twitter
    For Quick Alerts
    ALLOW NOTIFICATIONS  
    For Daily Alerts

    ಸಂದರ್ಶನ: ಸಿನಿಮಾ ಜೊತೆಗೆ ಹೊಸ ತುಡಿತಕ್ಕೆ ಸಿಲುಕಿರುವ ರಾಜ್‌ ಬಿ ಶೆಟ್ಟಿ

    |

    ರಾಜ್ ಬಿ ಶೆಟ್ಟಿ ಎಂದೊಡನೆ ಕನ್ನಡಿಗರಿಗೆ ಮೊದಲು ನೆನಪಾಗುವುದೇ ಒಂದು ಮೊಟ್ಟೆಯ ಕತೆ' ಚಿತ್ರ. ಆ ಸಿನಿಮಾ ಮೂಡಿ ಬಂದಿರುವ ರೀತಿ ಮಾತ್ರವಲ್ಲ, ಅದರಲ್ಲಿ ರಾಜ್ ನಟಿಸಿರುವ ಪಾತ್ರವೂ ವಿಭಿನ್ನವಾಗಿತ್ತು. ಮಂಗಳೂರಿನಲ್ಲಿ ಆರ್.ಜೆಯಾಗಿ ಗುರುತಿಸಿಕೊಂಡಿದ್ದ ರಾಜ್ ಶೆಟ್ಟಿ 'ಒಂದು ಮೊಟ್ಟೆಯ ಕತೆ' ಎನ್ನುವ ಒಂದೇ ಒಂದು ಚಿತ್ರದ ಮೂಲಕ ಕರ್ನಾಟಕ ತುಂಬ ಹೆಸರು ಮಾಡಿದರು.

    ಚಿತ್ರದ ನಾಯಕನಷ್ಟೇ ಅಲ್ಲ; ನಿರ್ದೇಶಕ ಕೂಡ ಇವರೇ ಆಗಿದ್ದರು. ಅದು ಯುವಕನೋರ್ವನ ಬೋಳು ತಲೆಯ ಸಮಸ್ಯೆಗೆ ಸಂಬಂಧಿಸಿದ ಸಿನಿಮಾ ಆಗಿದ್ದ ಕಾರಣ, ಆ ಚಿತ್ರದ ಜತೆಗೆ ರಾಜ್ ಬಿ ಶೆಟ್ಟಿ ವಾಪಾಸು ಮಂಗಳೂರಿಗೆ ಹೋಗುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ದೇಹದ ಆಕಾರ, ಸುಂದರತೆ, ನಾಯಕ ಪ್ರಧಾನ ಪಾತ್ರಕ್ಕೆ ಸಮಸ್ಯೆಯೇ ಅಲ್ಲ ಎನ್ನುವುದನ್ನು ಕಾಶೀನಾಥ್ ಅವರ ಬಳಿಕ ಮತ್ತೊಮ್ಮೆ ಸಾಬೀತು ಪಡಿಸಿದ ರಾಜ್ ಶೆಟ್ಟಿ, ಇದೀಗ ಸ್ಟಾರ್ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

    ಎರಡು ವರ್ಷಗಳಲ್ಲಿ ಅವರ ಕೀರ್ತಿ ಪರಭಾಷಾ ಸಿನಿಮಾರಂಗದವರೆಗೆ ತಲುಪಿದ್ದರೂ ಸಹ, ರಾಜ್ ಶೆಟ್ಟಿಯವರ ವರ್ತನೆಯಲ್ಲಿನ ಸರಳತೆ ಇಂದಿಗೂ ಹಾಗೆಯೇ ಇದೆ. ನಟನೆಯ ಜತೆಗೆ ಕೃಷಿಯಲ್ಲಿಯೂ ಗುರುತಿಸಿಕೊಂಡಿರುವ ಕಿಶೋರ್ ಅವರಂತೆ, ರಾಜ್ ಬಿ ಶೆಟ್ಟಿಯವರು ಕೂಡ ರೈತನಾಗಲು ಹವಣಿಸಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅವರು ಫಿಲ್ಮೀಬೀಟ್ ಜತೆಗೆ ವಿಸ್ತೃತವಾಗಿ ಮಾತನಾಡಿದ್ದಾರೆ.

