ಬಿಗ್ ಬಾಸ್ ನಂತರ ನಾವಿಡುವ ಹೆಜ್ಜೆ ಮೇಲೆ ನಮ್ಮ ಭವಿಷ್ಯ ; ಅವಕಾಶ ಮತ್ತು 'ಅಗ್ನಿಸಾಕ್ಷಿ' ಕುರಿತು ಶಮಂತ್ ಗೌಡ ಮುಕ್ತ ಮಾತು
ಬಿಗ್ ಬಾಸ್'' ಹಲವರ ಕನಸು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ನಮ್ಮ ಜನ್ಮ ಪಾವನ ಎಂದುಕೊಂಡವರು ಹಲವಾರು ಜನ ಇದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದೇ ನಾನಾ ತರಹದ ಸರ್ಕಸನ್ನು ಕೂಡ ಮಾಡುತ್ತಾರೆ. ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮ ಹಲವರ ಬದುಕು ಬದಲಿಸಿದೆ. ಆದರೆ ಇಡುವ ಹೆಜ್ಜೆ ಸರಿಯಾಗಿರಬೇಕಷ್ಟೇ. ಉದಾಹರಣೆಗೆ ಶಮಂತ್ ಬ್ರೋ ಗೌಡ ಅವರನ್ನೇ ತೆಗೆದುಕೊಳ್ಳಿ.
ಹೌದು, ಬ್ರೋ ಗೌಡ ಅಲಿಯಾಸ್ ಶಮಂತ್ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ!? ''ಬಿಗ್ ಬಾಸ್'' ಸೀಸನ್ 8ರ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಬಹಳ ಚೆನ್ನಾಗಿ ಪರಿಚಯವಾದವರು ಇವರು. ಗಾಯಕನಾಗಿ, ನಟನಾಗಿ, ನಿರ್ದೇಶಕನಾಗಿ ಯೌಟ್ಯೂಬರ್ ಆಗಿ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗನಂತಾಗಿರುವ ಶಮಂತ್ ಗೌಡ ಆ ನಂತರ ಕಿರುತೆರೆಯಲ್ಲಿ ಬಹಳ ಪಾಪುಲ್ಯಾರಿಟಿ ಗಳಿಸಿದ್ದ ''ಲಕ್ಷ್ಮಿ ಬಾರಮ್ಮ'' ಧಾರಾವಾಹಿಯಲ್ಲಿ ಮಿಂಚಿದರು. ವೈಷ್ಣವ್ ಪಾತ್ರದಲ್ಲಿ ಬಹಳ ಅದ್ಭುತವಾಗಿ ಅಭಿನಯಿಸುವ ಮೂಲಕ ಎಲ್ಲರ ಮೆಚ್ಚುಗೆಗೂ ಪಾತ್ರವಾದರು.

ಇಂಥಾ ಶಮಂತ್ ಗೌಡ ಸದ್ಯ ಮತ್ತೊಂದು ಧಾರಾವಾಹಿಯನ್ನು ಒಪ್ಪಿಕೊಂಡಿದ್ದಾರೆ. ಆ ಧಾರಾವಾಹಿಯ ಹೆಸರು ''ಅಗ್ನಿಸಾಕ್ಷಿ''. ಈಗಾಗಲೇ ಈ ಧಾರಾವಾಹಿಯ ಪ್ರೋಮೋ ಸದ್ದು ಮಾಡುತ್ತಿದೆ. ಭರವಸೆಯನ್ನು ಕೂಡ ಮೂಡಿಸಿದೆ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ''ಅಗ್ನಿ ಸಾಕ್ಷಿ'' ಈ ಹಿಂದೆ ಕಿರುತೆರೆಯಲ್ಲಿ ಪ್ರಚಂಡ ಗೆಲುವು ಕಂಡ ಧಾರಾವಾಹಿ. ಈಗ ಅದೇ ಹೆಸರಿನಲ್ಲಿ ಧಾರಾವಾಹಿ ಬರುತ್ತಿದೆ. ಈ ಹಿನ್ನೆಲೆ ತುಸು ಹೆಚ್ಚೇ ನಿರೀಕ್ಷೆಗಳು ಪ್ರೇಕ್ಷಕರಲ್ಲಿವೆ. ಪ್ರೇಕ್ಷಕರ ನಿರೀಕ್ಷೆ ಮತ್ತು ತಮ್ಮ ಹೊಸ ಪ್ರಯಾಣದ ಕುರಿತು ಶಮಂತ್ ಗೌಡ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿದ್ದಾರೆ. ಹಾಗಿದ್ದರೆ ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಶಮಂತ್ ಗೌಡ ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.
