ಅಕ್ಟೋಬರ್ 19ರಂದು ಕನ್ನಡದ ಈ ನಿರ್ಮಾಪಕನ ಜೊತೆ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ ಕನ್ನಡದ ಈ ನಟಿ..!
ಪ್ರೀತಿಯಲ್ಲಿ ಬೀಳುವುದಕ್ಕಿಂತ ಪ್ರೀತಿಯನ್ನೇ ಊರುಗೋಲಾಗಿ ಹಿಡಿದು ಮೇಲೇಳಬೇಕು. ಈ ಪ್ರೀತಿ ಯಾರಲ್ಲಿ, ಯಾವಾಗ ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಆದರೆ ಪ್ರೀತಿ ಹುಟ್ಟಿದ ಮೇಲೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಇನ್ನೂ ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ.
ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ. ಇಷ್ಟೇ ಅಲ್ಲ ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ. ಪ್ರೀತಿ ಅಂದರೆ ಬದುಕು .. ಭವಿಷ್ಯ .. ಭಾಷೆ .. ಕನಸು .. ನಗು .. ಇನ್ನೂ ಏನೆಲ್ಲಾ ! ಈ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮ ಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ. ಇಂಥಾ ಪ್ರೀತಿಯ ಅಲೆಯಲ್ಲಿ ಸಿಲುಕಿ ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಡಲು ಕನ್ನಡ ಚಿತ್ರರಂಗದ ಚೆಲುವೆ ''ಲೇಖಾ ಚಂದ್ರ'' ರೆಡಿಯಾಗಿದ್ದಾರೆ.

ಹೌದು, ಲೇಖಾ ಚಂದ್ರ .. ಕೋಮಲ್ ಅಭಿನಯದ ''ನಮೋ ಭೂತಾತ್ಮ 2'' .. ಪ್ರಜ್ವಲ್ ದೇವರಾಜ್ ಅಭಿನಯದ ''ಅಬ್ಬರ'' .. ವಿನೋದ್ ಪ್ರಭಾಕರ್ ಅಭಿನಯದ ''ಫೈಟರ್'' ಸೇರಿ ಕನ್ನಡದ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಪ್ರತಿಭಾವಂತ ನಾಯಕಿ.
ಇಂಥಾ ಲೇಖಾ ಚಂದ್ರ ಕಳೆದ ಜೂನ್‌ನಲ್ಲಿ ವಿನೋದ್ ಪ್ರಭಾಕರ್ ಅಭಿನಯದ ''ಬಲರಾಮನ ದಿನಗಳು'' ಚಿತ್ರದ ನಿರ್ಮಾಪಕ ಶ್ರೇಯಸ್ ದರ್ಶನ್ ಅವರ ಜೊತೆ ಸಕಲೇಶಪುರದಲ್ಲಿ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ಹಲವರನ್ನು ಅಚ್ಚರಿಗೆ ದೂಡಿದ್ದರು.