    ಮನೆಯಲ್ಲಿದ್ದುಕೊಂಡು ಹೇಗೆ ಕಾಲ ಕಳೆಯುತ್ತಿದ್ದೀರಿ?

    ಮನೆಯಲ್ಲಿದ್ದುಕೊಂಡು ಹೇಗೆ ಕಾಲ ಕಳೆಯುತ್ತಿದ್ದೀರಿ?

    ಇಂದು ದೇಶದ ಎಲ್ಲ ಜನರು ಕೂಡ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ. ಆದರೆ ಮನೆಯೊಳಗಿದ್ದು ಉತ್ತಮವಾಗಿ ಕಾಲ ಕಳೆಯಲು ಅವಕಾಶ ನೀಡುವಂಥದ್ದು ಓದುವ ಹವ್ಯಾಸ. ಆ ಹವ್ಯಾಸ ನನಗೆ ಇದೆ. ಪ್ರಸ್ತುತ ಓದುವಿಕೆಯಲ್ಲಿ ನಿರತನಾಗಿದ್ದೇನೆ. ಪೂರ್ಣಚಂದ್ರ ತೇಜಸ್ವಿಯವರು ರಚಿಸಿರುವ `ಸಹಜ ಕೃಷಿ' ಎನ್ನುವ ಪುಸ್ತಕ ಓದಿ ಮುಗಿಸಿದ್ದೇನೆ. ಅದು ಜಪಾನ್‌ನ ರೈತನ ಬದುಕಿನ ವಿಚಾರ. ಸಾವಯವ ಮತ್ತು ಆಧುನಿಕ ರೀತಿಯ ಕೃಷಿಗಳ ನಡುವೆ ಹೊಸ ವಿಧಾನದ ಕೃಷಿಯ ಕತೆ. ಫುಕೊವೊಕ ಎನ್ನುವ ಜಪಾನೀ ರೈತ ನಡೆಸಿದ `ನ್ಯಾಚುರಲ್' ಕೃಷಿಯ ಬಗ್ಗೆ ಬರೆದಿರುವ ಪುಸ್ತಕ ಇದು. ಇದರಲ್ಲಿ ಕೃಷಿಗೆಂದೇ ವಿಶೇಷ ಕೆಲಸ ಮಾಡಬೇಕಾಗಿಲ್ಲ. ಬೆಳೆಗಳು ಪ್ರಾಕೃತಿಕವಾಗಿ ಹೇಗೆ ಬೆಳೆಯುವುದೋ ಅದೇ ರೀತಿಯಲ್ಲಿ ಉಳಿಸುವ ಕೆಲಸ ನಡೆಯುತ್ತದೆ. ಈ ವಿಧಾನ ನಿಜಕ್ಕೂ ಆಕರ್ಷಕವೆನಿಸಿದೆ. ಮುಂದೊಂದು ದಿನ ರೈತನಾಗುವುದು ನನ್ನ ಕನಸು. ಅದು ಬಿಟ್ಟರೆ ಸದ್ಯಕ್ಕೆ ಓಶೋ ಅವರ `ದಿ ವೇ ಆಫ್ ದಿ ಸೂಫಿ' ಓದುತ್ತಿದ್ದೇನೆ.

    ನೀವು ಎರಡು ಪಂಥಗಳ ನಡುವಿನ ಜಗಳದ ಬಗ್ಗೆ ಹೇಳುತ್ತಿದ್ದೀರಾ?

    ನೀವು ಎರಡು ಪಂಥಗಳ ನಡುವಿನ ಜಗಳದ ಬಗ್ಗೆ ಹೇಳುತ್ತಿದ್ದೀರಾ?

