ಬಿಗ್ ಬಾಸ್ 12 ಗ್ರ್ಯಾಂಡ್ ಫಿನಾಲೆ ಲೆಕ್ಕಾಚಾರ ; ಬಿಗ್ ಬಾಸ್ 10ರ ಸ್ಫರ್ಧಿ ಭಾಗ್ಯಶ್ರೀ ಪ್ರಕಾರ ಟಾಪ್ 5 ಯಾರು?
''ಬಿಗ್ ಬ್ರದರ್'' ಎಂಬ ವಿದೇಶಿ ಮೂಲದ ಶೋದ ಯಥಾವತ್ತು ನಕಲು ''ಬಿಗ್ ಬಾಸ್''. ಒಂದೂವರೆ ಡಜನ್ ವ್ಯಕ್ತಿಗಳನ್ನು ಮನೆಯಲ್ಲಿ ಗುಡ್ಡೆ ಹಾಕಿ ವಾರಪೂರ್ತಿ ಅವರ ನಡುವೆ ದ್ವೇಷ- ಅಸೂಯೆಯ ಕಿಚ್ಚು ಹತ್ತಿಸುವ ಈ ಕಾರ್ಯಕ್ರಮ 2006ರಲ್ಲಿ ಭಾರತದಲ್ಲಿ ಮೊದಲ ಬಾರಿ ಪ್ರಸಾರವಾಗಿತ್ತು. ''ಸೋನಿ'' ಟಿವಿಯಲ್ಲಿ ಪ್ರಸಾರವಾದ ಮೊದಲ ''ಬಿಗ್ ಬಾಸ್'' ಸೀಸನ್ ಸುಮಾರು 86 ದಿನಗಳ ಕಾಲ ನಡೆದಿತ್ತು.
ಮೊದಲ ಪ್ರಯತ್ನದಲ್ಲಿಯೇ ಅಪಾರವಾದ ಯಶಸ್ಸನ್ನು ಕೂಡ ಈ ಕಾರ್ಯಕ್ರಮ ಪಡೆಯಿತು. ಅಲ್ಲಿಂದ ಇಲ್ಲಿಯವರೆಗೆ ಈ ''ಬಿಗ್ ಬಾಸ್'' ಲಂಗು ಲಗಾಮು ಇಲ್ಲದೇ ಸಾಗುತ್ತಲೇ ಇದೆ.

ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮ ಇದೀಗ ಕನ್ನಡದಲ್ಲಿ ಕೊನೆಯ ಹಂತಕ್ಕೆ ಬಂದು ತಲುಪಿದೆ. ಇದೇ 18ಕ್ಕೆ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಸದ್ಯ ಮನೆಯಲ್ಲಿ ಗಿಲ್ಲಿ.. ಅಶ್ವಿನಿ ಗೌಡ.. ಕಾವ್ಯ.. ಧ್ರುವಂತ್.. ರಘು.. ರಕ್ಷಿತಾ.. ಮತ್ತು ಧನುಷ್ ಇದ್ದಾರೆ.
ಈ 7 ಜನರಲ್ಲಿ ಈ ವಾರದ ಮಧ್ಯದಲ್ಲಿ ಹೊರ ಬರುವವರು ಯಾರು..? ಕೊನೆಯಲ್ಲಿ ಉಳಿದುಕೊಳ್ಳುವ ಟಾಫ್ 5 ಸ್ಫರ್ಧಿಗಳು ಯಾರು..? ಈ ಬಾರಿ ''ಬಿಗ್ ಬಾಸ್'' ಟ್ರೋಫಿ ಮುಡಿಗೇರಿಸಿಕೊಳ್ಳುವರು ಯಾರು..? ಎನ್ನುವ ಪ್ರಶ್ನೆ ಹಲವರಲ್ಲಿ ಇದೆಯಾದರೂ ಸದ್ಯ ''ಬಿಗ್ ಬಾಸ್'' ಮನೆಯ ಈ ಬಾರಿಯ ವಾತಾವರಣದ ಕುರಿತು ಬಿಗ್ ಬಾಸ್ ಹತ್ತನೇ ಸೀಸನ್‌ನ ಸ್ಫರ್ಧಿ ಭಾಗ್ಯಶ್ರೀ ರಾವ್ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಮೂಲಕ ವಿಶ್ಲೇಷಿಸಿದ್ದಾರೆ. ''ಬಿಗ್ ಬಾಸ್'' ಈ ಬಾರಿ ಯಾಕೆ ವಿಶಿಷ್ಠ-ವಿಭಿನ್ನ ಎನ್ನುವುದನ್ನು ಕೂಡ ಹೇಳಿದ್ದಾರೆ. ಹಾಗಿದ್ದರೆ ಭಾಗ್ಯಶ್ರೀ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.