ಇದೀಗ ಲೇಖಾ ಇದೇ ಅಕ್ಟೋಬರ್ 18ರಂದು ಶ್ರೇಯಸ್ ದರ್ಶನ್ ಅವರ ಕೈ ಹಿಡಿದು ಹೊಸ ಬದುಕಿಗೆ ಮುನ್ನುಡಿ ಬರೆಯಲಿದ್ದಾರೆ. ಅಕ್ಟೋಬರ್ 19ರಂದು ಬೆಳಗ್ಗೆ 09-15ರ ಶುಭ ಮುಹೂರ್ತದಲ್ಲಿ ಸಪ್ತಪದಿಯನ್ನು ತುಳಿಯಲಿದ್ದಾರೆ. ಈ ಹಿನ್ನೆಲೆ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ತಮ್ಮ ಮದುವೆಯ ಕಥೆಯನ್ನು ಲೇಖಾ ಚಂದ್ರ ಹಂಚಿಕೊಂಡಿದ್ದಾರೆ. ಎಂಗೇಜ್‌ಮೆಂಟ್ ಆದ ದಿನದಿಂದ ಲವ್ ಮ್ಯಾರೇಜಾ..? ಅರೆಂಜ್ ಮ್ಯಾರೇಜ್..? ಎಂದು ಹಲವರು ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ತಮ್ಮ ಮದುವೆಯ ಕುರಿತು ''ಫಿಲ್ಮಿ ಬೀಟ್'' ಕನ್ನಡ ಜೊತೆ ಮಾಹಿತಿಯನ್ನು ಹಂಚಿಕೊಂಡಿರುವ ಲೇಖಾ ಚಂದ್ರ ''ನಮ್ಮದು ಲವ್ ಮ್ಯಾರೇಜಾ..? ಅರೆಂಜ್ ಮ್ಯಾರೇಜಾ..? ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಯಾಕೆಂದರೆ ನನಗೆ ಇದು ಒಂದು ರೀತಿಯ ಅರೆಂಜ್ ಮ್ಯಾರೇಜ್. ಮೊದಲು ಶ್ರೇಯಸ್ ಅವರಿಗೆ ಮತ್ತು ಅವರ ತಾಯಿಗೆ ನಾನು ತುಂಬಾ ಇಷ್ಟ ಆಗಿದ್ದೆ. ನಮ್ಮ ಮನೆಯಲ್ಲಿ ನನ್ನ ಮದುವೆಗೆ ಗಂಡು ಹುಡುಕುವ ಸಮಯದಲ್ಲಿ ನನಗೆ ಇವರದ್ದೇ ಮೊದಲ ಪ್ರಪೋಸಲ್ ಬಂತು. ಅಷ್ಟೇ.. ಆ ನಂತರ ಮದುವೆ ಕೂಡ ಫಿಕ್ಸ್ ಆಗಿ ಹೋಯ್ತು. ಮದುವೆ ಫಿಕ್ಸ್ ಆದ ನಂತರ ನಮ್ಮ ನಡುವೆ ಪ್ರೇಮಾಂಕುರವಾಯ್ತು. ಹೀಗಾಗಿ ನಮ್ಮದು ಲವ್ ಮ್ಯಾರೇಜ್ ಎಂದು ಕೂಡ ಹೇಳಬಹುದು. ಅರೆಂಜ್ ಮ್ಯಾರೇಜ್ ಎಂದು ಕೂಡ ಹೇಳಬಹುದು'' ಎಂದು ನಸು ನಗೆ ಬೀರಿದ್ದಾರೆ.

''ಇನ್ನು ನಮ್ಮ ಮೊದಲ ಪರಿಚಯ ಅಥವಾ ಅವರು ನನ್ನನ್ನು ಮೊದಲು ನೋಡಿದ್ದು ವಿನೋದ್ ಪ್ರಭಾಕರ್ ಸರ್ ಅವರ ''ರಗಡ್'' ಚಿತ್ರದ ಕಾರ್ಯಕ್ರಮದಲ್ಲಿ. ಇನ್ನು ನಿಮಗೆ ಗೊತ್ತು ವಿನೋದ್ ಸರ್ ಅವರ ಜೊತೆ ಶ್ರೇಯಸ್ ನಿರ್ಮಾಪಕರಾಗಿ ''ಬಲರಾಮನ ದಿನಗಳು'' ಚಿತ್ರ ಮಾಡಿದ್ದಾರೆ. ಹೀಗಾಗಿ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿ ಅವರು ನನ್ನ ಮೊದಲು ನೋಡಿದ್ದು. ಅಲ್ಲಿಂದ ಅವರು ನನ್ನ ಗಮನಿಸುತ್ತಾ ಬಂದಿದ್ದರು. ಆ ನಂತರ ಮದುವೆಯ ವಿಚಾರ ಅವರ ಮನೆಯಲ್ಲಿ ಚರ್ಚೆಯಾದಾಗ ನನಗೆ ಪ್ರಪೋಸಲ್ ಬಂತು. ಆ ನಂತರ ನಮ್ಮ ಮನೆಯಲ್ಲಿ ಕೂಡ ಇಷ್ಟ ಆಯ್ತು. ಅವರ ಮನೆಯಲ್ಲಿ ಕೂಡ ಇಷ್ಟ ಆಯ್ತು. ಈಗ ಮದುವೆ ಹಂತಕ್ಕೆ ಬಂದು ತಲುಪಿದೆ.'' ಎಂದು ಲೇಖಾ ಚಂದ್ರ ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮುಂದುವರೆದು ''ಯಾವುದೇ ಕೆಲಸ ಮಾಡಿದರು ತುಂಬಾ ಶ್ರದ್ಧೆಯಿಂದ ಅವರು ಕೆಲಸ ಮಾಡ್ತಾರೆ. ತುಂಬಾನೇ ಮೃದು ಸ್ವಭಾವದ ವ್ಯಕ್ತಿತ್ವ ಅವರದ್ದು. ಇನ್ನೂ ವಸ್ತುವನ್ನು ನಾನು ನೋಡುವ ರೀತಿಯೇ ಬೇರೆ. ಅವರ ದೃಷ್ಟಿಕೋನವೇ ಬೇರೆ. ಉದಾಹರಣೆಗೆ ಫೈರ್ ಕ್ರ್ಯಾಕರ್ ನೋಡಿದರೆ ಬೇರೆ ಏನೂ ನೋಡಲ್ಲ ಚೆನ್ನಾಗಿದೆ ಅಷ್ಟೇ ಎಂದುಕೊಳ್ಳುತ್ತೇನೆ. ಆದರೆ ಅವರು ಅದರ ಕಲರ್ ನೋಡ್ತಾರೆ ಅದರ ವಿವರಣೆ ಕೊಡ್ತಾರೆ. ನಾನು ಬದುಕನ್ನು ತುಂಬಾ ಈಸಿಯಾಗಿ ತಗೊಳ್ತೀನಿ ಆದರೆ ಅವರು ಒಂದೊಂದು ಕ್ಷಣವನ್ನು ಕೂಡ ಎಂಜಾಯ್ ಮಾಡ್ತಾರೆ. ಅವರಲ್ಲಿರುವ ಈ ಗುಣ ನಾನು ಕೂಡ ಅಳವಡಿಸಿಕೊಳ್ಳಲು ಈಗೀಗ ಪ್ರಯತ್ನ ಮಾಡುತ್ತಿದ್ದೇನೆ'' ಎಂದು ಹೇಳಿದ್ದಾರೆ.

ಇನ್ನೂ ಸಾಮಾನ್ಯವಾಗಿ ಮದುವೆಯಾದ ನಂತರ ನಾಯಕಿಯರು ಚಿತ್ರರಂಗದಿಂದ ದೂರ ಆಗ್ತಾರೆ. ಅಂತರ ಕಾಪಾಡಿಕೊಳ್ತಾರೆ. ಗಂಡ-ಮನೆ-ಸಂಸಾರ ಎಂದು ಬ್ಯುಸಿಯಾಗುತ್ತಾರೆ. ಲೇಖಾ ಚಂದ್ರ ಕೂಡ ಈ ಸಾಲಿಗೆ ಸೇರುತ್ತಾರಾ ..? ಗೊತ್ತಿಲ್ಲ. ಆದರೆ.. ನಾಯಕಿಯಾಗಿ ಕಾಣಿಸಿಕೊಳ್ಳದೇ ಇದ್ದರೂ ಕೂಡ ಲೇಖಾ ಚಿತ್ರರಂಗದಿಂದ ದೂರವಾಗುವುದಿಲ್ಲ. ಬದಲಿಗೆ ತೆರೆಯ ಹಿಂದೆಯಂತೂ ಆಕ್ಟಿವ್ ಆಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಲೇಖಾ ಚಂದ್ರ ''ಮದುವೆಯ ನಂತರ ಗಂಡನ ಮನೆಗೆ ಹೊಂದಿಕೊಳ್ಳಬೇಕು.. ಗಂಡನ ಮನೆಯವರ ಜೊತೆ ಹೊಂದಿಕೊಳ್ಳಬೇಕು.. ಹೀಗಾಗಿ ಚೂರು ಟೈಮ್ ನನಗೆ ಬೇಕಾಗುತ್ತೆ. ಫ್ಯಾಮಿಲಿ ಟೈಮ್ ಬೇಕಾಗುತ್ತೆ. ಸದ್ಯ ಆದಿತ್ಯ ಅವರ ಜೊತೆ ''ಕಿಲ್'' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಮತ್ತೊಂದು ''ಲೈಫ್ ಟುಡೇ''. ''ಲೈಫ್ ಟುಡೇ'' ಮಹಿಳಾ ಪ್ರಧಾನ ಸಿನಿಮಾ. ಚಿತ್ರೀಕರಣ ಬಹುತೇಕ ಮುಕ್ತಾಯ ಆಗಿದೆ. ಇನ್ನು ''ಕಿಲ್'' ಚಿತ್ರದ ಒಂದು ಹಾಡು ಬಾಕಿ ಇದೆ. ಈ ಹಾಡನ್ನು ಮದುವೆಯಾದ ನಂತರ ಮುಗಿಸಿ ಕೊಡ್ತೀನಿ. ಆ ನಂತರ ಬ್ರೇಕ್ ತಗೊಳ್ಳುತ್ತೇನೆ'' ಎಂದು ಹೇಳಿದ್ದಾರೆ.