    ಪಂಥ, ಸಿದ್ಧಾಂತಗಳು ಯಾರಿಗೆ ಹೇಳಿ? ಬಡವರಿಗೆ, ದಿನಗೂಲಿಗಾಗಿ ದುಡಿದು ಕಷ್ಟಪಟ್ಟು ಬದುಕುವವರಿಗೆ ಯಾವುದೇ ಸಿದ್ಧಾಂತಗಳು ಇರುವುದಿಲ್ಲ. ಅದೆಲ್ಲ ಹೊಟ್ಟೆ ತುಂಬಿದವರಿಗೆ ಮಾತ್ರ. ಅಂತಿಮವಾಗಿ ಯಾವುದೇ ಕೆಲಸವಾದರೂ ನ್ಯಾಯ ಸಮ್ಮತವಾಗಿರಬೇಕು. ನನಗೆ ನನ್ನದೇ ಆದ ಅಭಿಪ್ರಾಯಗಳಿವೆ. ಅದನ್ನು ಒಂದು ಪಂಥದ ಮೂಲಕ ವ್ಯಕ್ತಪಡಿಸಬೇಕು ಎಂದು ನನಗೆ ಅನಿಸಿಲ್ಲ. ಅಥವಾ ಅದಕ್ಕಾಗಿ ಹೊಸದೊಂದು ಪಂಥಬೇಕು ಎಂದು ಕೂಡ ಹೇಳುವುದಿಲ್ಲ. ಎಲ್ಲ ಪಂಥಗಳು ಕೂಡ ದೇಶದ ಉದ್ಧಾರಕ್ಕಾಗಿಯೇ ಆರಂಭವಾಗುತ್ತದೆ. ನನಗೆ ಕೂಡ ನನ್ನ ದೇಶ ಚೆನ್ನಾಗಿರಬೇಕು. ಅದಕ್ಕೂ ಮೊದಲು ನಾವು ದೇಶವಾಸಿಗಳು ಚೆನ್ನಾಗಿರಬೇಕು. ಯಾಕೆಂದರೆ ನಾವು ಪರಸ್ಪರ ಚೆನ್ನಾಗಿದ್ದಾಗಲೇ ದೇಶ ಚೆನ್ನಾಗಿರಲು ಸಾಧ್ಯ. ಸದ್ಯಕ್ಕೆ ನನಗೆ ಮದುವೆ ಆಗಿಲ್ಲ. ಆದರೆ ಮುಂದೆ ವಿವಾಹದ ಬಳಿಕ ನನ್ನ ಮಕ್ಕಳು ಕೂಡ ಇದೇ ದೇಶದಲ್ಲೇ ಬೆಳೆಯಲಿದ್ದಾರೆ. ಅವರು ಸಾಮರಸ್ಯದಿಂದ ಬೆಳೆಯುವ ವಾತಾವರಣವನ್ನು ನಾವು ಕಾಯ್ದುಕೊಳ್ಳಬೇಕು.

    ಸಾಮಾನ್ಯವಾಗಿ ನೀವು ಸಿನಿಮಾಗಳನ್ನು ಹೇಗೆ ಆಯ್ದುಕೊಳ್ಳುತ್ತೀರಿ?

    ಸಾಮಾನ್ಯವಾಗಿ ನೀವು ಸಿನಿಮಾಗಳನ್ನು ಹೇಗೆ ಆಯ್ದುಕೊಳ್ಳುತ್ತೀರಿ?

