'ಚಂದ್ರಹಾಸ'ನ ಕಥೆ ಏನು? ಶಿವಣ್ಣ ಪಾತ್ರ ಎಷ್ಟು ನಿಮಿಷ ಇರುತ್ತೆ?; ರವಿ ಬಸ್ರೂರು ಮಾತು
ಸಂಗೀತ ನಿರ್ದೇಶಕರ ರವಿ ಬಸ್ರೂರು ಕನಸಿನ 'ವೀರಚಂದ್ರಹಾಸ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಶಿವಣ್ಣನ ಪಾತ್ರ ಪರಿಚಯದ ಫಸ್ಟ್ ಲುಕ್ ಪೋಸ್ಟ್ ರಿಲೀಸ್ ಆಗಿ ವೈರಲ್ ಆಗಿತ್ತು. ಯಾವಾಗ ಸಿನಿಮಾ ಶುರುವಾಯಿತು, ಸೆಂಚುರಿ ಸ್ಟಾರ್ ಯಾವಾಗ ನಟಿಸಿದರು ಅಂತ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು.
ಬಾಲಿವುಡ್ ಸಿನಿಮಾಗಳಲ್ಲಿ ಕೂಡ ರವಿ ಬಸ್ರೂರು ಸಂಗೀತ ಈಗ ಸದ್ದು ಮಾಡ್ತಿದೆ. ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ಚಿತ್ರ ಸಾಹಿತಿಯಾಗಿ, ಸಿನಿಮಾ ನಿರ್ದೇಶಕರಾಗಿ ಅವರು ಗುರ್ತಿಸಿಕೊಂಡಿದ್ದಾರೆ. ಆದರೆ ಅದು ಸಾಕಷ್ಟು ಜನರಿಗೆ ಗೊತ್ತಿಲ್ಲ. ಈಗಾಗಲೇ ಎರಡ್ಮೂರು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ತಮ್ಮ ಕನಸ್ಸಿನ 'ವೀರಚಂದ್ರಹಾಸ' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಸದ್ಯ ಚಿತ್ರದ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.

'ವೀರಚಂದ್ರಹಾಸ' ಚಿತ್ರದಲ್ಲಿ ಶಿವಣ್ಣನ ಪಾತ್ರ?
ಚಿತ್ರದ ಆರಂಭದಲ್ಲಿ ಶಿವಣ್ಣನ ಎಂಟ್ರಿ ಆಗುತ್ತದೆ. ನಾಯಕನ ಪಾತ್ರ ಪರಿಚಯಿಸುವ ಸಮಯದಲ್ಲಿ ಶಿವಣ್ಣನ ಪಾತ್ರ ಪರಿಚಯವೂ ಆಗುತ್ತದೆ. ಬಳಿಕ ಪ್ರೀ ಕ್ಲೈಮ್ಯಾಕ್ಸ್‌ನಲ್ಲಿ ಮತ್ತೆ ಬರ್ತಾರೆ. ಎರಡೂ ದೊಡ್ಡ ಸನ್ನಿವೇಶಗಳು. ತುಂಬಾ ಹೊತ್ತು ಅವರು ಚಿತ್ರದಲ್ಲಿ ಇರುತ್ತಾರೆ.
ಸಿನಿಮಾ ಎಲ್ಲಿಗೆ ಬಂತು
ಇಡೀ 'ವೀರಚಂದ್ರಹಾಸ' ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಸಿನಿಮಾ ಕಂಪ್ಲೀಟ್ ಆಗುವರೆಗೆ ಮಾತನಾಡುವುದು ಬೇಡ ಎಂದುಕೊಂಡಿದ್ದೆವು. ಬಹಳ ಹಿಂದೆಯೇ ಚಿತ್ರೀಕರಣ ಮುಗಿತು. ಈಗ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಶಾಲಾ, ಕಾಲೇಜು ಪರೀಕ್ಷೆಗಳು ಮುಗಿದ ಬಳಿಕ ಸಿನಿಮಾ ಬಿಡುಗಡೆ ಆಗುತ್ತದೆ.
ಬೆಳ್ಳಿಪರದೆಗೆ ಯಕ್ಷಗಾನ
ಯಕ್ಷಗಾನಕ್ಕೆ ಒಂದು ಚೌಕಟ್ಟು ಇರುತ್ತದೆ. ಅದನ್ನು ಹೊರಗಡೆ ಕಲ್ಪನೆ ಮಾಡಿದರೆ ಹೇಗೆ ಇರಬಹುದು ಅಂತ ಅಂದುಕೊಳ್ಳುತ್ತಿದ್ದೆ. ಅರಮನೆ ಅಂದ್ರೆ ಅರಮನೆ, ಕುದುರೆ ಏರುವುದು ಅಂದ್ರೆ ಏರಿ ಹೋಗಬೇಕು, ಕಥೆಯಲ್ಲಿ ಏನೆಲ್ಲಾ ಬರುತ್ತದೆ, ಅದೆಲ್ಲವನ್ನು ನೈಜವಾಗಿ ಕಟ್ಟಿಕೊಡಬೇಕು ಎಂದುಕೊಂಡೆವು. ಇದು ಶಿವಣ್ಣನಿಗೂ ಹೊಸದು.