ನಿಮ್ಮ ಪ್ರಕಾರ ಟಾಪ್ 5 ಕಂಟೆಸ್ಟೆಂಟ್ ಯಾರು ?
''ಅಶ್ವಿನಿ .. ಗಿಲ್ಲಿ .. ರಕ್ಷಿತಾ .. ರಘು .. ಧ್ರುವಂತ್ .. ನನ್ನ ಪ್ರಕಾರ ಈ ಬಾರಿಯ ಟಾಪ್ 5ನಲ್ಲಿ ಇರುತ್ತಾರೆ. ಧನುಷ್ ಮತ್ತು ಕಾವ್ಯಗೆ ಕೂಡ ಆ ಅರ್ಹತೆ ಇದೆ. ಆದರೆ ಈ 5 ಜನ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದವರಂತೆ ಆಡುತ್ತಿದ್ದಾರೆ. ರನ್ನಿಂಗ್ ರೇಸ್‌ನಲ್ಲಿ ಮೊದಲಿಂದ ಓಡಿಕೊಂಡು ಬರುವುದು ಬೇರೆ. ಕೊನೆಯಲ್ಲಿ ಎರಡು ಹೆಜ್ಜೆ ಇಡುವುದು ಬೇರೆ. ಆ ಲೈನ್‌ಗೆ ಯಾರ ಪಾದ ತಾಗುತ್ತೆ ಎನ್ನುವುದು ಮುಖ್ಯ. ಇಲ್ಲಿಯೂ ಕೂಡ ಹಾಗೇ ಆಗಿದೆ. ಗೆಲ್ಲಬೇಕೆಂಬ ಕಿಚ್ಚು ನನಗೆ ವ್ಯೆಯಕ್ತಿಕವಾಗಿ ಈ 5 ಜನರಲ್ಲಿ ಕಾಣಿಸಿದೆ'' ಎಂದು ಭಾಗ್ಯಶ್ರೀ ರಾವ್ ಹೇಳಿದ್ದಾರೆ.
''ಹಾಗಂಥ ಧನುಷ್ ಮತ್ತು ಕಾವ್ಯ ಪ್ರಯತ್ನ ಮಾಡ್ತಿಲ್ಲ ಅಂತೇನು ಅಲ್ಲ. ಆದರೆ ಸುದೀಪ್ ಸರ್ ಅವರೇ ಹೇಳಿದಂತೆ ''ಬಿಗ್ ಬಾಸ್''ನ ಚೆನ್ನಾಗಿ ಅರ್ಥ ಮಾಡಿಕೊಂಡ ವ್ಯಕ್ತಿ ಗಿಲ್ಲಿ. ಸರ್ ಬಾಯಲ್ಲಿಯೇ ಈ ಮಾತು ಬಂದಾಗ ನಾವು ಕೂಡ ಒಪ್ಪಬೇಕಾಗುತ್ತೆ. ಎಲ್ಲೋ ಒಂದು ಕಡೆ ಈ 5 ಜನ ಹೆಚ್ಚಿನ ಪ್ರಯತ್ನ ಮಾಡ್ತಿದ್ದಾರೆ ಎನ್ನುವುದು ನನ್ನ ಭಾವನೆ. ನೆಗೆಟಿವ್ -ಪಾಸಿಟಿವ್ ಎನ್ನುವ ವಿಚಾರ ಮಾಡದೇ, ನಮ್ಮ ಕಡೆಯಿಂದ ಪ್ರಯತ್ನ ಇರಬೇಕು ಎಂಬ ಉದ್ದೇಶದಲ್ಲಿ ಇವರು ಕಲ್ಲು ಹೊಡೆಯೋಣ ಹಣ್ಣು ಬೀಳಬಹುದು ಎಂದು ಹೊಡೆಯುತ್ತಿದ್ದಾರೆ'' ಎಂದು ತಮ್ಮ ಅಭಿಪ್ರಾಯವನ್ನು ಭಾಗ್ಯಶ್ರೀ ರಾವ್ ವ್ಯಕ್ತಪಡಿಸಿದ್ದಾರೆ.