    ನನಗೆ ಕತೆ ಹೇಳುವಾಗಲೇ ಅದರಲ್ಲಿ ನನ್ನನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗಬೇಕು. ಪಾತ್ರದ ವರ್ತನೆ ಯಾಕೆ ಹಾಗಿದೆ ಎನ್ನುವುದಕ್ಕೆ ಸರಿಯಾದ ಕಾರಣ ಇರಬೇಕು. ಇತ್ತೀಚೆಗೆ ಬಿಡುಗಡೆಯಾದ `ಮಾಯಾ ಬಜಾರ್' ಚಿತ್ರವನ್ನೇ ತೆಗೆದುಕೊಳ್ಳಿ. ಅದರಲ್ಲಿದ್ದ ನನ್ನ ಪಾತ್ರ ವಿಭಿನ್ನ. ಆದರೆ ಸಹಜವಾಗಿತ್ತು. `ಅಮ್ಮಚ್ಚಿ ಎಂಬ ನೆನಪು' ಚಿತ್ರವನ್ನು ನಾನು ಒಪ್ಪಿಕೊಂಡಾಗ ಅದು ಒಂದು ಕಮರ್ಷಿಯಲ್ ಮಟ್ಟದ ಚಿತ್ರವಾಗಿರಲಿಲ್ಲ. ನನಗೆ ಅದರಲ್ಲಿ ಪಾಸಿಟಿವ್ ಪಾತ್ರವೂ ಇರಲಿಲ್ಲ. ಆದರೆ ಈಗಲೂ ನಾನು ಪಾತ್ರ ಎಷ್ಟು ದೊಡ್ಡದಿದೆ ಎನ್ನುವುದರ ಬದಲು, ಅದು ಕತೆಯೊಳಗೆ ಮೂಡಿಸುವಂಥ ಪರಿಣಾಮ ಹೇಗಿರುತ್ತದೆ ಎನ್ನುವ ಬಗ್ಗೆಯೇ ಯೋಚಿಸುತ್ತೇನೆ. ಸ್ಕ್ರೀನ್ ಸ್ಪೇಸ್ ಎಷ್ಟಿದೆ ಎನ್ನುವ ವಿಚಾರಕ್ಕಿಂತ, ಕ್ಯಾರೆಕ್ಟರ್ ಪರದೆಯ ಮೇಲೆ ಮೂಡಿಸುವ ಇಂಪ್ಯಾಕ್ಟ್ ಏನು ಎನ್ನುವುದಕ್ಕಷ್ಟೇ ಒತ್ತು ನೀಡುತ್ತೇನೆ. ಇತ್ತೀಚೆಗೆ ನಾನು ವರ್ಷಕ್ಕೆ ಎರಡೋ ಮೂರೋ ಸಿನಿಮಾ ಮಾಡಿದರೆ ಸಾಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ.

    ಬೇಡಿಕೆ ಇದ್ದಾಗ ಅವಕಾಶ ನಿರಾಕರಿಸಲು ಕಾರಣವೇನು?

    ಬೇಡಿಕೆ ಇದ್ದಾಗ ಅವಕಾಶ ನಿರಾಕರಿಸಲು ಕಾರಣವೇನು?

    ಬೇಡಿಕೆ ಇರುವುದನ್ನೇ ಒಳ್ಳೆಯ ಅವಕಾಶ ಎಂದು ಇದ್ದ-ಬದ್ದ ಚಿತ್ರಗಳನ್ನೆಲ್ಲ ಒಪ್ಪಿಕೊಂಡರೆ ಕೊನೆಗೆ ಯಾವುದಕ್ಕೂ ನ್ಯಾಯ ಸಲ್ಲಿಸದೇ ಹೋಗುವಂಥ ಸಂದರ್ಭ ಬರುತ್ತದೆ. ಆ ಅನುಭವ ಆಗಿದೆ ಕೂಡ. ಸಣ್ಣ ಪಾತ್ರಗಳಿರುವ ಒಂದಷ್ಟು ಪ್ರಯೋಗಾತ್ಮಕ ಚಿತ್ರಗಳನ್ನು ಒಪ್ಪಿಕೊಂಡರೆ ಪಾತ್ರ ಮಾಡಿದಲ್ಲಿಗೆ ಕೆಲಸ ಮುಗಿಯುವುದಿಲ್ಲವಲ್ಲ? ಅವುಗಳ ಪ್ರಚಾರಕ್ಕೆ ಕೂಡ ತಿರುಗಾಡಬೇಕಾಗುತ್ತದೆ. ಆದಾಯದ ವಿಚಾರಕ್ಕೆ ಬಂದರೆ ಅದು ಕೂಡ ತುಂಬ ಕಡಿಮೆ ಇರುತ್ತದೆ. ಬೇರೆ ಸಿನಿಮಾಗಳನ್ನು ಒಪ್ಪುವುದು ಕೂಡ ಕಷ್ಟವಾಗುತ್ತದೆ. ವರ್ಷಕ್ಕೆ ಏಳೆಂಟು ಚಿತ್ರ ಮಾಡಬಹುದೇ ಹೊರತು, ಏನಾದರೂ ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು ಎಂದರೆ ಅದು ಅಸಾಧ್ಯವೆನಿಸುತ್ತದೆ. ಹೆಚ್ಚು ಸಿನಿಮಾ ಒಪ್ಪಿ ವರ್ಷಪೂರ್ತಿ ಒದ್ದಾಡುವುದಕ್ಕಿಂತ ಉತ್ತಮ ಕಂಟೆಂಟ್ ಹೊಂದಿರುವ ಎರಡೋ, ಮೂರೋ ಸಿನಿಮಾಗಳಲ್ಲಿ ನಟಿಸಿದರೆ ಒಂದಷ್ಟು ಬಿಡುವೂ ಲಭ್ಯ. ಆಗ ಎಲ್ಲದರತ್ತ ಸರಿಯಾದ ಗಮನ ನೀಡಲೂ ಸಾಧ್ಯ. ಹಾಗಂತ ದೊಡ್ಡ ಸಿನಿಮಾ ಎಂದೊಡನೆ ನನ್ನ ಪಾತ್ರಕ್ಕೆ ಬಿಲ್ಡಪ್ ಬೇಕು ಎಂದು ಬಯಸುವವನು ನಾನಲ್ಲ. ಅಂತಿಮವಾಗಿ ಸಿನಿಮಾ ಎಲ್ಲಕ್ಕಿಂತ ದೊಡ್ಡದು.