''ಅಗ್ನಿಸಾಕ್ಷಿ'' ಒಪ್ಪಿಕೊಂಡಿದ್ದೇಕೆ ?
''ಅಗ್ನಿಸಾಕ್ಷಿ'' ತುಂಬಾನೇ ಸೂಪರ್ ಹಿಟ್ ಆಗಿರುವ ಶೀರ್ಷಿಕೆ ಮತ್ತು ಧಾರಾವಾಹಿ. ಈ ಹಿನ್ನೆಲೆ ಪಾತ್ರವನ್ನು ಹೇಗೆ ನಿಭಾಯಿಸಬಹುದು, ನಿಭಾಯಿಸಬೇಕು, ಎನ್ನುವ ಜವಾಬ್ಧಾರಿ ಈ ಧಾರಾವಾಹಿಯ ಕಥಾನಾಯಕನಾಗಿ ನನ್ನ ಮೇಲಿದೆ. ಇನ್ನು ಟೈಟಲ್ ಒಂದೇ ಆದರೂ ಕೂಡ ಹಳೆಯ ಧಾರಾವಾಹಿ ಮತ್ತು ಈ ಧಾರಾವಾಹಿ ಸಂಪೂರ್ಣ ಭಿನ್ನವಾಗಿವೆ. ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರ ನನ್ನದು. ಹೀಗಾಗಿ ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಲು ನಾನು ಅದಕ್ಕೆ ಬೇಕಾದ ತಯಾರಿಯನ್ನು ಕೂಡ ಮಾಡಿಕೊಂಡಿದ್ದೇನೆ. ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದೇನೆ. ಬೇರೆ ಧಾರಾವಾಹಿಗಳಿಗೆ ಹೋಲಿಸಿದರೆ ಈ ಧಾರಾವಾಹಿಯ ಕಥೆ ಸ್ವಲ್ಪ ವಿಭಿನ್ನವಾಗಿದೆ. ಇನ್ನು ಚಾನೆಲ್ ಮತ್ತು ನಿರ್ಮಾಣ ಸಂಸ್ಥೆಯ ಬಗ್ಗೆ ಮಾತನಾಡುವಂತೆ ಇಲ್ಲ. ಹೀಗಾಗಿ ಈ ''ಅಗ್ನಿಸಾಕ್ಷಿ''ಯನ್ನು ಒಪ್ಪಿಕೊಂಡೆ
''ಅಗ್ನಿಸಾಕ್ಷಿ'' ಶೀರ್ಷಿಕೆಯ ಭಾರದ ಕುರಿತು
ಕಿರುತೆರೆಯಲ್ಲಿ ಐತಿಹಾಸಿಕ ದಾಖಲೆ ಬರೆದ ಧಾರಾವಾಹಿಯಗಳಲ್ಲಿ ''ಅಗ್ನಿಸಾಕ್ಷಿ'' ಕೂಡ ಒಂದು ಮತ್ತು ಪ್ರಮುಖವಾದದ್ದು. ನಾವು ಕೂಡ ಹಿಂದಿನ ''ಅಗ್ನಿಸಾಕ್ಷಿ'' ಮಾಡಿದ ದಾಖಲೆಯನ್ನೇ ಬರೆಯುವ ಪ್ರಯತ್ನಕ್ಕೆ ಮುಂದಾಗಿದ್ದೇವೆ. ನಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತೆ ಎನ್ನುವ ನಂಬಿಕೆ ಕೂಡ ಇದೆ. ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ನಮ್ಮ ಈ ಧಾರಾವಾಹಿ ಇಷ್ಟವಾಗುತ್ತೆ ಎನ್ನುವ ವಿಶ್ವಾಸವೂ ಇದೆ. ನಿಜಾ ನಿರೀಕ್ಷೆ ಹೆಚ್ಚಿದೆ. ಆ ನಿರೀಕ್ಷೆಗೆ ತಕ್ಕಂತೆಯೇ ಈ ''ಅಗ್ನಿಸಾಕ್ಷಿ'' ಕೂಡ ಮೂಡಿ ಬರಲಿದೆ.