ಮುಂದುವರೆದು '' ಧ್ರುವಂತ್ ಅವರ ವಿಚಾರವನ್ನೇ ತೆಗೆದುಕೊಳ್ಳಿ. ಆರಂಭದಲ್ಲಿ ಈ ಕಾರ್ಯಕ್ರಮದ ಸಹವಾಸವೇ ಬೇಡ ಎಂದು ಹೇಳಿದವರು ಅವರು. ನಾನು ಇರೋದಿಲ್ಲ ಎಂದು ಎಲ್ಲ ಕ್ಯಾಮರಾಗಳ ಎದುರು ಹೋಗಿ ಬೇಡಿಕೊಂಡರು, ಸುದೀಪ್ ಸರ್ ಅವರ ಬಳಿ ಕೂಡ ಕೇಳಿಕೊಂಡರು. ಅಂತಹ ವ್ಯಕ್ತಿ ಇವತ್ತು ಇಷ್ಟೊಂದು ಹೋರಾಡುತ್ತಿದ್ದಾರೆ ಎಂದರೆ ಅವರು ಸೋಲು ಒಪ್ಪಿಕೊಂಡಿಲ್ಲ ಅಂತನೇ ಅರ್ಥ ಅಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ ಭಾಗ್ಯಶ್ರೀ ರಾವ್.
ಶ್ರುತಿ ನಂತರ ಅಶ್ವಿನಿ ಗೌಡ ಇತಿಹಾಸ ಬರೆಯುತ್ತಾರಾ..?
ಮಾಡಬಹುದು ಎನ್ನುವುದು ನನ್ನ ಅನಿಸಿಕೆ. ಯಾಕೆಂದರೆ ಕಾವ್ಯ ವಿಚಾರದಲ್ಲಿ ಗಿಲ್ಲಿ ಎಡವಿದರು ಅನ್ಸುತ್ತೆ. ಕಾವ್ಯ ಕುರಿತು ಮಾತನಾಡಿ ಅಂದಾಗ ಗಿಲ್ಲಿ ತುಟಿಪಿಟಕ್ ಅನ್ನಲಿಲ್ಲ. ಸುದೀಪ್ ಸರ್ ಅವರೇ ಹಾಗಿದ್ದರೆ ಬಿಡಿ ಕಾವ್ಯ ಅವರಲ್ಲಿ ಯಾವ ಲೋಪ ದೋಷ ಇಲ್ಲ ಅಂದರೆ ಅವರೇ ವಿನ್ನರ್ ಎಂದರು. ಎಲ್ಲರಲ್ಲಿಯೂ ತಪ್ಪು ಹುಡುಕಿ ನಾಮಿನೇಷನ್‌ನಲ್ಲಿ ಗಿಲ್ಲಿ ಹೆಸರು ತೆಗೆದುಕೊಂಡಾಗ ಕಾವ್ಯ ಅವರ ಬಗ್ಗೆ ಒಂದು ಪಾಯಿಂಟ್ ಆದರೂ ಹೇಳಬೇಕಿತ್ತು. ಒಂದೊಂದು ಸಲ ''ಬಿಗ್ ಬಾಸ್''ನಲ್ಲಿ ಈ ತರಹದ ಚಿಕ್ಕಪುಟ್ಟ ಯಡವಟ್ಟುಗಳೇ ಮುಳುವಾಗಿ ಬಿಡುತ್ತಾವೆ. ಇನ್ನು ಬಾಲ್ ಕಿಕ್ ಮಾಡುವ ಟಾಸ್ಕ್ ಇದ್ದಾಗಲೂ ಕೂಡ ಮೊದಲು ಕಾವ್ಯ ಪೋಸ್ಟರ್‌ನ ಗಿಲ್ಲಿ ಅಂಟಿಸಿದರು. ಆ ನಂತರ ಮತ್ತೆ ಕಾವ್ಯ ಪೋಸ್ಟರ್ ತೆಗೆದು ಅಶ್ವಿನಿ ಗೌಡ ಅವರ ಸ್ಟಿಕರ್ ಅಂಟಿಸಿದರು. ಈ ರೀತಿಯ ಚಿಕ್ಕ ಚಿಕ್ಕ ತಪ್ಪುಗಳನ್ನು ಕೊನೆಯ ಘಳಿಗೆಯಲ್ಲಿ ಗಿಲ್ಲಿ ಮಾಡಬಾರದಿತ್ತು ಎನ್ನುವುದು ನನ್ನ ಅಭಿಪ್ರಾಯ'' ಎಂದು ''ಫಿಲ್ಮಿಬೀಟ್ ಕನ್ನಡ''ಗೆ ಭಾಗ್ಯಶ್ರೀ ಅವರ ಪ್ರತಿಕ್ರಿಯೆ ನೀಡಿದ್ದಾರೆ.

ಗಿಲ್ಲಿ ತುಂಬಾನೇ ಗಮನಿಸುತ್ತಾರೆ. ಆದರೆ..