    ನಿಮ್ಮ ನಟನೆಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳು ಯಾವುವು?

    ನಿಮ್ಮ ನಟನೆಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳು ಯಾವುವು?

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನನ್ನ ನಟನೆಯ `ತುರ್ತು ನಿರ್ಗಮನ' ಇದೇ ತಿಂಗಳು ಬಿಡುಗಡೆ ಆಗಬೇಕಿತ್ತು. ಹೇಮಂತ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಇಬ್ಬರು ಬದುಕನ್ನು ನೋಡುವ ಎರಡು ಕೋನಗಳ ಅನಾವರಣ ಇದೆ. ತೆರೆಗೆ ಬರಬೇಕಿತ್ತು. ಆದರೆ ಲಾಕ್ಡೌನ್ ನಿಂದಾಗಿ ಅದು ನೆರವೇರಿಲ್ಲ. ಸದ್ಯಕ್ಕೆ `ಚಾರ್ಲಿ777' ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರದ ನಿರ್ದೇಶಕ ಕಿರಣ್ ರಾಜ್ ನನ್ನ ಸ್ನೇಹಿತ. ನಾವಿಬ್ಬರೂ ಪ್ರಾಣಿಪ್ರಿಯರು. ಹಾಗಾಗಿಯೇ ಚಾರ್ಲಿ ಚಿತ್ರದಲ್ಲಿ ಪೆಟ್ ಡಾಕ್ಟರ್ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ! ಚಿತ್ರದಲ್ಲಿ ಸ್ವಲ್ಪ ಹಾಸ್ಯದ ರಿಲೀಫ್ ನೀಡುವ ಅವಕಾಶ ನನ್ನ ಪಾತ್ರಕ್ಕೆ ಇದೆ. ಹೊಸಬರ `ರಾಮನ ಅವತಾರ'ದಲ್ಲಿ ಒಂದು ಪಾತ್ರವಿದೆ. ಅದೇ ರೀತಿ `ಗರುಡ ಗಮನ ವೃಷಭ ವಾಹನ' ಕೂಡ ಜೂನ್ ತಿಂಗಳಲ್ಲಿ ಬಿಡುಗಡೆಗೆ ಯೋಜನೆ ಹಾಕಲಾಗಿತ್ತು.

    English summary
    Raj B Shetty is Actor And Director from Kannada Film Industry. Here he talks his new films etc.
    Thursday, April 9, 2020, 15:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X