ನಿಮ್ಮ ಪಾತ್ರದ ಕುರಿತು
ತುಂಬಾನೇ ದುರಂಹಕಾರಿ ವ್ಯಕ್ತಿ. ದುಡ್ಡು ಮತ್ತು ಅಧಿಕಾರದ ಮದ ಇರುವಂತಹ ಪಾತ್ರ ನನ್ನದು . ಬಾಲ್ಯದಿಂದಲೇ ಯಾರಿಗೂ ಕೇರ್ ಮಾಡದ, ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ವ್ಯಕ್ತಿತ್ವ. ತುಂಬಾನೇ ಕೋಪಿಷ್ಠ ಆಗಿರುತ್ತಾನೆ. ಇಂತಹ ಪಾತ್ರಕ್ಕೊಂದು ಹಿನ್ನೆಲೆ ಇದೆ. ಇವನಿಗ್ಯಾಕೆ ಇಷ್ಟೊಂದು ಕೋಪ, ಯಾಕೆ ಇವನದ್ದು ಕೇರ್ ಲೆಸ್ ವ್ಯಕ್ತಿತ್ವ ಎನ್ನುವುದಕ್ಕೆ ಉತ್ತರವೂ ಧಾರಾವಾಹಿಯಲ್ಲಿದೆ. ಆ ಉತ್ತರ ನಿಮಗೆ ಸಿಗಬೇಕು ಅಂದರೆ ನೀವು ಧಾರಾವಾಹಿಯನ್ನು ನೋಡಬೇಕು.
ತಂಡದ ಕುರಿತು ನಿಮ್ಮ ಮಾತು
ತುಂಬಾನೇ ಒಳ್ಳೆಯ ತಂಡ. ನಾವು ಶೂಟಿಂಗ್ ಮಾಡ್ತಿದ್ದೇವೆ ಎನ್ನುವ ಭಾವನೆಯೇ ಬರುವುದಿಲ್ಲ. ಅಷ್ಟೊಂದು ಆತ್ಮೀಯತೆಯ ವಾತಾವರಣ ಇದೆ. ಇಂತಹ ವಾತಾವರಣ ಇದ್ದಾಗ ಕಲಾವಿದರಾಗಿ ನಮಗೆ ಇನ್ನೂ ಹೆಚ್ಚಿನ ಹುರುಪು ಬರುತ್ತೆ. ಇನ್ನು ಚೆನ್ನಾಗಿ ಆಕ್ಟ್ ಮಾಡಬೇಕೆನ್ನುವ ಕಿಚ್ಚಿರುತ್ತೆ. ಒಳ್ಳೆಯ ತಂಡ ಸಿಕ್ಕಿದ್ದಕ್ಕೆ ತುಂಬಾ ಖುಷಿ ಇದೆ. ತಾಂತ್ರಿಕವಾಗಿ ತುಂಬಾನೇ ಸ್ಟ್ರಾಂಗ್ ಆದ ತಂಡ ಇದು.
ನಾಯಕಿ ವರ್ಷಿಣಿ ಕುರಿತು
ವರ್ಷಿಣಿ ಅವರಿಗೆ ಇದು ಕನ್ನಡದಲ್ಲಿ ಮೊದಲ ಪ್ರಯತ್ನ. ಈಗಾಗಲೇ ತೆಲುಗಿನಲ್ಲಿ ಅವರು ಮಿಂಚ್ತಿದ್ದಾರೆ. ಕನ್ನಡದಲ್ಲಿ ಇದು ಮೊದಲ ಪ್ರಯತ್ನ ಆದ ಹಿನ್ನೆಲೆ ಅವರು ತುಂಬಾನೇ ಎಗ್ಸೈಟ್ ಆಗಿದ್ಧಾರೆ. ತಮ್ಮ ಪಾತ್ರವನ್ನು ತುಂಬಾ ಅಚ್ಚು ಕಟ್ಟಾಗಿ ನಿಭಾಯಿಸ್ತಿದ್ದಾರೆ. ತುಂಬಾನೇ ಫ್ರೆಂಡ್ಲಿ ವ್ಯಕ್ತಿತ್ವ ಅವರದ್ದು.