''ನಾನು ನೋಡಿದಂತೆ ಗಿಲ್ಲಿ ಎಲ್ಲರನ್ನೂ ತುಂಬಾನೇ ಗಮನಿಸುತ್ತಾರೆ. ನಮಗಾದರೆ ರೀಕ್ಯಾಪ್ ಇರುತ್ತೆ. ಸ್ಲೋ ಮೋಶನ್ ಇರುತ್ತೆ. ಆದರೆ ಆ ಮನೆಯಲ್ಲಿ ಏನೂ ಇರಲ್ಲ. ಅಷ್ಟು ತೀಕ್ಷ್ಣವಾಗಿ ಗಿಲ್ಲಿ ಗಮನಿಸುತ್ತಾರೆ. ಆದರೆ ಎಲ್ಲೋ ಒಂದು ಕಡೆ ಕಾವ್ಯಾ ಬಗ್ಗೆ ಒಂದು ಮಾತು ಆಡಿದ್ದರೆ ಅವರಿಗೆ ಅದು ಪ್ಲಸ್ ಆಗಿರುತ್ತಿತ್ತು. ಇನ್ನು ರಘು ಅವರಿಗೆ ಕೂಡ ಗಿಲ್ಲಿ ಆಪ್ತ. ಆದರೂ ಕೂಡ ನಾಮಿನೇಟ್ ಮಾಡಿದರು.ಇನ್ನು ಕಾವ್ಯನೇ ಗಿಲ್ಲಿನ ತುಂಬಾ ಸಲ ಬಿಟ್ಟು ಕೊಟ್ಟಿದಾರೆ. ಹೀಗಿರುವಾಗ ಫ್ರೆಂಡ್‌ಶಿಫ್ ಬಿಟ್ಟು ಕೊಟ್ಟರೆ ನನಗೆ ಎಲ್ಲಿ ನೆಗೆಟಿವ್ ಆಗುತ್ತೆ ಎಂದು ಯೋಚನೆ ಮಾಡಬಾರದಿತ್ತು. ಅವರ ಫ್ಯಾಮಿಲಿ ಅವರು ಬಂದು ಹೇಳಿದ್ದನ್ನೇ ಅವರು ಹೇಳಬಹುದಿತ್ತು. ಅವರ ಫ್ಯಾಮಿಲಿ ಅವರು ಹೇಳುವ ಮುಂಚೆಯೇ ಕಾವ್ಯ ಕೆದಕಿ ಕೆದಕಿ ಕೇಳ್ತಿದ್ದರು. ಕೆದಕಿ ಕೇಳಬಾರದು ಫ್ಯಾಮಿಲಿ ಅವರು ಬಂದಾಗ ಎನ್ನುವ ಪಾಯಿಂಟ್ ಇತ್ತು. ಅದನ್ನೇ ಹೇಳಬಹುದಿತ್ತು'' ಎಂದಿದ್ದಾರೆ ಭಾಗ್ಯಶ್ರೀ ರಾವ್.
ಈ ಬಾರಿಯ ಬಿಗ್ ಬಾಸ್ ವಿಶಿಷ್ಟ -ವಿಭಿನ್ನ
''ಎಲ್ಲ ಸೀಸನ್‌ಗಳಿಗಿಂತ ಈ ಸೀಸನ್ ತುಂಬಾನೇ ಭಿನ್ನವಾದದ್ದು. ಯಾಕೆಂದರೆ ನಮ್ಮ ಸೀಸನ್‌ನಲ್ಲಿ ಹೇಗಿತ್ತು ಅಂದರೆ ಫಿಸಿಕಲ್ ಟಾಸ್ಕ್‌ನಲ್ಲಿ ಎಲ್ಲರೂ ಗೂಳಿಯಂತೆ ಗುದ್ದಾಡುತ್ತಿದ್ದರು. ಆದರೆ ಈ ಬಾರಿ ಮನೆಯಲ್ಲಿ ಇರುವವರು ತುಂಬಾನೇ ಬುದ್ದಿವಂತರು. ಆಡುವುದಷ್ಟೇ ಅಲ್ಲ ಮಾತುಕತೆ ಇರಬಹುದು, ವಿಚಾರಗಳ ವಿಶ್ಲೇಷಣೆ ಮಾಡುವುದು ಇರಬಹುದು. ಸ್ಫರ್ಧಿಗಳ ಆಯ್ಕೆ ಈ ಬಾರಿ ತುಂಬಾನೇ ಚೆನ್ನಾಗಿದೆ. ನಾನು ಹಿಂದಿನ ಎಲ್ಲ ಸೀಸನ್‌ಗಳಿಗಿಂತ ಈ ಬಾರಿಯ ಸೀಸನನ್ನೇ ಹೆಚ್ಚು ನೋಡಿದ್ದು, ತುಂಬಾನೇ ಚೆನ್ನಾಗಿದೆ ಈ ಬಾರಿಯ ಸೀಸನ್, ವ್ಯೆಯಕ್ತಿಕವಾಗಿ ನನಗೆ ತುಂಬಾ ಇಷ್ಟ ಆಯ್ತು '' ಎಂದು ಭಾಗ್ಯಶ್ರೀ ರಾವ್ ಹೇಳಿದ್ದಾರೆ.