ಶಿವಣ್ಣನ ಲುಕ್ ಗೀತಕ್ಕಗೆ ಇಷ್ಟವಾಗಿತ್ತು
ಚಿತ್ರದಲ್ಲಿ ಶಿವಣ್ಣನ ಲುಕ್ ನೋಡಿ ಗೀತಕ್ಕ ಬಹಳ ಇಷ್ಟಪಟ್ಟರು. ಈ ಸಿನಿಮಾ ಮಾಡಲೇಬೇಕು ಎಂದು ಪಟ್ಟು ಹಿಡಿದರು. ಕಾಸ್ಟ್ಯೂಮ್ ಡ್ರಾಮಾದಲ್ಲಿ ಪಾತ್ರ ಮತ್ತೆ ಮತ್ತೆ ಸಿಗಲ್ಲ ಎಂದಿದ್ದರು. ಶಿವಣ್ಣ ಕೂಡ ಸಾಕಷ್ಟು ತಯಾರಿ ನಡೆಸಿ ನಟಿಸಿದರು. ಬೆಳಗ್ಗೆ ಮೇಕಪ್, ಕಾಸ್ಟ್ಯೂಮ್ ಹಾಕಿಕೊಂಡರೆ ಸಂಜೆವರೆಗೂ ಅದೇ ರೀತಿ ಇರುತ್ತಿದ್ದರು. ಊಟ ಮಾಡಿದ್ದು ಕಮ್ಮಿ. ಡಯೆಟ್ ಅಲ್ಲಿ ಇರುತ್ತಿದ್ದರು. ಉದ್ದದ ಡೈಲಾಗ್‌ಗಳನ್ನು ಓದಿ ಅಭ್ಯಾಸ ಮಾಡಿದ್ದರು.
ಇಡೀ ಸಿನಿಮಾ ಯಕ್ಷಗಾನ
'ಚಂದ್ರಹಾಸ' ಇರುವ ಕಥೆನೇ. ಹರಿಕಥೆಯ ಚಂದ್ರಹಾಸ ಕಥೆ ಬೇರೆ ರೀತಿ ಇದೆ. ಅಣ್ಣಾವ್ರು ಮಾಡಿದ ಚಂದ್ರಹಾಸ ಕಥೆ ಕೂಡ ಭಿನ್ನವಾಗಿದೆ. ಈ ಕಥೆ ನನಗೆ ಬಹಳ ಇಷ್ಟವಾಯಿತು. ವೀರನ ಕಥೆ ಬೇಕಿತ್ತು. ಅದಕ್ಕಾಗಿ ಈ ಕಥೆ ಆಯ್ಕೆ ಮಾಡಿಕೊಂಡೆ. ಯಕ್ಷಗಾನ ಎಲ್ಲರಿಗೂ ಗೊತ್ತಾಗಬೇಕು ಎನ್ನುವ ಕಾರಣಕ್ಕೆ ಸಿನಿಮಾ ಮಾಡುತ್ತಿರುವುದು. ಕನ್ನಡದಲ್ಲಿ ಆಳವಾದ ಪದಗಳಿವೆ. ಅದನ್ನು ತೋರಿಸಬೇಕಿದೆ. ಈ ಚಿತ್ರದಲ್ಲಿ ಆ ಪ್ರಯತ್ನ ನಡೆಯುತ್ತಿದೆ.
ಶಿವಣ್ಣನ ಪಾತ್ರದ ಹೆಸರು
ಚಿತ್ರದಲ್ಲಿ ಶಿವಣ್ಣ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಅವರ ನಿಜವಾದ ಹೆಸರನ್ನು ಬಳಸಿಕೊಂಡಿದ್ದೇವೆ. ಕುಂತಲ ರಾಜ್ಯ ಕಥೆಯ ಕೇಂದ್ರ ಬಿಂದು. ಅದರ ಪಕ್ಕದ ರಾಜ್ಯ ಸಿಂಗಾನಲ್ಲೂರು ಸಂಸ್ಥಾನ ಎಂದು ತೋರಿಸುತ್ತಿದ್ದೇವೆ. ಅಲ್ಲಿನ ರಾಜ ಶಿವಪುಟ್ಟಸ್ವಾಮಿ ಎನ್ನುವಂತೆ ಚಿತ್ರಿಸಿದ್ದೇವೆ. ಪ್ರತಿ 20 ನಿಮಿಷಕ್ಕೆ ಸರ್‌ಪ್ರೈಸ್ ಸಿಗುತ್ತದೆ.
ಚಂದ್ರಹಾಸನ ಕಥೆ
ಮಹಾಭಾರತದಲ್ಲಿ ಚಂದ್ರಹಾಸನ ಕಥೆ ಬರುತ್ತದೆ. ಅರ್ಜುನ ಹಾಗೂ ಕೃಷ್ಣ ಯುದ್ಧಕ್ಕೆ ಚಂದ್ರಹಾಸನ ಸೈನ್ಯ ಕೇಳಲು ಬರುತ್ತಾರೆ. ಆಗ ಆತನ ಹಿನ್ನೆಲೆ, ಸಾಹಸಗಳು ಏನು? ಎನ್ನುವುದರ ಪರಿಚಯ ಆಗುತ್ತದೆ. ಹೀಗೆ ಕಥೆಯನ್ನು ಯಕ್ಷಗಾನದ ಹಿನ್ನೆಲೆಯಲ್ಲಿ ಕಟ್ಟಿಕೊಡುತ್ತಿದ್ದೇವೆ ಎಂದು ರವಿ ಬಸ್ರೂರು ವಿವರಿಸಿದ್ದಾರೆ.


Click it and Unblock the Notifications