''ಬಿಗ್ ಬಾಸ್'' ಟು ''ಅಗ್ನಿಸಾಕ್ಷಿ'' ಪ್ರಯಾಣ
''ಬಿಗ್ ಬಾಸ್'' ಆದ ಮೇಲೆ ಎಲ್ಲವೂ ನನಗೆ ಒಳ್ಳೆಯದೇ ಆಗ್ತಾ ಬಂದಿದೆ. ಯಾಕೆಂದರೆ ''ಬಿಗ್ ಬಾಸ್'' ಆದ ನಂತರ ನನಗೆ ಹತ್ತರಿಂದ ಹನ್ನೆರಡು ಸಿನಿಮಾ ಅವಕಾಶಗಳು ಬಂದಿವೆ. 8 ರಿಂದ 10 ಧಾರಾವಾಹಿಯ ಅವಕಾಶಗಳು ಕೂಡ ಬಂದಿವೆ. ಒಂದರ್ಥದಲ್ಲಿ ಪ್ರತಿಯೊಬ್ಬರಿಗೆ ''ಬಿಗ್ ಬಾಸ್'' ಹೋಗಿ ಬಂದ ನಂತರ ಅವಕಾಶಗಳ ಹೆಬ್ಬಾಗಿಲೇ ತೆರೆಯುತ್ತೆ. ಆದರೆ ಅದರಲ್ಲಿ ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿಂತಿರುತ್ತೆ. ತುಂಬಾನೇ ಅಳೆದು ತೂಗಿ ನಿರ್ಧಾರ ಮಾಡಬೇಕಾಗುತ್ತೆ. ಇಡುವ ಹೆಜ್ಜೆ ಸರಿಯಾಗಿದ್ದರೆ, ನಿರ್ಧಾರ ಸರಿಯಾಗಿದ್ದರೆ ಮುಂದೆ ಐನೂರು ಹೆಜ್ಜೆ ಇಡಬಹುದು. ಆದರೆ ಅದೇ ಒಂದು ಹೆಜ್ಜೆ ತಪ್ಪಾದರೆ ಮತ್ತೆ ಬದುಕು ಹಿಂದಕ್ಕೋಗಬಹುದು. ಹೀಗಾಗಿ ಕಥೆಯ ವಿಚಾರದಲ್ಲಿ ತುಂಭಾನೇ ಚ್ಯೂಸಿಯಾಗಿರಬೇಕು. ನಾನು ಕೂಡ ಇದೇ ಸೂತ್ರದ ಅಡಿ ಹೆಜ್ಜೆ ಇಡುತ್ತಿದ್ದೇನೆ. ಸಿಕ್ಕ ಸಿಕ್ಕಿದ್ದನ್ನೆಲ್ಲಾ ಮಾಡುವ ಆತುರ ನನಗೆ ಇಲ್ಲ. ನಿಧಾನವಾದರೂ ಒಳ್ಳೆಯ ಪಾತ್ರ ಮತ್ತು ಕಥೆಯ ಜೊತೆ ಬರಬೇಕು ಎನ್ನುವುದಷ್ಟೇ ನನ್ನ ಆಲೋಚನೆ.
''ಅಗ್ನಿಸಾಕ್ಷಿ'' ಮೇಲೆ ನಿಮ್ಮ ನಿರೀಕ್ಷೆಗಳೇನು..?
''ಅಗ್ನಿಸಾಕ್ಷಿ'' ಆಗಲೇ ಹೇಳಿದಂತೆ ಕನ್ನಡಿಗರ ಮನ ಗೆಲ್ಲುತ್ತೆ ಎನ್ನುವ ವಿಶ್ವಾಸ ಇದೆ. ಅದಕ್ಕೆ ಕಾರಣ ಹಿಂದಿನ ''ಅಗ್ನಿಸಾಕ್ಷಿ''ಗೆ ಕೆಲಸ ಮಾಡಿದ ನಿರ್ಮಾಪಕರು ಮತ್ತು ಬರಹಗಾರರು ನಮ್ಮ ''ಅಗ್ನಿಸಾಕ್ಷಿ''ಗೆ ಕೂಡ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ. ಪ್ರೇಕ್ಷಕರಿಗೆ ಇದೊಂದು ರೀತಿಯ ಹೊಸ ಅನುಭವ ಖಂಡಿತ ನೀಡುತ್ತೆ. ವಾಸ್ತವಕ್ಕೆ ಕೈಗನ್ನಡಿ ಹಿಡಿಯುವ ಪ್ರಯತ್ನವನ್ನು ಈ ಸೀರಿಯಲ್ ಮೂಲಕ ಮಾಡ್ತಿದ್ದೇವೆ. ತುಂಬಾನೇ ಡ್ರಾಮಾ ಎಲ್ಲ ಇರಲ್ಲ. ಈ ಎಲ್ಲಾ ಕಾರಣಕ್ಕೆ ಗೆಲ್ಲುವ ಭರವಸೆ ಇದೆ.


Click it and Unblock the Notifications