ಶನಕ್ಕೊಂದು ಅಪರೂಪದ ಪಯಣ

    ಅಂತ್ಯ ದರ್ಶನಕ್ಕೊಂದು ಅಪರೂಪದ ಪಯಣ

    ನನ್ನ ತಾಯಿ ನಮ್ಮನ್ನೆಲ್ಲ ಬಿಟ್ಟು ಹೋದಾಗ ನಾನು ಕೊಡೈಕನಾಲ್ ನಲ್ಲಿ ಚಿತ್ರೀಕರಣದಲ್ಲಿದ್ದೆ. ಅಮೃತವರ್ಷಿಣಿ ಚಿತ್ರದ ಮಲಯಾಳಂ ರಿಮೇಕ್ ಅನ್ನು ಶೂಟ್ ಮಾಡುತ್ತಿದ್ದೆ. ಅಲ್ಲಿಂದ ಹೊರಟು ನಿಂತ ನನಗೆ ಮನೆ ತಲುಪಲು ಸುಮಾರು ಹದಿಮೂರು ಗಂಟೆಗಳ ಪ್ರಯಾಣ ಮಾಡಬೇಕಾಯಿತು. ನನ್ನಮ್ಮ ಅಸ್ತಮಾ ರೋಗಕ್ಕೆ ತುತ್ತಾಗಿದ್ದರು. ನಾನು ಅವರೊಂದಿಗೆ ಹೆಚ್ಚು ಸಮಯಗಳನ್ನು ಕಳೆಯುತ್ತಿದ್ದೆ. ಆ ಪಯಣದಲ್ಲಿ ನಾನು ಬಾಲ್ಯದಿಂದ ಅಂದಿನ ವರೆಗಿನ ತಾಯಿಯ ಜೊತೆಗೆ ಕಳೆದ ಪ್ರತಿಯೊಂದು ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಹೋದೆ. ನಿದ್ದೆಯೇ ಇರದಂಥ ಪ್ರಯಾಣ ಅದು. ಅದೊಂದು ಪ್ರಯಾಣದ ಬಗ್ಗೆ ಬರೆಯಬೇಕು ಎಂದು ಸಾಕಷ್ಟು ಬಾರಿ ಅಂದುಕೊಂಡಿದ್ದೇನೆ. ಈಗ ಮೊದಲ ಬಾರಿಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಎಲ್ಲರಿಗೂ ಮಾತೃದಿನಾಚರಣೆಯ ಶುಭಾಶಯಗಳು.

    English summary
    Mothers day 2019 : Kannada director Dinesh Babu spoke about his mother in filmibeat kannada exclusive interview.
    Sunday, May 12, 2019, 18:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X