''ಈಗ ನಮ್ಮದೇ ನಿರ್ಮಾಣ ಸಂಸ್ಥೆ ಇದೆ. ನನ್ನ ಮೈದುನ ತೇಜಸ್ ಜಯರಾಂ ಚಿತ್ರರಂಗಕ್ಕೆ ಬರಲು ರೆಡಿಯಾಗ್ತಿದ್ದಾರೆ. ಅದಕ್ಕೆ ಬೇಕಾದ ತಯಾರಿಗಳನ್ನು ತರಬೇತಿಯನ್ನು ಪಡೆಯುತ್ತಿದ್ಧಾರೆ. ಹೀಗಾಗಿ ನಿರ್ಮಾಣ ಸಂಸ್ಥೆ ನೋಡಿಕೊಂಡರು ಕೂಡ ನನಗೆ ಖುಷಿ ಇದೆ. ಮನೆಯಿಂದ ಯಾರಾದರೂ ಒಬ್ಬರು ಇಂಡಸ್ಟ್ರೀಯಲ್ಲಿ ಇದ್ದರೆ ಅದು ಖುಷಿನೇ ಅಲ್ವಾ ..? ಆದರೂ ಕೂಡ ನಾನು ಕೆಲ ದಿನಗಳ ನಂತರ ಆಕ್ಟಿಂಗ್‌ಗೆ ಮರಳಿ ಬರುವ ಪ್ರಯತ್ನ ಮಾಡುತ್ತೇನೆ. ಸಾಧ್ಯವಾಗದೇ ಇದ್ದರೆ ನನ್ನ ಮೈದುನ ಕನ್ನಡ ಇಂಡಸ್ಟ್ರೀಗೆ ಒಳ್ಳೆಯ ಹೀರೋ ಆಗ್ತಾರೆ. ಅವರಿಗೆ ಫುಶ್ ಮಾಡುತ್ತಾ.. ಪತಿಗೆ ಬೆಂಬಲವಾಗಿ ನಿಲ್ಲುತ್ತೇನೆ'' ಎಂದು ಲೇಖಾ ಚಂದ್ರ ಹೇಳಿದ್ದಾರೆ.
'' ಮದುವೆಯಾದ ನಂತರ ನಾನು ಅಭಿನಯಿಸಬಹುದು. ಮನೆಯಿಂದ ಆ ತರಹದ ಯಾವುದೇ ಷರತ್ತು ಇಲ್ಲ. ಬದಲಿಗೆ ಶ್ರೇಯಸ್ ಬೆಂಬಲ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಅತ್ತೆ ಅವರೇ ಮದುವೆಯಾದ ಮೇಲೆ ನೀನು ಆಕ್ಟಿಂಗ್ ಮಾಡ್ತೀಯಾ ಮಗಳೇ ಎಂದು ನನಗೆ ಕೇಳಿದ್ದರು, ಮಾಡ್ತೀಯಾ ಅಂದರೆ ನಾವೇ ನಿರ್ಮಾಣ ಮಾಡೋಣ ಎಂದು ಹೇಳಿದ್ದಾರೆ. ಆದರೆ ನನಗೆ ಸದ್ಯ ಕುಟುಂಬದ ಜೊತೆ ಕಾಲ ಕಳೆಯಬೇಕು ಅವರ ಜೊತೆ ಇರಬೇಕೆನ್ನುವ ಆಸೆ ಇದೆ. ಮುಂದೆ ನೋಡೋಣ ಎಂದು ಲೇಖಾ ಚಂದ್ರ ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಹೀಗೆ ಶ್ರೇಯಸ್ ದರ್ಶನ್ ಅವರ ಜೊತೆ ಇದೇ ಅಕ್ಟೋಬರ್ 18 ಮತ್ತು 19ರಂದು ಮದುವೆಯಾಗಲಿರುವ ಲೇಖಾ ಚಂದ್ರ ತಮ್ಮ ಜೀವನದ ಮಹತ್ವದ ಘಟ್ಟದ ಕುರಿತು ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಲೇಖಾ ಚಂದ್ರ ಮತ್ತು ಶ್ರೇಯಸ್ ದರ್ಶನ್ ಜೋಡಿಗೆ ನಿಮ್ಮ ಶುಭ ಹಾರೈಕೆಗಳು ಕೂಡ ಇರಲಿ.


Click it and Unblock the Notifications