ಮನೆ ಮಗಳಾಗಿದ್ದಕ್ಕೆ ಸ್ಪಂದನಾ ಇಷ್ಟು ದಿನ ಉಳಿದುಕೊಂಡಿದ್ದಾ ?
''ಇಲ್ಲ..ಹಾಗೆಲ್ಲ ಇರಲ್ಲ. ಯಾಕೆಂದರೆ ''ಬಿಗ್ ಬಾಸ್''ನಲ್ಲಿ ಯಾವೆಲ್ಲ ಅಂಶಗಳು ಲೆಕ್ಕಕ್ಕೆ ಬರುತ್ತವೆ ಎಂದು ಹೇಳಲು ಸಾಧ್ಯವೇ ಇಲ್ಲ. ''ಬಿಗ್ ಬಾಸ್'' ಇರುವುದೇ ಹಾಗೇ. ನಾವು ಇಲ್ಲಿ ಕುಂತು ಸುಲಭವಾಗಿ ಹೇಳಿಬಿಡಬಹುದು. ಆದರೆ ಅವರಿಗೆ ಅವರದ್ದೇ ಆದ ಫ್ಯಾನ್ ಫಾಲೋಯಿಂಗ್ ಇದ್ದೇ ಇರುತ್ತೆ. ಇನ್ನು ಮನೆ ಮಗಳು ಎಂದು ಕರೆಯುವುದು ಸಹಜ. ಉದಾಹರಣೆಗೆ ನಾವು ಶಾಲೆ ನಡೆಸುತ್ತಿದ್ದರೆ ಆ ಶಾಲೆಯಲ್ಲಿ ನಮ್ಮ ಮಕ್ಕಳು ಓದುತ್ತಿದ್ದರೆ, ಎಲ್ಲರ ಕಣ್ಣು ಅದರ ಮೇಲಿರುತ್ತೆ. ಅವರ ಮಕ್ಕಳಿಗೆ ಹೆಚ್ಚಿನ ಮಾರ್ಕ್ಸ್ ಕೊಡ್ತಾರೆ. ಹಾಗೇ ಮಾಡ್ತಾರೆ, ಹೀಗೆ ಮಾಡ್ತಾರೆ ಎಂದು ಜನ ಮಾತನಾಡಿಯೇ ಮಾತನಾಡ್ತಾರೆ. ಹೀಗಾಗಿ ಮನೆ ಮಗಳಾಗಿದ್ದಕ್ಕೆ ಉಳಿಸಿಕೊಂಡರು ಎನ್ನುವುದು ಸುಳ್ಳು. ಹಾಗಿದ್ದರೆ ಅವರನ್ನು ಹೊರಗಡೆ ಕಳುಹಿಸುತ್ತಿರಲಿಲ್ಲ. ಇನ್ನು ಸ್ಪಂದನಾ ಅವರು ಕೂಡ ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡಿದಾರೆ. ಆಮೇಲೆ ಅವರು ಸುಂದರವಾಗಿ ರೆಡಿಯಾಗ್ತಿದ್ದರು. ಎಲ್ಲವೂ ಕೌಂಟ್ ಆಗುತ್ತೆ. ಕೆಲವರು ಫಿಸಿಕಲಿ ತುಂಬಾ ಸ್ಟ್ರಾಂಗ್ ಆಗಿರ್ತಾರೆ, ಕೆಲವರು ಮಾನಸಿಕವಾಗಿ ಶಕ್ತಿಶಾಲಿಯಾಗಿರ್ತಾರೆ, ಆ ಮನೆಗೆ ಗ್ಲ್ಯಾಮರ್ ಕೂಡ ಮುಖ್ಯ. ಇವೆಲ್ಲದರ ಮೇಲೆ ಕಾರ್ಯಕ್ರಮ ನಿಂತಿರುತ್ತೆ'' ಎಂದು ''ಫಿಲ್ಮಿಬೀಟ್ ಕನ್ನಡ''ಗೆ ಭಾಗ್ಯಶ್ರೀ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











